More

    ಕಸ ಬೀಳುವ ತಾಣದಲ್ಲಿ ಉದ್ಯಾನ!

    ವಿಜಯವಾಣಿ ಸುದ್ದಿಜಾಲ ಉಡುಪಿ

    ನಗರವನ್ನು ತ್ಯಾಜ್ಯ ಮುಕ್ತವಾಗಿಸಲು ಉಡುಪಿ ನಗರಸಭೆ ವಿನೂತನ ಪ್ರಯತ್ನಕ್ಕೆ ಕೈ ಹಾಕಿದ್ದು, ಕಸ ಎಸೆಯುವ ಸ್ಥಳಗಳನ್ನು ಗುರುತಿಸಿ ಸಣ್ಣ ಉದ್ಯಾನ ನಿರ್ಮಿಸಲಾಗುತ್ತಿದೆ. ನಗರ ವ್ಯಾಪ್ತಿಯಲ್ಲಿ ಈ ಹಿಂದೆ 35 ವಾರ್ಡ್‌ಗಳಲ್ಲಿ 500ಕ್ಕೂ ಅಧಿಕ ಬ್ಲಾೃಕ್‌ಸ್ಪಾಟ್‌ಗಳು (ಕಸ ಎಸೆಯುವ ಸ್ಥಳಗಳು) ಇದ್ದವು.

    ನಿರಂತರ ಸ್ವಚ್ಛತೆ ಹಾಗೂ ಕಟ್ಟುನಿಟ್ಟಿನ ದಂಡ ಅನುಷ್ಠಾನದಿಂದ ಕಸ ಎಸೆಯುವ ತಾಣಗಳ ಸಂಖ್ಯೆ 150ಕ್ಕೆ ಇಳಿಕೆಯಾಗಿದೆ. ಬ್ಲಾೃಕ್‌ಸ್ಪಾಟ್‌ಗಳನ್ನು ಶೂನ್ಯಕ್ಕೆ ತಲುಪಿಸಲು ನಗರಸಭೆ ಕೆಲವು ತಿಂಗಳಿಂದ ಯೋಜನೆ ರೂಪಿಸಿದೆ. ಖಾಸಗಿ ಸಂಸ್ಥೆ ಸುಹಾಸ್ ಜತೆಗೆ ಕೈ ಜೋಡಿಸಿ ಬ್ಲಾೃಕ್‌ಸ್ಪಾಟ್ ಗುರುತಿಸಿ, ಮಿನಿ ಗಾರ್ಡನ್ ನಿರ್ಮಾಣಕ್ಕೆ ಮುಂದಾಗಿದೆ. ಕಸದ ಕೊಂಪೆಯನ್ನು ಕೈದೋಟವಾಗಿಸಲು ಆಲೋಚಿಸಿ ತ್ಯಾಜ್ಯ ಪ್ರದೇಶವನ್ನು ಸ್ವಚ್ಛ ಗೊಳಿಸಲಾಗುತ್ತದೆ. ಆ ಪ್ರದೇಶದಲ್ಲಿ ಅನುಪಯುಕ್ತ ವಸ್ತುಗಳಾದ ಟೈರ್, ಇತರ ವಸ್ತುಗಳಲ್ಲಿ ಸುಂದರವಾಗಿ ಹೂವಿನ ಮತ್ತು ಆಲಂಕಾರಿಕ ಗಿಡಗಳನ್ನು ನೆಡಲಾಗಿದೆ. ಜತೆಗೆ ಈ ಗಿಡಗಳ ರಕ್ಷಣೆಗೆ ಹಗ್ಗ ಹಾಗೂ ಬಿದಿರನ್ನು ಬಳಸಿಕೊಂಡು ತಡಬೇಲಿ ನಿರ್ಮಿಸಲಾಗುತ್ತಿದೆ.

    ನಗರ ವ್ಯಾಪ್ತಿಯಲ್ಲಿ ಈಗಾಗಲೇ ಮೂರು ಕಡೆಗಳಲ್ಲಿ ಕೈದೋಟ ನಿರ್ಮಿಸಲಾಗಿದೆ. ಚಿಟ್ಪಾಡಿ, ಅಂಬಲಪಾಡಿ ಸಂದೀಪ್ ನಗರ, ಮಲ್ಪೆ ಪೊಲೀಸ್ ಠಾಣೆ ಸಮೀಪ ಕೈದೋಟ ನಿರ್ಮಿಸಲಾಗಿದೆ. ಈ ಹಿಂದೆ ನಗರಸಭೆಯಿಂದ ಎಚ್ಚರಿಕೆ ಬೋರ್ಡ್ ಹಾಕಿದರೂ, ಜನರು ಕಸ ಎಸೆಯುವುದು ಕಡಿಮೆ ಮಾಡಿರಲಿಲ್ಲ. ಇದೀಗ ಈ ಪ್ರದೇಶದಲ್ಲಿ ಸುಂದರವಾದ ಕೈತೋಟ ನಿರ್ಮಾಣವಾಗಿರುವುದರಿಂದ ಸಾರ್ವಜನಿಕರು ಕಸ ಎಸೆಯುವುದನ್ನು ನಿಲ್ಲಿಸಿದ್ದಾರೆ ಎಂದು ನಗರಸಭೆ ಆರೋಗ್ಯಾಧಿಕಾರಿಗಳು ಹೇಳಿದ್ದಾರೆ.

    3.75 ಲಕ್ಷ ರೂ.ದಂಡ ವಸೂಲಿ: ಕಸ ಎಸೆಯುವವರಿಂದ 100ರಿಂದ 25,000 ರೂವರೆಗೆ ದಂಡ ವಿಧಿಸಲಾಗುತ್ತಿದೆ. 217 ಪ್ರಕರಣದಲ್ಲಿ 3.75ಲಕ್ಷ ರೂ.ದಂಡ ಸಂಗ್ರಹಿಸಲಾಗಿದೆ. ರಸ್ತೆಯಲ್ಲಿ ಎಸೆದ ಕಸದಲ್ಲಿ ಸಿಕ್ಕಿರುವ ಬಿಲ್ ಹಾಗೂ ಇತರ ಮಾಹಿತಿಯನ್ನು ಹಿಡಿದುಕೊಂಡು ತನಿಖೆ ನಡೆಸಲಾಗುತ್ತದೆ. ಕಸ ಎಸೆಯುವರನ್ನು ಪತ್ತೆ ಹಚ್ಚಿ ದಂಡದ ಬಿಲ್ ಮನೆಗೆ ತಲುಪಿಸಿ, ಎಚ್ಚರಿಕೆ ನೀಡಲಾಗಿದೆ. ಸಾರ್ವಜನಿಕ ಸ್ಥಳ, ವಾಹನದಲ್ಲಿ ರಸ್ತೆಯ ಸಮೀಪದ ನದಿಗಳಿಗೆ ಕಸ ಎಸೆಯುವವರ ಮಾಹಿತಿಯನ್ನು ಸಾರ್ವಜನಿಕರು ನಗರಸಭೆ ಅಧಿಕಾರಿಗಳಿಗೆ (ದೂರವಾಣಿ 8202520306) ನೀಡಬಹುದು. ಮಾಹಿತಿಯನ್ನು ಗೌಪ್ಯವಾಗಿಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ನಗರ ವ್ಯಾಪ್ತಿಯಲ್ಲಿ 500ಕ್ಕೂ ಅಧಿಕ ಕಸ ಎಸೆಯುವ ಸ್ಥಳಗಳನ್ನು ಗುರುತಿಸಲಾಗಿತ್ತು, ದಂಡದ ಬಿಸಿ, ಜಾಗೃತಿ ಮೂಲಕ ಸಾಕಷ್ಟು ಪ್ರಮಾಣದಲ್ಲಿ ಈ ಸಂಖ್ಯೆ ಇಳಿಕೆಯಾಗಿದೆ. ಹೆಚ್ಚು ಕಸ ಬೀಳುವ ಪ್ರದೇಶ ಸ್ವಚ್ಛಗೊಳಿಸಿ, ಕೈದೋಟ ನಿರ್ಮಿಸಿರುವುದರಿಂದ ಪರಿಣಾಮಕಾರಿಯಾಗಿದೆ. ಈ ಪ್ರದೇಶದಲ್ಲಿ ಕಸ ಎಸೆಯುವುದು ಕಡಿಮೆಯಾಗುತ್ತಿದೆ. ಇದನ್ನು ಸಮೀಪದ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳ ಸಹಕಾರದಿಂದ ನಿರ್ವಹಣೆ ಮಾಡಲಾಗುತ್ತಿದೆ.
    – ಕರುಣಾಕರ್, ಆರೋಗ್ಯಾಧಿಕಾರಿ
    ನಗರಸಭೆ ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts