More

    ಎಚ್ಚೆತ್ತುಕೊಳ್ಳದಿದ್ದರೆ ಕುಷ್ಟಗಿ ತಾಲೂಕಿನಲ್ಲಿ ಜಲಸಂಕಟ ಸಂಭವ

    ವಿಶ್ವನಾಥ ಸೊಪ್ಪಿಮಠ ಕುಷ್ಟಗಿ
    ದಿನದಿಂದ ದಿನಕ್ಕೆ ಬಿಸಿಲಿನ ಪ್ರಖರ ಹೆಚ್ಚುತ್ತಿದೆ. ಆದರೆ, ಸದ್ಯ ಪಟ್ಟಣ ಸೇರಿ ತಾಲೂಕಿನಲ್ಲಿ ಕುಡಿವ ನೀರಿನ ಸಮಸ್ಯೆ ಇಲ್ಲವಾದರೂ ಮುಂದಿನ ದಿನಗಳಲ್ಲಿ ಉಲ್ಬಣಗೊಳ್ಳುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ತಾಲೂಕಿನಲ್ಲಿ ಸ್ಥಗಿತಗೊಂಡಿರುವ ಕುಡಿವ ನೀರಿನ ಶುದ್ಧೀಕರಣ ಘಟಕಗಳನ್ನು ಮರು ಆರಂಭಿಸಿ, ಪ್ರಗತಿಯಲ್ಲಿರುವ ಜೆಜೆಎಂ ಕಾಮಗಾರಿ ಪೂರ್ಣಗೊಳಿಸಬೇಕಿದೆ. ಗಡ್ಡಕ್ಕೆ ಬೆಂಕಿ ಹೊತ್ತಿಕೊಂಡಾಗ ಬಾವಿ ತೋಡಿದರು ಎಂಬಂತೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈಗಲೇ ಎಚ್ಚೆತ್ತುಕೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ತೊಂದರೆ ಎದುರಿಸಬೇಕಾಗುತ್ತದೆ.

    ಪಟ್ಟಣಕ್ಕೆ ಕೃಷ್ಣಾ ನದಿಯ ಆಲಮಟ್ಟಿ ಜಲಾಶಯದಿಂದ ನೀರು ಪೂರೈಕೆಯಾಗುತ್ತಿದೆ. 23 ವಾರ್ಡ್‌ಗಳ ಪೈಕಿ 2-7ನೇ ವಾರ್ಡ್‌ವರೆಗೆ ದಿನದ 24 ತಾಸು ನೀರು ಪೂರೈಸುವ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಉಳಿದಂತೆ ಮದಲಗಟ್ಟಿ ಬಳಿ ಇರುವ ನೀರು ಸಂಗ್ರಹಗಾರದಿಂದ ನೀರು ಪೂರೈಸಲಾಗುತ್ತಿದ್ದು, ಆ ಎಲ್ಲ ವಾರ್ಡ್‌ಗಳಲ್ಲಿ ಹಳೇ ಪೈಪ್‌ಲೈನ್‌ಗಳಿವೆ. ಸದ್ಯ 4 ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಜಲಾಶಯದಿಂದ ಪೂರೈಕೆ ಮಾರ್ಗದ ಹುನಗುಂದ, ಇಳಕಲ್‌ನಲ್ಲಿ ಒಂದು ದಿನ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾದರೂ ನೀರು ಪೂರೈಕೆ ಎರಡು ದಿನ ವಿಳಂಬವಾಗುತ್ತದೆ. ಪಟ್ಟಣದಲ್ಲಿ ಸದ್ಯಕ್ಕೆ ಜಲಸಂಕಷ್ಟ ಎದುರಾಗಿಲ್ಲವಾದರೂ ಬೇಸಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ.

    ಎಚ್ಚೆತ್ತುಕೊಳ್ಳದಿದ್ದರೆ ಕುಷ್ಟಗಿ ತಾಲೂಕಿನಲ್ಲಿ ಜಲಸಂಕಟ ಸಂಭವ
    ಎಂ.ಗುಡದೂರಿನಲ್ಲಿ ನಿರುಪಯುಕ್ತ ನೀರಿನ ಶುದ್ಧೀಕರಣ ಘಟಕ.

    ಗ್ರಾಮಗಳಲ್ಲಿ ಈಗಲೂ ಮರೀಚಿಕೆ
    ತಾಲೂಕಿನ ವಿವಿಧ ಗ್ರಾಮಗಳಿಗೆ ಶುದ್ಧ ನೀರು ಈಗಲೂ ಮರೀಚಿಕೆಯಾಗಿದೆ. ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ, ಕೆಕೆಆರ್‌ಡಿಬಿ ಯೋಜನೆ ಅಡಿ 2015-16ನೇ ಸಾಲಿನಿಂದ ವಿವಿಧ ಹಂತಗಳಲ್ಲಿ ತಲಾ 8-12 ಲಕ್ಷ ರೂ. ಖರ್ಚು ಮಾಡಿ 136 ಶುದ್ಧೀಕರಣ ಘಟಕ ಅಳವಡಿಸಲಾಗಿದೆ. 2017-18ನೇ ಸಾಲಿನಲ್ಲಿ ತಲಾ 12 ಲಕ್ಷ ರೂ. ವೆಚ್ಚದಲ್ಲಿ 21 ಘಟಕ ಅಳವಡಿಸಲಾಗಿದೆ. ನಾನಾ ಕಾರಣಗಳಿಂದ ಬಹುತೇಕ ಘಟಕಗಳು ನಿರುಪಯುಕ್ತವಾಗಿವೆ. ಕೆಲವೆಡೆ ನಿರ್ವಹಣೆ ಇಲ್ಲದೆ ನಿರುಪಯುಕ್ತವಾದರೆ ಇನ್ನೂ ಕೆಲವೆಡೆ ಆರಂಭಕ್ಕೂ ಮುನ್ನವೇ ಹಾಳಾಗಿವೆ. ತಾಲೂಕು ಪಂಚಾಯಿತಿಯ ಪ್ರತಿ ಸಭೆಯಲ್ಲಿಯೂ ಈ ವಿಚಾರದ ಬಗ್ಗೆ ಗಂಭೀರ ಚರ್ಚೆ ನಡೆದರೂ ಪ್ರಯೋಜನವಾಗಿಲ್ಲ.

    ಎಚ್ಚೆತ್ತುಕೊಳ್ಳದಿದ್ದರೆ ಕುಷ್ಟಗಿ ತಾಲೂಕಿನಲ್ಲಿ ಜಲಸಂಕಟ ಸಂಭವ
    ಎಂ.ಗುಡದೂರಿನಲ್ಲಿ ಕಿರು ತೊಟ್ಟಿ ತುಂಬಿ ಹರಿದು ನೀರು ಪೋಲಾಗುತ್ತಿರುವುದು.

    ಹಳ್ಳ ಹಿಡಿದ ಜೆಜೆಎಂ ಕಾಮಗಾರಿ
    ಬಹುಗ್ರಾಮ ಕುಡಿವ ನೀರು ಯೋಜನೆಯಡಿ ಪ್ರತಿ ಮನೆಗೆ ನಲ್ಲಿ ಸಂಪರ್ಕ ಒದಗಿಸಿ ಶುದ್ಧ ನೀರು ಪೂರೈಸುವ ಮಹತ್ವದ ಯೋಜನೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಹಳ್ಳ ಹಿಡಿದಿದೆ. ಬಹುಗ್ರಾಮ ಕುಡಿವ ನೀರು ಯೋಜನೆ ಅಡಿ ಅಲ್ಲಲ್ಲಿ ಸಮೂಹ ಗ್ರಾಮಗಳ ಸಮತೋಲನ ಜಲಸಂಗ್ರಹ ತೊಟ್ಟಿ ನಿರ್ಮಿಸಲಾಗಿದೆ. ಗ್ರಾಮಗಳಲ್ಲಿಯೂ ಟ್ಯಾಂಕ್ ನಿರ್ಮಿಸಿ ನೀರು ಪೂರೈಸಲಾಗಿದೆ. ಜೆಜೆಎಂ ಅಡಿ ನಲ್ಲಿ ಸಂಪರ್ಕ ಒದಗಿಸಿ ಮನೆಗಳಿಗೆ ನೀರು ಪೂರೈಸುವ ಯೋಜನೆ ಸಮರ್ಪಕ ಅನುಷ್ಠಾನಗೊಳಿಸದಿರುವುದು ಗ್ರಾಮೀಣರ ಅಸಮಾಧಾನಕ್ಕೆ ಕಾರಣವಾಗಿದೆ. ಕೆಲ ಗ್ರಾಮಗಳಲ್ಲಿ ಈಗಲೂ ಪೈಪ್‌ಲೈನ್ ಕಾಮಗಾರಿ ಪೂರ್ಣಗೊಂಡಿಲ್ಲ. ಕೆಲವೆಡೆ ಅಳವಡಿಸಿರುವ ನಲ್ಲಿ ಕಿತ್ತು ಹೋಗಿವೆ. ತೀರಾ ಮೇಲ್ಮಟ್ಟದಲ್ಲಿ ಅಳವಡಿಸಿರುವ ಪೈಪ್‌ಗಳು ಒಡೆದು ಅಲ್ಲಲ್ಲಿ ನೀರು ಪೋಲಾಗುತ್ತಿದೆ. ಹೀಗೆ ಒಂದಿಲ್ಲೊಂದು ಕಾರಣದಿಂದ ಯೋಜನೆಗೆ ಗ್ರಹಣ ಹಿಡಿದಂತಾಗಿದೆ. ಜಿಪಂ ಸಿಇಒ ಆಗಿದ್ದ ಫೌಜಿಯಾ ತರನ್ನುಮ್ ತಮ್ಮ ಅಧಿಕಾರ ಅವಧಿಯಲ್ಲಿ ಭೇಟಿ ನೀಡಿದಾಗಲೊಮ್ಮೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡುತ್ತ ಬಂದರಾದರೂ ಯಾವೊಬ್ಬ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ. ಬೇಸಿಗೆ ಪ್ರಖರ ಹೆಚ್ಚುವ ಮುನ್ನ ಯೋಜನೆಯ ಕಾಮಗಾರಿ ಪೂರ್ಣಗೊಳಿಸಿ ಜನರಿಗೆ ನೀರು ಪೂರೈಸುವ ಕಾರ್ಯ ಮಾಡದಿದ್ದಲ್ಲಿ ಜನ ಬೀದಿಗಿಳಿದು ಪ್ರತಿಭಟನೆ ನಡೆಸುವ ಪರಿಸ್ಥಿತಿ ಎದುರಾಗುತ್ತದೆ.

    ಎಚ್ಚೆತ್ತುಕೊಳ್ಳದಿದ್ದರೆ ಕುಷ್ಟಗಿ ತಾಲೂಕಿನಲ್ಲಿ ಜಲಸಂಕಟ ಸಂಭವ
    ಗಡಚಿಂತಿಯಲ್ಲಿ ಜೆಜೆೆಎಂ ಕಾಮಗಾರಿಯ ಪೈಪ್‌ಲೈನ್‌ಗೆಂದು ರಸ್ತೆ ಅಗೆದು ಕೈಬಿಟ್ಟಿರುವುದು.
    ಶಾಶ್ವತ ಪರಿಹಾರ ಸಾಧ್ಯವಾ ?
    ಬಿಳೇಕಲ್, ಗುಡ್ಡದ ದೇವಲಾಪುರ ಸೇರಿ 29ಗ್ರಾಮಗಳನ್ನು ಸಮಸ್ಯಾತ್ಮಕ ಎಂದು ಗುರುತಿಸಿ ಬೇಸಿಗೆ ವೇಳೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ನೂರಾರು ಅಡಿವರೆಗೆ ಬೋರ್‌ವೆಲ್ ಕೊರೆಯಿಸಿದರೂ ನೀರು ಸಿಗದ ಪರಿಸ್ಥಿತಿ ಇದ್ದು, ಬೇಸಿಗೆಯಲ್ಲಿ ಈ ಗ್ರಾಮಸ್ಥರ ಪಾಡು ಹೇಳ ತೀರದಾಗಿರುತ್ತದೆ. ಈ ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿ ಪೂರ್ಣಗೊಳಿಸಿ ನೀರು ಪೂರೈಸಿದರೆ ಶಾಶ್ವತ ಪರಿಹಾರ ಸಿಕ್ಕಂತಾಗುತ್ತದೆ.
    ಇದ್ದಾಗ ಪೋಲು.. ಇಲ್ಲದಾಗ ಗೋಳು !
    ಕುಷ್ಟಗಿ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ನಲ್ಲಿ ನೀರು ವ್ಯರ್ಥ ಪೋಲಾಗುತ್ತಿದೆ. ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಿರು ತೊಟ್ಟಿಗಳು ತುಂಬಿ ಹರಿಯುತ್ತಿದ್ದರೂ ನಿಯಂತ್ರಿಸುವ ಕಾರ್ಯ ನಡೆಯುತ್ತಿಲ್ಲ. ಇದ್ದಾಗ ಪೋಲು ಇಲ್ಲದಾಗ ಗೋಳು ಎಂಬಂತೆ ಜನರೂ ನೀರಿನ ಮಹತ್ವ ಅರಿಯದೆ ವ್ಯರ್ಥ ಮಾಡುತ್ತಿದ್ದಾರೆ. ಈ ಸಂಬಂಧ ಸಂಬಂಧಿಸಿದ ಪಂಚಾಯಿತಿ ಅಧಿಕಾರಿಗಳು ಜಾಗೃತಿ ಮೂಡಿಸಿ ಹೀಗೆ ಪೋಲು ಮಾಡುವವರಿಗೆ ದಂಡ ವಿಧಿಸುವ ಕಾರ್ಯ ಮಾಡಬೇಕಿದೆ.

    ಕುಷ್ಟಗಿ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲ. ಅಮೃತ ಯೋಜನೆಯಲ್ಲಿ ಪಟ್ಟಣವನ್ನು ಸೇರಿಸಿದ್ದರೆ ಎಲ್ಲ ವಾರ್ಡ್‌ಗಳಿಗೂ ದಿನದ 24 ತಾಸು ನೀರು ಪೂರೈಸಬಹುದಿತ್ತು. ಬೇಸಿಗೆ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ.
    ಜಿ.ಕೆ.ಹಿರೇಮಠ
    ಪುರಸಭೆ ಅಧ್ಯಕ್ಷ, ಕುಷ್ಟಗಿ.

    ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ಕಳಪೆಯಾಗಿದೆ. ಯೋಜನೆಯಡಿ ಸಮರ್ಪಕ ನೀರು ಪೂರೈಕೆಯಾಗಿಲ್ಲ. ಬೇಸಿಗೆಯಷ್ಟರಲ್ಲಿ ಯೋಜನೆಯ ಯಶಸ್ವಿ ಅನುಷ್ಠಾನಗೊಂಡರೆ ಅನುಕೂಲವಾಗುತ್ತದೆ.
    ಹೊಳಿಯಪ್ಪ ತುಪ್ಪದ್
    ಗ್ರಾಪಂ ಮಾಜಿ ಸದಸ್ಯ, ನೀರಲೂಟಿ

    ಶುದ್ಧೀಕರಣ ಘಟಕ ಅಳವಡಿಸುವ ಯೋಜನೆ ಹಳ್ಳ ಹಿಡಿದಿದ್ದರಿಂದ ಶುದ್ಧ ನೀರಿನ ಭಾಗ್ಯದಿಂದ ಬಹುತೇಕ ಗ್ರಾಮಗಳು ವಂಚಿತವಾಗಿವೆ. ಜೆಜೆಎಂ ಕಾಮಗಾರಿಯೂ ಹಳ್ಳ ಹಿಡಿದಿದ್ದು, ಗಡಚಿಂತಿ ಗ್ರಾಮದಲ್ಲಿ ಸಂಪೂರ್ಣ ಕಳಪೆ ಕಾಮಗಾರಿ ನಡೆಸಲಾಗಿದೆ. ಎರಡು ವರ್ಷದ ಹಿಂದೆ ಬಂದು ಪೈಪ್‌ಲೈನ್ ಮಾಡಿ ಹೋದ ಗುತ್ತಿಗೆದರರು ಗ್ರಾಮದತ್ತ ಮುಖ ಮಾಡಿಲ್ಲ.
    ಮಲ್ಲಪ್ಪ ಭೋವಿ
    ಗ್ರಾಪಂ ಸದಸ್ಯ, ಗಡಚಿಂತಿ

    ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಸಲಾಗಿದೆ. ಶುದ್ಧೀಕರಣ ಘಟಕಗಳ ದುರಸ್ತಿ, ಖಾಸಗಿ ಬೋರ್‌ವೆಲ್‌ಗಳಿಂದ ನೀರು ಪಡೆಯುವ ನಿರ್ಣಯ ಕೈಗೊಳ್ಳಲಾಗಿದೆ. ಜೆಜೆಎಂ ಕಾಮಗಾರಿ ಸಮರ್ಪಕ ಅನುಷ್ಠಾನಕ್ಕೆ ಅಧಿಕಾರಿ ಹಾಗೂ ಗುತ್ತಿಗೆದಾರರಿಗೆ ಸೂಚಿಸಲಾಗಿದೆ.
    ಶಿವಪ್ಪ ಸುಬೇದಾರ್
    ತಾಪಂ ಇಒ ಕುಷ್ಟಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts