More

    ಹೇಮಾವತಿ ಹರಿದರೂ ತಿಪಟೂರು ತಾಲೂಕಿನಲ್ಲಿ ಜಲಕ್ಷಾಮ!

    ತಿಪಟೂರು: ಮೇವೊಂದೇ ಸಾಕೆ? ಕುಡಿಯಲು ನೀರು ಬೇಡವೇ? ಸದ್ಯ ತಿಪಟೂರು ತಾಲೂಕಿನಲ್ಲಿ ಉದ್ಬವಿಸಿರುವ ಪ್ರಶ್ನೆ ಇದು. ಬರಡಾಗಿರುವ ತಾಲೂಕಿನ 93 ಕೆರೆಗಳಿಗೆ ಕಾಯಕಲ್ಪ ಕಲ್ಪಿಸುವ, ಜಲಕ್ಷಾಮ ಎದುರಿಸಲು ತಾಲೂಕು ಆಡಳಿತ ಸಜ್ಜಾಗುವ ಜತೆಗೆ, ತಿಪಟೂರು ತಾಲೂಕನ್ನು ಬರ ಪಟ್ಟಿಗೆ ಸೇರಿಸುವ ಪ್ರಯತ್ನ ಆಗಬೇಕಿದೆ ಎಂಬ ಆಗ್ರಹ ಶುರುವಾಗಿದೆ.

    ಕಳೆದ ಮಾನ್ಸೂನ್ ಅವಧಿಯಲ್ಲಿ ಬೆಳೆದ ಬೆಳೆ, ಜನ, ಜಾನುವಾರುಗಳಿಗೆ ಕುಡಿವ ನೀರು ಮತ್ತು ಮೇವಿನ ಸಮಸ್ಯೆ ಉಂಟಾಗದಿರುವುದು ಹಾಗೂ ಈ ಅವಧಿಯ ಸತತ ನಾಲ್ಕು ವಾರಗಳ ಕಾಲ ಮಳೆ ಕೈ ಕೊಟ್ಟಿಲ್ಲ ಎಂಬ ಮಾನದಂಡ ಅನುಸರಿಸಿ ತಿಪಟೂರು ತಾಲೂಕನ್ನು ಬರ ಪೀಡಿತ ಪಟ್ಟಿಯಿಂದ ಕೈಬಿಡಲಾಗಿದೆ.

    ವಿಪರ್ಯಾಸವೆಂದರೆ ಹೇಮಾವತಿ ನೀರು ಹರಿದರೂ ತಾಲೂಕಿನ 93ಕ್ಕೂ ಹೆಚ್ಚು ಕೆರೆಗಳು ಖಾಲಿ ಇವೆ, ಕುಡಿಯುವ ನೀರಿನ ಯೋಜನೆಗಳು ತಾಂತ್ರಿಕ ದೋಷದಿಂದ ಕೈಕೊಟ್ಟಿವೆ, ಕುಡಿಯುವ ನೀರಿಗೆ ಹಾಹಾಕಾರ ಎದ್ದಿರುವುದು ಸರ್ಕಾರದ ಗಮನಕ್ಕೆ ಬಂದಂತಿಲ್ಲ.

    ಮೇವಿಗೆ ಬರ ಇಲ್ಲ : ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಪ್ರಾರಂಭಿಸಲಾಗಿರುವ ನಫೆಡ್ ರಾಗಿ ಖರೀದಿ ಕೇಂದ್ರಕ್ಕೆ ಬರುತ್ತಿರುವ ರಾಗಿಯ ಪ್ರಮಾಣ ಹಾಗೂ ಪಶು ಸಂಗೋಪನಾ ಇಲಾಖೆ ಸರ್ಕಾರಕ್ಕೆ ನೀಡಿರುವ ವರದಿ ಪ್ರಕಾರ ಮುಂದಿನ 36 ವಾರಗಳಿಗಾಗುವಷ್ಟು ಮೇವು ಲಭ್ಯವಿದೆ ಎನ್ನಲಾಗಿದ್ದು ಸದ್ಯಕ್ಕಂತೂ ಜಾನುವಾರುಗಳ ಮೇವಿಗೆ ಬರವಿಲ್ಲ. ಆದರೆ ಮೇವೊಂದೇ ಸಾಕೆ? ಕುಡಿಯಲು ನೀರು ಬೇಡವೇ ಎಂಬ ಪ್ರಶ್ನೆ ಉದ್ಭವಿಸಿದೆ.

    ಕೈಕೊಟ್ಟ ಯೋಜನೆಗಳು: ಹೊನ್ನವಳ್ಳಿ ಏತ ನೀರಾವರಿ ಯೋಜನೆಯ ತಾಂತ್ರಿಕ ದೋಷ, ಕೆರೆಗೋಡಿಯಲ್ಲಿ ನಿರ್ಮಿಸಲಾಗಿರುವ ಕುಡಿಯುವ ನೀರಿನ ಯೋಜನೆಯ ವೈಫಲ್ಯ ಗುರುಗದಹಳ್ಳಿಯಲ್ಲಿ ಸ್ಥಾಪಿಸಲಾಗಿರುವ ಸಮಗ್ರ ಗ್ರಾಮೀಣ ಕುಡಿಯುವ ನೀರು ಯೋಜನೆಗೆ ನೀರು ಲಭ್ಯವಿಲ್ಲದಿರುವುದೂ ಸೇರಿ ಇತರ ಕಾರಣಗಳಿಂದ ತಾಲೂಕಿನ 26 ಗ್ರಾಪಂಗಳ ಪೈಕಿ 20 ಗ್ರಾಪಂ ವ್ಯಾಪ್ತಿಯ ಒಟ್ಟು 93 ಕೆರೆಗಳು ಮೈದಾನದಂತಾಗಿವೆ. ಮುಂದಿನ ದಿನಗಳಲ್ಲಿ ಜಲಕ್ಷಾಮದ ಆತಂಕ ಎದುರಾಗಿದೆ.

    ಬರಪಟ್ಟಿಯಿಂದ ಕೈ ಬಿಡುವ ಮುಂಚೆ ತಾಲೂಕಿನಲ್ಲಿ ಎಷ್ಟು ಕೆರೆಗಳಲ್ಲಿ ನೀರಿದೆ, ಕೊಳವೆಬಾವಿಗಳಲ್ಲಿನ ನೀರಿನ ಪ್ರಮಾಣ ಗಮನಿಸದೆ, ಜೋರಾಗಿ ಸೀನಿದರೂ ತೇವಾಂಶ ದಾಖಲಿಸುವ ಮಳೆ ಮಾಪನ ಯಂತ್ರದ ವರದಿಯಾನುಸಾರ ತಾಲೂಕನ್ನು ಬರ ಪಟ್ಟಿಯಿಂದ ಕೈ ಬಿಟ್ಟಿರುವುದು ತಪ್ಪು.
    ಎನ್.ಎಂ.ಸುರೇಶ್ ತಾಪಂ ಸದಸ್ಯ

    ತಾಲೂಕಿನಲ್ಲಿ ರಾಗಿ ಬೆಳೆದಿರುವ ಪ್ರಮಾಣ ನೋಡಿದರೆ ಮೇವಿಗೆ ಬರವಿಲ್ಲ. ಕುಡಿಯುವ ನೀರಿನ ಸಮಸ್ಯೆ ಇದೆ, ಆದ್ದರಿಂದ ತಿಪಟೂರನ್ನು ಬರಪೀಡಿತ ತಾಲೂಕು ಪಟ್ಟಿಗೆ ಸೇರಿಸುವ ಪ್ರಯತ್ನ ನಡೆದಿದೆ.
    ಬಿ.ಸಿ.ನಾಗೇಶ್ ತಿಪಟೂರು ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts