More

    ಕುಟುಂಬ ರಾಜಕಾರಣದಿಂದ ಹಾಸನ ಜಿಲ್ಲೆ ಬಿಡುಗಡೆಯಾಗಲಿ

    ಅರಸೀಕೆರೆ: ಹಾಸನ ಜಿಲ್ಲೆಯನ್ನು ಕುಟುಂಬ ರಾಜಕಾರಣ ಹಿಡಿತದಿಂದ ಬಿಡುಗಡೆಗೊಳಿಸಬೇಕಿದೆ. ಜತೆಗೆ ತಾವೇ ಮಣ್ಣಿನ ಮಕ್ಕಳು ಎಂದು ಹೇಳಿಕೊಳ್ಳುವವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಹೇಳಿದರು.

    ನಗರದ ಹೊರವಲಯದಲ್ಲಿರುವ ಕಸ್ತೂರ ಬಾ ಸೇವಾಶ್ರಮದ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರ ಸಭೆ ಉದ್ಘಾಟಿಸಿ ಮಾತನಾಡಿದರು.

    ನಮ್ಮಿಂದ ತಪ್ಪಾಗಿದ್ದರೆ ಕ್ಷಮಿಸಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಹಿರಂಗವಾಗಿ ಹೇಳಿದ್ದಾರೆ. ತಪ್ಪು ಮಾಡಿದವರಿಗೆ ಮತ ಹಾಕಲು ಹೇಗೆ ಸಾಧ್ಯ ಎಂಬುದನ್ನು ನೀವುಗಳೇ ತೀರ್ಮಾನಿಸುವ ಸಮಯ ಏ.26ರಂದು ಬರಲಿದೆ ಎಂದರು.

    ರಾಜ್ಯದ ಜನರಿಗೆ ನೀಡಿದ್ದ ಐದು ಗ್ಯಾರಂಟಿಗಳನ್ನು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ಈಡೇರಿಸಿದೆ. ಕೇಂದ್ರದಲ್ಲಿ ಐಎನ್‌ಡಿಐಎ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲವನ್ನು ಮನ್ನಾ ಮಾಡುವ ಜತೆಗೆ ಎಲ್ಲ ವರ್ಗದ ಜನರಿಗೆ ಮೂಲಸೌಕರ್ಯ ಒದಗಿಸುವ ಭರವಸೆ ಈಡೇರಲಿದೆ. ಹೀಗಾಗಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ತಮ್ಮಲ್ಲಿನ ಸಣ್ಣಪುಟ್ಟ ಭಿನ್ನಾಭಿಪ್ರಾಯವನ್ನು ಬದಿಗೊತ್ತಿ ಶ್ರೇಯಸ್ ಗೆಲುವಿಗೆ ಹೋರಾಟ ಮಾಡಬೇಕು ಎಂದು ಸಲಹೆ ನೀಡಿದರು.

    ಎಚ್.ಡಿ.ದೇವೇಗೌಡರಿಗೆ ಪುತ್ರ ವ್ಯಾಮೋಹ: ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಮಾತನಾಡಿ, ಬಡತನದ ಕಾರಣದಿಂದ ಅರಕಲಗೂಡು ಬಿಟ್ಟು ಹೊಟ್ಟೆಪಾಡಿಗೆ ಬೆಂಗಳೂರಿಗೆ ಹೋಗಿದ್ದ ನನ್ನಂತಹ ಸಾಮಾನ್ಯ ವ್ಯಕ್ತಿಯನ್ನು ಕಾಂಗ್ರೆಸ್ ಎರಡು ಬಾರಿ ರಾಜ್ಯಸಭಾ ಸದಸ್ಯನನ್ನಾಗಿ ಮಾಡಿದೆ. ಆದರೆ ಎರಡೂ ಬಾರಿಯೂ ಜೆಡಿಎಸ್ ಮುಖಂಡರು ನನ್ನ ವಿರುದ್ಧ ಅಭ್ಯರ್ಥಿ ಕಣಕ್ಕಿಳಿಸಿ ಸೋಲಿಸುವ ಕುತಂತ್ರ ನಡೆಸಿದರು. ಮಹಾಭಾರತದ ಧೃತರಾಷ್ಟ್ರನಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೂ ಪುತ್ರ ವ್ಯಾಮೋಹ ಬಾಧಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.

    ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ, ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ನಾನು ಮಂತ್ರಿಯಾಗಬೇಕೆ ಅಥವಾ ಬೇಡವೇ ಎನ್ನುವುದನ್ನು ಲೋಕಸಭಾ ಚುನಾವಣೆಯ ಫಲಿತಾಂಶ ನಿರ್ಧರಿಸಲಿದೆ. ಕ್ಷೇತ್ರಕ್ಕೆ ಕುಡಿಯುವ ನೀರು ಕೊಡಲು ಸಾಧ್ಯವಿಲ್ಲ ಎಂದವರಿಗೆ ಮತ ಹಾಕಬಾರದು. ತೆರಿಗೆ ವಿಷಯದಲ್ಲಿ ಕಾಂಗ್ರೆಸ್ ರಾಜ್ಯದ ಮಾನ ಹಾಳು ಮಾಡಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನೀಡಿರುವ ಹೇಳಿಕೆ ಸರಿಯಲ್ಲ. ನಮಗೆ ಅನ್ಯಾಯವಾದಾಗ ಇನ್ಯಾರ ಬಳಿ ತೆರಳಬೇಕು ಎನ್ನುವ ಪ್ರಶ್ನೆಗೆ ಉತ್ತರಿಸಲಿ ಎಂದು ಸವಾಲು ಹಾಕಿದರು.

    ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಜನರಿಗೆ ನೀಡಿರುವ ಐದು ಗ್ಯಾರಂಟಿಗಳನ್ನು ಮುಂದಿಟ್ಟು ಮನೆ ಮನೆಗೆ ತೆರಳಿ ಮತಯಾಚಿಸಬೇಕಿದೆ. ಐದು ವರ್ಷದಿಂದ ಕ್ಷೇತ್ರದತ್ತ ತಲೆ ಹಾಕದ ವ್ಯಕ್ತಿ ಇದೀಗ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಮಾತಿನ ಚಾಟಿ ಬೀಸಿದರು.

    ಅಭ್ಯರ್ಥಿ ಶ್ರೇಯಸ್ ಪಟೇಲ್ ಮಾತನಾಡಿ, ಇಪ್ಪತ್ತೈದು ವರ್ಷದಿಂದ ರಾಜಕೀಯವಾಗಿ ಸತತ ಸೋಲು ಕಂಡಿದ್ದೇವೆ. ನಿಮ್ಮಗಳ ಆಶಿರ್ವಾದ ನನ್ನ ಮೇಲಿರಲಿ ಎಂದು ಕೋರಿದರು.

    ಕಡೂರು ಶಾಸಕ ಆನಂದ್, ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ, ಗಂಡಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಟ್ರೋಬಾಬು, ಜಿ.ಬಿ. ಶಶಿಧರ್, ಜಿಪಂ ಮಾಜಿ ಸದಸ್ಯ ಬಿಳಿಚೌಡಯ್ಯ ಇತರರು ಮಾತನಾಡಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣ್, ಮಾಜಿ ಎಂಎಲ್ಸಿ ಗೋಪಾಲಸ್ವಾಮಿ, ಜಿಪಂ ಮಾಜಿ ಸದಸ್ಯ ಪಟೇಲ್ ಶಿವಪ್ಪ, ಮಾಡಾಳುಸ್ವಾಮಿ, ಮುಖಂಡರಾದ ಗಂಜಿಗೆರೆ ಚಂದ್ರಶೇಖರ್, ಜಿಟಿಎಸ್ ಗೌಸ್‌ಖಾನ್, ಮಂಜುಳಾಬಾಯಿ, ಸಣ್ಣಸ್ವಾಮಿ, ಮುರಳಿಮೋಹನ್, ದೇವರಾಜೇಗೌಡ, ಬನವಾಸೆ ರಂಗಸ್ವಾಮಿ ಹಲವರು ವೇದಿಕೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts