More

    ಚರಂಡಿ ತುಂಬ ಹೂಳು…ರಸ್ತೆ ಮೇಲೆ ನೀರು..

    ಶಿಗ್ಗಾಂವಿ: ಮುಂಗಾರು ಆರಂಭವಾಗಿರುವುದರಿಂದ ಪುರಸಭೆ ವಿವಿಧ ಕ್ರಮಗಳ ಮೂಲಕ ಮಳೆಗಾಲದ ಸಮಸ್ಯೆ ನಿವಾರಣೆಗೆ ಸಿದ್ಧವಾಗುತ್ತಿದೆ. ಪಟ್ಟಣದ ಬಹುತೇಕ ವಾರ್ಡ್​ಗಳಲ್ಲಿ ಚರಂಡಿಗಳು ಹೂಳು ತುಂಬಿದ್ದು, ಸ್ವಚ್ಛತೆ ಕಾರ್ಯ ನಡೆದಿದೆ.

    ಪಟ್ಟಣದ 23 ವಾರ್ಡ್ ಪೈಕಿ 18 ವಾರ್ಡ್​ಗಳ ಚರಂಡಿಗಳಲ್ಲಿ ಹೂಳು ತುಂಬಿದ್ದು, ಸ್ವಲ್ಪ ಮಳೆಯಾದರೂ ಸಾಕು ರಸ್ತೆ ಮೇಲೆ ನೀರು ಹರಿಯುತ್ತದೆ. ಜಯನಗರ, ಗಾಂಧಿನಗರ, ಹಳಪೇಟೆ, ಸುಣಗಾರ ಓಣಿ, ದೇಸಾಯಿ ಗಲ್ಲಿ, ಶಾದಿ ಮಹಲ್ ಹತ್ತಿರ, ರಾಚನಕಟ್ಟೆ ಕೆರೆ ಹತ್ತಿರ, ಹೊಸಪೇಟೆ, ಸರ್ಕಾರಿ ಆಸ್ಪತ್ರೆ ಹಿಂದುಗಡೆ ರಸ್ತೆಗಳು ಸೇರಿದಂತೆ ವಿವಿಧ ಪ್ರದೇಶಗಳಲ್ಲಿನ ಮನೆಗಳಿಗೆ ಕೊಳಚೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗುತ್ತದೆ.

    ಪಟ್ಟಣದ 14, 16, 17, 18, 21, 22ನೇ ವಾರ್ಡ್​ಗಳಲ್ಲಿ ಚರಂಡಿಯಲ್ಲಿನ ಹೂಳು, ಗಿಡಗಂಟಿ ತೆರವು ಮಾಡಿ ಸ್ವಚ್ಛತೆ ಮಾಡಲಾಗಿದೆ. ಮುಗಳಿ, ಹುಲಗೂರ, ಸವಣೂರ ರಸ್ತೆಗಳಿಗೆ ಪಟ್ಟಣದ ಕೊಳಚೆ ನೀರು ನುಗ್ಗಿ ಸಂಚಾರಕ್ಕೆ ಅಡ್ಡಿಯಾಗುತ್ತದೆ. ಈ ಬಗ್ಗೆ ಸಾರ್ವಜನಿಕರು ಹಲವು ಬಾರಿ ದೂರು ನೀಡಿದ್ದಾರೆ. ಆದರೆ, ಪುರಸಭೆ ತಾತ್ಕಾಲಿಕ ಪರಿಹಾರ ನೀಡುತ್ತ ಬಂದಿದೆ. ಸದ್ಯ ಚರಂಡಿ ಹೂಳು ತೆಗೆಯುವ ಕಾರ್ಯ ಪ್ರಗತಿಯಲ್ಲಿದೆ. ರಾಷ್ಟ್ರೀಯ ಹೆದ್ದಾರಿ- 4ರ ಪಕ್ಕದಲ್ಲಿರುವ ಕಾಡನಕಟ್ಟೆ ಕೆರೆ ತುಂಬಿ ಹರಿದು ಪಟ್ಟಣದ ಮಾರುತಿ ನಗರ, ಎಪಿಎಂಸಿ ಹಿಂಭಾಗದ ಪ್ರದೇಶಕ್ಕೆ ನೀರು ನುಗ್ಗುತ್ತದೆ. ಇದನ್ನು ತಡೆಯಲು ಕಾಲುವೆ ಹೂಳೆತ್ತುವ ಕಾಮಗಾರಿ ನಡೆದಿದ್ದರೂ, ಅಪೂರ್ಣವಾಗಿದೆ.

    ಮಳೆಗಾಲದಲ್ಲಿ ನೀರು ಮನೆಗಳಿಗೆ ನುಗ್ಗುವುದು, ಚರಂಡಿ ಬ್ಲಾಕ್ ಆಗುವುದು, ಗಾಳಿ-ಮಳೆಗೆ ವಿದ್ಯುತ್ ಕಂಬ, ಮರಗಳು ಮುರಿದು ಸಮಸ್ಯೆಯಾಗುವುದು ಸಹಜ. ಹೀಗಾಗಿ ನಾಗರಿಕರ ನೆರವಿಗೆ ಬರುವ ನಿಟ್ಟಿನಲ್ಲಿ ಪುರಸಭೆ ಮೂವರು ಅಧಿಕಾರಿಗಳನ್ನು ಪಾಳಿ ಆಧಾರದಲ್ಲಿ ನೇಮಿಸಲಾಗಿದೆ. ದಿನದ 24 ಗಂಟೆಯೂ ಅಧಿಕಾರಿಗಳು ಲಭ್ಯವಿರಲಿದ್ದಾರೆ. ಸಮಸ್ಯೆ ಎದುರಾದಾಗ ಸಾರ್ವಜನಿಕರು ಸಹಾಯವಾಣಿ ಸಂಖ್ಯೆ 08378-255250, 08378- 255115ಗೆ ಸಂರ್ಪಸಬಹುದು.

    ಪಟ್ಟಣದಲ್ಲಿ 22 ಕಾಯಂ ಪೌರ ಕಾರ್ವಿುಕರಿದ್ದು, 16 ಪೌರ ಕಾರ್ವಿುಕರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಪೌರ ಕಾರ್ವಿುಕರಿಗೆ ಲಸಿಕೆ ಹಾಕಲಾಗಿದೆ. ಮಳೆಗಾಲ ಆರಂಭದ ಮುನ್ನ ಪೌರ ಕಾರ್ವಿುರಿಗೆ ರೇನ್ ಕೋಟ್ ಹಾಗೂ ಫೇಸ್​ಶೀಲ್ಡ್, ಮಾಸ್ಕ್, ಹ್ಯಾಡ್ ಗ್ಲೌಸ್, ಗಮ್ ಬೂಟ್, ಸಾನಿಟೈಸರ್ ವಿತರಿಸುವ ಮೂಲಕ ಮಳೆಗಾಲದಲ್ಲಿ ಕಾರ್ಯನಿರ್ವಹಿಸಲು ಸಂಪೂರ್ಣ ತರಬೇತಿ ನೀಡಲಾಗಿದೆ. 1 ಟಿಪ್ಪರ್, 1 ಟಾಟಾ ಏಸ್, 1 ಆಪೈ, 3 ಟ್ಯಾಕ್ಟರ್, 1 ಜೆಸಿಬಿ ಕೆಲಸಕ್ಕೆ ಸಿದ್ಧ ಸ್ಥಿತಿಯಲ್ಲಿ ಇಟ್ಟುಕೊಳ್ಳಲಾಗಿದೆ.

    ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಕೋವಿಡ್ ನಿಯಂತ್ರಣಕ್ಕೆ ಹಾಗೂ ಮಳೆಗಾಲದಲ್ಲಿ ಸೊಳ್ಳೆಗಳು, ಕ್ರಿಮಿಕೀಟಗಳ ಉತ್ಪತ್ತಿ ತಡೆಯಲು ಎಲ್ಲ ವಾರ್ಡ್​ಗಳಲ್ಲಿ ರಾಸಾಯನಿಕ ಔಷಧ ಸಿಂಪಡಣೆ ಮಾಡಲಾಗಿದೆ. ತಗ್ಗು ಪ್ರದೇಶಗಳಲ್ಲಿ ಚರಂಡಿ, ಮಳೆ ನೀರು ಸರಾಗವಾಗಿ ಹರಿಯಲು ಕ್ರಮ ಕೈಗೊಳ್ಳಲಾಗಿದೆ. ಆದಾಗ್ಯೂ, ಸಮಸ್ಯೆ ಉಂಟಾದರೆ ನಾಗರಿಕರು ಕೂಡಲೆ ಪುರಸಭೆಗೆ ಸಹಾಯವಾಣಿಗೆ ತಿಳಿಸಬೇಕು.

    | ಮಲ್ಲಯ್ಯ ಹಿರೇಮಠ, ಪುರಸಭೆ ಮುಖ್ಯಾಧಿಕಾರಿ ಶಿಗ್ಗಾಂವಿ

    ಮಳೆಗಾಲದಲ್ಲಿ ಯಾವುದೇ ತೊಂದರೆ ಆಗದಂತೆ ಕ್ರಮ ವಹಿಸಿದ್ದೇವೆ. ಹಾಗೇನಾದರೂ ಸಾರ್ವಜನಿಕರಿಗೆ ತೊಂದರೆಯಾದರೆ, ಪುರಸಭೆ ಆಡಳಿತ ಮಂಡಳಿ, ಅಧಿಕಾರಿಗಳು ತಕ್ಷಣ ಪರಿಹಾರ ಒದಗಿಸಲಿದ್ದಾರೆ.

    | ಮಂಜುನಾಥ ಬ್ಯಾಹಟ್ಟಿ, ಉಪಾಧ್ಯಕ್ಷ ಪುರಸಭೆ ಶಿಗ್ಗಾಂವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts