More

    ಮತಪಟ್ಟಿಯಿಂದ ಅನರ್ಹರ ಕೈಬಿಡಿ: ಅಧಿಕಾರಿಗಳಿಗೆ ಮತದಾರರ ಪಟ್ಟಿ ವೀಕ್ಷಕ ರಾಕೇಶ್‌ಸಿಂಗ್ ಸೂಚನೆ

    ತುಮಕೂರು: ಮತಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2022ಕ್ಕೆ ಸಂಬಂಧಿಸಿದಂತೆ ನ.8ರಂದು ಪ್ರಕಟಿಸಿರುವ ಕರಡು ಮತದಾರರ ಪಟ್ಟಿಯಲ್ಲಿ ಅನರ್ಹರು ಸೇರ್ಪಡೆಯಾಗಿದ್ದರೆ, ಅಂತಹವರನ್ನು ಕೈಬಿಟ್ಟು ಅಂತಿಮ ಮತಪಟ್ಟಿ ಸಿದ್ಧಪಡಿಸಬೇಕು ಎಂದು ಮತದಾರರ ಪಟ್ಟಿ ವೀಕ್ಷಕ ರಾಕೇಶ್‌ಸಿಂಗ್ ಅಧಿಕಾರಿಗಳಿಗೆ ಸೂಚಿಸಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಅಧಿಕಾರಿಗಳ ಜತೆ ನಡೆಸಿ ಮಾತನಾಡಿದ ಅವರು, ಮತಪಟ್ಟಿ ಮತಗಟ್ಟೆವಾರು ಪರಿಶೀಲಿಸಿ ಮರಣ ಹೊಂದಿರುವ, ಕಾಯಂ ಸ್ಥಳಾಂತರಗೊಂಡ, ವಿವಿಧೆಡೆ ನೋಂದಣಿಯಾಗಿರುವ ಮತದಾರರನ್ನು ನಿಯಮಾನುಸಾರ ಮತಪಟ್ಟಿಯಿಂದ ತೆಗೆದು ಹಾಕಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

    ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮತಗಟ್ಟೆ ಮಟ್ಟದ ಅಧಿಕಾರಿಗಳೊಂದಿಗೆ ತಮ್ಮ ಮತಗಟ್ಟೆ ಮಟ್ಟದ ಏಜೆಂಟ್ ಮೂಲಕ ಸಂಬಂಧಿಸಿದ ಮತಗಟ್ಟೆ ವ್ಯಾಪ್ತಿಯ ಮನೆಗಳಿಗೆ ಭೇಟಿ ನೀಡಿ ಮತದಾರರು ಜೀವಂತವಿರುವ, ವಾಸವಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಮತದಾರರು ಮೃತಪಟ್ಟಿದ್ದಲ್ಲಿ, ಕಾಯಂ ಸ್ಥಳಾಂತರಗೊಂಡಿದ್ದಲ್ಲಿ ಅವರ ಸಂಬಂಧಿಕರಿಂದ ನಮೂನೆ-7ನ್ನು ಪಡೆದು ನಿಯಮಾನುಸಾರ ಮತದಾರರ ಪಟ್ಟಿಯಿಂದ ತೆಗೆದು ಹಾಕಬೇಕು ಎಂದರು.

    ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ, ಉಪವಿಭಾಗಾಧಿಕಾರಿ ಅಜಯ್, ಸೋಮಪ್ಪಕಡಕೊಳ ಹಾಗೂ ಜಿಲ್ಲೆಯ ಎಲ್ಲಾ ತಾಲೂಕು ತಹಸೀಲ್ದಾರ್‌ಗಳು, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಸಭೆಯಲ್ಲಿದ್ದರು.

    28ರಂದು ವಿಶೇಷ ಆಂದೋಲನ: ನ.8ರಂದು ಪ್ರಕಟಿಸಿರುವ ಕರಡು ಮತಪಟ್ಟಿಯನುಸಾರ 1115260 ಪುರುಷ, 1112523 ಮಹಿಳೆ ಹಾಗೂ 112 ಲಿಂಗತ್ವ ಅಲ್ಪಸಂಖ್ಯಾತರು ಸೇರಿ ಒಟ್ಟು 2227895 ಮತದಾರರಿದ್ದು, ಈ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಹಕ್ಕು ಮತ್ತು ಆಕ್ಷೇಪಣೆಗಳ ಅರ್ಜಿಗಳನ್ನು ಡಿ.8ರವರೆಗೆ ಸ್ವೀಕರಿಸಲಾಗುವುದು. ಸ್ವೀಕೃತ ಅರ್ಜಿ ಡಿ.27ರೊಳಗೆ ವಿಲೇವಾರಿ ಮಾಡಿ, 2022ರ ಜನವರಿ 13ರಂದು ಅಂತಿಮ ಮಪಟ್ಟಿ ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸಭೆಗೆ ಮಾಹಿತಿ ನೀಡಿದರು.
    ಮತಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಸಾರ್ವತ್ರಿಕ ರಜಾದಿನಗಳಾದ ನವೆಂಬರ್ 7, 14, 21ರಂದು ನಡೆಸಲಾದ ವಿಶೇಷ ಆಂದೋಲನದಲ್ಲಿ ನಮೂನೆ-6ರಲ್ಲಿ 11446, ನಮೂನೆ 7ರಲ್ಲಿ 7477, ನಮೂನೆ 8ರಲ್ಲಿ 1551, ನಮೂನೆ 8ಎರಲ್ಲಿ 264 ಅರ್ಜಿ ಸೇರಿದಂತೆ ಒಟ್ಟು 20738 ಅರ್ಜಿಗಳು ಸ್ವೀಕೃತವಾಗಿವೆ. ಬರುವ ನ.28ರಂದು ಸಹ ವಿಶೇಷ ಆಂದೋಲನ ಹಮ್ಮಿಕೊಳ್ಳಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts