More

    ಕಿಂಗ್ ವಿರಾಟ್ ಕೊಹ್ಲಿಗೆ ಶತಕದ ಬರ, ಸತತ 46 ಇನಿಂಗ್ಸ್‌ಗಳಿಂದ ಮೂರಂಕಿ ದಾಟದ ಭಾರತ ತಂಡದ ನಾಯಕ

    ಬೆಂಗಳೂರು: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್ ಎಂಬುದರಲ್ಲಿ ಎರಡು ಮಾತಿಲ್ಲ. ಅದರಲ್ಲೂ ಚೇಸಿಂಗ್ ಕಿಂಗ್ ಕೊಹ್ಲಿ ಎಂದೇ ಕರೆಸಿಕೊಳ್ಳುವ ವಿರಾಟ್ ಕೊಹ್ಲಿ, ಸಚಿನ್ ತೆಂಡುಲ್ಕರ್ ಬಳಿಕ ಶತಕಗಳ ಶತಕ ಸಿಡಿಸುವ ಅವಕಾಶ ಹೊಂದಿದ್ದಾರೆ. ತಂಡಕ್ಕೆ ಪರಿಸ್ಥಿತಿಗೆ ತಕ್ಕಂತೆ ಆಡುವ ಮನೋಭಾವ ಹೊಂದಿರುವ ಕೊಹ್ಲಿಗೆ ಇತ್ತೀಚೆಗೆ ಶತಕದ ಬರ ಕಾಡುತ್ತಿದೆ. ಶತಕ ಸಿಡಿಸಿದರಷ್ಟೇ ಶ್ರೇಷ್ಠ ಬ್ಯಾಟ್ಸ್‌ಮನ್ ಎನ್ನಲು ಸಾಧ್ಯವಿಲ್ಲ. ಆದರೆ, ಸುದೀರ್ಘವಾಗಿ ಇನಿಂಗ್ಸ್ ಕಟ್ಟುವ ವಿಚಾರದ ಬಂದಾಗ ಮೂರಂಕಿ ಮೊತ್ತದ ಆಟ ಕೂಡ ಮಾನದಂಡವಾಗುತ್ತದೆ. ಮೂರು ಮಾದರಿಯಲ್ಲೂ ಸರಾಸರಿ 50ರಂತೆ ಕೊಹ್ಲಿ ರನ್ ಗಳಿಸುತ್ತಿದ್ದರೂ ಶತಕದ ಸಂಭ್ರಮ ಮಾತ್ರ ಬರುತ್ತಿಲ್ಲ.

    ಇದನ್ನೂ ಓದಿ: ಅಕ್ಟೋಬರ್ 17 ರಿಂದ ಯುಎಇಯಲ್ಲಿ ಟಿ20 ವಿಶ್ವಕಪ್ ಟೂರ್ನಿ

    ಶ್ರೇಷ್ಠರಿಂದ ಶ್ರೇಷ್ಠ ನಿರ್ವಹಣೆಯನ್ನೇ ಅಪೇಕ್ಷಿಸುವ ಅಭಿಮಾನಿಗಳು ಕೊಹ್ಲಿಯಂಥ ಕ್ರಿಕೆಟಿಗನಿಂದ ಶತಕ ನಿರೀಕ್ಷಿಸುವುದು ಸಾಮಾನ್ಯ. ಏಕದಿನ ಕ್ರಿಕೆಟ್‌ನಲ್ಲಿ ಈಗಾಗಲೇ 43 ಶತಕ ಸಿಡಿಸಿರುವ ಕೊಹ್ಲಿ, ದಿಗ್ಗಜ ಸಚಿನ್ ತೆಂಡುಲ್ಕರ್ ದಾಖಲೆ ಸರಿಗಟ್ಟಲು ಕೇವಲ 6 ಶತಕಗಳಷ್ಟೇ ಬಾಕಿ ಉಳಿದಿವೆ. 2019ರ ನವೆಂಬರ್‌ನಲ್ಲಿ ಕಡೇ ಬಾರಿಗೆ ಶತಕ ಬಾರಿಸಿರುವ ಕೊಹ್ಲಿ, ಅಲ್ಲಿಂದ ಆಡಿರುವ 46 ಅಂತಾರಾಷ್ಟ್ರೀಯ ಇನಿಂಗ್ಸ್‌ಗಳಲ್ಲಿ ಶತಕ ಬಾರಿಸಿಲ್ಲ. ಕೋಲ್ಕತದಲ್ಲಿ ನಡೆದ ಭಾರತದ ಮೊದಲ ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶದ ಎದುರು ಕೊಹ್ಲಿ ಶತಕ (136ರನ್) ಬಾರಿಸಿದ್ದರು. ಈ ಬಳಿಕ ಕೊಹ್ಲಿ 17 ಅರ್ಧಶತಕಗಳನ್ನು ಬಾರಿಸಿದರೂ ಒಮ್ಮೆಯೂ ಮೂರಂಕಿಯಾಗಿ ಪರಿವರ್ತಿಸಿಲ್ಲ. ಕೊಹ್ಲಿ ಇದುವರೆಗೂ 70 ಶತಕ (43 ಏಕದಿನ, 27 ಟೆಸ್ಟ್) ಸಿಡಿಸಿದ್ದಾರೆ.

    ಇದನ್ನೂ ಓದಿ: ಚೊಚ್ಚಲ ಏಕದಿನ ವಿಶ್ವಕಪ್ ಟ್ರೋಫಿಗೆ 38ರ ಸಂಭ್ರಮ

    * 46 ಇನಿಂಗ್ಸ್, 1703 ರನ್
    2019ರ ನವೆಂಬರ್‌ನಿಂದ 46 ಇನಿಂಗ್ಸ್ ಆಡಿರುವ ಕೊಹ್ಲಿ, ಸ್ಟ್ರೈಕ್‌ರೇಟ್ 86ರಂತೆ, ಸರಾಸರಿ 42.57ರಂತೆ 1703 ರನ್ ಬಾರಿಸಿದ್ದಾರೆ. ಟೆಸ್ಟ್‌ನಲ್ಲಿ 345 ರನ್, ಏಕದಿನ ಕ್ರಿಕೆಟ್‌ನಲ್ಲಿ 649 ರನ್, ಟಿ20 ಕ್ರಿಕೆಟ್‌ನಲ್ಲಿ 709 ರನ್ ಬಾರಿಸಿದ್ದಾರೆ. ಇದರಲ್ಲಿ 38 ಸಿಕ್ಸರ್‌ಗಳು ಒಳಗೊಂಡಿವೆ. ಓರ್ವ ಬ್ಯಾಟ್ಸ್‌ಮನ್ ಆಗಿ ಇದು ಉತ್ತಮ ಸಾಧನೆಯೇ ಆದರೂ ಕೊಹ್ಲಿಯಂಥ ಸ್ಟಾರ್ ಕ್ರಿಕೆಟಿಗನಿಂದ ಶತಕ ನಿರೀಕ್ಷಿಸುವುದು ಸಾಮಾನ್ಯ.
    ವಿರಾಟ್ ಕೊಹ್ಲಿ 2019ರ ಆಗಸ್ಟ್ 14ರಂದು ಏಕದಿನ ಕ್ರಿಕೆಟ್‌ನಲ್ಲಿ ಕಡೇ ಬಾರಿಗೆ ಶತಕ ಸಿಡಿಸಿದ್ದರು. ವೆಸ್ಟ್ ಇಂಡೀಸ್ ಎದುರು ಪೋರ್ಟ್ ಆ್ ಸ್ಪೇನ್‌ನಲ್ಲಿ ಅಜೇಯ 114 ರನ್ ಬಾರಿಸಿದ್ದರು. ಅಲ್ಲಿಂದ ಆಡಿದ 15 ಏಕದಿನ ಇನಿಂಗ್ಸ್‌ಗಳಲ್ಲಿ ಕೊಹ್ಲಿ ಶತಕರಹಿತವಾಗಿಯೇ ಉಳಿದಿದ್ದಾರೆ. ಆದರೆ, 43.26 ಉತ್ತಮ ಸರಾಸರಿಯನ್ನೇ ಹೊಂದಿದ್ದಾರೆ. ಆಸ್ಟ್ರೇಲಿಯಾ ಎದುರು ಎರಡು ಬಾರಿ 89 ರನ್ ಗಳಿಸಿ, ಶತಕ ತಪ್ಪಿಸಿಕೊಂಡಿದ್ದಾರೆ. ಇನ್ನು ಟಿ20 ಕ್ರಿಕೆಟ್‌ನಲ್ಲಿ ಕೊಹ್ಲಿಗಿನ್ನೂ ಅಂತಾರಾಷ್ಟ್ರೀಯ ಶತಕ ಒಲಿದಿಲ್ಲ. 2019ರ ನವೆಂಬರ್‌ನಿಂದ ಈಚೆಗೆ 18 ಟಿ20 ಆಡಿದ್ದು, 2019ರ ಡಿಸೆಂಬರ್‌ನಲ್ಲಿ ಹೈದರಾಬಾದ್‌ನಲ್ಲಿ ವೆಸ್ಟ್ ಇಂಡೀಸ್ ಎದುರು ಅಜೇಯ 94ರನ್ ಗಳಿಸಿರುವುದೇ ಅಧಿಕ ಮೊತ್ತವಾಗಿದೆ.

    * ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್ ಸತತ 59 ಇನಿಂಗ್ಸ್‌ಗಳಲ್ಲಿ ಶತಕ ಸಿಡಿಸಿರಲಿಲ್ಲ. 2010ರ ಫೆಬ್ರವರಿ 5 ರಿಂದ 2013ರ ಆಗಸ್ಟ್ 9ರವರೆಗೂ ಶತಕ ಬಂದಿರಲಿಲ್ಲ. ಇಂಗ್ಲೆಂಡ್‌ನ ಜೋ ರೂಟ್ ಸತತ 28 ಇನಿಂಗ್ಸ್‌ಗಳಲ್ಲಿ ಶತಕ ಸಿಡಿಸಿರಲಿಲ್ಲ. ಜತೆಗೆ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ 2 ಬಾರಿ ಸತತ 23 ಇನಿಂಗ್ಸ್‌ಗಳಲ್ಲಿ ಮೂರಂಕಿ ಮೊತ್ತ ದಾಟಿರಲಿಲ್ಲ.

    ಶತಕ ವಿಲ್ಲದ ಕೊಹ್ಲಿ ಇನಿಂಗ್ಸ್
    ಟೆಸ್ಟ್ ಪಂದ್ಯ: 8, ಇನಿಂಗ್ಸ್ : 14, ರನ್: 345, ಗರಿಷ್ಠ ಮೊತ್ತ: 74
    ಏಕದಿನ ಪಂದ್ಯ: 15, ಇನಿಂಗ್ಸ್: 15, ರನ್: 649, ಗರಿಷ್ಠ ಮೊತ್ತ: 89
    ಟಿ20 ಪಂದ್ಯ: 18, ಇನಿಂಗ್ಸ್: 17, ರನ್: 709, ಗರಿಷ್ಠ ಮೊತ್ತ: 94*
    (2019ರ ನವೆಂಬರ್‌ನಿಂದ ಈಚೆಗೆ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts