More

    ಜಲಸಂರಕ್ಷಣೆಗೆ ‘ಜಲನಿಧಿ’ ಮುನ್ನುಡಿ

    ಶಶಿ ಈಶ್ವರಮಂಗಲ
    ಅಂತರ್ಜಲಮಟ್ಟ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದ್ದು, ರೈತರು ತಮ್ಮ ಕೃಷಿಯನ್ನು ಉಳಿಸಿಕೊಳ್ಳಲು ಬೇಸಿಗೆ ಕಾಲದಲ್ಲಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಜತೆಗೆ ಜಲಸಂರಕ್ಷಣಾ ಕಾರ್ಯದಲ್ಲಿ ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದಲ್ಲಿ ‘ಜಲನಿಧಿ’ ತಂಡ ತೊಡಗಿದ್ದು, ಇದೊಂದು ಪರಿಸರಸ್ನೇಹಿ ಮಾದರಿ ಪ್ರಯೋಗವಾಗಿದೆ.
    ಬಡಗನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕನ್ನಡ್ಕ ತೊರೆಗೆ 6 ಕಡೆಗಳಲ್ಲಿ ‘ಜಲನಿಧಿ’ ತಂಡದ ಕೃಷಿಕರು ಪರಿಸರ ಸ್ನೇಹಿ ಕಟ್ಟ ನಿರ್ಮಿಸಿ ವ್ಯರ್ಥವಾಗಿ ಪೋಲಾಗುತ್ತಿದ್ದ ನೀರನ್ನು ಸಂರಕ್ಷಣೆ ಮಾಡಿದ್ದಾರೆ. ಕಟ್ಟಗಳಲ್ಲಿ ಸಂಗ್ರಹವಾದ ನೀರನ್ನು ತಮ್ಮ ಕೃಷಿಗಳಿಗೆ ಯಾವುದೇ ವೆಚ್ಚ ಇಲ್ಲದೆ ಹಾಯಿಸುತ್ತಿದ್ದಾರೆ. ಜಲನಿಧಿ ತಂಡ ನಿರ್ಮಿಸಿದ ಪರಿಸರಸ್ನೇಹಿ ಕಟ್ಟಗಳಲ್ಲಿ ನೀರು ತುಂಬಿ ತುಳುಕುತ್ತಿದ್ದು, ಎರಡು ತಿಂಗಳ ಅವಧಿಗೆ ಈ ಭಾಗದ ರೈತರಿಗೆ ತೋಟಗಳಿಗೆ ನೀರು ಹಾಯಿಸುವ ಅಗತ್ಯವಿಲ್ಲ. ಹಾಗಾಗಿಯೇ ಇಲ್ಲಿನ ಕೃಷಿಕರು ಈ ಬಾರಿ ಖುಷಿಯಲ್ಲಿದ್ದಾರೆ.
    ನೀರು ಹರಿದು ಹೋಗುತ್ತಿರುವ ತೋಡು- ತೊರೆಗಳಿಗೆ ಕಟ್ಟ ನಿರ್ಮಾಣ ಮಾಡುವುದರಿಂದ ಸುತ್ತಲಿನ ಜಲಮೂಲಗಳಾದ ಕೆರೆ,ಬಾವಿ, ಕೊಳವೆಬಾವಿಗಳಲ್ಲಿ ನೀರಿನ ಮಟ್ಟ ಹೆಚ್ಚುತ್ತದೆ. ಕಟ್ಟದಲ್ಲಿ ಶೇಖರಣೆಗೊಂಡ ನೀರು ತುಂಬಿ ಇಂಗಿ ಹೋಗುವುದರಿಂದ ಜಲಪೂರಣವೂ ಆಗುತ್ತದೆ. ಕಟ್ಟದಲ್ಲಿ ಶೇಖರಣೆಗೊಳ್ಳುವ ನೀರಿನಿಂದಾಗಿ ತೋಟಗಾರಿಕೆ ಬೆಳೆಗಳಾದ ಅಡಕೆ, ತೆಂಗುಗಳಿಗೆ ಹೆಚ್ಚು ಅನುಕೂಲವಾಗುತ್ತದೆ.
    ದುಂದು ವೆಚ್ಚವಿಲ್ಲದೆ ಬರೀ ಸಾವಿರ ರೂಪಾಯಿ ಖರ್ಚು ಮಾಡಿ ಹರಿಯುವ ತೋಡಿಗೆ ಕಟ್ಟಗಳನ್ನು ನಿರ್ಮಿಸಲಾಗುತ್ತಿದೆ. ತೋಡಿನಲ್ಲಿ ಹರಿದು ಹೋಗುತ್ತಿರುವ ನೀರನ್ನು ಶೇಖರಿಸಿ ಸಂರಕ್ಷಿಸುವ ಪ್ರಯತ್ನ ಇದಾಗಿದ್ದು, ರೈತರಿಗೆ ಈ ಕುರಿತು ಜಲನಿಧಿ ತಂಡ ಮಾರ್ಗದರ್ಶನ ನೀಡುವ ಕಾರ್ಯ ನಡೆಸುತ್ತಿದೆ. ಈ ಯೋಜನೆಯನ್ನು ಇತರ ಗ್ರಾಮಗಳಿಗೂ ವಿಸ್ತರಿಸುವ ಕೆಲಸ ಆಗಬೇಕು. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಪ್ರೋತ್ಸಾಹಿಸುವ ಕೆಲಸ ಮಾಡಬೇಕು ಎನ್ನುವುದು ಜಲನಿಧಿ ತಂಡದ ಆಶಯ.
    ಸರ್ಕಾರದ ಅನುದಾನದಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ ನಿರ್ಮಿಸಲಾಗುವ ಕಿಂಡಿ ಅಣೆಕಟ್ಟುಗಳು ಕೇವಲ ಒಂದೆರಡು ವರ್ಷದಲ್ಲಿ ನಿರ್ವಹಣೆ ಇಲ್ಲದೆ ಪಾಳು ಬಿದ್ದು ಪ್ರಯೋಜನಕ್ಕೆ ಇಲ್ಲದಾಗುತ್ತಿವೆ. ಆದರೆ ಕೃಷಿಕರು ಸ್ವಂತ ಖರ್ಚಿನಲ್ಲಿ ಪರಿಸರಕ್ಕೆ ಯಾವುದೇ ರೀತಿಯಲ್ಲಿ ಹಾನಿಯಾಗದಂತೆ ಕಟ್ಟ ನಿರ್ಮಿಸಿದರೆ ಪರಿಸರ ಸ್ನೇಹಿಯಾಗಿರುತ್ತದೆ ಎಂಬುವುದು ಜಲನಿಧಿ ತಂಡದ ಅಭಿಪ್ರಾಯ. ನೀರು ಇಂಗಿಸಲು ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿರುವ ಸರ್ಕಾರ, ಕೃಷಿಕರು ನಿರ್ಮಿಸಿದ ಪರಿಸರ ಸ್ನೇಹಿ ಕಟ್ಟಗಳನ್ನು ಅಭಿವೃದ್ಧಿಪಡಿಸಲು ಪ್ರೋತ್ಸಾಹ ನೀಡಬೇಕು ಎನ್ನುವುದು ಆಗ್ರಹ.

    ಕಟ್ಟ ನಿರ್ಮಾಣ ಸುಲಭ
    ತಮ್ಮ ಅಡಕೆ ತೋಟದಲ್ಲಿ ಸತ್ತ ಅಡಕೆ ಮರವನ್ನು ಬಳಸಿಕೊಂಡ ತೋಟದಲ್ಲಿ ಮಧ್ಯೆ ಇಲ್ಲವೇ ಬದಿಯಲ್ಲಿ ಹರಿಯುವ ತೋಡುಗಳಿಗೆ ಸುಲಭವಾಗಿ ಕಟ್ಟ ನಿರ್ಮಿಸಬಹುದು. ತೊರೆ-ತೋಡಿನ ಅಳತೆಗೆ ತಕ್ಕಂತೆ ಅಡಕೆ ಮರವನ್ನು ಅಡ್ಡವಿಟ್ಟು, ಸಲಾಕೆಗಳನ್ನು ಬಳಸಿಕೊಂಡು ಅದರ ಮೇಲೆ ಫೈಬರ್ ಶೀಟ್ ಇಲ್ಲವೇ ಪ್ಲಾಸ್ಟಿಕ್ ಹಾಳೆಯನ್ನು ಇಟ್ಟು ಎರಡು ಬದಿಗಳಿಗೆ ಮಣ್ಣು ಅಥವಾ ಮರಳು ತುಂಬಿದ ಚೀಲವನ್ನು ಇಟ್ಟರೇ ಕಟ್ಟ ರೆಡಿಯಾಗುತ್ತದೆ. ಕೇವಲ ಇಬ್ಬರು ಕಾರ್ಮಿಕರನ್ನು ಬಳಸಿಕೊಂಡು ಇಂತಹ ಕಟ್ಟ ನಿರ್ಮಿಸಬಹುದು. ಫೈಬರ್ ಶೀಟ್‌ದಲ್ಲಿ ಅದನ್ನು ಕೆಲವು ವರ್ಷಗಳ ಕಾಲ ಬಳಸಬಹುದು. ತೋಡಿನಲ್ಲಿ ಹರಿಯುವ ನೀರು ಕಡಿಮೆಯಾದ ಬಳಿಕ ಫೈಬರ್ ಇಲ್ಲವೇ ಪ್ಲಾಸ್ಟಿಕ್ ಹಾಳೆಯನ್ನು ಆಲ್ಲಿಂದ ತೆರವುಗೊಳಿಸಿ ಮನೆಯ ಅಂಗಳಕ್ಕೆ ಹಾಸಿದರೆ ಮಳೆಗಾಲದಲ್ಲಿ ಅಂಗಳದಲ್ಲಿ ಹುಲ್ಲು ಬೆಳೆಯುವುದನ್ನು ತಡೆಯಬಹುದು. ಕಟ್ಟಕ್ಕೆ ಬಳಸಿದ ಅಡಕೆ ಮರದ ಸಲಾಕೆಯನ್ನು ಪುನರ್ಬಳಕೆ ಮಾಡಬಹುದು, ಇಲ್ಲವೇ ಸೌದೆಯಾಗಿ ಬಳಸಬಹುದು. ಮರಳು ಚೀಲವನ್ನು ಪುನರ್‌ಬಳಕೆ ಮಾಡಬಹುದು.

     

    ಕರ್ನಾಟಕ- ಕೇರಳ ಗಡಿಭಾಗದಲ್ಲಿರುವ ನಮ್ಮ ಕೃಷಿಭೂಮಿಯಲ್ಲಿ ಹರಿಯುವ ತೋಡಿಗೆ ಬೀರಮೂಲೆ ಮತ್ತು ಕೋರಮೂಲೆ ಎಂಬಲ್ಲಿ ಎರಡು ಕಡೆ ಫೈಬರ್‌ಶೀಟ್‌ಗಳನ್ನು ಆಳವಡಿಸಿ ಕಟ್ಟವನ್ನು ನಿರ್ಮಿಸಲಾಗಿದೆ. ಈ ಬಾರಿ ನೀರಿನ ಹರಿವು ಹೆಚ್ಚು ಇರುವುದರಿಂದ ನೀರು ಕಟ್ಟದಲ್ಲಿ ತುಂಬಿ ಮೇಲ್ಭಾಗದಿಂದ ಹರಿದು ತೋಟಗಳಿಗೆ ನೇರವಾಗಿ ಹೋಗುತ್ತಿದೆ. ಈ ಕಟ್ಟಗಳು ಬಹಳ ಪ್ರಯೋಜನಕಾರಿಯಾಗಿದೆ.
    ಕೃಷ್ಣ ಭಟ್ ಕೋರಮೂಲೆ ಜಲನಿಧಿ ತಂಡದ ಸದಸ್ಯ

    ಕಳೆದ 5 ವರ್ಷಗಳಿಂದ ಪರಿಸರಸ್ನೇಹಿ ಕಟ್ಟವನ್ನು ನಿರ್ಮಿಸಿಲಾಗುತ್ತಿದೆ. ಈ ಕಟ್ಟವನ್ನು ನೋಡಿದ ಕೆಲವು ಕೃಷಿಕರು ಸಲಹೆ ಪಡೆದುಕೊಂಡು ಪಡುವನ್ನೂರು ಗ್ರಾಮದ 6 ಕಡೆಗಳಲ್ಲಿ ಪರಿಸರಸ್ನೇಹಿ ಕಟ್ಟಗಳನ್ನು ನಿರ್ಮಿಸಿದ್ದಾರೆ. ಎಲ್ಲ 6 ಕಡೆಯ ಕಟ್ಟಗಳಲ್ಲಿ ನೀರು ತುಂಬಿ ತುಳುಕುತ್ತಿದೆ. ಈ ಕಟ್ಟಡಗಳನ್ನು ಇನ್ನಷ್ಟೂ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪ್ರೋತ್ಸಾಹ ನೀಡಬೇಕು.
    ಮಾಧವ ನಾಯಕ್ ಕೆ. ಜಲನಿಧಿ ತಂಡದ ವ್ಯವಸ್ಥಾಪಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts