More

    ವಿಶ್ವಗುರು ಅಂಕಣ: ಸುತ್ತಲೂ ನೆಗೆಟಿವ್, ಬೆಳ್ಳಿರೇಖೆ ಎಲ್ಲಿ ಹುಡುಕೋಣ?!

    ವಿಶ್ವಗುರು ಅಂಕಣ: ಸುತ್ತಲೂ ನೆಗೆಟಿವ್, ಬೆಳ್ಳಿರೇಖೆ ಎಲ್ಲಿ ಹುಡುಕೋಣ?!  ದೇಶದಲ್ಲಿ ಕರೊನಾ 2 ಕೋಟಿ ಜನರನ್ನು ಆವರಿಸಿಕೊಂಡಿದೆ. ಇದೊಂದು ಭಯಾನಕವಾದ ಸಾಂಕ್ರಾಮಿಕ ರೋಗ ಎನ್ನುವುದರಲ್ಲಿ ಇಂದು ಯಾರಿಗೂ ಅನುಮಾನ ಉಳಿದಿಲ್ಲ. ಆದರೆ ಮೊದಲನೇ ಅಲೆಯನ್ನು ಲಾಕ್​ಡೌನಿನ ಮೂಲಕ ಎದುರಿಸಿ ಜಗತ್ತೇ ಬೆರಗಾಗುವಂತೆ ನಡೆದುಕೊಂಡಿದ್ದ ಭಾರತ ಎರಡನೇ ಅಲೆಯನ್ನು ಎದುರಿಸುವಲ್ಲಿ ತುಸು ಹಿಂದೆ ಬಿದ್ದಿದೆ. ಜಗತ್ತನ್ನು ತನ್ನ ಬೆರಳ ತುದಿಯಲ್ಲಿ ಕುಣಿಸಿದ ಈ ಮಹಾಮಾರಿಯನ್ನು ಮಣಿಸಲು ನಮಗೆ ವಿಶೇಷವಾದ ಧೈರ್ಯ ಈಗ ಬೇಕಿದೆ. ಆದರೇನು? ದಿನನಿತ್ಯ ಮಾಧ್ಯಮಗಳಲ್ಲಿ ಕರೊನಾ, ಆಕ್ಸಿಜನ್ ಹಾಗೂ ರೆಮ್ೆಸಿವಿರ್ ಕೊರತೆ, ಸಾವು-ನೋವು, ಸ್ಮಶಾನ, ಚಿತಾಗಾರ ಇವುಗಳನ್ನೇ ನೋಡಿ, ನೋಡಿ ಕರೊನಾದಿಂದ ಹೊರಬರಲು ದಾರಿಯೇ ಇಲ್ಲವೇನೋ ಎನಿಸುತ್ತಿದೆ. ಸ್ಪಷ್ಟವಾಗಿ ಹೇಳಬೇಕೆಂದರೆ ಕರೊನಾಕ್ಕಿಂತಲೂ ಕರೊನಾ ಭಯವೇ ಹೆಚ್ಚು ಕೊಲ್ಲುತ್ತಿದೆ. ಇತ್ತೀಚೆಗೆ ಮಾನಸಿಕ ರೋಗಗಳ ತಜ್ಞರು ಕೆಲವರು ಮುಕ್ತ ಪತ್ರವನ್ನು ಬರೆದು ಈ ರೀತಿ ಹೆದರಿಸುವುದು ಮಾನಸಿಕವಾಗಿ ಜನರನ್ನು ಕುಗ್ಗಿಸುತ್ತದೆ. ಇದು ಬರಲಿರುವ ದಿನಗಳಲ್ಲಿ ಭಯಾನಕವಾಗಿ ಪರಿಣಮಿಸಲಿದೆ ಎಂದು ಎಚ್ಚರಿಸಿದ್ದಾರೆ.

    ಒಂದೆಡೆ ಭಾರತೀಯ ಮಾಧ್ಯಮಗಳು ಈ ರೀತಿಯ ಭಯವನ್ನು ಬಿತ್ತಿ ಜನರು ತತ್ತರಿಸುವಂತೆ ಮಾಡಿದ್ದರೆ ಮತ್ತೊಂದೆಡೆ ಅರುಂಧತಿ ರಾಯ್ ಥರದ ಲೇಖಕರು ಈ ಅವಕಾಶವನ್ನು ಬಳಸಿಕೊಂಡು ಜಾಗತಿಕ ಪತ್ರಿಕೆಗಳಿಗೆ ಭಾರತದ ಕುರಿತು ಬೈಗುಳಗಳೇ ತುಂಬಿರುವ ಲೇಖನವನ್ನು ಬರೆದಿದ್ದಾರೆ. ಇವರಿಗೆಲ್ಲ ಮೋದಿಯನ್ನು ಕಂಡರೆ ಕಂಠಮಟ್ಟ ವಿರೋಧ. ದುರಂತವೆಂದರೆ ಅವರನ್ನು ವಿರೋಧಿಸುವ ಭರದಲ್ಲಿ ಭಾರತವನ್ನು ದೂಷಿಸುವ, ಜಾಗತಿಕ ಮಟ್ಟದಲ್ಲಿ ಗೌರವ ಕುಂದಿಸುವ ಕೆಲಸ ಮಾಡುತ್ತಿದ್ದಾರೆ. ಇರಲಿ, ಇವರಿಂದ ಇದಕ್ಕಿಂತ ಹೆಚ್ಚಿನದನ್ನೇನೂ ನಿರೀಕ್ಷಿಸಲು ಸಾಧ್ಯವಿರಲಿಲ್ಲ! ಭಾರತದಲ್ಲಿ ಕರೊನಾ ಪೀಡಿತರು ಗುಣಮುಖರಾಗಿರುವ ದಾಖಲೆಗಳನ್ನು ನೋಡಿದರೆ ಮಾಧ್ಯಮಗಳು ಕೆಲವೇ ಸಂಗತಿಗಳನ್ನು ಅನಗತ್ಯ ವಾಗಿ ವಿಸ್ತಾರಗೊಳಿಸುತ್ತಿವೆ ಎಂಬುದನ್ನು ಇಲ್ಲವೆನ್ನಲಾಗುವುದಿಲ್ಲ. ಒಟ್ಟಾರೆ ಕರೊನಾದಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಸುಮಾರು ಶೇಕಡ 99ರಷ್ಟಿದೆ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಇದುವರೆಗಿನ ಅಂಕಿ-ಅಂಶಗಳ ಪ್ರಕಾರ ಕರೋನಾ ಕಾಲಕ್ಕೆ ತೀರಿಕೊಂಡವರು ಶೇಕಡ 1.12ರಷ್ಟು ಮಾತ್ರ. ಅಂದರೆ ಸಾವಿರ ಜನಕ್ಕೆ ಕರೊನಾ ಬಂದರೆ 12 ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಉಳಿದ 988 ಜನ ನಗು-ನಗುತ್ತ ಮನೆಗೆ ಮರಳುತ್ತಿದ್ದಾರೆ. ಹೀಗೆ ಮರಳುವವರನ್ನು ಬಿಟ್ಟು ಪ್ರಾಣ ಕಳೆದುಕೊಂಡವರ ಬಗ್ಗೆ ಪದೇಪದೆ ತೋರಿಸಿದರೆ ಸಾಯುವವರ ಸಂಖ್ಯೆ ಹೆಚ್ಚಬಹುದೇ ಹೊರತು ಕಡಿಮೆಯಾಗಲಾರದು. ಕರೊನಾ ಸೋಂಕಿತರ ಸಂಖ್ಯೆ ಮೂರುವರೆ ಲಕ್ಷವಾದ ದಿನ ಒಂದೇ ದಿನಕ್ಕೆ ಇಷ್ಟು ಸಂಖ್ಯೆಯ ರೋಗಿಗಳು ಪತ್ತೆಯಾಗಿರುವುದು ಜಗತ್ತಿನಲ್ಲೇ ಮೊದಲು ಎಂದು ಹೇಳಲಾಯಿತು. ಯಾರೂ ‘ಚೀನಾವನ್ನು ಬಿಟ್ಟು’ ಎಂದು ಹೇಳುವ ಧೈರ್ಯ ತೋರಲಿಲ್ಲ ಅಷ್ಟೇ. ಭಾರತದ ಜನಸಂಖ್ಯೆ 136 ಕೋಟಿ. ಇಲ್ಲಿ ಸಾಂಕ್ರಾಮಿಕ ರೋಗಗಳು ಹಬ್ಬುವುದು ಉಳಿದೆಲ್ಲ ರಾಷ್ಟ್ರಗಳಿಗಿಂತಲೂ ಬೇಗ. ಮೊದಲನೇ ಅಲೆಯನ್ನು ಸಾವರಿಸಿಕೊಂಡು ನಾವು ಬಲವಾಗಿ ನಿಂತಿದ್ದಕ್ಕೆ ಜಗತ್ತು ಅಚ್ಚರಿ ವ್ಯಕ್ತಪಡಿಸಿದ್ದು ಇದೇ ಕಾರಣಕ್ಕೆ. ಎರಡನೇ ಅಲೆ ಬಂದಾಗ ಈ ಬಗೆಯ ವ್ಯಾಪಕ ಹಬ್ಬುವಿಕೆ ಅಂದಾಜಿದ್ದದ್ದೇ. ಆದರೆ, ಮೇ 4ರಂದು 3 ಲಕ್ಷಕ್ಕಿಂತ ಅಧಿಕ ಜನ ಗುಣಮುಖರಾಗಿ ಮನೆಗೆ ತೆರಳಿದರು. ಇದು ಕೂಡ ಒಂದು ದಿನದಲ್ಲಿ ಜಾಗತಿಕ ಮಟ್ಟದಲ್ಲಿ ದಾಖಲೆಯೇ. ಇದನ್ನು ಮಾತ್ರ ಜಗತ್ತಿನ ಯಾವ ಪತ್ರಿಕೆಗಳೂ ದಾಖಲಿಸಲಿಲ್ಲ, ಭಾರತದ ಸೆಲೆಬ್ರಿಟಿಗಳ್ಯಾರೂ ಇದನ್ನು ಹೇಳಲಿಲ್ಲ. ಇಷ್ಟು ಜನ ಗುಣಮುಖರಾಗುತ್ತಿದ್ದಾರೆ ಎಂಬ ಸುದ್ದಿಯೇ ರೋಗಿಗೆ ಆತ್ಮವಿಶ್ವಾಸ ಮೂಡಿಸಬಲ್ಲದ್ದಾಗಿತ್ತು. ಆದರೆ, ನಾವು ಪ್ರಯತ್ನವನ್ನೆಂದಿಗೂ ಮಾಡಲೇ ಇಲ್ಲ. ಈ ನಡುವೆಯೇ ‘ಸಿಎನ್​ಎನ್’ ಎನ್ನುವ ವೈಶ್ವಿಕ ಪತ್ರಿಕೆ ಭಾರತದಲ್ಲಿ ಕನಿಷ್ಠಪಕ್ಷ 50 ಕೋಟಿ ರೋಗಿಗಳಿದ್ದಾರೆ ಎಂಬ ಜ್ಯೋತಿಷ್ಯ ಹೇಳಿಬಿಟ್ಟಿತ್ತು. 2 ಕೋಟಿ ರೋಗಿಗಳಷ್ಟೇ ಇಲ್ಲಿ ಪತ್ತೆಯಾಗಿರುವುದು ಎಂಬ ಸತ್ಯವನ್ನು ಪಾಶ್ಚಿಮಾತ್ಯ ಜನರಿಗೆ ಈಗಲೂ ಜೀರ್ಣಿಸಿಕೊಳ್ಳಲಾಗುತ್ತಿಲ್ಲ. ಹೀಗಾಗಿ ತಮಗೆ ತೋಚಿದ್ದನ್ನೇ ಗೀಚುತ್ತ ಭಾರತದ ಗೌರವವನ್ನು ಕುಂದಿಸುವ ಪ್ರಯತ್ನ ನಡೆಸಿಯೇ ಇದ್ದಾರೆ.

    ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿದ್ದಾಗ ಭಾರತ ಶ್ರೇಷ್ಠ ದಿನಗಳನ್ನು ಕಂಡಿತು. ಚೀನಾ ಪರವಾದ ವಿಚಾರಧಾರೆ ಹೊಂದಿರುವ, ಚೀನಿಯರ ಸಹಕಾರದಿಂದಲೇ ಗೆಲುವು ಪಡೆದ ಆರೋಪಕ್ಕೆ ಗುರಿಯಾಗಿರುವ ಜೋ ಬೈಡೆನ್ ಅಧ್ಯಕ್ಷರಾದ ಮೇಲೆ ಭಾರತವಿರೋಧಿಯಾಗಿ ಅವರು ನಡೆದುಕೊಳ್ಳುವುದನ್ನು ನಿರೀಕ್ಷಿಸಲಾಗಿತ್ತು. ಸಂಕಟದಲ್ಲಿದ್ದ ಭಾರತಕ್ಕೆ ಸಹಾಯ ಮಾಡುವುದಿರಲಿ ತೀವ್ರತರವಾಗಿ ಅಗತ್ಯವಿದ್ದ ವ್ಯಾಕ್ಸಿನ್​ಗಳ ಕಚ್ಚಾವಸ್ತುಗಳನ್ನು ಪೂರೈಸುವುದಿಲ್ಲ ಎಂದು ಹಠತೊಟ್ಟು ನಿಂತರು. ಜಗತ್ತಿನ ಮಂದಿಯೆಲ್ಲ ವಾಚಾಮಗೋಚರವಾಗಿ ಬೈದ ನಂತರ ಬೈಡೆನ್ ಸ್ವಲ್ಪ ತೆಪ್ಪಗಾದರು. ಅಜಿತ್ ದೊವಲ್ ಮಾತನಾಡಿದ ಮೇಲೆ ಭಾರತಕ್ಕೆ ಸಹಕಾರ ಮಾಡುವುದಷ್ಟೇ ಅಲ್ಲದೆ ಕಚ್ಚಾವಸ್ತುಗಳನ್ನು ನೀಡುವುದಾಗಿ ಮಾತುಕೊಟ್ಟರು. ಅಮೆರಿಕದ ಈ ಧೋರಣೆ ನಡುವೆಯೇ ಚೀನಾ ಮತ್ತು ಪಾಕಿಸ್ತಾನ ಭಾರತಕ್ಕೆ ಬೆಂಬಲವಾಗಿ ನಿಲ್ಲುವ ಭರವಸೆ ಕೊಟ್ಟವು. ಪಾಕಿಸ್ತಾನದ್ದೇನೋ ಗೊತ್ತಿಲ್ಲ; ಚೀನಾದ್ದಂತೂ ಕುಹಕವೇ ಆಗಿತ್ತು. ಇತ್ತ ಬೆಂಬಲ ಕೊಡುವ ಮಾತುಗಳನ್ನಾಡುತ್ತ ಅತ್ತ ಗಡಿಯಲ್ಲಿ ಬಲವನ್ನು ವೃದ್ಧಿಪಡಿಸಿಕೊಂಡಿದ್ದಲ್ಲದೆ ಭಾರತದ ನೆರೆಯ ರಾಷ್ಟ್ರಗಳೊಂದಿಗೆ ಸಭೆ ನಡೆಸಿ ಭಾರತದ ಅಸಹಾಯಕತೆಯನ್ನು ಆಡಿಕೊಳ್ಳುವ ಪ್ರಯತ್ನ ಮಾಡಿತು. ಸಾರ್ಕ್ ರಾಷ್ಟ್ರಗಳೊಂದಿಗೆ ಚೀನಾ ಕರೆದಿದ್ದ ಸಭೆಗೆ ಬರುವುದಿಲ್ಲವೆಂದು ನರೇಂದ್ರ ಮೋದಿ ನಿರಾಕರಿಸಿದ್ದು ಇದೇ ಕಾರಣಕ್ಕೆ. ಇಂತಹ ಕಷ್ಟದ ಸಮಯದಲ್ಲಿ ಪ್ರಾಮಾಣಿಕವಾಗಿ ಮತ್ತು ಬಲವಾಗಿ ನಿಂತ ರಾಷ್ಟ್ರ ಫ್ರಾನ್ಸ್. ಅಲ್ಲಿನ ಅಧ್ಯಕ್ಷರು ಹಿಂದಿಯಲ್ಲಿ ಸಂದೇಶ ಕೊಟ್ಟು- ‘ಈ ರೋಗ ಯಾರನ್ನೂ ಬಿಟ್ಟಿಲ್ಲ; ಸಂಕಟದಲ್ಲಿ ಜೊತೆಗಿರೋಣ’ ಎಂದಿದ್ದರು. ಭಾರತಕ್ಕೆ ಹಲವು ಬಗೆಯಲ್ಲಿ ಅದು ಸಹಾಯ ಮಾಡಿತು. ಆಸ್ಟ್ರೇಲಿಯಾ ಕೂಡ ಅಷ್ಟೇ. ಜಪಾನ್, ಜರ್ಮನಿಗಳೂ ಕೂಡ. ಆಸ್ಟ್ರೇಲಿಯಾ ರಾಷ್ಟ್ರವಾಗಿ ಬಿಡಿ, ಅಲ್ಲಿನ ಕ್ರಿಕೆಟ್ ಆಟಗಾರ ಪ್ಯಾಟ್ ಕಮಿನ್ಸ್ ಭಾರತಕ್ಕೆ 50 ಸಾವಿರ ಡಾಲರ್​ಗಳನ್ನು ಕೊಟ್ಟು ‘ಅದು ನನ್ನ ಪ್ರೀತಿಯ ರಾಷ್ಟ್ರ’ ಎಂದರು. ಬ್ರೆಟ್​ಲೀ ಕೂಡ 43 ಲಕ್ಷ ದೇಣಿಗೆ ಕೊಟ್ಟು ‘ಭಾರತಕ್ಕೆ ಬಂದಿರುವ ಸಂಕಟ ನನ್ನ ಹೃದಯವನ್ನು ಕಲಕಿಸಿದೆ’ ಎಂದಿದ್ದಾರೆ. ತೈವಾನ್ ನಮ್ಮ ಸಹಕಾರಕ್ಕೆ ನಿಂತುಕೊಂಡಿತು. ಆರಂಭದಲ್ಲಿ ಜರ್ಮನಿ ಸ್ವಲ್ಪ ಋಣಾತ್ಮಕವಾಗಿ ಮಾತನಾಡಿದರೂ ಕ್ರಮೇಣ ಧೋರಣೆ ಸರಿಪಡಿಸಿಕೊಂಡಿತು. ಹಾಗಂತ ಇವೆಲ್ಲ ಅನುಕಂಪದಿಂದ ಆದದ್ದೇನೂ ಅಲ್ಲ. ಬ್ರಿಟನ್​ನ ಪ್ರಿನ್ಸ್ ಚಾರ್ಲ್ಸ್, ‘ನಮ್ಮ ಕಷ್ಟಕಾಲದಲ್ಲಿ ಭಾರತ ನಮಗೆ ಸಹಕರಿಸಿದೆ. ಈಗ ನಾವು ಜೊತೆಯಾಗಿರಬೇಕು’ ಎಂದು ಹೇಳಿ ಪಶ್ಚಿಮದ ರಾಷ್ಟ್ರಗಳಲ್ಲಿ ಸಂಚಲನ ಉಂಟುಮಾಡಿದ್ದರು. ರಷ್ಯಾದ ರಾಯಭಾರಿ ಕೂಡ ‘ನಮಗೆ ಅಗತ್ಯವಾಗಿದ್ದಾಗ ಔಷಧಗಳನ್ನು ಕಳಿಸಿಕೊಟ್ಟ ಭಾರತಕ್ಕೆ ಈಗ ನಾವು ಸಹಕಾರ ಮಾಡಲಿದ್ದೇವೆ’ ಎಂದು ಹೇಳಿದ್ದಾರೆ. ರಷ್ಯಾ ಭಾರತಕ್ಕೆ 20 ಆಕ್ಸಿಜನ್ ಉತ್ಪಾದನಾ ಘಟಕ, 75 ವೆಂಟಿಲೇಟರ್ಸ್, 150 ಮೆಡಿಕಲ್ ಮಾನಿಟರ್ ಮತ್ತು 2 ಲಕ್ಷ ಪ್ಯಾಕೆಟುಗಳಷ್ಟು ಔಷಧವನ್ನು ಕಳಿಸಿಕೊಟ್ಟಿತು. ಕರೊನಾ ವ್ಯಾಪಕಗೊಳ್ಳುತ್ತಿರುವ ಹೊತ್ತಿನಲ್ಲಿಯೇ ಭಾರತ ಮತ್ತು ರಷ್ಯಾದ ಬಾಂಧವ್ಯ ಎಷ್ಟು ಬಲಗೊಂಡಿದೆ ಎಂದರೆ 2+2 ಸಂವಾದಕ್ಕೆ ನಾವೀಗ ತೆರೆದುಕೊಂಡಿದ್ದೇವೆ. ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾಗಳೊಂದಿಗೆ ಈ ಬಗೆಯ ಬಾಂಧವ್ಯ ಹೊಂದಿರುವ ಭಾರತ ಈಗ ರಷ್ಯಾದೊಂದಿಗೆ ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ. ಇನ್ನು ಮುಂದೆ ರಷ್ಯಾದ ವಿದೇಶಾಂಗ ಮತ್ತು ರಕ್ಷಣಾ ಸಚಿವರೊಂದಿಗೆ ಭಾರತದ ವಿದೇಶಾಂಗ ಮತ್ತು ರಕ್ಷಣಾ ಸಚಿವರು ನೇರವಾಗಿ ಮಾತನಾಡುವ ವ್ಯವಸ್ಥೆಯನ್ನು ರೂಪಿಸಿಕೊಂಡಿದೆ.

    ಹಾಗಂತ ಎಲ್ಲವೂ ವಿದೇಶೀ ಸಹಕಾರವೇ ಎಂದೇನಿಲ್ಲ. ಪಿಎಮ್ ಕೇರ್ಸ್​ಗೆ ನಾವು ಕೊಟ್ಟ ಹಣದಿಂದ ಒಟ್ಟು 1250 ಆಕ್ಸಿಜನ್ ನಿರ್ಮಾಣ ಘಟಕಗಳ ನಿರ್ವಿುಸುವ ಯೋಜನೆ ಕೈಗೆತ್ತಿಕೊಂಡಿತು. ಪ್ರತಿಷ್ಠಿತ ಡಿಆರ್​ಡಿಒ ಖಾಸಗಿ ಸಂಸ್ಥೆಗಳ ಮೂಲಕ ತನ್ನ ತಂತ್ರಜ್ಞಾನವನ್ನು ಬಳಸಿ 500 ಘಟಕಗಳನ್ನು ನಿರ್ವಿುಸುತ್ತಿದೆ. ಅಂದರೆ ಅನಿರೀಕ್ಷಿತವಾಗಿ ಎರಗಿದ ಈ ಆಕ್ರಮಣವನ್ನು ಹಂತ-ಹಂತವಾಗಿಯಾದರೂ ನಾವು ಸಮರ್ಥವಾಗಿ ಎದುರಿಸುತ್ತಿದ್ದೇವೆ. ಭಾರತದ ಉದ್ಯಮಿಗಳು ಹಿಂದೆ ಬಿದ್ದಿಲ್ಲ. ವಿಪ್ರೊದ ಅಜೀಮ್ ಪ್ರೇಮ್ ಕೋವಿಡ್ ನಿರ್ವಹಣೆಗೆಂದು -ಠಿ; 1125 ಕೋಟಿ ದೇಣಿಗೆ ನೀಡಿದ್ದಾರೆ. ರಿಲಯನ್ಸ್ ಇಂಡಿಯಾ ಲಿಮಿಟೆಡ್, ಟಾಟಾ, ಅದಾನಿ ಮತ್ತು ಮಾರುತಿ ಕಂಪನಿಗಳು ತಮ್ಮ ಕಾರ್ಖಾನೆಗಳನ್ನು ಸ್ಥಗಿತಗೊಳಿಸಿ ಆಮ್ಲಜನಕವನ್ನು ಪ್ರತಿ ಆಸ್ಪತ್ರೆಗೂ ತಲುಪಿಸುವ ಜವಾಬ್ದಾರಿ ಹೊತ್ತಿದ್ದಾರೆ. ರಿಲಯನ್ಸ್ ಸಾವಿರ ಹಾಸಿಗೆಯ ಸಾಮರ್ಥ್ಯವುಳ್ಳ ಆಸ್ಪತ್ರೆ ಯನ್ನು ನಿರ್ವಹಿಸುವ ಭರವಸೆ ನೀಡಿದೆ. ಹಿರೋ ಮೋಟಾರ್ಸ್ ಹರಿಯಾಣ, ಉತ್ತರಾಖಂಡ, ದೆಹಲಿ, ರಾಜಸ್ಥಾನ, ಗುಜರಾತ್​ಗಳಲ್ಲಿ ಹಳ್ಳಿಯ ಜನರಿಗೆ ಉಪಯೋಗವಾಗಬಲ್ಲ ದ್ವಿಚಕ್ರ ವಾಹನದ ಆಂಬುಲೆನ್ಸ್​ಗಳನ್ನು ಆರೋಗ್ಯ ಕಾರ್ಯಕರ್ತರಿಗೆ ವಿತರಿಸಿದೆ. ದಲೈಲಾಮಾ ಪಿಎಮ್ ಕೇರ್ಸ್​ಗೆ ದೇಣಿಗೆ ಕೊಟ್ಟು ಭಾರತೀಯರ ಆರೋಗ್ಯ ವೃದ್ಧಿಗಾಗಿ ಪ್ರಾರ್ಥಿಸುವ ಮಾತುಗಳನ್ನಾಡಿದ್ದಾರೆ. ಮುಂಬೈನ ಕಲ್ಯಾಣ್​ನಲ್ಲಿ ಶಾಸಕ ಗಣಪತ್ ಗಾಯಕವಾಡ್ ಒಂದು ಕೋಟಿ ರೂ. ನಿಧಿಯನ್ನು ಕ್ಷೇತ್ರದಲ್ಲಿ ಆಕ್ಸಿಜನ್ ಘಟಕ ಆರಂಭಿಸಲಿಕ್ಕೆಂದು ಮೀಸಲಿಟ್ಟಿದ್ದಾರೆ.

    ಇನ್ನೂ ಅಚ್ಚರಿಯ ಸಂಗತಿಯೇನು ಗೊತ್ತೇ? ಅಮೆರಿಕದಲ್ಲಿರುವ ಭಾರತೀಯರ ಪ್ರಭಾವದ ಕಾರಣದಿಂದಾಗಿ ಅಲ್ಲಿನ 40 ಬಲುದೊಡ್ಡ ಕಂಪನಿಗಳ ಸಿಇಒಗಳು ಗ್ಲೋಬಲ್ ಟಾಸ್ಕ್ ಫೋರ್ಸ್ ರಚಿಸಿಕೊಂಡು ಭಾರತಕ್ಕೆ ಹೆಗಲಾಗಿ ನಿಲ್ಲುವ ಭರವಸೆ ನೀಡಿದ್ದಾರೆ. ಹೀಗೆ ಕಂಪನಿಗಳ ಮುಖ್ಯಸ್ಥರು ಜೊತೆಗೂಡಿ ರಾಷ್ಟ್ರವೊಂದಕ್ಕೆ ಬೆಂಬಲವಾಗಿ ನಿಲ್ಲುತ್ತಿರುವುದು ಇದೇ ಮೊದಲೆಂದು ಹೇಳಲಾಗುತ್ತಿದೆ.

    ಅನೇಕ ಸ್ವಯಂಸೇವಾ ಸಂಸ್ಥೆಗಳು ಈ ಹೊತ್ತಲ್ಲಿ ಜನರೊಂದಿಗೆ ಬಲವಾಗಿ ನಿಲ್ಲಬೇಕೆಂದು ಮುಂದೆ ಬಂದಿರುವುದಲ್ಲದೆ ತಾತ್ಕಾಲಿಕ ಆಸ್ಪತ್ರೆಗಳನ್ನು ನಿರ್ವಿುಸುತ್ತಿವೆ. ರಾಮಮಂದಿರ ಟ್ರಸ್ಟ್​ನಿಂದ ಹಿಡಿದು ಕಾಶಿ ವಿಶ್ವನಾಥ ಮಂದಿರದವರೆಗೆ, ಸ್ವಾಮಿ ನಾರಾಯಣ ಪಂಥದವರಿಂದ ಹಿಡಿದು ಮುಂಬೈನ ಪವನಧಾಮ್ ಜೈನರವರೆಗೆ ಎಲ್ಲರೂ ಸಂಕಟದ ಹೊತ್ತಲ್ಲಿ ಜೊತೆಯಾಗಿಯೇ ಇದ್ದಾರೆ. ಅದೇ ವೇಳೆಗೆ ಉತ್ತರ ಪ್ರದೇಶದಲ್ಲಿ ರೆಮ್ೆಸಿವಿರ್​ಗಳನ್ನು ಬಲುದೊಡ್ಡ ಮೊತ್ತಕ್ಕೆ ಮಾರಲೆಂದು ಕೂಡಿಟ್ಟುಕೊಂಡಿದ್ದ ವೈದ್ಯ ಅಲ್ತಮಷ್ ಮತ್ತು ಅವನ ಮಿತ್ರ ಅಕ್ರಮ್ ಜಾಸಿಬ್​ಅಲಿ ಸಿಕ್ಕುಬಿದ್ದಿದ್ದಾರೆ. ಅವರ ಬಳಿ -ಠಿ; 36 ಲಕ್ಷ ನಗದು, 70ಕ್ಕೂ ಹೆಚ್ಚು ರೆಮ್ೆಸಿವಿರ್​ಗಳು ಸಿಕ್ಕಿವೆ. ಒಂದೆಡೆ ಈ ಸಂದರ್ಭದಲ್ಲಿ ದೇಶದ ಜೊತೆ ಬಲವಾಗಿ ನಿಲ್ಲಬೇಕೆಂದು ಪಣತೊಟ್ಟಿರುವವರು ಕೆಲವರಾದರೆ ಮತ್ತೊಂದೆಡೆ ಈ ಅವಕಾಶವನ್ನು ಬಳಸಿಕೊಂಡು ಸಿರಿವಂತರಾಗಿಬಿಡಬೇಕೆಂಬ ಧಾವಂತದ ಮಂದಿ! ಇವೆಲ್ಲದರ ನಡುವೆ ಭಾರತ ಎದುರಿಸಬೇಕಾದ್ದು ಸಾಕಷ್ಟಿದೆ. ನೆಗೆಟಿವ್ ಸುದ್ದಿಗಳು ಹೃದಯವನ್ನು ಅಲುಗಾಡಿಸುತ್ತವೆ. ಹೆದರಿಕೆ ರೋಗ ಬಲಿಯಲು ಸೂಕ್ತ ವಾತಾವರಣ ನಿರ್ವಿುಸಿಕೊಡುತ್ತದೆ. ನಾವು ಧೈರ್ಯದಿಂದಿರೋಣ. ದೇಶಕ್ಕೆ ಎದುರಾಗಿರುವ ಕಂಟಕವನ್ನು ಜೊತೆಗೂಡಿ ಎದುರಿಸೋಣ; ಗೆಲ್ಲೋಣ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts