More

    ಮತದಾರರ ಪಟ್ಟಿಯಲ್ಲಿ ಲೋಪದೋಷಗಳಿಗೆ ಆಸ್ಪದ ಬೇಡ

    ಗದಗ: ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಯಾವುದೇ ಲೋಪದೋಷ ಗಳಾಗದಂತೆ  ಕ್ರಮ ವಹಿಸಬೇಕು ಎಂದು ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್. ವಸ್ತ್ರದ ಅವರು ಅಧಿಕಾರಿಗಳಿಗೆ ಸೂಚಿಸಿದರು.  

    ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರದಂದು ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಹಾಗೂ  ಮನೆ ಮನೆ ಸರ್ವೇ ಕಾರ್ಯ ಕೈಗೊಂಡಿರುವ ಕುರಿತು ಜರುಗಿದ  ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಸಂಬಂಧಿಸಿದಂತೆ (ಬಿ.ಎಲ್.ಓ) ಬೂತ್ ಮಟ್ಟದ ಅಧಿಕಾರಿಗಳನ್ನು ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.  ತಹಶೀಲ್ದಾರರು ಸಹ  ಖುದ್ದಾಗಿ ಈ ಕುರಿತು ಪುನರ್ ಪರಿಶೀಲನೆ ನಡೆಸಬೇಕು.  ಕಳೆದ  ಬಾರಿ  ಮತದಾನದ  ಶೇಕಡ ಪ್ರಮಾಣ ಕಡಿಮೆಯಾಗಿರುವ ಮತಗಟ್ಟೆ ವ್ಯಾಪ್ತಿಯ ಪ್ರದೇಶದ ಪರಿಶೀಲನೆ ಮಾಡಿ ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು.

    ಮತಗಟ್ಟೆಗಳ ಮುಂದೆ ಚುನಾವಣಾ ಸಹಾಯವಾಣಿ 1950 ಸಂಖ್ಯೆಯನ್ನು ಪ್ರದರ್ಶಿಸಬೇಕು.ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಯಾವುದೇ ಲೋಪದೋಷಗಳಾಗದಂತೆ ನೋಡಿಕೊಳ್ಳಬೇಕು ಮತ್ತು ಮತಗಟ್ಟೆಗಳಲ್ಲಿ  ಮೂಲಭೂತ ಸೌಕರ್ಯ, ರ್ಯಾಂಪ್ ವ್ಯವಸ್ಥೆ, ಆಸನದ ವ್ಯವಸ್ಥೆ ಕುರಿತಂತೆ ಮತದಾನ ಮಾಡಲು ಅನುಕೂಲವಾಗುವ ವಾತಾವರಣ ಇರುವುದನ್ನು ಆಯಾ ತಹಶೀಲ್ದಾರರು ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.  

    ಶಾಲಾ ಕಾಲೇಜುಗಳಲ್ಲಿ  ಯುವ ಮತದಾರರ ಹೆಸರು ಮತದಾರರ ಪಟ್ಟಿಗೆ ಸೇರ್ಪಡೆಗೆ ಹಾಗೂ ಮತದಾನದ ಮಹತ್ವದ ಕುರಿತಂತೆ ಬಿ.ಎಲ್.ಓಗಳು ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಬೇಕು ಹಾಗೂ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಸಲಹೆ ನೀಡಿದ ಅವರು ಹೋಟೆಲ್, ರೆಸ್ಟೋರೆಂಟ್,  ಸಂಘ ಸಂಸ್ಥೆ, ಕಾರ್ಮಿಕರಲ್ಲಿಯೂ ಮತದಾನ ಜಾಗೃತಿ ಕಾರ್ಯಕ್ರಮ ಹಾಗೂ ಇ.ವಿ.ಎಂ. ಬಳಕೆ ಕುರಿತು ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ ಎಂದು ಹೇಳಿದರು.

    ಜಿಲ್ಲಾ ಚುನಾವಣಾಧಿಕಾರಿ ಹಾಗೂ  ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು ಮಾತನಾಡಿ ಜಿಲ್ಲೆಯಲ್ಲಿ  26-8-2023ಕ್ಕೆ ಕೊನೆಗೊಂಡಂತೆ 4,37,372 ಪುರುಷ ಮತದಾರರು, 4,35,595 ಮಹಿಳಾ ಮತದಾರರು, 61 ತೃತೀಯ ಲಿಂಗಿ ಮತದಾರರು ಸೇರಿದಂತೆ ಒಟ್ಟಾರೆ 8,73,028 ಮತದಾರರಿದ್ದಾರೆ. 23013 ಯುವ ಮತದಾರರು ಹಾಗೂ 11,398 ವಿಕಲಚೇತನ ಮತದಾರರಿದ್ದಾರೆ.  ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ  ಇದುವರೆಗೆ ಮನೆ ಮನೆ ಸರ್ವೇ ಕಾರ್ಯ ಕೈಗೊಂಡು  2,13,581 ಮನೆಗಳಿಗೆ ಭೇಟಿ ನೀಡಲಾಗಿದ್ದು, ಮತದರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ  ನಮೂನೆ ನಂ 6 ರಲ್ಲಿ  7501 ಅರ್ಜಿಗಳು ಸ್ವೀಕೃತವಾಗಿವೆ. ನಮೂನೆ 7ರಲ್ಲಿ 4072 ಅರ್ಜಿಗಳು, ನಮೂನೆ 8 ರಲ್ಲಿ 3552 ಅರ್ಜಿಗಳನ್ನು ಸಂಗ್ರಹಿಸಲಾಗಿದೆ ಎಂದು ಸಭೆಗೆ ತಿಳಿಸಿದರು.

    ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಉಪವಿಭಾಗಾಧಿಕಾರಿ ಡಾ. ವೆಂಕಟೇಶ ನಾಯಕ,  ಜಿ.ಪಂ. ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಎ. ರಡ್ಡೇರ,  ಕೌಶಲ್ಯಾಭಿವೃದ್ಧಿ ಅಧಿಕಾರಿ ಬಸವರಾಜ ಮಲ್ಲೂರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್. ನೀಲಗುಂದ, ತಹಶೀಲ್ದಾರರುಗಳು, ಬಿ.ಎಲ್.ಓಗಳು, ವಿವಿಧ ಇಲಾಖೆಯ ಅಧಿಕಾರಿಗಳು, ಚುನಾವಣಾ ವಿಭಾಗದ ಸಿಬ್ಬಂದಿಗಳು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts