ಹರೀಶ್ ಮೋಟುಕಾನ ಮಂಗಳೂರು
ನಗರದಲ್ಲಿ ವಾರಕ್ಕೊಂದು ದಿನ ಸಂಗ್ರಹವಾಗುವ 330 ಟನ್ ಒಣತ್ಯಾಜ್ಯವನ್ನು ಪಚ್ಚನಾಡಿ ಡಂಪಿಂಗ್ ಯಾರ್ಡ್‌ಗೆ ಕೊಂಡೊಯ್ಯುವ ಬದಲು ನಗರದ ನಾಲ್ಕು ಭಾಗಗಳಲ್ಲಿ ಸಂಗ್ರಹಿಸಿ ಸಂಸ್ಕರಿಸಲು 70 ಲಕ್ಷ ರೂ. ವೆಚ್ಚದಲ್ಲಿ ಮಹಾನಗರ ಪಾಲಿಕೆ ಯೋಜನೆ ರೂಪಿಸಿದೆ. ಈಗಾಗಲೇ ಎರಡು ಕಡೆ ಕೇಂದ್ರಗಳ ಕಾಮಗಾರಿ ಶೇ.90ರಷ್ಟು ಪೂರ್ಣಗೊಂಡಿದೆ.
ಪಾಲಿಕೆಯ 60 ವಾರ್ಡ್‌ಗಳಿಗೆ ಅನ್ವಯವಾಗುವಂತೆ ಸುರತ್ಕಲ್, ಕಾವೂರಿನ ಮುಲ್ಲಕಾಡ್, ಉರ್ವ, ಜೆಪ್ಪು ಬಜಾಲ್ ಭಾಗಗಳಲ್ಲಿ ಕೇಂದ್ರಗಳು ನಿರ್ಮಾಣವಾಗಲಿದೆ. ಒಂದೊಂದು ಕೇಂದ್ರಗಳಿಗೆ 15 ವಾರ್ಡ್‌ಗಳ ಒಣ ತ್ಯಾಜ್ಯ ಸರಬರಾಜು ಮಾಡಲು ಉದ್ದೇಶಿಸಲಾಗಿದೆ.
ಸದ್ಯ ಒಣಕಸವನ್ನು ಪಚ್ಚನಾಡಿಗೆ ತಂದು ಅಲ್ಲಿ ಸಂಸ್ಕರಣೆ ಮಾಡಲಾಗುತ್ತದೆ. ಆದರೆ ತ್ಯಾಜ್ಯದ ಪ್ರಮಾಣ ಅಧಿಕವಾಗುತ್ತಿದ್ದಂತೆ ಸಮಸ್ಯೆ ಮತ್ತಷ್ಟು ಉಲ್ಭಣವಾಗದಂತೆ ನೋಡಿಕೊಳ್ಳಬೇಕಾದ ಕಾರಣ ಪಾಲಿಕೆ ಪ್ರತ್ಯೇಕ ನಾಲ್ಕು ಕೇಂದ್ರ ತೆರೆಯಲು ನಿರ್ಧರಿಸಿದೆ.
200 ಚದರ ಮೀಟರ್ ವಿಸ್ತೀರ್ಣದ ಕೇಂದ್ರ ಇದಾಗಿದೆ. ಒಣ ಕಸ ಪ್ರತ್ಯೇಕಿಸುವ ಯುನಿಟ್‌ಗಳು, ಬೇಲಿಂಗ್ ಯಂತ್ರಗಳು ಇಲ್ಲಿರಲಿದೆ. ಮಂಗಳೂರಿನಲ್ಲಿ ಸಂಗ್ರಹವಾಗುವ ಒಣ ಕಸವನ್ನು ಈ ಕೇಂದ್ರಗಳಿಗೆ ತರಲಾಗುತ್ತದೆ. ಇಲ್ಲಿ ಅದನ್ನು ಪ್ರತ್ಯೇಕಿಸಿ ಪೆಟ್ಟಿಗೆಗಳಲ್ಲಿ ಕಂಪ್ರೆಸ್ ಮಾಡಿಡಲಾಗುತ್ತದೆ. ಬಳಿಕ ಮರು ಬಳಕೆಗೆ ಕಳುಹಿಸಲಾಗುತ್ತದೆ.
70 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ: ನಾಲ್ಕು ಕೇಂದ್ರಗಳು 70 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಪಾಲಿಕೆ ಇದರ ನೇತೃತ್ವ ವಹಿಸಲಿದೆ. ಮಂಗಳೂರಿನಲ್ಲಿ ಶುಕ್ರವಾರ ಮಾತ್ರ ಒಣ ಕಸ ಸಂಗ್ರಹ ಮಾಡಲಾಗುತ್ತಿದೆ. ವಾರದಲ್ಲಿ ಎರಡು ದಿನವಾದರೂ ಒಣ ಕಸ ಸಂಗ್ರಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಶುಕ್ರವಾರ ನೀಡದಿದ್ದರೆ ಮತ್ತೆ ಒಂದು ವಾರ ಕಾಯಬೇಕಾಗುತ್ತದೆ. ವಾರಕ್ಕೊಮ್ಮೆ 330 ರಿಂದ 350 ಟನ್ ಒಣಕಸ ಸಂಗ್ರಹವಾಗುತ್ತದೆ. ಇದರಿಂದಾಗಿ ಹಸಿ ಕಸ ಸಂಗ್ರಹ ಪ್ರಮಾಣ 300 ಟನ್‌ನಿಂದ 220 ಟನ್‌ಗೆ ಇಳಿಕೆಯಾಗಿದೆ. ಕರೊನಾದ ಬಳಿಕ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿದ್ದು, ಪ್ರತಿಯೊಂದನ್ನು ಪ್ಲಾಸ್ಟಿಕ್ ಮೂಲಕವೇ ಕಟ್ಟಿ ಕೊಡುವ ಪ್ರಕ್ರಿಯೆ ನಗರದಲ್ಲಿ ಹೆಚ್ಚಾಗಿದೆ.
ಒಣ ತ್ಯಾಜ್ಯ ಸಂಸ್ಕರಣಾ ಕೇಂದ್ರ: ಸುರತ್ಕಲ್ ಮಾಧವ ನಗರ, ಕಾವೂರು ಮುಲ್ಲಕಾಡ್‌ನಲ್ಲಿ ಮತ್ತು ಜೆಪ್ಪು ಬಜಾಲ್ ಎಸ್‌ಟಿಪಿ ಬಳಿ, ಉರ್ವ ಮಾರುಕಟ್ಟೆ ಸಮೀಪ ಒಣ ತ್ಯಾಜ್ಯ ಸಂಸ್ಕರಣೆಯಾಗಲಿದೆ. ಸುರತ್ಕಲ್ ಮತ್ತು ಕಾವೂರುಗಳಲ್ಲಿ ಘಟಕಗಳ ಕಾಮಗಾರಿ ಶೇ.90ರಷ್ಟು ಪೂರ್ಣಗೊಂಡಿದೆ. ಬಜಾಲ್ ಮತ್ತು ಉರ್ವದಲ್ಲಿ ಕಾಮಗಾರಿ ಇನ್ನಷ್ಟೇ ಆಗರಂಭಗೊಳ್ಳಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳೂರು ನಗರದ ನಾಲ್ಕು ಭಾಗಗಳಲ್ಲಿ ಒಣ ತ್ಯಾಜ್ಯ ಸಂಗ್ರಹ ಸಂಸ್ಕರಣಾ ಕೇಂದ್ರ ನಿರ್ಮಾಣವಾಗುತ್ತಿದೆ. ಸುರತ್ಕಲ್ ಮತ್ತು ಕಾವೂರು ಕೇಂದ್ರಗಳ ಕಾಮಗಾರಿ ಅಂತಿಮ ಹಂತದಲ್ಲಿದೆ. ಬಜಾಲ್ ಮತ್ತು ಉರ್ವದಲ್ಲಿ ಜಾಗ ಗುರುತಿಸಲಾಗಿದೆ. ನಾಲ್ಕು ಕೇಂದ್ರಗಳಲ್ಲಿ ಒಣ ತ್ಯಾಜ್ಯ ಸಂಸ್ಕರಣೆ ಆರಂಭವಾದರೆ ಪಚ್ಚನಾಡಿಗೆ ಹೋಗುವ ತ್ಯಾಜ್ಯದ ಹೊರೆ ತಪ್ಪಲಿದೆ.
ಮಧು ಮನೋಹರ್, ಮನಪಾ, ಪರಿಸರ ಇಂಜಿನಿಯರ್