More

    ತುಂಗೆ, ಮಾಲತಿಯಲ್ಲಿ ನೀರಿನ ಹರಿವು

    ತೀರ್ಥಹಳ್ಳಿ: ಕಳೆದ ಮೂರ‌್ನಾಲ್ಕು ದಿನಗಳಿಂದ ತಾಲೂಕಿನಾದ್ಯಂತ ಸತತವಾಗಿ ಬೀಳುತ್ತಿರುವ ಮಳೆಯಿಂದಾಗಿ ತಾಲೂಕಿನ ಜನತೆ ಕೊಂಚ ನಿಟ್ಟುಸಿರು ಬಿಡುವಂತಾಗಿದ್ದು, ವಾತಾವರಣ ತಂಪಾಗಿದೆ. ನೀರಿಲ್ಲದೆ ಹರಿವನ್ನೇ ನಿಲ್ಲಿಸಿದ್ದ ತುಂಗಾ, ಮಾಲತಿ ಮುಂತಾದ ನದಿಗಳಲ್ಲಿ ಶುಕ್ರವಾರದಿಂದ ನಿಧಾನವಾಗಿ ನೀರು ಹರಿಯುವುದಕ್ಕೂ ಪ್ರಾರಂಭವಾಗಿದೆ.

    ಶುಕ್ರವಾರ ಮಧ್ಯರಾತ್ರಿ ಆರಂಭವಾದ ಮಳೆ ತಾಲೂಕಿನಾದ್ಯಂತ ಶನಿವಾರ ಬೆಳಗಿನ ತನಕ ಬಿದ್ದಿದೆ. ಮಳೆ ಇಲ್ಲದೇ ಕಂಗಾಲಾಗಿದ್ದ ತಾಲೂಕಿನ ರೈತರ ಮುಖದಲ್ಲಿ ಸಂತಸ ಮೂಡಿದೆ. ಬಿಸಿಲಿನ ತಾಪಕ್ಕೆ ಸೊರಗಿದ್ದ ಅಡಕೆ ತೋಟಗಳಿಗೆ ಕಳೆದ ಮೂರ‌್ನಾಲ್ಕು ದಿನಗಳಿಂದ ಪ್ರತಿದಿನ ಮಳೆಯಾಗುತ್ತಿರುವುದರಿಂದ ಅನುಕೂಲವಾಗಿದೆ. ಆತಂಕದಲ್ಲಿದ್ದ ಅಡಕೆ ಬೆಳೆಗಾರರಲ್ಲಿ ತೋಟಗಳನ್ನು ಉಳಿಸಿಕೊಳ್ಳಬಹುದೆಂಬ ಆಶಾಭಾವನೆ ವ್ಯಕ್ತವಾಗುತ್ತಿದೆ.
    ಕಳೆದ ಸುಮಾರು ಒಂದೂವರೆ ತಿಂಗಳಿನಿಂದ ಬಿಸಿಲಿನ ಝಳ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ತಾಪಮಾನ 37ರಿಂದ 38 ಡಿಗ್ರಿವರೆಗೂ ಏರಿಕೆಯಾಗಿತ್ತು. ಇದರಿಂದಾಗಿ ನದಿ, ತೊರೆಗಳು ಒಣಗಿದ್ದವು. ತಾಲೂಕಿನ ಕೆಲವು ಭಾಗದಲ್ಲಿ ಕುಡಿಯುವ ನೀರಿಗೂ ಕೊರತೆ ಉಂಟಾಗಿದ್ದು, ಕೃಷಿಭೂಮಿಗೂ ನೀರಿಲ್ಲದೇ ಅಡಕೆ ತೋಟಗಳು ಒಣಗುವ ಸ್ಥಿತಿ ನಿರ್ಮಾಣವಾಗಿತ್ತು.
    ವರ್ಷ ಪೂರ್ತಿ ಹರಿಯುವ ತುಂಗಾ ನದಿ ಕೂಡ ಸೊರಗಿದ್ದು, ನದಿಯಲ್ಲಿ ನೀರಿನ ಹರಿವು ಸ್ಥಗಿತಗೊಂಡು ನದಿಯಲ್ಲಿ ಬರಿ ಬಂಡೆಗಳೇ ಕಾಣುವಂತಾಗಿತ್ತು. ತಾಲೂಕಿನ ಮತ್ತೊಂದು ಪ್ರಮುಖ ನದಿಯಾದ ಮಾಲತಿಯಲ್ಲೂ ನೀರಿನ ಕೊರತೆ ಉಂಟಾಗಿತ್ತು. ಈ ನದಿಯ ಪಾತ್ರಗಳಲ್ಲಿ ಹೊಂಡ ಮಾಡಿ ಕೃಷಿಭೂಮಿಗೆ ನೀರನ್ನು ಒದಗಿಸಲಾಗುತ್ತಿತ್ತು. ಸತತವಾಗಿ ಮಳೆಯಾಗುತ್ತಿರುವ ಕಾರಣ ಕೃಷಿ ಪಂಪ್‌ಸೆಟ್‌ಗಳನ್ನು ನಿಲ್ಲಿಸಿರುವುದು ಕೂಡಾ ನದಿಯಲ್ಲಿ ನೀರು ಹರಿಯುವುದಕ್ಕೆ ಕಾರಣವಾಗಿದೆ.
    ಕೋಣಂದೂರು ಸಮೀಪದ ದೇಮ್ಲಾಪುರದಲ್ಲಿ ಸಂಭವಿಸಿದ ಅವಘಡವನ್ನು ಹೊರತು ಪಡಿಸಿ ತಾಲೂಕಿನಲ್ಲಿ ಗಾಳಿಮಳೆಯಿಂದ ಹೆಚ್ಚಿನ ಹಾನಿ ಸಂಭವಿಸಿಲ್ಲ. ದೇಮ್ಲಾಪುರದಲ್ಲಿ ಬಿರುಗಾಳಿಯಿಂದಾಗಿ ಮರ ಬಿದ್ದು ಬೈಕ್ ಸವಾರರೊಬ್ಬರು ಮೃತಪಟ್ಟಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts