More

    ಜಲಮೂಲ ಕೆಡಿಸಿದ ತ್ಯಾಜ್ಯ

    ಪ್ರಕಾಶ್ ಮಂಜೇಶ್ವರ ಮಂಗಳೂರು
    ಮನೆ ಎದುರಿನಲ್ಲೇ ಇರುವ ಬಾವಿ, ಹತ್ತಿರದ ಕೆರೆಗಳಲ್ಲಿ ಕಡು ಬೇಸಿಗೆಯಲ್ಲಿ ಕೂಡ ನೀರು ತುಂಬಿದ್ದರೂ ಅದನ್ನು ಬಳಸಲು ಆಗುತ್ತಿಲ್ಲ. ಕಣ್ಣು ತುಂಬುವ ಗದ್ದೆ, ತೆಂಗಿನ ತೋಟಗಳ ಹಸಿರು ಕಣ್ಣೆದುರಲ್ಲೇ ಇದ್ದರೂ ಮನೆ ಹೊರಗೆ ಕುಳಿತು ಅಥವಾ ಬದುವಿನಲ್ಲಿ ನಡೆದಾಡುತ್ತ ಅದನ್ನು ಆಸ್ವಾದಿಸುವಂತಿಲ್ಲ!

    ಇದು ಮಂಗಳೂರು ನಗರದಲ್ಲೇ ಇರುವ ಕಾವೂರು ಮುಲ್ಲಕಾಡಿನ ಹಸಿರು ಪರಿಸರದ ಮಧ್ಯೆ ತ್ಯಾಜ್ಯ ಹರಿದು ಸಮುದ್ರ ಸೇರುವ ಸುಮಾರು ಆರು- ಏಳು ಎಕರೆ ವ್ಯಾಪ್ತಿಯ ಜನವಸತಿ ಪ್ರದೇಶದ ನಾಗರಿಕರು ಕೆಲವು ದಶಕಗಳಿಂದ ಎದುರಿಸುತ್ತಿರುವ ನಿತ್ಯ ಸಮಸ್ಯೆ.
    ನಗರದ ವಿವಿಧೆಡೆಗಳಿಂದ ಬರುವ ಒಳಚರಂಡಿ ನೀರು ಮುಲ್ಲಕಾಡು ಒಳಚರಂಡಿ ನೀರು ಸಂಸ್ಕರಣಾ ಘಟಕ- ಎಸ್‌ಟಿಪಿ (ಸುಯೇಜ್ ಟ್ರೀಟ್‌ಮೆಂಟ್ ಪ್ಲಾಂಟ್) ಯಲ್ಲಿ ಸಂಸ್ಕರಣೆಗೊಂಡು ಶುದ್ಧ ನೀರು ಕೈಗಾರಿಕೆಗಳ ಹೂತೋಟ, ನಿರ್ಮಾಣ ಕಾಮಗಾರಿ ಮುಂತಾದ ಉದ್ದೇಶಗಳಿಗೆ ಬಳಸಲು ಯೋಜನೆ ರೂಪಿಸಲಾಗಿತ್ತು. ಘಟಕದ ತ್ಯಾಜ್ಯಕ್ಕೆ ನಡುವೆ ಅಕ್ರಮವಾಗಿ ಸೇರಿಕೊಳ್ಳುವ ಕೈಗಾರಿಕಾ ತ್ಯಾಜ್ಯಗಳು ಶುದ್ಧೀಕರಣಗೊಳ್ಳದೆ ದ್ರವ ರೂಪದಲ್ಲಿ ತೆರೆದ ತೋಡಿನಲ್ಲಿ ಹರಿಯುತ್ತಿರುವುದರಿಂದ ಸಮಸ್ಯೆಯಾಗಿದೆ ಎಂಬುದು ಸ್ಥಳೀಯ ನಿವಾಸಿಗಳ ದೂರು.

    ಚರಂಡಿ ಹೂಳೆತ್ತಲು ಬಂದವರು ಚರಂಡಿ ಬದಿಯ ಕಸ ಮಾತ್ರ ಸ್ವಚ್ಛಗೊಳಿಸಿ ತೆರಳುತ್ತಾರೆ. ಚರಂಡಿಯಲ್ಲಿ ಹೂಳು ತುಂಬಿ ಹರಿವ ನೀರು ಸಮೀಪದ ತೋಟ ಹಾಗೂ ಇತರ ತಗ್ಗು ಪ್ರದೇಶಗಳಿಗೆ ನುಗ್ಗಿ ಹೆಚ್ಚಿನ ಪ್ರದೇಶಗಳನ್ನು ಮಲಿನ ಮಾಡುತ್ತಲೇ ಇದೆ. ಜತೆಗೆ ಇಡೀ ಪರಿಸರದಲ್ಲಿ ದುರ್ಗಂಧ ಹರಡಿರುತ್ತದೆ ಎನ್ನುವುದು ಸಮೀಪದ ನಿವಾಸಿಗಳ ಆಕ್ಷೇಪ.

    ಮನೆಯಿಂದ ಹೊರಬರಲಾಗದ ಸ್ಥಿತಿ!
    ನಾವು ಇಲ್ಲಿ ಜಮೀನು ಖರೀದಿಸಿ ಸೋತೆವು. ಜಮೀನು ನೋಡಲು ಬಂದಾಗ ಹತ್ತಿರದ ತೋಡಿನಲ್ಲಿ ಹೆಚ್ಚು ನೀರು ಹರಿಯುತ್ತಿತ್ತು. ಆದ್ದರಿಂದ ದುರ್ವಾಸನೆ ಗಮನಕ್ಕೆ ಬರಲಿಲ್ಲ. ಈಗ ನಿತ್ಯ ಸಮಸ್ಯೆ ಎದುರಿಸುತ್ತಿದ್ದೇವೆ. ತೋಡಿನಲ್ಲಿ ಕೆಲವೊಮ್ಮೆ ರಾಶಿರಾಶಿ ಮೀನುಗಳು ಸತ್ತು ಬೀಳುತ್ತವೆ. ಒಂದು ಕಡೆ ಹರಿಯುತ್ತಿರುವ ದುರ್ನಾತ ಹರಡುವ ನೀರು, ಇನ್ನೊಂದು ಕಡೆ ಸತ್ತು ಬಿದ್ದ ಮೀನುಗಳ ದುರ್ವಾಸನೆ… ಮನೆಯಿಂದ ಹೊರಗೆ ಬರಲು ಸಾಧ್ಯವಿಲ್ಲದ ಪರಿಸ್ಥಿತಿ ಸೃಷ್ಟಿಸುತ್ತದೆ ಎಂದು ಮುಲ್ಲಕಾಡು ಶಂಕರನಗರದಲ್ಲಿ ಐದು ತಿಂಗಳ ಹಿಂದೆಯಷ್ಟೇ ಹೊಸ ಮನೆ ಪ್ರವೇಶಿಸಿದ ಕುಟುಂಬದ ಗೃಹಿಣಿ ವಿಮಲಾ ಬೇಸರ ವ್ಯಕ್ತಪಡಿಸಿದರು.

    ಮುಲ್ಲಕಾಡು ಒಳಚರಂಡಿ ಶುದ್ಧೀಕರಣ ಕೇಂದ್ರ ಸರಿಯಾಗಿ ನಿರ್ವಹಿಸಲ್ಪಡದ ಕಾರಣ ಪರಿಸರದಲ್ಲಿ ವಿಪರೀತ ದುರ್ವಾಸನೆ ಹರಡುತ್ತದೆ. ರಾತ್ರಿ ವೇಳೆ ಶುದ್ಧ ಮಾಡದ ನೀರು ಹೊರಬಿಡುವುದರಿಂದ ಅಸಹನೀಯ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದರಿಂದ ಸ್ಥಳೀಯರಾದ ನಮಗೆ ಮನೆಯಲ್ಲಿ ವಾಸಿಸುವುದೇ ಕಷ್ಟವಾಗಿದೆ. ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ.
    ನಾರಾಯಣ ಕಲ್ಯಾಣತ್ತಾಯ, ನಿವೃತ್ತ ಎಜಿಎಂ, ಬಿಎಸ್‌ಎನ್‌ಎಲ್.

    ಮನೆ ಬದಿಯಲ್ಲೇ ಇರುವ ಒಳಚರಂಡಿಯಲ್ಲಿ ನಿತ್ಯ ಹರಿಯುವ ಕಪ್ಪು ನೀರು ದುರ್ನಾತ ಬೀರುತ್ತಿದ್ದು, ಮನೆ ಹೊರಗೆ ಓಡಾಡುವುದೇ ಕಷ್ಟವಾಗಿದೆ. ಇತ್ತೀಚೆಗೆ ಚರಂಡಿಯಲ್ಲಿ ದೊಡ್ಡ ಗಾತ್ರದ ಮೀನುಗಳು ಸತ್ತು ತೇಲುತ್ತಿದ್ದವು. ತ್ಯಾಜ್ಯ ಸ್ವಚ್ಛ ಮಾಡಲೆಂದು ಬರುವ ಸಿಬ್ಬಂದಿ ಚರಂಡಿ ಬದಿ ಇರುವ ಕಸಗಳನ್ನಷ್ಟೇ ತೆಗೆದು ವಾಪಸ್ ಹೋಗುತ್ತಾರೆ.
    ವಿಮಲಾ, ಗೃಹಿಣಿ, ಶಿವನಗರ, ಮುಲ್ಲಕಾಡು.

    ಮಂಗಳೂರು ನಗರದ 10 ವೆಲ್‌ವೆಟ್‌ಗಳಲ್ಲಿ ಸಂಗ್ರಹವಾದ ತ್ಯಾಜ್ಯ ನೀರು ಮುಲ್ಲಕಾಡು ಎಸ್‌ಟಿಪಿಯಲ್ಲಿ ವೈಜ್ಞಾನಿಕವಾಗಿ ಸಂಸ್ಕರಣೆಗೊಂಡು ಮರು ಬಳಕೆಯಾಗುತ್ತದೆ. ಪ್ರಸ್ತುತ ಹೆಚ್ಚುವರಿ ಉಳಿಯುವ ನೀರು ಹರಿದು ಹೋಗುತ್ತದೆ. ಕೆಲವರು ಈ ನೀರನ್ನು ಕೃಷಿಗೆ ಕೂಡ ಬಳಸುತ್ತಿದ್ದಾರೆ. ಸಂಸ್ಕರಿಸಲ್ಪಟ್ಟ ಹೆಚ್ಚುವರಿ ನೀರು ಹೊರಗೆ ಹರಿಯಲು ಬಿಡದೆ ಸಂಗ್ರಹಿಸಿ ಬಳಸಲು ಅನುಕೂಲವಾಗುವಂತೆ 3 ಎಂಎಲ್‌ಡಿ ಸಾಮರ್ಥ್ಯದ ನೂತನ ನೀರು ಸಂಗ್ರಹ ಘಟಕವೊಂದು ನಿರ್ಮಾಣಗೊಳ್ಳುತ್ತಿದೆ. ಈ ಘಟಕ ಬಳಕೆ ಆರಂಭವಾದ ಬಳಿಕ ಹೆಚ್ಚುವರಿ ನೀರು ಹೊರ ಹೋಗುವುದು ನಿಲ್ಲಲಿದೆ.
    ಪುಂಡಲೀಕ ಶೆಣೈ, ಮ್ಯಾನೇಜರ್, ಎಸ್‌ಟಿಪಿ, ಮುಲ್ಲಕಾಡು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts