More

    ವಿಎಸ್‌ಸಿ ದುರಸ್ತಿಗೆ ರೂ.110 ಕೋಟಿ, ಶಾಸಕ ಪರಣ್ಣ ಮುನವಳ್ಳಿ ಮಾಹಿತಿ

    ಗಂಗಾವತಿ: ತಾಲೂಕಿನ ವಿಜಯನಗರ ಕಾಲುವೆಗಳ ಆಧುನೀಕರಣಕ್ಕೆ 110 ಕೋಟಿ ರೂ.ಮಂಜೂರಾಗಿದ್ದು, ಜುಲೈ ಅಂತ್ಯದೊಳಗೆ ಶೇ.50ರಷ್ಟು ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

    ಜಲಸಂಪನ್ಮೂಲ ಇಲಾಖೆಯಡಿ ತಾಲೂಕಿನ ಮೋತಿಘಾಟ್ ಬಳಿ ಕೈಗೆತ್ತಿಕೊಂಡಿರುವ ವಿಜಯನಗರ ಕಾಲುವೆಗಳ ದುರಸ್ತಿ ಕಾಮಗಾರಿಯನ್ನು ಮಂಗಳವಾರ ವೀಕ್ಷಿಸಿ, ಸುದ್ದಿಗಾರರೊಂದಿಗೆ ಮಾತನಾಡಿದರು. ಸಣಾಪುರದಿಂದ ಹಿರೇಜಂತಕಲ್ ಹಳೇ ಮಾಗಾಣಿವರೆಗಿನ 45 ಕಿ.ಮೀ. ವ್ಯಾಪ್ತಿಯ ವಿಎನ್‌ಸಿ ದುರಸ್ತಿಗೆ 110 ಕೋಟಿ ರೂ.ಬಿಡುಗಡೆಯಾಗಿದೆ. ಕೆಲ ತಿಂಗಳ ಹಿಂದೆ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಎರಡನೇ ಬೆಳೆ, ಕರೊನಾ ಮುಂಜಾಗ್ರತೆ ಕ್ರಮದ ಹಿನ್ನೆಲೆಯಲ್ಲಿ ಕಾಮಗಾರಿಗೆ ವಿಳಂಬವಾಗಿದ್ದು, ಪುನಃ ಆರಂಭಿಸಲಾಗಿದೆ. ವಿಎನ್‌ಸಿ ಮೇಲ್ಮಟ್ಟ ಮತ್ತು ಕೆಳಮಟ್ಟದ 18 ಕಿ.ಮೀ.ಉದ್ದದ ಕಾಮಗಾರಿ ಗುಣಮಟ್ಟದಲ್ಲಿ ನಿರ್ವಹಿಸಲಾಗುತ್ತಿದ್ದು, ಆರ್‌ಎನ್‌ಎಸ್ ಕಂಪನಿ ಗುತ್ತಿಗೆ ಪಡೆದುಕೊಂಡಿದೆ. ಮೇಲ್ಭಾಗದಲ್ಲಿ 6, ಕೆಳಭಾಗದಲ್ಲಿ 4 ಸೇತುವೆ ಕಾಮಗಾರಿಗಳನ್ನು ನಿರ್ವಹಿಸಬೇಕಿದೆ. ಹಂಪಿ ಪ್ರಾಧಿಕಾರ ವ್ಯಾಪ್ತಿಯ ಬಹುತೇಕ ಗ್ರಾಮಗಳಿದ್ದರಿಂದ ಮರಮ್ ಪಡೆಯಲು ತೊಂದರೆಯಾಗಿತ್ತು. ನೀರು ನಿರ್ವಹಣೆಯ ಮಿನಿ ಕ್ರೆಸ್ಟ್ ಗೇಟ್ ಮರು ನಿರ್ಮಿಸಬೇಕಿದ್ದರಿಂದ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದೆ. ಗುಣಮಟ್ಟದಲ್ಲಿ ಯಾವುದೇ ರಾಜಿಯಿಲ್ಲ, ರೈತರೇ ತಮ್ಮ ವ್ಯಾಪ್ತಿಯ ಕಾಮಗಾರಿ ಬಗ್ಗೆ ನಿಗಾವಹಿಸಬೇಕು. ಗುತ್ತಿಗೆದಾರರಿಗೆ ಸಹಕಾರ ನೀಡಬೇಕು ಎಂದು ಸಲಹೆ ನೀಡಿದರು.

    ಯೋಜನೆ
    ಗಂಗಾವತಿ ತಾಲೂಕಿನ ಸಂಗಾಪುರ ಕೆರೆ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುತ್ತಿದೆ. ಕೆರೆ ಒತ್ತುವರಿ ಬಗ್ಗೆ ಅನುಮಾನಗಳಿವೆ. ಹೀಗಾಗಿ ಸರ್ವೇ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆಗೆ ಸೂಚಿಸಲಾಗುವುದು. ಪ್ರವಾಸಿ ತಾಣವನ್ನಾಗಿ ನಿರ್ಮಿಸುವ ಯೋಚನೆಯಿದ್ದು, ಕೆರೆಯ ಬಗ್ಗೆ ವಿಸ್ತೃತ ವರದಿ ನೀಡುವಂತೆ ಜಲಸಂಪನ್ಮೂಲ ಇಲಾಖೆ ಸೂಚಿಸಲಾಗಿದೆ ಎಂದರು.

    ನೀರಾವರಿ ಇಲಾಖೆ ಇಇ ರಮೇಶ ವಲ್ಯಾಪುರೆ, ಎಇಇ ರಾಜೇಶ ವಸದ್, ಎಇ ಎಂ.ಕೃಷ್ಣಪ್ಪ, ಆರ್‌ಎನ್‌ಎಸ್ ಇಂಜಿನಿಯರ್ ಚೇತನ್, ನಿರ್ವಹಣೆ ಅಧಿಕಾರಿ ಕೇಶವ ಭಟ್, ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಚನ್ನಪ್ಪ ಮಳಗಿ, ಜಿಪಂ ಮಾಜಿ ಸದಸ್ಯ ಎಚ್.ಎಂ.ಸಿದ್ರಾಮಯ್ಯಸ್ವಾಮಿ, ಮುಖಂಡರಾದ ಹೊನ್ನಪ್ಪ ನಾಯ್ಕ ಇತರರು ಇದ್ದರು. ಇದಕ್ಕೂ ಮುನ್ನ ಸಂಗಾಪುರದ ಲಕ್ಷ್ಮಿ ನಾರಾಯಣ ಕೆರೆಗೆ ಭೇಟಿ ನೀಡಿ ಹೂಳೆತ್ತುವ ಕಾಮಗಾರಿ ವೀಕ್ಷಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts