More

    ಸಿಸಿ ಕ್ಯಾಮರಾ ಅಳವಡಿಸಿದಲ್ಲೇ ರಾಶಿ ತ್ಯಾಜ್ಯ!

    ಗುರುಪುರ: ಜನಪ್ರತಿನಿಧಿಗಳ ಅಧಿಕಾರ ಕೊನೆಗೊಂಡು, ಸರ್ಕಾರಿ ಆಡಳಿತಾಧಿಕಾರ ಜಾರಿಯಾದ ಬಳಿಕ ಗುರುಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಳೂರು ಮತ್ತು ಅಡ್ಡೂರು ಗ್ರಾಮಗಳ ಕೆಲವೆಡೆ ತ್ಯಾಜ್ಯ ವಿಲೇವಾರಿ ಕುಂಟುತ್ತ ಸಾಗಿದ್ದು, ರಸ್ತೆಗಳ ಪಕ್ಕ ಗುಡ್ಡೆಯಂತೆ ಬಿದ್ದಿರುವ ತ್ಯಾಜ್ಯ ರಾಶಿಯಿಂದ ದುರ್ನಾತ ಹೊಮ್ಮುತ್ತಿದೆ.

    ಗುರುಪುರ ಅಲೈಗುಡ್ಡೆಯಲ್ಲಿ ಹೆಚ್ಚಿನ ದಿನಗಳಲ್ಲಿ ರಾಶಿ ರಾಶಿ ತ್ಯಾಜ್ಯ ಬಿದ್ದಿರುತ್ತದೆ. ಇದರಿಂದ ರಾಷ್ಟ್ರೀಯ ಹೆದ್ದಾರಿ(169) ಬದಿ ನಡೆದಾಡುವ ದಾರಿಹೋಕರು ಮೂಗಿಗೆ ಕೈ ಹಿಡಿದುಕೊಂಡು ಸಾಗುವಂತಾಗಿದೆ. ಎಲ್ಲೆಂದರಲ್ಲಿ ತ್ಯಾಜ್ಯ ಎಸೆದು ಕಾನೂನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲೆಂದು ಒಂದು ವಾರದ ಹಿಂದೆ ಇಲ್ಲಿ ಗುರುಪುರ ಪಂಚಾಯಿತಿ ಸಿಸಿ ಕ್ಯಾಮರಾ ಅಳವಡಿಸಿದೆ. ಒಂದು ವಾರವಾದರೂ ಕ್ಯಾಮರಾದ ಫೂಟೇಜ್ ಪರಿಶೀಲಿಸಿ, ಬೇಕಾಬಿಟ್ಟಿ ತ್ಯಾಜ್ಯ ಎಸೆಯುವ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಪಂಚಾಯಿತಿ ಆಡಳಿತಾಧಿಕಾರಿಗಳು ಮುಂದಾದಂತೆ ಕಂಡು ಬಂದಿಲ್ಲ. ಹಾಗಾಗಿ ತ್ಯಾಜ್ಯ ರಾಶಿ ಬೆಳೆಯುತ್ತಲೇ ಇದೆ.

    ಪಂಚಾಯಿತಿ ತ್ಯಾಜ್ಯ ನಿರ್ವಹಣೆ ಮೊತ್ತವಾಗಿ ಇಲ್ಲಿನ ಗ್ರಾಮವಾಸಿಗಳು ತಿಂಗಳಿಗೆ ನಿರ್ದಿಷ್ಟ ಶುಲ್ಕ ಭರಿಸಬೇಕು. ಆದರೆ ಶುಲ್ಕ ನಿರಾಕರಿಸುತ್ತಿರುವ ಸ್ಥಳೀಯರು ಪಂಚಾಯಿತಿ ವಾಹನಕ್ಕೆ ತ್ಯಾಜ್ಯ ಒದಗಿಸದೆ ರಸ್ತೆ ಬದಿಯಲ್ಲೇ ಡಂಪ್ ಮಾಡುತ್ತಿದ್ದಾರೆ. ವಾಹನಗಳಲ್ಲಿ ಸಾಗುವವರೂ ಇಲ್ಲಿ ತ್ಯಾಜ್ಯ ಎಸೆಯುತ್ತಾರೆ.

    ಬೋರ್ಡ್ ನಿಷ್ಪ್ರಯೋಜಕ: ಪರಿಸ್ಥಿತಿಯನ್ನು ಸವಾಲಾಗಿ ಸ್ವೀಕರಿಸಿದ ಪಂಚಾಯಿತಿ ಆಡಳಿತ ಇಲ್ಲಿ ಸಿಸಿ ಕ್ಯಾಮರಾ ಅಳವಡಿಸಿದೆ. ಈ ಕ್ರಮದ ಬಳಿಕ ಫೂಟೇಜ್ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಪಂಚಾಯಿತಿ ಮೀನಮೇಷ ಎಣಿಸುವಂತಿದೆ. ಇಲ್ಲಿ ‘ತ್ಯಾಜ್ಯ ಎಸೆಯಬಾರದು’ ಎಂಬ ಎಚ್ಚರಿಕಾ ಬೋರ್ಡ್ ನಿಷ್ಪ್ರಯೋಜಕವಾದ ಬಳಿಕ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಭವಿಷ್ಯದಲ್ಲಿ ಕ್ಯಾಮರಾ ಸದುಪಯೋಗವಾಗದೆ ಹೋದಲ್ಲಿ, ಇದೂ ಕೂಡ ಬೋರ್ಡ್‌ನಂತೆ ನಿಷ್ಪ್ರಯೋಜಕವಾಗುವುದರಲ್ಲಿ ಸಂದೇಹವಿಲ್ಲ.

    ಸಿಸಿ ಕ್ಯಾಮರಾ ಪರಿಶೀಲಿಸಲು ಪಂಚಾಯಿತಿ ಸಿಬ್ಬಂದಿಗೆ ಸೂಚಿಸಲಾಗಿದೆ. ಅಲೈಗುಡ್ಡೆಯ ಹೆದ್ದಾರಿ ಬದಿ ಕಸಕಡ್ಡಿ-ತ್ಯಾಜ್ಯ ಎಸೆದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು.
    – ಅಬೂಬಕ್ಕರ್, ಗುರುಪುರ ಪಂಚಾಯಿತಿ ಪಿಡಿಒ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts