More

    ಗಣತಂತ್ರ ದಿನದಂದು ರಾಷ್ಟ್ರ ಧ್ವಜಕ್ಕೆ ಅವಮಾನ: ಮನ್​ ಕಿ ಬಾತ್​ನಲ್ಲಿ ಪ್ರಧಾನಿ ಬೇಸರ

    ನವದೆಹಲಿ: ಗಣರಾಜ್ಯೋತ್ಸವ ದಿನದಂದು ತಿವರ್ಣ ಧ್ವಜಕ್ಕೆ ಅವಮಾನ ಮಾಡಲಾಯಿತು. ಇದರಿಂದ ಇಡೀ ರಾಷ್ಟ್ರವೇ ಆಘಾತಕ್ಕೊಳಗಾಯಿತು. ಈ ಘಟನೆಯಿಂದ ನನಗೆ ಬೇಸರವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

    ಈ ವರ್ಷದ ಮೊದಲ ಮನ್​ ಕಿ ಬಾತ್​ ಕಾರ್ಯಕ್ರಮದಲ್ಲಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರು 2021ರ ಮೊದಲ ತಿಂಗಳು ಮುಗಿದಿದೆ. ಈ ತಿಂಗಳಲ್ಲಿ ಹಲವು ಹಬ್ಬಗಳನ್ನು ಆಚರಿಸಿದ್ದೇವೆ. ಜನವರಿ 26ರ ಗಣರಾಜ್ಯೋತ್ಸವದಂದು ತ್ರಿವರ್ಣ ಧ್ವಜದ ಅವಮಾನಕ್ಕೆ ಸಾಕ್ಷಿಯಾದ ರಾಷ್ಟ್ರವು ಆಘಾತಕ್ಕೊಳಗಾಗಿದೆ. ದೆಹಲಿಯಲ್ಲಿ ತಿರಂಗಕ್ಕೆ ಅವಮಾನ ಮಾಡಿದ್ದಾರೆ. ಅಂದು ನಡೆದ ಘಟನೆಯಿಂದ ಬೇಸರವಾಗಿದೆ. ಇಡೀ ದೇಶಕ್ಕೆ ದುಷ್ಟಶಕ್ತಿಗಳಿಂದ ಅವಮಾನವಾಗಿದೆ ಎಂದು ಪ್ರಧಾನಿ ಭಾಷಣದ ಆರಂಭದಲ್ಲೇ ಗಣತಂತ್ರ ದಿನದಂದು ನಡೆದ ಘಟನೆಯನ್ನು ಸ್ಮರಿಸಿ ಖಂಡಿಸಿದರು.

    ಈ ತಿಂಗಳು ಕ್ರಿಕೆಟ್​ ಮೈದಾನದಿಂದ ಒಳ್ಳೆಯ ಸುದ್ದಿಯನ್ನು ಕೇಳಿದೆವು. ಆರಂಭಿಕ ಸೋಲಿನ ಬಳಿಕ ಆಸ್ಟ್ರೇಲಿಯಾದ ನೆಲದಲ್ಲೇ ಆಸಿಸ್​ ವಿರುದ್ಧ ತಿರುಗಿಬಿದ್ದು ಟೆಸ್ಟ್​ ಸರಣಿ ಗೆಲ್ಲುವ ಮೂಲಕ ಟೀಮ್​ ಇಂಡಿಯಾ ಇತಿಹಾಸ ಬರೆದಿದೆ. ನಮ್ಮ ತಂಡದ ಶ್ರಮ ಮತ್ತು ತಂಡದ ಕೆಲಸ ನಮಗೆ ಸ್ಪೂರ್ತಿ ನೀಡುತ್ತದೆ ಎಂದು ಟೀಮ್​ ಇಂಡಿಯಾವನ್ನು ಪ್ರಶಂಸಿದರು.

    ಕರೊನಾ ವಿರುದ್ಧ ಒಂದು ವರ್ಷದಿಂದ ಹೋರಾಡುತ್ತಿದ್ದೇವೆ. ದೇಶದಲ್ಲಿ ಅತಿದೊಡ್ಡ ಕರೊನಾ ಲಸಿಕಾ ಅಭಿಯಾನ ನಡೆಸಿದ್ದೇವೆ. ಲಸಿಕಾ ಅಭಿಯಾನದಿಂದ ನಾವು ಗಮನಿಸಬೇಕಾದ ಅಂಶವೇನೆಂದರೆ, ಭಾರತವು ಇಂದು ಇತರೆ ರಾಷ್ಟ್ರಗಳಿಗೆ ನೆರವು ನೀಡುವಷ್ಟು ಸಮರ್ಥವಾಗಿದೆ. ಭಾರತ ಇಂದು ಔಷಧ ಮತ್ತು ಲಸಿಕೆ ಕ್ಷೇತ್ರದಲ್ಲಿ ಸ್ವಾವಲಂಬಿಯಾಗುತ್ತಿದೆ. 30 ಲಕ್ಷ ಜನರಿಗೆ ಲಸಿಕೆ ಪೂರೈಸಲಾಗಿದೆ. ಬೇರೆ ರಾಷ್ಟ್ರಗಳು ಸಹ ನಮಗೆ ಕೃತಜ್ಞತೆ ಸಲ್ಲಿಸಿವೆ ಎಂದರು.

    ಈ ವರ್ಷ ಭಾರತ 75ನೇ ಸ್ವಾತಂತ್ರ್ಯೋತ್ಸವ ಸಂಭ್ರಮ ಆಚರಣೆಗೆ ಸಾಕ್ಷಿಯಾಗಲಿದೆ. ನಿಮ್ಮ ಬರಹಗಳು ಸ್ವಾತಂತ್ರ್ಯ ಚಳವಳಿಯ ವೀರರಿಗೆ ಆದರ್ಶ ಗೌರವವಾಗಿದೆ. ದೇಶದ ಜನರು ವಿಶೇಷವಾಗಿ ಯುವ ಸ್ನೇಹಿತರಿಗೆ ನಾನು ಕರೆ ನೀಡುವುದೇನೆಂದರೆ, ಸ್ವಾತಂತ್ರ್ಯ ಯೋಧರ ಬಗ್ಗೆ ಬರೆಯಿರಿ. ಅದಕ್ಕೆ ಸಂಬಂಧಿಸಿದ ಘಟನೆಗಳು ಮತ್ತು ಅವರ ಪ್ರದೇಶಗಳಲ್ಲಿ ಸ್ವಾತಂತ್ರ್ಯ ಹೋರಾಟದ ಸಮಯದ ಶೌರ್ಯದ ಕಥೆಗಳ ಬಗ್ಗೆ ಪುಸ್ತಕಗಳನ್ನು ಬರೆಯಿರಿ ಎಂದು ಹೇಳಿದರು.

    ಕೆಲವು ದಿನಗಳ ಹಿಂದೆ ನಮ್ಮ ನಾಲ್ವರು ಭಾರತೀಯ ಮಹಿಳಾ ಪೈಲಟ್​ಗಳು ಅಮೆರಿಕದ ಸ್ಯಾನ್​ ಫ್ರ್ಯಾನ್ಸಿಸ್ಕೋದಿಂದ ಬೆಂಗಳೂರಿಗೆ ನೇರವಾಗಿ ವಿಮಾನ ಚಲಾಯಿಸಿದರು. 225 ಜನರನ್ನು ಹೊತ್ತ ವಿಮಾನವೂ 10 ಸಾವಿರ ಕಿ.ಮೀ ಪ್ರಯಾಣ ಮಾಡಿದೆ. ಯಾವುದೇ ಕ್ಷೇತ್ರವಾಗಲಿ, ರಾಷ್ಟ್ರದ ಮಹಿಳೆಯರ ಭಾಗವಹಿಸುವಿಕೆ ನಿರಂತರವಾಗಿ ಹೆಚ್ಚುತ್ತಿದೆ ಎಂದು ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts