More

    ಕೊನೆಗೂ ತನ್ನ ಬುದ್ಧಿಯನ್ನು ತೋರಿಸಿಬಿಟ್ಟಿತು ಅಮೆರಿಕ!

    ಕೊನೆಗೂ ತನ್ನ ಬುದ್ಧಿಯನ್ನು ತೋರಿಸಿಬಿಟ್ಟಿತು ಅಮೆರಿಕ!ಜಾಗತಿಕವಾಗಿ ಭಾರತವನ್ನು ಹಳಿಯುವ, ಅದನ್ನು ದುರ್ಬಲಗೊಳಿಸುವ ಪ್ರಯತ್ನ ನಿಸ್ಸಂಶಯವಾಗಿ ನಡೆಯುತ್ತಿದೆ. ಅಮೆರಿಕ ಅದಕ್ಕೆ ನೇತೃತ್ವ ವಹಿಸಬಹುದು. ಅದಕ್ಕೆ ಪೂರಕವಾಗಿ ಭಾರತದಲ್ಲೂ ದೊಡ್ಡ ಪ್ರಯಾಸಗಳು ನಡೆದಿವೆ. ಮೊದಲ ಕರೊನಾ ಅಲೆಯ ಹೊತ್ತಲ್ಲಿ ಆಕ್ಸಿಜನ್ ಅಗತ್ಯದ ಪ್ರಶ್ನೆಯೇ ಇರಲಿಲ್ಲ. ಆಗೆಲ್ಲ ವೆಂಟಿಲೇಟರ್ ಬಗ್ಗೆಯೇ ಮಾಧ್ಯಮಗಳು ಮಾತನಾಡಿದವು.

    ಕರೊನಾದ ಎರಡನೇ ಅಲೆಯದ್ದೇ ಎಲ್ಲೆಲ್ಲೂ ಸುದ್ದಿ. ಮೊದಲ ಅಲೆಯನ್ನು ಯಶಸ್ವಿಯಾಗಿ ಗೆದ್ದ ಭಾರತ ಎರಡನೇ ಅಲೆಯಲ್ಲಿ ಮುಗ್ಗರಿಸಿದೆ ಎಂದು ಜಗತ್ತೆಲ್ಲ ಮಾತನಾಡಿಕೊಳ್ಳುತ್ತಿದೆ. 130 ಕೋಟಿ ಜನಸಂಖ್ಯೆ ಇರುವ ಭಾರತ ಈ ಜಾಗತಿಕ ವೈರಸ್​ನಿಂದ ಇಷ್ಟು ಬಾಧೆ ಪಡುತ್ತಿರುವುದು ಖಂಡಿತ ಅಚ್ಚರಿ ಪಡಬಹುದಾದ ಸಂಗತಿ ಏನಲ್ಲ. ಮೊದಲ ಅಲೆಯನ್ನು ಎದುರಿಸಲಾಗದೆ ಹೈರಾಣಾದ ಅನೇಕ ರಾಷ್ಟ್ರಗಳಿವೆ. ಅವುಗಳಲ್ಲಿ ಕೆಲವಂತೂ ಅತಿಶ್ರೇಷ್ಠವಾದ ಆರೋಗ್ಯ ವ್ಯವಸ್ಥೆಯನ್ನು ಹೊಂದಿದ್ದೇವೆಂದು ಜಂಭ ಕೊಚ್ಚುತ್ತಿದ್ದವರೇ. ಯುರೋಪಿನ ರಾಷ್ಟ್ರಗಳಿರಲಿ, ಅಮೆರಿಕವೇ ಇರಲಿ, ಕೊನೆಗೆ ಚೀನಾವನ್ನೂ ಒಳಗೊಂಡಂತೆ ಎಲ್ಲ ರಾಷ್ಟ್ರಗಳೂ ಮೊದಲ ಅಲೆಗೆ ತತ್ತರಿಸಿ ಹೋಗಿ ಕೈಸುಟ್ಟುಕೊಂಡಂತವೇ. ಭಾರತ ಈಗ ಅದನ್ನು ಅನುಭವಿಸುತ್ತಿದೆ. ನಮ್ಮನ್ನು ಕುರಿತು, ನಮ್ಮ ವ್ಯವಸ್ಥೆಯ ಕುರಿತು ಆಡಿಕೊಳ್ಳುತ್ತಿರುವ ಪಶ್ಚಿಮದ ರಾಷ್ಟ್ರಗಳಿಗೆ ಒಂದು ಮಾಹಿತಿಯನ್ನಂತೂ ಕೊಡಲೇಬೇಕಿದೆ. ಪ್ರತಿ ಲಕ್ಷ ಸೋಂಕಿತರಿಗೆ ಅಮೆರಿಕದಲ್ಲಿ 174 ಜನ ಪ್ರಾಣ ಕಳೆದುಕೊಂಡಿದ್ದರೆ, ಬ್ರೆಜಿಲ್​ನಲ್ಲಿ 183 ಜನ. ಭಾರತದಲ್ಲಿ ಈ ಸಂಖ್ಯೆ 14 ಮಾತ್ರ! ಹೆಚ್ಚಿನ ಪ್ರಮಾಣದ ಜನರು ಸೋಂಕಿಗೆ ತುತ್ತಾಗುತ್ತಿರುವುದಕ್ಕೆ ಇಲ್ಲಿನ ಜನಸಂಖ್ಯೆಯೂ ಕಾರಣ ಎಂಬುದನ್ನು ಮರೆಯುವಂತಿಲ್ಲ. ಇಷ್ಟು ಜನಸಾಂದ್ರತೆ ಇರುವಂತಹ ಭಾರತದಲ್ಲಿ ಈ ಪರಿಯ ಸಾಂಕ್ರಾಮಿಕ ರೋಗದ ಹಬ್ಬುವಿಕೆ ಅಸಾಧ್ಯವಾದ್ದೂ ಅಲ್ಲ. ಆದರೆ ದುರದೃಷ್ಟವೇನು ಗೊತ್ತೇ? ಈ ಅವಕಾಶವನ್ನು ಬಳಸಿಕೊಂಡು ಭಾರತವನ್ನು ಒಳಗಿಂದೊಳಗೇ ಟೊಳ್ಳಾಗಿಸುವ ಪ್ರಯತ್ನವನ್ನು ಇಲ್ಲಿನ ದ್ರೋಹಿಗಳು ಕೆಲವರು ಮಾಡುತ್ತಿದ್ದರೆ ಪಶ್ಚಿಮದ ಕೆಲವು ರಾಷ್ಟ್ರಗಳು ಅದಕ್ಕಾಗಿಯೇ ಕಾದು ಕುಳಿತು ಭಾರತದ ಸಾರ್ವಭೌಮತೆಯನ್ನು ಇಲ್ಲವಾಗಿಸುವ ಶತಪ್ರಯತ್ನಕ್ಕೆ ತೊಡಗಿವೆ. ಹಾಗೆ ಸುಮ್ಮನೆ ಅಲ್ಲಲ್ಲಿ ಚೆಲ್ಲಲ್ಪಟ್ಟಿರುವ ಚುಕ್ಕಿಗಳನ್ನು ನಿಮ್ಮೆದುರು ಬಿಚ್ಚಿಡುತ್ತೇನೆ. ಎಲ್ಲವನ್ನೂ ಸೇರಿಸಿ ಹುಟ್ಟಿಕೊಳ್ಳುವ ಚಿತ್ರವನ್ನು ನೀವೇ ನೋಡುವಿರಂತೆ.

    ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷಸ್ಥಾನದಿಂದ ಕೆಳಗಿಳಿದಾಗಿನಿಂದಲೂ ಭಾರತದೊಂದಿಗಿನ ಅಮೆರಿಕದ ವ್ಯವಹಾರ ಪೂರ್ಣ ಬದಲಾಗಿದೆ. ಬೈಡೆನ್ ಅಧ್ಯಕ್ಷರಾದಾಗ ಇಲ್ಲಿ ಸಂಭ್ರಮಿಸಿದ್ದು ಯಾರು ಎನ್ನುವುದರ ಮೇಲೆಯೇ ಅವರ ಮುಂದಿನ ನಡೆಯನ್ನು ನಿಸ್ಸಂಶಯವಾಗಿ ಊಹಿಸ ಬಹುದಿತ್ತು. ಬೇರೆ ಸಂದರ್ಭಗಳಲ್ಲಿ ಬಿಡಿ, ತೀರಾ ಭಾರತ ಕರೊನಾದ ಎರಡನೇ ಅಲೆಯಲ್ಲಿ ನರಳುತ್ತಿರುವಾಗ ಅಮೆರಿಕ ನಡೆದುಕೊಂಡ ಪರಿ ಹೇಗಿತ್ತು? ಯುದ್ಧಕಾಲದ ಕಾನೂನುಗಳನ್ನು ಜಾರಿಗೆ ತಂದು ಭಾರತಕ್ಕೆ ಕೊಡಬೇಕಾಗಿದ್ದ ಲಸಿಕೆಗೆ ಅಗತ್ಯವಿದ್ದ ಕಚ್ಚಾವಸ್ತುಗಳನ್ನು ತಡೆಹಿಡಿದುಬಿಟ್ಟಿತು. ಕರೊನಾದ ಮೊದಲ ಅಲೆಯಿಂದ ಅಮೆರಿಕ ತೀವ್ರತರವಾಗಿ ಬಾಧೆಗೊಳಗಾಗಿದ್ದಾಗ ಭಾರತ ಹಗಲು-ರಾತ್ರಿ ಶ್ರಮಿಸಿ 50 ದಶಲಕ್ಷ ಹೈಡ್ರಾಕ್ಸಿ ಕ್ಲೊರೊಕೈ ್ವ್ ಗುಳಿಗೆಗಳನ್ನು ಅಮೆರಿಕಕ್ಕೆ ರಫ್ತು ಮಾಡಿದ್ದನ್ನು ಕೃತಘ್ನರಾದವರು ಮಾತ್ರ ಮರೆಯಲು ಸಾಧ್ಯ. ಅಂದು ಡೊನಾಲ್ಡ್ ಟ್ರಂಪ್ ಭಾರತಕ್ಕೆ ಧನ್ಯವಾದ ಅರ್ಪಿಸುತ್ತ, ‘ಕಷ್ಟಕಾಲದಲ್ಲಿ ಅಮೆರಿಕದೊಂದಿಗಿದ್ದ ಭಾರತವನ್ನು ಮರೆಯಲು ಸಾಧ್ಯವೇ ಇಲ್ಲ. ಸೂಕ್ತ ಸಮಯ ಬಂದಾಗ ಇದನ್ನು ನೆನಪಿಸಿಕೊಳ್ಳಲಾಗುವುದು’ ಎಂದು ಟ್ವೀಟ್ ಮಾಡಿದ್ದರು. ಅಧ್ಯಕ್ಷರು ಬದಲಾದ ನಂತರ ಭಾರತಕ್ಕೆ ಜೊತೆಯಾಗಿ ನಿಲ್ಲುವ ಅವಕಾಶ ಬಂದಿದ್ದನ್ನು ಹೇಗೆ ಧಿಕ್ಕರಿಸಿತು ನೋಡಿ ಅಮೆರಿಕ. ಆದರೆ ಭಾರತದ ಶಕ್ತಿ ಬೇರೆಯೇ ಆದದ್ದು. ವ್ಯಾಕ್ಸಿನ್ ತಯಾರಿಕೆಗೆ ಬೇಕಾದ 35 ಬಗೆಯ ಪ್ರಮುಖ ಕಚ್ಚಾವಸ್ತುಗಳನ್ನು ಅಮೆರಿಕ ರಫ್ತು ಮಾಡುವುದು ನಿಲ್ಲಿಸಿದಾಗ ಭಾರತ ಸುಮ್ಮನಾಗಲಿಲ್ಲ. ದೇಶದೊಳಗೆ ಆ ಕಚ್ಚಾವಸ್ತುಗಳನ್ನು ಉತ್ಪಾದನೆ ಮಾಡುವ ಚಿಂತನೆಗೆ ಬೆಂಬಲಕೊಟ್ಟು ಅದಾಗಲೇ ಮುಂದಡಿಯನ್ನೂ ಇಟ್ಟಿದೆ.

    ಅಮೆರಿಕ ಕಚ್ಚಾವಸ್ತುಗಳನ್ನು ನಿಷೇಧಿಸಿದ ನಂತರವೇ ಭಾರತ್ ಬಯೋಟೆಕ್ ತನ್ನ ‘ಕೋವ್ಯಾಕ್ಸಿನ್’ ಎಂಬ ಲಸಿಕೆಯ ಉತ್ಪಾದನಾ ಸಾಮರ್ಥ್ಯವನ್ನು ವಾರ್ಷಿಕ 700 ದಶಲಕ್ಷಗಳಿಗೆ ಏರಿಸಲಾಗುವುದು ಎಂದಿದೆ. ಇದು ಅಮೆರಿಕಕ್ಕೆ ಬಹಿರಂಗ ಕಪಾಳಮೋಕ್ಷ. ಹಾಗಂತ ಅಮೆರಿಕ ಇದೊಂದೇ ವಿಚಾರದಲ್ಲಿ ನಮ್ಮನ್ನು ಹಳಿಯುತ್ತಿರುವುದೆಂದು ಭಾವಿಸಬೇಡಿ. ಭಾರತವನ್ನು ಕರೆನ್ಸಿ ಮ್ಯಾನ್ಯುಪುಲೇಟರ್ ವಾಚ್​ಲಿಸ್ಟ್​ನಲ್ಲಿ ಅಮೆರಿಕ ಪಟ್ಟಿ ಮಾಡಿದೆಯಲ್ಲದೆ ರಾಷ್ಟ್ರದ ಆರ್ಥಿಕ ವ್ಯವಸ್ಥೆಯನ್ನು ಕಾಪಾಡಲು ರಿಸರ್ವ್ ಬ್ಯಾಂಕು ಡಾಲರ್ ಖರೀದಿ ಮಾಡಿ ರೂಪಾಯಿಯ ಮೌಲ್ಯವನ್ನು ಸರಿದೂಗಿಸುವ ಪ್ರಯತ್ನ ಮಾಡುತ್ತದಲ್ಲ; ಬೈಡೆನ್ ಅದನ್ನು ಕೂಡದು ಎನ್ನುತ್ತಿದ್ದಾರೆ. ಆ ಮೂಲಕ ಭಾರತದ ಆರ್ಥಿಕತೆಯನ್ನು ಹದಗೆಡಿಸಿ ಸಾಲಗಾರ ರಾಷ್ಟ್ರವಾಗಿಸುವ ಪ್ರಯತ್ನ ಬೈಡೆನ್​ರದ್ದು.

    ತೀರಾ ಇತ್ತೀಚೆಗೆ ಲಕ್ಷದ್ವೀಪದ ಬಳಿ ಅಮೆರಿಕದ ಯುದ್ಧನೌಕೆಗಳು ಸರ್ಕಾರಕ್ಕೆ ಮಾಹಿತಿಯನ್ನೂ ಕೊಡದೇ ಬಂದಿದ್ದು ಅಚ್ಚರಿ ಉಂಟುಮಾಡುವಂತಿತ್ತು. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಚೀನಾವನ್ನೆದುರಿಸಲು ಅಮೆರಿಕದ ಬಲವಾದ ಮಿತ್ರ ಭಾರತವೇ. ಆದರೆ ಬೈಡೆನ್ ವ್ಯವಹರಿಸುತ್ತಿರುವ ರೀತಿ ನೋಡಿದರೆ ಅವರು ಚೀನಾದೆದುರು ಸಾಷ್ಟಾಂಗ ಪ್ರಣಾಮ ಮಾಡುವ ದಿನ ಬಲುದೂರವಿದ್ದಂತೆ ಕಾಣುವುದಿಲ್ಲ. ಕೆಲವು ದಿನಗಳ ಹಿಂದೆಯಷ್ಟೇ ಅಮೆರಿಕದ ಕೆಲವು ಸರ್ಕಾರಿ ಸಂಸ್ಥೆಗಳು ಭಾರತದಲ್ಲಿ ಧಾರ್ವಿುಕ ಸ್ವಾತಂತ್ರ್ಯದ ಕೊರತೆಯಿದೆ ಎಂಬ ವರದಿ ಕೊಟ್ಟು ಅಪಹಾಸ್ಯಕ್ಕೀಡಾಗಿದ್ದವು. ಕಪ್ಪು ವರ್ಣೀಯರ ವಿರುದ್ಧ ಅಮೆರಿಕ ನಡೆದುಕೊಳ್ಳುತ್ತಿರುವ ರೀತಿಯ ಕುರಿತಂತೆ ಜಗತ್ತೇ ಆಡಿಕೊಳ್ಳುತ್ತಿರುವಾಗ ಭಾರತಕ್ಕೆ ಬುದ್ಧಿವಾದ ಹೇಳುವ ಅಮೆರಿಕದ ಧೈರ್ಯವನ್ನು ಮೆಚ್ಚಲೇಬೇಕು ಬಿಡಿ!

    ಅತ್ತ ಜರ್ಮನಿ ಏನೂ ಕಡಿಮೆಯಿಲ್ಲ. ಚಾನ್ಸಲರ್ ಏಂಜೆಲಾ ಮರ್ಕೆಲ್ ಇತ್ತೀಚೆಗೆ ಮಾತನಾಡುತ್ತ, ‘ಔಷಧ ಉತ್ಪಾದನೆಯಲ್ಲಿ ಭಾರತ ಮಹತ್ವದ ಮೈಲಿಗಲ್ಲು ಸಾಧಿಸಲು ಕಾರಣವಾದದ್ದೇ ಯುರೋಪು. ಆದರೀಗ ಭಾರತ ಔಷಧ ಉತ್ಪಾದನೆ ಮಾಡಿ ನಮಗೆ ತಲುಪಿಸುವ ತನ್ನ ಬದ್ಧತೆಯನ್ನು ಕಾಪಾಡಿಕೊಳ್ಳುವಂತೆ ಕಾಣುತ್ತಿಲ್ಲ. ನಾವು ಬೇರೆ ರೀತಿಯಲ್ಲಿ ಆಲೋಚಿಸಬೇಕಾಗಬಹುದು’ ಎಂದಿದ್ದಾರೆ. ಇದೇ ಜರ್ಮನಿ ಕರೊನಾ ಮೊದಲ ಅಲೆಯನ್ನು ಎದುರಿಸಲು ತಡಬಡಾಯಿಸುತ್ತಿದ್ದಾಗ 230 ಮಿಲಿಯನ್ ಡಾಲರ್​ಗಳಷ್ಟು ಔಷಧವನ್ನು ರಫ್ತು ಮಾಡಿದ್ದು ಭಾರತ. ಆಗ ನಾವು ಕರೊನಾವನ್ನೆದುರಿಸುವ ಧಾವಂತದಲ್ಲಿದ್ದೆವು. ಆದರೆ ಜೊತೆಗಾರರ ಸಂಕಟವನ್ನು ಅರಿತು ಅದಕ್ಕೆ ಪೂರಕವಾಗಿ ಪ್ರತಿಕ್ರಿಯಿಸುವ ಪ್ರಯತ್ನವೂ ನಮ್ಮದಿತ್ತು. ಈಗ ನಾವೇ ಕರೊನಾದ ಹೊಡೆತಕ್ಕೆ ತತ್ತರಿಸುತ್ತಿದ್ದೇವೆ. ಒಂದೆರಡು ವಾರಗಳಲ್ಲಿ ಸಹಜ ಸ್ಥಿತಿಗೆ ಮರಳುವ ವಿಶ್ವಾಸವಿದೆ. ಅಂತಹ ಹೊತ್ತಿನಲ್ಲೂ ಜರ್ಮನಿ ಹೀಗೆ ಮಾತನಾಡುತ್ತಿದೆ ಎಂದರೆ ಉದ್ದೇಶ ಬೇರೇನೋ ಇದೆ ಎಂದರ್ಥ. ಜನ ತಿರುಗಿ ಬೀಳುತ್ತಿದ್ದಂತೆ ತಡಬಡಿಸಿದ ಜರ್ಮನಿ ತನ್ನ ದೂತಾವಾಸ ಕಚೇರಿಯ ಮೂಲಕ ಭಾರತದ ಸಂಕಟದಲ್ಲಿ ಜೊತೆಯಾಗುವ ಹೇಳಿಕೆಯನ್ನು ಹೊರಡಿಸಿ ತೆಪ್ಪಗಾಯ್ತು.

    ಜಾಗತಿಕವಾಗಿ ಭಾರತವನ್ನು ಹಳಿಯುವ, ಅದನ್ನು ದುರ್ಬಲಗೊಳಿಸುವ ಪ್ರಯತ್ನ ನಿಸ್ಸಂಶಯವಾಗಿ ನಡೆಯುತ್ತಿದೆ. ಅಮೆರಿಕ ಅದಕ್ಕೆ ನೇತೃತ್ವ ವಹಿಸಬಹುದು. ಅದಕ್ಕೆ ಪೂರಕವಾಗಿ ಭಾರತದಲ್ಲೂ ದೊಡ್ಡ ಪ್ರಯಾಸಗಳು ನಡೆದಿವೆ. ಮೊದಲ ಕರೊನಾ ಅಲೆಯ ಹೊತ್ತಲ್ಲಿ ಆಕ್ಸಿಜನ್ ಅಗತ್ಯದ ಪ್ರಶ್ನೆಯೇ ಇರಲಿಲ್ಲ. ಆಗೆಲ್ಲ ವೆಂಟಿಲೇಟರ್​ಗಳ ಬಗ್ಗೆಯೇ ಮಾಧ್ಯಮಗಳು ಮಾತನಾಡಿದ್ದು. ಸರ್ಕಾರ ಈ ವೆಂಟಿಲೇಟರ್​ಗಳ ನಿರ್ವಣಕ್ಕೆ ಪ್ರಯತ್ನಪಟ್ಟು ಅದನ್ನು ಒಂದು ಹಂತಕ್ಕೆ ತಂದ ನಂತರ ಎರಡನೇ ಅಲೆಯ ವೇಳೆಗೆ ಇದ್ದಕಿದ್ದಂತೆ ಆಕ್ಸಿಜನ್ ಅಗತ್ಯದ ಕೂಗು ಕೇಳಿಬರಲಾರಂಭಿಸಿತು. ಕೇಂದ್ರ ಸರ್ಕಾರವನ್ನು ಆಕ್ಸಿಜನ್ ಕೊರತೆ ಕಾರಣಕ್ಕೆ ದೂಷಿಸುತ್ತಿರುವ ಎಲ್ಲ ಪ್ರತಿಪಕ್ಷದ ಮಂದಿ ಒಮ್ಮೆ ತಮ್ಮ ಎದೆಯನ್ನು ಮುಟ್ಟಿಕೊಂಡು ಭಾರತದಲ್ಲಿ ಉತ್ಪಾದನೆಯಾಗುತ್ತಿರುವ ಆಮ್ಲಜನಕ ಕರೊನಾ ಎದುರಿಸಲು ಸಾಲದು ಎಂಬುದನ್ನು ಅರಿತಿದ್ದರಾ ಎಂದು ಕೇಳಿಕೊಳ್ಳುವುದು ಒಳಿತು.

    ಸರ್ಕಾರಕ್ಕೆ ಸುದೀರ್ಘ ಪತ್ರ ಬರೆದ ಮನಮೋಹನ ಸಿಂಗರಾದರೂ ಆಮ್ಲಜನಕದ ಅಗತ್ಯವನ್ನು ಒತ್ತಿ ಹೇಳಿದ್ದರಾ? ಆತ್ಮಾವಲೋಕನ ಮಾಡಿಕೊಳ್ಳಬೇಕು ಅಷ್ಟೇ.

    ಭಾರತದ ಶಕ್ತಿ ಅದಮ್ಯವಾದದ್ದು. ಮೊದಲ ಅಲೆಯ ವೇಳೆಗೆ ಭಾರತದಲ್ಲಿ ಪಿಪಿಇ ಕಿಟ್​ಗಳ ಕೊರತೆಯಿತ್ತು. ನಾವು ಈಗ ಅದನ್ನು ರಫ್ತು ಮಾಡುವಷ್ಟರ ಮಟ್ಟಿಗೆ ಬೆಳೆದಿದ್ದೇವೆ. ಈ ಬಾರಿಯೂ ಅಷ್ಟೇ. ಕಳೆದ ವರ್ಷ ಮಾರ್ಚ್ ತಿಂಗಳ ವೇಳೆಗೆ ದಿನಕ್ಕೆ 750 ಮೆಟ್ರಿಕ್ ಟನ್​ನಷ್ಟು ಆಮ್ಲಜನಕವನ್ನು ಉತ್ಪಾದಿಸುತ್ತಿದ್ದೆವು. ಈಗ ನಮ್ಮ ಸಾಮರ್ಥ್ಯ ಸುಮಾರು 8000 ಮೆಟ್ರಿಕ್ ಟನ್​ಗಳಷ್ಟು. ಅಂದರೆ ಇನ್ನು ಕೆಲವೇ ದಿನಗಳಲ್ಲಿ ಆಮ್ಲಜನಕದ ವಿಚಾರದಲ್ಲಿ ನಾವು ಆತ್ಮನಿರ್ಭರರಾಗಲಿದ್ದೇವೆ. ಇದರಲ್ಲೂ ಎಡಪಂಥೀಯರ ಕುಹಕವಿಲ್ಲದೇ ಇಲ್ಲ. ವೇದಾಂತ ಕಂಪನಿ ತಮಿಳುನಾಡಿನಲ್ಲಿ ತನ್ನ ಘಟಕವನ್ನು ಅನಿವಾರ್ಯವಾಗಿ ಮುಚ್ಚಬೇಕಾಯ್ತಲ್ಲ, ಅದೊಂದೇ ಘಟಕ ಪ್ರತಿನಿತ್ಯ 1000 ಮೆಟ್ರಿಕ್ ಟನ್​ಗಳಷ್ಟು ಆಮ್ಲಜನಕವನ್ನು ಉತ್ಪಾದಿಸುತ್ತಿತ್ತು. ಅಯೋಗ್ಯರು ಆ ಕಾರ್ಖಾನೆಯನ್ನು ಮುಚ್ಚಿಸಿ ಭಾರತದ ಕೈ ಕಟ್ಟಿಹಾಕಿಬಿಟ್ಟರು. ಈಗ ವೇದಾಂತ ಸುಪ್ರೀಂ ಕೋರ್ಟಿನ ಮೊರೆಹೊಕ್ಕು ತನಗೆ ಮತ್ತೆ ಅವಕಾಶ ಮಾಡಿಕೊಡಿರೆಂದು ಕೇಳುತ್ತಿದೆ.

    ಆಮ್ಲಜನಕದಷ್ಟೇ ದೊಡ್ಡ ಸಮಸ್ಯೆ ಈ ಹೊತ್ತಲ್ಲಿ ರೆಮ್​ಸಿವಿರ್​ನದ್ದು. ಅಮೆರಿಕದಲ್ಲಿ ಕರೊನಾ ಮೊದಲ ಅಲೆ ಆರಂಭವಾದಾಗ ಇದೇ ರೆಮ್​ಸಿವಿರ್​ನನ್ನು ಔಷಧ ಎಂದು ಕೊಡಲಾಗಿತ್ತು. ಆದರೆ ಇದು ಕೆಲಸ ಮಾಡುವುದಿಲ್ಲವೆಂದು ನಿರಾಕರಿಸಲಾಯ್ತು. ಅಚ್ಚರಿ ಎಂದರೆ ಈಗ ಅದೇ ಔಷಧವಾಗಿ ಭಾರತದಲ್ಲಿ ಕೊಡಲ್ಪಡುತ್ತಿದೆ. ಅದಕ್ಕಾಗಿ ಹಾಹಾಕಾರ. ಈ ಕುರಿತ ಪ್ರಶ್ನೆಗಳನ್ನು ಕೇಳಿದರೆ ಈ ವೈರಸ್​ನ ಎಳೆ ಬಲು ಭಯಾನಕವಾದದ್ದು ಎನ್ನುವ ಸಿದ್ಧ ಉತ್ತರ ಎಲ್ಲ ಕಡೆಯಿಂದ ಬರುತ್ತಿದೆ. ಈ ನಡುವೆ ಜನರ ಸಾವಿನ ಈ ಅವಕಾಶವನ್ನು ಬಳಸಿಕೊಳ್ಳುತ್ತಿರುವ ಕೆಲವು ಮಂದಿ ಸುಳ್ಳುಸುದ್ದಿಯನ್ನು ಹಬ್ಬಿಸಿಯಾದರೂ ಸರ್ಕಾರಕ್ಕೆ ಕಿರಿಕಿರಿ ಉಂಟು ಮಾಡಬೇಕೆಂದು ನಿಶ್ಚಯಿಸಿದ್ದಾರೆ. ಶಶಿ ತರೂರ್ ಸುಮಿತ್ರಾ ಮಹಾಜನ್ ತೀರಿಕೊಂಡಿದ್ದಾರೆಂದು ಟ್ವೀಟ್ ಮಾಡಿ ಟೀಕೆಗೆ ಗುರಿಯಾದರು. ಸ್ವತಃ ಸುಮಿತ್ರಾ ಮಹಾಜನ್ ಶಶಿ ತರೂರ್​ರನ್ನು ತರಾಟೆಗೆ ತೆಗೆದುಕೊಳ್ಳಬೇಕಾಗಿ ಬಂತು. ಎಡ ಪಂಥೀಯ ಕಾರ್ಯಕರ್ತೆ ಕವಿತಾ ಕೃಷ್ಣನ್ ದೆಹಲಿಯ ಏಮ್ಸ್​ನಲ್ಲಿ ಆಮ್ಲಜನಕದ ಕೊರತೆಯಾಗಿ ತುರ್ತು ಘಟಕ ಮುಚ್ಚಲ್ಪಟ್ಟಿದೆ ಎಂದು ಟ್ವೀಟ್ ಮಾಡಿದ್ದರು. ಸ್ವತಃ ಏಮ್್ಸ ಮುನ್ನೆಲೆಗೆ ಬಂದು ಇದನ್ನು ಸುಳ್ಳೆಂದು ಹೇಳಬೇಕಾಯ್ತು.

    ಪತ್ರಕರ್ತೆಯೊಬ್ಬರು ಬಾಬಾ ರಾಮದೇವರ ಪತಂಜಲಿ ಘಟಕದಲ್ಲಿ ಕೆಲಸ ಮಾಡುವ 83 ಜನರಿಗೆ ಕರೊನಾ ಸೋಂಕು ತಾಕಿದೆ ಎಂಬ ಸುಳ್ಳುಸುದ್ದಿಯನ್ನು ಹಬ್ಬಿಸಿದ್ದಲ್ಲದೆ ಬಾಬಾ ರಾಮದೇವ್​ರ ಆಯುರ್ವೆದ ಮಾತ್ರೆಯನ್ನು ಆಡಿಕೊಂಡರು. ಪ್ರಧಾನಮಂತ್ರಿಯವರನ್ನು ಹಗಲು-ರಾತ್ರಿ ಪ್ರಶ್ನೆ ಮಾಡುವ ಈ ಎಡಪಂಥೀಯ ಬುದ್ಧಿಜೀವಿಗಳು ಈ ವರ್ಷ ಜಾಹೀರಾತಿಗೆಂದೇ 150 ಕೋಟಿ ರೂಪಾಯಿ ಖರ್ಚು ಮಾಡಿರುವ ಅರವಿಂದ್ ಕೇಜ್ರಿವಾಲರನ್ನು ಪ್ರಶ್ನಿಸುವುದೇ ಇಲ್ಲ. ಭಾರತದ ಡ್ರಗ್ ಕಂಟ್ರೋಲರ್ ವಿಭಾಗ ಬಲುಹಿಂದೆಯೇ ಎಲ್ಲ ಕಾರ್ಖಾನೆಗಳಿಗೂ ಮೆಡಿಕಲ್ ಆಕ್ಸಿಜನ್ ಉತ್ಪಾದನೆಗೆ ಅನುಮತಿ ಕೊಡಿರೆಂದು ಪತ್ರ ಬರೆದಿತ್ತು. ಈ ಪತ್ರದ ಮೇಲೇ ಕುಳಿತ ಕೆಲವು ರಾಜ್ಯ ಸರ್ಕಾರಗಳು ಈಗ ನಿದ್ರೆಯಿಂದ ಎಚ್ಚೆತ್ತುಕೊಂಡವರಂತೆ ನಟಿಸುತ್ತಿವೆ.

    ಕರೊನಾ ಒಂದು ಹಂತವನ್ನು ಮುಟ್ಟಿ ಕೆಳಗಿಳಿಯುತ್ತದೆ. ಲಸಿಕೋತ್ಸವವೂ ವ್ಯಾಪಕವಾಗಿ ನಡೆಯುವುದರಿಂದ ಮೂರು-ನಾಲ್ಕನೇ ಅಲೆಗಳು ಭಾರತವನ್ನು ಇಷ್ಟೆಲ್ಲ ಬಾಧಿಸಲಾರವು. ಆದರೆ ಕರೊನಾ ನಂತರವೂ ನಾವು ಎದುರಿಸಬೇಕಾದ ವೈರಸ್​ಗಳು ನಮ್ಮ ನಡುವೆಯೇ ಇವೆ. ಕರೊನಾ ಎದುರಿಸಲು ಎಷ್ಟು ಎಚ್ಚರಿಕೆ ಮತ್ತು ಜಾಗೃತಿ ಬೇಕೋ ಈ ವೈರಸ್​ಗಳನ್ನು ಎದುರಿಸಲು ಅದಕ್ಕಿಂತಲೂ ಹೆಚ್ಚು ಎಚ್ಚರಿಕೆ ಮತ್ತು ಜಾಗೃತಿ ಬೇಕು. ಅಂದಹಾಗೆ, ಮೇ ಮೊದಲ ವಾರದಲ್ಲಿ ರಾಕೇಶ್ ಟಿಕಾಯ್್ತ ನೇತೃತ್ವದ ರೈತರು ಮತ್ತೊಮ್ಮೆ ದೆಹಲಿಗೆ ಮುತ್ತಿಗೆ ಹಾಕಲಿದ್ದಾರಂತೆ. ಡೊನಾಲ್ಡ್ ಟ್ರಂಪ್​ರನ್ನು ಕೆಳಗಿಳಿಸಿದ ಮಾದರಿಯಲ್ಲಿಯೇ ನರೇಂದ್ರ ಮೋದಿಯವರನ್ನು ಅಧಿಕಾರದಿಂದಿಳಿಸಬೇಕು ಎಂಬ ಪ್ರಯತ್ನ ಅವರದ್ದೆಲ್ಲ. ನಿಜಕ್ಕೂ ಇದು ಸವಾಲಿನ ಸಮಯ. ನಾವೆಲ್ಲರೂ ಹಿಂದೆಂದಿಗಿಂತಲೂ ಹೆಚ್ಚು ಬಲವಾಗಿ ಜೊತೆ ನಿಲ್ಲಬೇಕಿದೆ!

    (ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts