ಪಡುಬಿದ್ರಿ: ನಿರುಪಯುಕ್ತ ಪ್ಲಾಸ್ಟಿಕ್ ತ್ಯಾಜ್ಯ ವಿಲೇಯಲ್ಲಿ ಆಗುತ್ತಿರುವ ತೊಂದರೆ ತಪ್ಪಿಸಲು ಖಾಸಗಿ ರಸ್ತೆ ನಿರ್ಮಾಣ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಸ್ಕರಿಸಿ ರಸ್ತೆ ನಿರ್ಮಾಣದಲ್ಲಿ ಬಳಸುವ ಡಾಂಬರು ಆಗಿ ಪರಿವರ್ತಿಸುವ ಯೋಜನೆಗೆ ಕಾಪು ಪುರಸಭೆ ಮುನ್ನಡಿಯಿಟ್ಟಿದೆ.
ಕಳೆದ 4 ವರ್ಷಗಳ ಹಿಂದೆ ರಚನೆಗೊಂಡ ಕಾಪು ಪುರಸಭೆಗೆ ಸೂಕ್ತ ಸ್ಥಳಾವಕಾಶವಿಲ್ಲದೆ ತ್ಯಾಜ್ಯ ವಿಲೇ ಬಹುದೊಡ್ಡ ಸಮಸ್ಯೆಯಾಗಿತ್ತು. ಪುರಸಭೆ ವ್ಯಾಪ್ತಿಯ ಎಲ್ಲ ಮನೆಗಳು ಹಾಗೂ ವಾಣಿಜ್ಯ ಘಟಕಗಳಿಂದ ಪ್ರತಿನಿತ್ಯ ಘನ ತ್ಯಾಜ್ಯವನ್ನು ಒಣ ಹಾಗೂ ಹಸಿಕಸವನ್ನಾಗಿ ಬೇರ್ಪಡಿಸಿ ಸಂಗ್ರಹಿಸಲಾಗುತ್ತಿದೆ. ಅದನ್ನು ಎಸ್‌ಎಲ್‌ಆರ್‌ಎಂ ಘಟಕದಲ್ಲಿ ವಿಂಗಡಿಸಿ ಮರುಬಳಕೆ ಮಾಡಬಹುದಾದ ತ್ಯಾಜ್ಯವನ್ನು ಮಾರಾಟ ಮಾಡಲಾಗುತ್ತಿದ್ದು, ಉಳಿದ ಮರುಬಳಕೆಗೆ ಯೋಗ್ಯವಲ್ಲದ ನಿರುಪಯುಕ್ತವಾಗಿ ನೆಲಭರ್ತಿಗೊಳಿಸಬಹುದಾದ ಮತ್ತು ಉರಿಸಿ ವಿಲೇ ಮಾಡಬಹುದಾದ ತೆಳು ಪ್ಲಾಸ್ಟಿಕ್ ಚೀಲಗಳು, ಮಲ್ಟಿ ಲೇಯರ್ ಪ್ಲಾಸ್ಟಿಕ್ ಉತ್ಪನ್ನಗಳನ್ನು ಘಟಕದಲ್ಲಿ ಸಂಗ್ರಹಿಸಲಾಗುತ್ತಿತ್ತು.
ಅದನ್ನು ವಿಲೇವಾರಿ ಮಾಡುವುದು ಪುರಸಭೆಗೆ ಆರ್ಥಿಕವಾಗಿ ಹೊರೆಯಾಗಿದ್ದು, ನಿರುಪಯುಕ್ತ ಪ್ಲಾಸ್ಟಿಕ್ ತ್ಯಾಜ್ಯವನ್ನು ಸರ್ಕಾರದ ಮಾರ್ಗಸೂಚಿಯಂತೆ ಈ ಹಿಂದೆ ಸಿಮೆಂಟ್ ಕಾರ್ಖಾನೆಗೆ ಉರುವಲಾಗಿ ಕಳುಹಿಸಲಾಗುತ್ತಿತ್ತು. ಸಿಮೆಂಟ್ ಕಾರ್ಖಾನೆಗಳು ಬಹಳ ದೂರದ ಪ್ರದೇಶದಲ್ಲಿರುವುದರಿಂದ ತ್ಯಾಜ್ಯ ಸಾಗಾಟ ಪುರಸಭೆಗೆ ವೆಚ್ಚದಾಯಕವಾಗಿತ್ತು.
ಪ್ರಸಕ್ತ ಕಾಪು ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಪ್ಲ್ಲಾಸ್ಟಿಕ್ ತ್ಯಾಜ್ಯವನ್ನು ರಸ್ತೆ ನಿರ್ಮಾಣಕ್ಕೆ ಬಳಸುವ ನಿಟ್ಟಿನಲ್ಲಿ ಬೆಂಗಳೂರಿನ ಉದ್ಯಮಿ ರಾಮನಾಥ್ ಲಕ್ಷ್ಮಣ್ ಅವರು ಪುರಸಭೆಯೊಂದಿಗೆ ಕೈಜೋಡಿಸಿದ್ದಾರೆ. ಈಗಾಗಾಲೇ ಸ್ವಚ್ಛ ಭಾರತ ಮತ್ತು ಆತ್ಮ ನಿರ್ಭರ ಭಾರತ್ ಯೋಜನೆಯ ಮೂಲ ಆಶಯಗಳ ಪರಿಕಲ್ಪನೆಯಲ್ಲಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ 400 ಕಿ.ಮೀ.ಗೂ ಅಧಿಕ ಪ್ಲಾಸ್ಟಿಕ್ ತ್ಯಾಜ್ಯ ಮಿಶ್ರಿತ ಡಾಂಬರ್ ರಸ್ತೆಗಳ ನಿರ್ಮಾಣ ಕೈಗೊಂಡಿದ್ದಾರೆ. ಅದಕ್ಕಾಗಿ ಅವತ್ಯವಿರುವ ಪ್ಲಾಸ್ಟಿಕ್ ತ್ಯಾಜ್ಯಕ್ಕಾಗಿ ಕಾಪು ಪುರಸಭೆಯ ತ್ಯಾಜ್ಯ ಘಟಕದಲ್ಲಿ ಶ್ರೆಡ್ಡರ್ ಯಂತ್ರ ಅಳವಡಿಸಿದ್ದು, ನಿರುಪಯುಕ್ತ ಪ್ಲಾಸ್ಟಿಕ್ ಉತ್ಪನ್ನಗಳನ್ನು ಸಂಸ್ಕರಿಸಿ ರಸ್ತೆ ಡಾಂಬರಿಗೆ ಬಳಸಲು ಮುಂದಾಗಿದ್ದಾರೆ.
ಘಟಕದಲ್ಲಿನ ಪ್ಲಾಸ್ಟಿಕ್ ಶ್ರೆಡ್ಡರ್ ಯಂತ್ರದ ನಿರ್ವಹಣೆ ಹಾಗೂ ತ್ಯಾಜ್ಯದ ಸಾಗಾಟ ವೆಚ್ಚವನ್ನು ಮರುಬಳಕೆದಾರರೇ ಭರಿಸುತ್ತಿರುವುದರಿಂದ ಕಾಪು ಪುರಸಭೆಗೆ ಆರ್ಥಿಕ ಹೊರೆ ತಪ್ಪುತ್ತದೆ. ಅಲ್ಲದೆ ಪ್ರಸ್ತಾವಿತ ಎಲ್ಲೂರು ತ್ಯಾಜ್ಯ ಘಟಕಕ್ಕೆ ನೆಲಭರ್ತಿಗಾಗಿ ಕಳುಹಿಸುವ ತ್ಯಾಜ್ಯದ ಪ್ರಮಾಣ ಗಣನೀಯವಾಗಿ ಕಡಿಮೆಯಾಗಲಿದೆ. ಮೊದಲ ಹಂತದಲ್ಲಿ ಈ ತ್ಯಾಜ್ಯ ವಿಲೇವಾರಿಯನ್ನು ಪ್ರಸ್ತುತ ಎಸ್‌ಎಲ್‌ಆರ್‌ಎಂ ಘಟಕದಲ್ಲಿ ಶೇಖರವಾಗಿರುವ ತ್ಯಾಜ್ಯಕ್ಕೆ ಸೀಮಿತಗೊಳಿಸಿದ್ದು, ಯೋಜನೆ ಯಶಸ್ವಿಯಾದರೆ ಮುಂದಿನ ಹಂತದಲ್ಲಿ ಪುರಸಭೆಗೆ ಆರ್ಥಿಕವಾಗಿಯೂ ಲಾಭದಾಯಕವಾಗುವಂತೆ ವಿಸ್ತರಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ.
ಪ್ಲಾಸ್ಟಿಕ್ ತ್ಯಾಜ್ಯದಿಂದ ರಸ್ತೆ ನಿರ್ಮಿಸುವ ತಂತ್ರಜ್ಞಾನ ಹಳೆಯದಾಗಿದ್ದರೂ, ಖಾಸಗಿ ಸಹಭಾಗಿತ್ವದೊಂದಿಗೆ ಸರ್ಕಾರದ ಅನುದಾನ ಬಳಕೆ ಮಾಡದೆ ಕಾಪು ಪುರಸಭೆಯಲ್ಲಿ ಸಂಸ್ಕರಣಾ ಘಟಕ ಸ್ಥಾಪಿತವಾಗಿರುವುದು ರಾಜ್ಯದಲ್ಲೇ ಮೊದಲ ಪ್ರಯತ್ನ. ಈ ಯೋಜನೆಯಿಂದ ಯಾವುದೇ ಖರ್ಚಿಲ್ಲದೆ ತ್ಯಾಜ್ಯ ವಿಲೇ ಸಾಧ್ಯವಾಗುತ್ತಿದ್ದು, ಈ ಪರಿಸರ ಸ್ನೇಹಿ ಕ್ರಮದಿಂದಾಗಿ ಮಾಲಿನ್ಯ ನಿಯಂತ್ರಣ ಕೂಡ ಸಾಧ್ಯವಾಗಲಿದೆ.
-ವೆಂಕಟೇಶ ನಾವಡ, ಕಾಪು ಪುರಸಭೆ ಮುಖ್ಯಾಧಿಕಾರಿ