More

    ವಿಠಲ ದೇವರಿಗೆ ಸೋದೆ ಶ್ರೀಗಳ ತ್ರೈವಾರ್ಷಿಕ, ವಿಶ್ವವಲ್ಲಭ ತೀರ್ಥ ಸ್ವಾಮೀಜಿಯವರಿಂದ ದಾಖಲೆ ಪೂಜೆ

    ಉಡುಪಿ: ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಶೀರೂರು ಮಠದ ಉತ್ತರಾಧಿಕಾರಿಯಾಗಿ ಮೇ 14ರಂದು ಶ್ರೀ ವೇದವರ್ಧನ ತೀರ್ಥ ಶ್ರೀಗಳಿಗೆ ಪಟ್ಟಾಭಿಷೇಕ ನೆರವೇರಿಸಿದ್ದಾರೆ. ಅದರೆ ನೂತನ ಶ್ರೀಗಳು ಪಟ್ಟದ ದೇವರಿಗೆ ಪೂಜೆ ಸಲ್ಲಿಸಲು ಚಾತುರ್ಮಾಸ್ಯ ವ್ರತ ಪೂರ್ಣಗೊಳಿಸಬೇಕಾದ ಕಾರಣ ದ್ವಂದ್ವ ಮಠದ ನೆಲೆಯಲ್ಲಿ ಸೋದೆ ಶ್ರೀಗಳೇ ಶೀರೂರು ಮಠದ ಪಟ್ಟದೇವರಾದ ವಿಠಲ ದೇವರಿಗೆ ಮೂರು ವರ್ಷ ಪೂರ್ಣಾವಧಿ ಪೂಜೆ ಸಲ್ಲಿಸಿದ ದಾಖಲೆ ಇತಿಹಾಸದ ಪುಟದಲ್ಲಿ ದಾಖಲಾಗಲಿದೆ.

    ಮಧ್ವಾಚಾರ್ಯರು ತಮ್ಮ 8 ಮಂದಿ ಶಿಷ್ಯರಿಗೆ ವಿವಿಧ ಭಗವದ್ರೂಪಗಳನ್ನು ಉಪಾಸನೆಗಾಗಿ ನೀಡಿದ್ದರು. ಶೀರೂರು ಮಠದ ಮೊದಲ ಯತಿ ವಾಮನ ತೀರ್ಥರಿಗೆ ಒಲಿದ ಮೂರ್ತಿ ವಿಠಲ. ಮಠದ ಪೀಠಾಧಿಪತಿ ಶಿಷ್ಯ ಸ್ವೀಕರಿಸದೆ ವೃಂದಾವನಸ್ಥರಾದರೆ ಅ ಮಠದ ಪಟ್ಟದ ದೇವರಿಗೆ ಪೂಜೆ, ಉತ್ತರಾಧಿಕಾರಿ ನೇಮಕ ಜವಾಬ್ದಾರಿ ದ್ವಂದ್ವ ಮಠಾಧೀಶರದ್ದಾಗಿರುತ್ತದೆ. ಶೀರೂರು ಮತ್ತು ಸೋದೆ ಮಠಗಳು ದ್ವಂದ್ವ ಮಠಗಳು. ಶೀರೂರು ಮಠದ ಶ್ರೀಲಕ್ಷ್ಮೀವರ ತೀರ್ಥ ಶ್ರೀಪಾದರು 2018ರ ಜುಲೈ 19ರಂದು ಇಹಲೋಕ ತ್ಯಜಿಸಿದ್ದರು. ಅಂದಿನಿಂದ ಸೋದೆ ಮಠದ ಶ್ರೀವಿಶ್ವವಲ್ಲಭತೀರ್ಥ ಶ್ರೀಪಾದರು ಶೀರೂರು ಮಠದ ಪಟ್ಟದ ದೇವರನ್ನು ತಮ್ಮ ಪೀಠದಲ್ಲಿರಿಸಿ ಪೂಜೆ ಸಲ್ಲಿಸುತ್ತಿದ್ದಾರೆ.

    ಶುಭ ಮುಹೂರ್ತದಲ್ಲಿ ಹಸ್ತಾಂತರ
    ನೂತನ ಪೀಠಾಧಿಪತಿ ನೇಮಕವಾದ ತಕ್ಷಣ ಮಠದ ದೇವರಿಗೆ ಪೂಜೆ ಸಲ್ಲಿಸುವ ಪದ್ಧತಿಯಿಲ್ಲ. ನೂತನ ಯತಿಗಳ ಪ್ರಥಮ ಚಾತುರ್ಮಾಸ್ಯ ವ್ರತ ಪೂರ್ಣಗೊಂಡ ಬಳಿಕವೇ ಪಟ್ಟದ ದೇವರು ಹಾಗೂ ಕೃಷ್ಣ ದೇವರನ್ನು ಮುಟ್ಟಿ ಪೂಜಿಸುವ ಅಧಿಕಾರ ಪ್ರಾಪ್ತಿಯಾಗುತ್ತದೆ. ಸೆ.19ರಂದು ಅನಂತನವ್ರತದ ದಿನ ಮೊದಲ ಚಾತುರ್ಮಾಸ್ಯ ವ್ರತ ಮುಕ್ತಾಯಗೊಳ್ಳುತ್ತದೆ. ಇದಾದ ಬಳಿಕ ಶುಭ ಮುಹೂರ್ತದಲ್ಲಿ ಆಶ್ರಮ ಗುರುಗಳಾದ ಸೋದೆ ಶ್ರೀ ಪಟ್ಟದ ದೇವರು ಮತ್ತು ಕೃಷ್ಣಮಠದಲ್ಲಿ ಕೃಷ್ಣದೇವರ ವಿಗ್ರಹ ಸ್ಪರ್ಶ ಮಾಡಿಸಲಿದ್ದಾರೆ.

    ಪಟ್ಟದ ದೇವರ ಪೂಜೆ ಎಂದರೆ ಅದಕ್ಕೆ ಕೆಲವು ಶಿಷ್ಟಾಚಾರಗಳಿವೆ. ಹೀಗಾಗಿ ವಿಠಲ ದೇವರ ಪೂಜೆಯನ್ನು ಇನ್ನೂ ಮೂರ್ನಾಲ್ಕು ತಿಂಗಳ ಕಾಲ ಸೋದೆ ಮಠಾಧೀಶರೇ ನಡೆಸಬೇಕಾಗಿದೆ. ಒಟ್ಟು ಮೂರು ವರ್ಷ ಪೂಜೆ ಸಲ್ಲಿಸಿದಂತಾಗುತ್ತದೆ. ಪ್ರಾಯಶಃ ಅಷ್ಟಮಠಗಳ ಇತಿಹಾಸದಲ್ಲಿ ಇಷ್ಟು ಸುದೀರ್ಘ ಕಾಲ ಇನ್ನೊಂದು ಮಠದ ಹೊಣೆಗಾರಿಕೆ ಮತ್ತು ಪೂಜೆ ನಿರ್ವಹಿಸಿದ ಉದಾಹರಣೆ ಬೇರೆ ಇಲ್ಲ. ಎಲ್ಲವೂ ದೇವರ ಚಿತ್ತ.
    ರತ್ನಕುಮಾರ್
    ಕಾರ್ಯದರ್ಶಿ, ಸೋದೆ ಮಠ ಎಜುಕೇಶನ್ ಟ್ರಸ್ಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts