More

    ಮತಪಟ್ಟಿಗೆ ಹೆಸರು ಇಂದು ಕೊನೆ ದಿನ

    ಚಿತ್ರದುರ್ಗ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚಿತ್ರದುರ್ಗ ಕ್ಷೇತ್ರದ ಮತಪಟ್ಟಿಗೆ ಹೆಸರು ಸೇರಿಸಲು ಮಾ. 25 ಕೊನೆ ದಿನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ಹೇಳಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ನಡೆದ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿ, ಆಯೋಗಕ್ಕೆ ಕಳುಹಿಸಿದ್ದ ಜಿಲ್ಲೆಯ 1,661 ಮತಗಟ್ಟೆಗಳ ಪಟ್ಟಿಗೂ ಅನುಮೋದನೆ ದೊರೆತಿದೆ ಎಂದರು.

    ಮತಪಟ್ಟಿಗೆ ಹೆಸರು ಸೇರಿಸಲು ನಮೂನೆ ‘6’ರಲ್ಲಿ ಅರ್ಜಿ ಸಲ್ಲಿಸಬಹದು. ಆನ್‌ಲೈನ್ ಅರ್ಜಿ ಕೂಡ ಪರಿಗಣಿಸಲಾಗುವುದು. ನಮೂನೆ ‘8’ರಿಂದ ಸಲ್ಲಿಸುವ ತಿದ್ದುಪಡಿ ಅವಧಿ ಮುಕ್ತಾಯವಾಗಿದೆ. ಈಗಾಗಲೇ ಪರಿಷ್ಕರಣೆ ಕಾರ್ಯ ಪೂರ್ಣಗೊಂಡಿದ್ದು, ಮೃತಪಟ್ಟ ಹಾಗೂ ಸ್ಥಳಾಂತರಗೊಂಡ ಹೆಸರು ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂದು ತಿಳಿಸಿದರು.

    ಜಿಲ್ಲೆಯಲ್ಲಿ 85 ವರ್ಷ ಮೇಲ್ಪಟ್ಟ 17,723 ಮತದಾರರಿದ್ದಾರೆ. ಚುನಾವಣೆ ಆಯೋಗ ಇವರಿಗೆ ಮನೆಯಿಂದಲೇ ಮತ ಚಲಾಯಿಸಲು ಅವಕಾಶ ಕಲ್ಪಿಸಿದೆ. ಬಿಎಲ್‌ಒಗಳು ಮನೆ-ಮನೆಗೆ ತೆರಳಿ ಅರ್ಹರಿಗೆ ಫಾರಂ ‘12’ಡಿ, ನೀಡಿ ಸ್ವೀಕೃತಿ ಪಡೆಯುತ್ತಿದ್ದಾರೆ. ಅಲ್ಲದೆ, ಮತಗಟ್ಟೆಗೆ ಆಗಮಿಸಲು ಸಾಧ್ಯವಿಲ್ಲದ ಹಾಸಿಗೆ ಹಿಡಿದ ವೃದ್ಧರು ಇದನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಹೇಳಿದರು.

    ಮನೆಯಿಂದ ಮತ ಚಲಾಯಿಸುವವರ ವಿವರ ಆಯಾ ಕ್ಷೇತ್ರವಾರು ಸಹಾಯಕ ಚುನಾವಣಾ ಅಧಿಕಾರಿಗಳು ಪ್ರತ್ಯೇಕ ಪಟ್ಟಿ ಸಿದ್ಧಪಡಿಸುವರು. ಅರ್ಹರ ಭೌಗೋಳಿಕ ಸಾಮ್ಯತೆ ಆಧರಿಸಿ ಮತದಾನಕ್ಕೆ ಅನುಕೂಲವಾಗುವಂತೆ ಮಾರ್ಗಗಳನ್ನು ರಚಿಸಲಾಗುವುದು ಎಂದರು.

    ಮನೆಯಿಂದ ಮತಚಲಾಯಿಸುವ ಮೊದಲ ದಿನದಂದು ಯಾರಾದರು ಪ್ರಕ್ರಿಯೆಯಿಂದ ತಪ್ಪಿಹೊದರೇ, ಎರಡನೇ ಬಾರಿ ಬಿಎಲ್‌ಒಗಳನ್ನು ಕಳುಹಿಸಿ ಅವಕಾಶ ನೀಡಲಾಗುವುದು. ಈ ಎಲ್ಲ ವಿವರ ವಿವಿಧ ಪಕ್ಷಗಳ ಬೂತ್‌ಮಟ್ಟದ ಏಜೆಂಟರ್‌ಗಳಿಗೂ ತಿಳಿಸಲಾಗುವುದು ಎಂದು ತಿಳಿಸಿದರು.

    ಅಂಗವಿಕಲರಿಗೂ ಅವಕಾಶ: ಶೇ. 40ಕ್ಕಿಂತ ಹೆಚ್ಚಿನ ಅಂಗವಿಕಲತೆ ಇರುವವರಿಗೂ ಮನೆಯಿಂದಲೇ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿ 31,926 ಅಂಗವಿಕಲ ಮತದಾರರಿದ್ದು, ಫಾರಂ ‘12’ಡಿ ವಿತರಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಟಿ.ವೆಂಕಟೇಶ್ ತಿಳಿಸಿದರು.

    ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ 3,861 ಅಗತ್ಯ ಸೇವಾ ಮತದಾರರಿದ್ದು, ಫಾರಂ ‘12’ಡಿ ನೀಡಲಾಗಿದೆ. ಮತದಾನ ಪೂರ್ವದ 3 ದಿನಗಳ ಕಾಲ ಪೆಸಿಲಿಟಿ ಸೆಂಟರ್ ಮತದಾನಕ್ಕೆ ಅವಕಾಶ ಕಲ್ಪಿಸಲಾಗುವುದು. ಈಗಾಗಲೇ 30 ಸಾವಿರಕ್ಕೂ ಅಧಿಕ ಮತದಾರರ ಗುರುತಿನ ಚೀಟಿಗಳನ್ನು ಅಂಚೆ ಮೂಲಕ ರವಾನಿಸಲಾಗಿದೆ ಎಂದು ಮಾಹಿತಿ ನೀಡಿದರು.

    ವಿವಿಧ ಪಕ್ಷಗಳ ಪ್ರತಿನಿಧಿಗಳಾದ ಬಿ.ಯಶವಂತ್‌ಕುಮಾರ್, ರವಿ, ಡಿ.ಎನ್.ಮೈಲಾರಪ್ಪ, ಸಿ.ಜಿ.ನಾಸಿರುದ್ದೀನ್, ಡಿ.ಗೋಪಾಲಸ್ವಾಮಿ ನಾಯಕ, ಲಕ್ಷ್ಮಮ್ಮ, ಸುರೇಶ್‌ಬಾಬು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts