More

    ದ್ಯುತಿಗಿಲ್ಲ ಪ್ರಾಯೋಜಕರ ಕೊರತೆ, ಕಾರು ಮಾರಾಟಕ್ಕೆ ರೈಲು ಬಿಟ್ಟ ಅಥ್ಲೀಟ್​!

    ಭುವನೇಶ್ವರ: ಟೋಕಿಯೊ ಒಲಿಂಪಿಕ್ಸ್​ ಮುಂದೂಡಿಕೆಯಿಂದಾಗಿ ಆರ್ಥಿಕ ಸಂಕಷ್ಟ ಎದುರಾಗಿದ್ದು, ತರಬೇತಿಗೆ ಹಣ ಹೊಂದಿಸುವ ಸಲುವಾಗಿ ತಮ್ಮ ಬಿಎಂಡಬ್ಲ್ಯು ಕಾರು ಮಾರಾಟ ಮಾಡುತ್ತಿರುವುದಾಗಿ ಅಥ್ಲೀಟ್​ ದ್ಯುತಿ ಚಂದ್​ ಕೆಲ ದಿನಗಳ ಹಿಂದೆ ಹೇಳಿದ್ದರು. ಆದರೆ ಈಗ ಅವರು ಉಲ್ಟಾ ಹೊಡೆದಿದ್ದಾರೆ. ತರಬೇತಿ ವೆಚ್ಚಕ್ಕೆ ಹಣ ಹೊಂದಿಸುವ ಸಲುವಾಗಿ ಕಾರು ಮಾರಾಟ ಮಾಡುತ್ತಿಲ್ಲ. ಈ ಐಷಾರಾಮಿ ಕಾರಿನ ಮೆಂಟೆನನ್ಸ್​ ತಮಗೆ ಕಷ್ಟವಾಗುತ್ತಿದೆ ಎಂದು ತಪ್ಪೊಪ್ಪಿಕೊಂಡಿದ್ದಾರೆ.

    ಒಲಿಂಪಿಕ್ಸ್​ ಮುಂದೂಡಿಕೆಯಿಂದಾಗಿ ತರಬೇತಿಗೆ ಹಣ ಹೊಂದಿಸಲು ಬಿಎಂಡಬ್ಲ್ಯು ಕಾರು ಮಾರಾಟ ಮಾಡುತ್ತಿರುವುದಾಗಿ 24 ವರ್ಷದ ದ್ಯುತಿ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದರು. ಆದರೆ ಬಳಿಕ ಅದನ್ನು ಡಿಲೀಟ್​ ಮಾಡಿದ್ದರು. ಈ ನಡುವೆ ಅವರು ತರಬೇತಿ ವೆಚ್ಚಕ್ಕೆ ಪ್ರಾಯೋಜಕರಿಲ್ಲದೆ ಪರದಾಡುತ್ತಿರುವ ಬಗ್ಗೆ ಕ್ರೀಡಾಭಿಮಾನಿಗಳು ಕಳವಳ ವ್ಯಕ್ತಪಡಿಸಿದ್ದರು. ಜತೆಗೆ ಟೆನಿಸ್​ ಆಟಗಾರ ಸೋಮ್​ದೇವ್​ ದೇವವರ್ಮನ್​ ಸಹಿತ ಕೆಲ ಕ್ರೀಡಾತಾರೆಯರೂ ಅವರಿಗೆ ನೆರವಾಗುವ ಭರವಸೆ ನೀಡಿದ್ದರು. ಆದರೆ ದ್ಯುತಿ ಈಗ ತಮಗೆ ಪ್ರಾಯೋಜಕರ ಕೊರತೆ ಇಲ್ಲ ಎಂದು ಹೇಳಿದ್ದಾರೆ. ಜತೆಗೆ ತಮಗೆ ಈ ಐಷಾರಾಮಿ ಕಾರು ಇಷ್ಟವಾದರೂ ಅದರ ಮೆಂಟೆನನ್ಸ್​ ಕಷ್ಟವಾಗಿದೆ ಎಂದಿದ್ದಾರೆ. ಜತೆಗೆ ತರಬೇತಿ ವೆಚ್ಚಕ್ಕಾಗಿ ಕಾರು ಮಾರಾಟ ಮಾಡುವುದಾಗಿ ಹೇಳಿಕೊಂಡಿರಲಿಲ್ಲ ಎಂದಿದ್ದಾರೆ.

    ಇದನ್ನೂ ಓದಿ: ಅಥ್ಲೆಟಿಕ್ಸ್​ ತಾರೆ ಸ್ವಪ್ನಾ ಮನೆಗೆ ಅರಣ್ಯಾಧಿಕಾರಿಗಳ ದಾಳಿ, ಅಲ್ಲಿ ಸಿಕ್ಕಿದ್ದೇನು?

    ಒಡಿಶಾ ಸರ್ಕಾರದ ಜತೆಗೆ ತನ್ನ ಪ್ರಾಯೋಜಕರಾದ ಕೆಐಐಟಿ ವಿಶ್ವವಿದ್ಯಾಲಯವೂ ಸಾಕಷ್ಟು ಆಥಿರ್ಕ ನೆರವು ನೀಡಿದೆ. ನನ್ನ ತರಬೇತಿಯೂ ದುಬಾರಿ ಎಂಬುದು ನಿಜವಾಗಿದೆ. ಈ ಹಣವೂ ನನ್ನ ತರಬೇತಿಗೆ ಬಳಕೆಯಾಗಬಹುದು ಎಂಬ ಆಸೆಯಲ್ಲಿದ್ದೆ ಅಷ್ಟೇ. ಅಲ್ಲದೆ ಕಾರಿನ ಮಾರಾಟದಿಂದ ನನಗೆ ಅದರ ಮೆಂಟೆನನ್ಸ್​ ಹೊರೆಯೂ ತಗ್ಗುತ್ತದೆ ಎಂದು ಭಾರತದ ವೇಗದ ಓಟಗಾರ್ತಿ ದ್ಯುತಿ ಹೇಳಿದ್ದಾರೆ. ತಮ್ಮ ತರಬೇತಿ ಯೋಜನೆಗೆ ಸರ್ಕಾರ ಸೂಕ್ತ ಸಹಾಯ ನೀಡಲಿದೆ ಎಂಬ ಭರವಸೆಯಲ್ಲಿರುವ ದ್ಯುತಿ, ನಾನು ಅಂತಾರಾಷ್ಟ್ರೀಯ ಕೂಟಗಳಿಗೆ ತೆರಳುವಾಗ ಒಡಿಶಾ ಸರ್ಕಾರ ಖಂಡಿತವಾಗಿಯೂ ನೆರವಾಗಲಿದೆ ಎಂದಿದ್ದಾರೆ. 2018ರಲ್ಲಿ ಒಡಿಶಾ ಸರ್ಕಾರ ನೀಡಿದ 3 ಕೋಟಿ ರೂ. ಬಹುಮಾನ ಮೊತ್ತದಲ್ಲಿ ಅವರು 30 ಲಕ್ಷ ರೂ. ಮೌಲ್ಯದ ಬಿಎಂಡಬ್ಲ್ಯು ಖರೀದಿಸಿದ್ದರು. ಆದರೆ ಅದರ ವಾರ್ಷಿಕ ವಿಮೆಯೇ 80 ಸಾವಿರ ರೂ. ಇದೆ. ಬಿಡಿಭಾಗಗಳು ಹಾನಿಯಾದರೆ ಕನಿಷ್ಠ 20 ಸಾವಿರ ರೂ. ವ್ಯಯಿಸಬೇಕಾಗುತ್ತದೆ ಎಂದು ದ್ಯುತಿ ಇತ್ತೀಚೆಗೆ ಹೇಳಿಕೊಂಡಿದ್ದರು. ತಮ್ಮ ಹಣಕಾಸು ಸುಸ್ಥಿತಿಯ ಬಗ್ಗೆ ವರದಿಗಳು ಬರುತ್ತಿರುವಂತೆಯೇ ದ್ಯುತಿ ಮಾತು ಬದಲಾಯಿಸಿದ್ದಾರೆ ಎನ್ನಲಾಗಿದೆ.

    ದ್ಯುತಿಗೆ ಕೊಟ್ಟ ಹಣದ ಲೆಕ್ಕ ಬಿಚ್ಚಿಟ್ಟ ಒಡಿಶಾ ಸರ್ಕಾರ
    100 ಮೀಟರ್​ ಓಟದಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ದ್ಯುತಿ ಚಂದ್​ಗೆ ತವರಿನ ಒಡಿಶಾ ಸರ್ಕಾರ ಪ್ರಮುಖ ಪ್ರಾಯೋಜಕನಾಗಿದೆ. ದ್ಯುತಿಗೆ ಪ್ರಾಯೋಜಕರ ಕೊರತೆ ಇದೆ ಎಂಬ ವರದಿ ಬಂದ ಬೆನ್ನಲ್ಲೇ ಒಡಿಶಾ ಸರ್ಕಾರ ತಾನು ಇದುವರೆಗೆ ದ್ಯುತಿಗೆ ನೀಡಿರುವ ಹಣಕಾಸು ನೆರವಿನ ವಿವರವನ್ನು ಬಹಿರಂಗಪಡಿಸಿದೆ. 2015ರಿಂದ ಇದುವರೆಗೆ ದ್ಯುತಿಗೆ ಒಟ್ಟು 4.09 ಕೋಟಿ ರೂ. ನೆರವು ನೀಡಲಾಗಿದೆ ಎಂದು ತಿಳಿಸಲಾಗಿದೆ. 2018ರ ಏಷ್ಯನ್​ ಗೇಮ್ಸ್​ ಪದಕ ಸಾಧನೆಗಾಗಿ 3 ಕೋಟಿ ರೂ. ಬಹುಮಾನ ನೀಡಲಾಗಿತ್ತು. 2015ರಿಂದ 19ರವರೆಗೆ ತರಬೇತಿಗಾಗಿ 30 ಲಕ್ಷ ರೂ. ನೀಡಲಾಗಿತ್ತು. ಟೋಕಿಯೊ ಒಲಿಂಪಿಕ್ಸ್​ ಸಿದ್ಧತೆಗಾಗಿ 2019ರ ಆಗಸ್ಟ್​ ಮತ್ತು ಡಿಸೆಂಬರ್​ನಲ್ಲಿ 2 ಕಂತುಗಳಲ್ಲಿ ಒಟ್ಟು 30 ಲಕ್ಷ ರೂ. ನೀಡಲಾಗಿತ್ತು. ಅಲ್ಲದೆ ಅವರಿಗೆ ಒಡಿಶಾ ಮೈನಿಂಗ್​ ಕಾಪೋರ್ರೇಷನ್​ನಲ್ಲಿ (ಒಎಂಸಿ) ಎ ದರ್ಜೆಯ ಉದ್ಯೋಗ ನೀಡಲಾಗಿದ್ದು, ತೀರ ಇತ್ತೀಚೆಗೆ ಅಂದರೆ ಜೂನ್​ನಲ್ಲಿ ಅವರು ಪಡೆದ ಮಾಸಿಕ ಸಂಬಳ 84,604 ರೂ. ಆಗಿದೆ. ಇದಲ್ಲದೆ ಅವರು ಕಚೇರಿಗೆ ಬಂದು ಕೆಲಸ ನಿರ್ವಹಿಸಬೇಕೆಂಬ ನಿಬಂಧನೆಯೂ ಇಲ್ಲ. ಒಎಂಸಿಯಿಂದಲೂ ಅವರ ತರಬೇತಿಗಾಗಿ ಇದುವರೆಗೆ 29 ಲಕ್ಷ ರೂ. ನೀಡಲಾಗಿದೆ ಎಂದು ಒಡಿಶಾ ಸರ್ಕಾರ ವಿವರಿಸಿದೆ.

    ಸಂಬಳ 60 ಸಾವಿರ, ಕಾರಿನ ವಿಮೆ 80 ಸಾವಿರ! ಬಿಎಂಡಬ್ಲ್ಯು ಮೆಂಟೆನನ್ಸ್​ಗೆ ದ್ಯುತಿ ಪರದಾಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts