More

    ಜೆಡಿಎಸ್‌ಗೆ ಮತ ಹಾಕಿದರೆ ವ್ಯರ್ಥ; ಡಿಕೆಶಿ ಹೇಳಿಕೆಗೆ ಎಚ್‌ಡಿಕೆ ಅಸಮಾಧಾನ

    ಚನ್ನಪಟ್ಟಣ: ಜೆಡಿಎಸ್‌ಗೆ ಮತ ಹಾಕಿದರೆ ವ್ಯರ್ಥ, ಕಾಂಗ್ರೆಸ್ ಮತ ಹಾಕಿ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

    ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಪಕ್ಷಕ್ಕೆ ಮತ ನೀಡಿ ಎಂದು ಕೇಳಬೇಕೇ ಹೊರತು ಬೇರೆಯವರಿಗೆ ಮತ ನೀಡಬೇಡಿ ಎನ್ನುವುದು ತಪ್ಪು. ಕಾಂಗ್ರೆಸ್ ಮತ ಹಾಕಿದರೆ ಲಾಭ ಎಲ್ಲಾಗುತ್ತೆ, ಯಾರಿಗೆ ಲಾಭ ಆಗುತ್ತೆ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಕಾಂಗ್ರೆಸ್‌ನಲ್ಲಿ ಈಗಾಗಲೇ 15 ಮಂದಿ ಸಿಎಂ ಆಗೋದಕ್ಕೆ ತಯಾರಾಗಿದ್ದೀವಿ ಅಂತಿದ್ದಾರೆ. ಸಿಎಂ ಆಗೋರು ಅಷ್ಟು ಜನ ಸಿದ್ಧವಾಗಿರುವಾಗ ಕಾಂಗ್ರೆಸ್ ಮತ ಹಾಕಿದರೆ ಏನು ಪ್ರಯೋಜನ ಎಂದರು.

    ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಇದೆ. ಕುಮಾರಸ್ವಾಮಿ ಈಗಾಗಲೇ ಸಿಎಂ ಆಗಿದ್ದಾರೆ. ಅದಕ್ಕೆ ಮತ ಹಾಕಬೇಡಿ ಅಂದರೆ ಏನರ್ಥ. ಡಿ.ಕೆ. ಶಿವಕುಮಾರ್ ಹೇಳಿಕೆಗೆ ಮಹತ್ವ ಕೊಡಬೇಕಾಗಿಲ್ಲ. ಅವರದ್ದು ಬಾಲಿಶ ಹೇಳಿಕೆಗಳು. ಅವರಿಗೆ ಮತ ಕೊಟ್ಟರೆ ಮುಂದೆ ದೆಹಲಿಯಲ್ಲಿ ನಡೆಯುವ ಕಥೆಗಳು ಗೊತ್ತಿವೆ. ನನಗೆ ಮತ ಕೊಟ್ಟರೆ ಭದ್ರವಾಗಿಯೇ ಇರುತ್ತದೆ ಎಂದು ಕುಟುಕಿದರು.

    ಅಮಿತ್ ಶಾ ಬರುತ್ತಾರೆ, ಜೆಡಿಎಸ್, ಕಾಂಗ್ರೆಸ್ ಬಿ ಟೀಮ್ ಅಂತಾರೆ. ಕಾಂಗ್ರೆಸ್‌ನವರು ಜೆಡಿಎಸ್ ಬಿಜೆಪಿ ಬಿ ಟೀಮ್ ಎನ್ನುತ್ತಾರೆ. ಈ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಮಾತನಾಡಲು ಬೇರೆ ವಿಷಯವೇ ಇಲ್ಲ. ಆದರೆ, ನಾನು ಜನರಿಗೆ ಪಂಚರತ್ನ ಯೋಜನೆ ಜಾರಿಗೆ ತರಲು ಅವಕಾಶ ನೀಡಿ, ಐದು ವರ್ಷದ ಸರ್ಕಾರ ನೀಡಿ ಎಂದು ಕೇಳುತ್ತಿದ್ದೇನೆ. ನನಗೂ ಅವರಿಗೂ ಇರುವ ವ್ಯತ್ಯಾಸ ಇಷ್ಟೇ ಎಂದು ಎಚ್‌ಡಿಕೆ ಹೇಳಿದರು.

    ಇಂಥವರನ್ನು ಓಡಾಡಲು ಬಿಟ್ಟಿದ್ದೇ ಕರ್ಮ: ರಾಮನಗರದಲ್ಲಿ ಕಾಂಗ್ರೆಸ್ ಮುಖಂಡರು ನಡೆಸಿದ ‘ಇದೇನ್ ಕರ್ಮ’ ಅಭಿಯಾನಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ರಾಮನಗರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು ಯಾರು, ದೇವೇಗೌಡರು, ಕುಮಾರಸ್ವಾಮಿ ಬರುವ ಮುಂಚೆ ರಾಮನಗರ ಹೇಗಿತ್ತು? ಅಂದು ರಾಮನಗರದಲ್ಲಿ ಓಡಾಡಲು ಆಗುತ್ತಿತ್ತೆ, ಇದುವರೆಗೆ ಯಾರಿಂದ ಅಭಿವೃದ್ಧಿ ಕೆಲಸವಾಗಿದೆ. ಈಗ ಅಭಿಯಾನ ಮಾಡುತ್ತಿರುವವರು ಬಂದು ಅಭಿವೃದ್ಧಿ ಮಾಡಿದ್ದರೆ ಎಂದು ಕುಟುಕಿದರು. ರಾಮನಗರ-ಚನ್ನಪಟ್ಟಣಕ್ಕೆ 24 ಗಂಟೆ ಕುಡಿಯುವ ನೀರು ಸೇರಿ ಹಲವು ಅಭಿವೃದ್ಧಿ ಮಾಡಲಾಗಿದೆ. ಜತೆಗೆ ಇಡೀ ಜಿಲ್ಲೆಯ ಶಾಶ್ವತ ನೀರಾವರಿಗಾಗಿ ಸತ್ತೇಗಾಲ ನೀರಾವರಿ ಯೋಜನೆ ಜಾರಿಗೆ ತಂದದ್ದು ನಾನು. ಇಂದು ಇಂತಹ ವ್ಯಕ್ತಿಗಳನ್ನು ರಾಮನಗರದಲ್ಲಿ ಓಡಾಡಲು ಬಿಟ್ಟಿದ್ದೇ ಕರ್ಮ ಎಂದು ಟಾಂಗ್ ನೀಡಿದರು.

    ಬಡವರಿಗೆ ಮನೆ ನೀಡಲು ಅಡ್ಡಿ: ಇನ್ನು ರಾಮನಗರದ ದೊಡ್ಡಮಣ್ಣುಗುಡ್ಡೆ ಮನೆ ನಿರ್ಮಾಣ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, 58 ಕೋಟಿ ರೂ. ವೆಚ್ಚದಲ್ಲಿ ಮನೆಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ದೊಡ್ಡಮಣ್ಣುಗುಡ್ಡೆ ಬಳಿ ನಿರ್ಮಾಣಕ್ಕೂ ತಕರಾರು ನಡೆಯುತ್ತಿದೆ. ಅಲ್ಲಿ ಮನೆಗಳ ನಿರ್ಮಾಣ ಕಾರ್ಯ ನಡೆಸಬಾರದು ಎಂದು ಕಾಂಗ್ರೆಸ್, ಬಿಜೆಪಿಯವರು ತಕರಾರು ಮಾಡುತ್ತಿದ್ದಾರೆ. 2006ರಲ್ಲಿ ಬಡವರಿಗೆ ಮನೆ ಕೊಡಲು 30 ಕೋಟಿ ರೂ. ನೀಡಿದ್ದೆ. ಆದರೆ, ಸರ್ಕಾರ ಹೋದ ನಂತರ, ಆ ಹಣ ಬೇರೆ ಕಡೆ ಡೈವರ್ಟ್ ಮಾಡಿಕೊಂಡು ಮನೆ ನಿರ್ಮಾಣಕ್ಕೆ ಅಡ್ಡಿ ಮಾಡಿದರು. ನಂತರ 2013ರಲ್ಲಿ ಕೊತ್ತಿಪುರದ ಬಳಿ ಭೂಮಿ ಗುರುತಿಸಲಾಯಿತು. ನಗರಸಭೆ ಭೂಮಿಯನ್ನು ಸುಪರ್ದಿಗೆ ಪಡೆದುಕೊಂಡಿತ್ತು. ಕಾಂಗ್ರೆಸ್‌ನವರೇ ಭೂಮಿ ಕೊಡಿಸಿ, ಹಣ ಪಡೆದುಕೊಂಡರು. ಒಂದೇ ಗಂಟೆಯಲ್ಲಿ ಹಣ ಡ್ರಾ ಮಾಡಿಕೊಂಡರು. ನಾನು ಬಡವರಿಗೆ ಮನೆ ಕೊಡಲು ಹೊರಟಿದ್ದೆ ಆದರೆ, ಕೋರ್ಟ್‌ಗೆ ಹಾಕಿ ತಕರಾರು ತೆಗೆದರು. ಈಗ, ದೊಡ್ಡಮಣ್ಣುಗುಡ್ಡೆ ಬಳಿಯೂ ತಕರಾರು ಮಾಡಲು ಹೊರಟಿದ್ದಾರೆ. ಡಿಎಚ್ಸೇರಿ ಮತ್ತಿತರ ಅಧಿಕಾರಿಗಳಿಗೆ ಕೆಲಸ ಮುಂದುವರಿಯದಂತೆ ಬೆದರಿಕೆ ಒಡ್ಡಿದ್ದಾರೆ. ಈ ಎರಡೂ ಪಕ್ಷಗಳ ಕುತಂತ್ರವನ್ನು ಜನ ಅರ್ಥ ಮಾಡಿಕೊಳ್ಳಬೇಕು ಎಂದು ಕುಮಾರಸ್ವಾಮಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts