More

    ಲೋಪರಹಿತ ಮತದಾರರ ಪಟ್ಟಿ ಸಿದ್ಧಪಡಿಸಿ

    ಹನೂರು : ಉತ್ತಮ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವಲ್ಲಿ ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರ ಪಾತ್ರವೂ ಮುಖ್ಯ. ಆದ್ದರಿಂದ ಈ ಬಗ್ಗೆ ಪ್ರತಿಯೊಬ್ಬರೂ ಮುತುರ್ವಜಿ ವಹಿಸಬೇಕು ಎಂದು ಮಾಜಿ ಶಾಸಕ ಆರ್.ನರೇಂದ್ರ ತಿಳಿಸಿದರು.

    ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಮತದಾರ ಪಟ್ಟಿ ಸಿದ್ಧಪಡಿಸುವ ಹಾಗೂ ಪಕ್ಷ ಸಂಘಟನೆಯ ಸಂಬಂಧ ಆಯೋಜಿಸಿದ್ದ ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರ ನೇಮಕ ಕುರಿತ ಸಭೆಯಲ್ಲಿ ಮಾತನಾಡಿದರು.

    ಕ್ಷೇತ್ರದಲ್ಲಿ ಇದುವರೆಗೂ ಮತದಾನ ಮಾಡದೇ ವಾಸವಿಲ್ಲದವರು ಹಾಗೂ ಮೃತಪಟ್ಟವರ ಹೆಸರು ಮತದಾರರ ಪಟ್ಟಿಯಲ್ಲಿದೆ. ಜತೆಗೆ ಕೆಲವು ತಿದ್ದುಪಡಿಗಳು ಆಗಬೇಕಿದೆ. ಇದರಿಂದ ಯಶಸ್ವಿ ಮತದಾನಕ್ಕೆ ತೊಡಕಾಗಿ ಪರಿಣಮಿಸಲಿದೆ. ಹಾಗಾಗಿ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಚುನಾವಣೆ ಆಯೋಗ ಉತ್ತಮ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಸಲಹೆ ನೀಡಿದೆ. ಈ ದಿಸೆಯಲ್ಲಿ ಬೂತ್ ಮಟ್ಟದ ಕಾರ್ಯಕರ್ತರನ್ನು ನೇಮಿಸಲಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ಆಯಾ ಮತಗಟ್ಟೆಯ ಮತದಾರರ ಪಟ್ಟಿಯನ್ನು ಪರಿಶೀಲಿಸಬೇಕು. ಈ ವೇಳೆ ಮೃತಪಟ್ಟವರು ಹಾಗೂ ಕ್ಷೇತ್ರದಲ್ಲಿ ವಾಸವಿಲ್ಲದವರು ಗಮನಕ್ಕೆ ಬಂದರೆ ಪಟ್ಟಿಯಿಂದ ಹೆಸರನ್ನು ತೆಗೆಸಿ ಹಾಕಲು ಕ್ರಮವಹಿಸಬೇಕು. ಜತೆಗೆ ಆಯಾಯ ಗ್ರಾಮದಲ್ಲಿ 18 ವರ್ಷ ತುಂಬಿದ ಪ್ರತಿಯೊಬ್ಬರನ್ನು ಗುರುತಿಸಿ ಮತದಾರರ ಪಟ್ಟಿಗೆ ಸೇರಿಸುವುದರ ಮೂಲಕ ಮತದಾನದ ಹಕ್ಕಿನ ಬಗ್ಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.

    ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವದಲ್ಲಿ ಜನತೆಗೆ ನೀಡಿದ್ದ 5 ಗ್ಯಾರಂಟಿ ಯೋಜನೆಗಳ ಭರವಸೆಯನ್ನು ಈಡೇರಿಸಿದ್ದು, ನುಡಿದಂತೆ ನಡೆದಿದೆ. ಇದರ ಅನುಕೂಲವನ್ನು ಜನತೆ ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇಂತಹ ಗ್ಯಾರಂಟಿ ಯೋಜನೆ ದೇಶದ ಯಾವುದೇ ರಾಜ್ಯದಲ್ಲೂ ಇಲ್ಲ. ಇದು ಮೆಚ್ಚುವ ಸಂಗತಿ. ಆದ್ದರಿಂದ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬೂತ್ ಮಟ್ಟದಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಚಾರ ಪಡಿಸುವುದರ ಮೂಲಕ ಜನರಲ್ಲಿ ಅರಿವು ಮೂಡಿಸಬೇಕು. ಜತೆಗೆ ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತು ನೀಡುವುದರ ಮೂಲಕ ಮುಂಬರುವ ಚುನಾವಣೆಗಳಿಗೆ ಸಜ್ಜಾಗಬೇಕು ಎಂದು ಸಲಹೆ ನೀಡಿದರು.

    ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸವರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹನೂರಿನ ಮುಕುಂದವರ್ಮ, ರಾಮಾಪುರದ ಈಶ್ವರ್, ಪಪಂ ಸದಸ್ಯರಾದ ಗಿರೀಶ್, ಸುದೇಶ್, ಹರೀಶ್‌ಕುಮಾರ್, ಸಂಪತ್‌ಕುಮಾರ್, ಮುಖಂಡರಾದ ಮಾದೇಶ್, ಮಂಗಲ ಪುಟ್ಟರಾಜು, ಕೊಪ್ಪಾಳಿ ಮಹದೇವನಾಯಕ, ಸಿದ್ದರಾಜು, ಮಣಿ, ನಟರಾಜು, ಮಂಜೇಶ್ ಇನ್ನಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts