More

    ಕಡ್ಡಾಯ ಮತದಾನ ನಮ್ಮ ಕರ್ತವ್ಯ : ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಗಂಗಾಧರ್ ಚನ್ನಬಸಪ್ಪ ಹಡಪದ್ ಸಲಹೆ

    ಕೋಲಾರ : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮ ಹಕ್ಕುಗಳನ್ನು ಪಡೆಯುವದರ ಜತೆಗೆ ಬೇರೆಯವರ ಹಕ್ಕುಗಳನ್ನು ಗೌರವಿಸುವುದು, ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡುವುದು ನಮ್ಮ ಕರ್ತವ್ಯವಾಗಬೇಕು ಎಂದು ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗಂಗಾಧರ್ ಚನ್ನಬಸಪ್ಪ ಹಡಪದ್ ಹೇಳಿದರು.

    ಜಿಲ್ಲಾಡಳಿತ, ಜಿಪಂ ಹಾಗೂ ಚುನಾವಣಾ ಆಯೋಗದಿಂದ ಟಿ.ಚನ್ನಯ್ಯ ಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ 11ನೇ ರಾಷ್ಟ್ರೀಯ ಮತದಾರರ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಭಾಗಕ್ಕಿಂತ ನಗರದ ಸುಶಿಕ್ಷಿತ ಮತದಾರರೇ ಮತದಾನದಿಂದ ದೂರ ಉಳಿಯುತ್ತಿರುವುದು ಬೇಸರದ ಸಂಗತಿ. ಇವರಿಗೆ ಮತದಾನದ ಮಹತ್ವದ ಕುರಿತು ಅರಿವು ಮೂಡಿಸಬೇಕೆಂದರು.

    18 ವರ್ಷ ತುಂಬಿರುವ ಪ್ರ್ರತಿಯೊಬ್ಬರು ತಮ್ಮ ಹೆಸರನ್ನು ಮತಪಟ್ಟಿಯಲ್ಲಿ ನೋಂದಣಿ ಮಾಡಿಸಿಕೊಂಡು ಚುನಾವಣೆಯಲ್ಲಿ ಹಕ್ಕು ಚಲಾಯಿಸಿದಾಗ ಮಾತ್ರ ಪ್ರಬುದ್ಧ ಸರ್ಕಾರ ರಚನೆ ಸಾಧ್ಯ ಎಂದು ಅಭಿಪ್ರಾಯ ಪಟ್ಟರು.  ಪ್ರತಿಜ್ಞಾನವಿಧಿ ಬೋಧಿಸಿ ಮಾತನಾಡಿದ ಜಿಪಂ ಸಿಇಒ ಎನ್.ಎಂ. ನಾಗರಾಜ್, ದೇಶದ ಪ್ರಜೆಯಾಗಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವುದು ಮೊದಲ ಜವಾಬ್ದಾರಿ. ಅರ್ಹ ಅಭ್ಯರ್ಥಿಗಳಿಗೆ ಹಕ್ಕು ಚಲಾಯಿಸುವ, ಇಲ್ಲವೇ ನೋಟಾ ಚಲಾವಣೆಗೆ ಅವಕಾಶ ಕಲ್ಪಿಸಿದೆ. ಪೂರ್ವಾಗ್ರಹ ಪೀಡಿತರಾಗದೆ ರಹಸ್ಯ ಮತದಾನಕ್ಕೆ ಬದ್ಧರಾಗಬೇಕು ಎಂದರು.

    ಡಿಸಿ ಸಿ.ಸತ್ಯಭಾಮ ಮಾತನಾಡಿ, 12ನೇ ಶತಮಾನದ ಬಸವಣ್ಣ ಅವರು ಅನುಭವ ಮಂಟಪ ಸ್ಥಾಪಿಸಿ ಸಮಾನತೆ, ಜಾತ್ಯಾತೀತ ವ್ಯವಸ್ಥೆಗೆ ಒತ್ತು ನೀಡಿದ್ದರು. ಸ್ವಾತಂತ್ರ್ಯಾ ನಂತರ 1950ರ ಜ.26ರಂದು ಸಂವಿಧಾನ ಒಪ್ಪಿಕೊಳ್ಳಲಾಯಿತು. ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಚುನಾವಣೆ ನಡೆಸಲು ಚುನಾವಣಾ ಆಯೋಗ ಸ್ಥಾಪಿಸಲಾಯಿತು. ಕಳೆದ 11 ವರ್ಷಗಳಿಂದ ಸಾರ್ವಜನಿಕರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ರಾಷ್ಟ್ರೀಯ ಮತದಾರರ ದಿನ ಆಚರಿಸಲಾಗುತ್ತಿದೆ ಎಂದರು.

    ಜಿಲ್ಲೆಯಲ್ಲಿ ಒಟ್ಟು 12, 37, 309 ಮತದಾರರರಿದ್ದು, ಪುರುಷರು 6,18,139 ಹಾಗೂ ಮಹಿಳೆಯ 6,19,170 ಮಂದಿ ಇದ್ದಾರೆ. ಈ ಬಾರಿ 13,145 ಯುವ ಮತದಾರರನ್ನು ನೋಂದಣಿ ಮಾಡಿಕೊಳ್ಳಲಾಗಿದೆ. 18 ವರ್ಷ ತುಂಬಿದರೆ ದೇಶದ ಜವಾಬ್ದಾರಿಯುತ ಪ್ರಜೆಯಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸುವುದು ಮೊದಲ ಕರ್ತವ್ಯ ಕಿವಿ ಮಾತು ಹೇಳಿದರು.

    ಎಡಿಸಿ ಡಾ. ಸ್ನೇಹಾ, ಎಸಿ ಸೋಮಶೇಖರ್, ತಹಸೀಲ್ದಾರ್ ಶೋಭಿತಾ, ಚುನಾವಣಾ ತಹಸೀಲ್ದಾರ್ ನಾಗವೇಣಿ, ಜವಳಿ ಮತ್ತು ಕೈಮಗ್ಗ ಇಲಾಖೆ ಉಪನಿರ್ದೇಶಕಿ ಎಂ.ಸೌಮ್ಯ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಬಾಲಾಜಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಮಧುಲತಾ ಮೋಸಸ್, ಮಹಿಳಾ ಕಾಲೇಜಿನ ಪ್ರಾಂಶುಪಾಲ ಗಂಗಾಧರ್ ರಾವ್, ಉಪನ್ಯಾಸಕಿ ಪ್ರಸನ್ನ ಕುಮಾರಿ ಇದ್ದರು. ಹೊಸ ಮತದಾರರಿಗೆ ಎಪಿಕ್ ಕಾರ್ಡ್ ವಿತರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts