More

    ಅಸ್ಸಾಂ, ಬಿಹಾರ ಪ್ರವಾಹ ಸಂತ್ರಸ್ತರಿಗೆ ಕೊಹ್ಲಿ-ಅನುಷ್ಕಾ ದಂಪತಿ ಸಹಾಯಹಸ್ತ

    ಮುಂಬೈ: ಟೀಮ್​ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಮತ್ತು ಬಾಲಿವುಡ್​ ನಟಿ ಅನುಷ್ಕಾ ಶರ್ಮ ದಂಪತಿ ಅಸ್ಸಾಂ ಮತ್ತು ಬಿಹಾರದಲ್ಲಿ ಪ್ರವಾಹದಿಂದ ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವ ಸಂಕಲ್ಪ ಮಾಡಿದ್ದಾರೆ.

    ಅಸ್ಸಾಂನ 21 ಜಿಲ್ಲೆಗಳಲ್ಲಿ 16 ಸಾವಿರಕ್ಕೂ ಅಧಿಕ ಜನರು ಪ್ರವಾಹದಿಂದಾಗಿ ಸಂತ್ರಸ್ತರಾಗಿದ್ದರೆ, 100ಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಬಿಹಾರದಲ್ಲೂ 20 ಲಕ್ಷಕ್ಕೂ ಅಧಿಕ ಜನರು ಪ್ರವಾಹದಿಂದಾಗಿ ಸಂತ್ರಸ್ತರಾಗಿದ್ದು, ಹಲವು ಜನರು ಬಲಿಯಾಗಿದ್ದಾರೆ. ಅಸ್ಸಾಂ ಮತ್ತು ಬಿಹಾರದ ಜನರ ಕಷ್ಟಕ್ಕೆ ಸ್ಪಂದಿಸಿರುವ ವಿರೂಷ್ಕಾ ಖ್ಯಾತಿಯ ಕೊಹ್ಲಿ-ಅನುಷ್ಕಾ ದಂಪತಿ, ಪ್ರವಾಹ ಸಂತ್ರಸ್ತರಿಗೆ ನೆರವಾಗುತ್ತಿರುವ ಸಂಘಟನೆಗಳಿಗೆ ತಮ್ಮಿಂದ ಸಾಧ್ಯವಾಗುವ ಎಲ್ಲ ಸಹಾಯಗಳನ್ನು ಮಾಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಗುರುವಾರ ಹೇಳಿಕೊಂಡಿದ್ದಾರೆ.

    ‘ದೇಶದ ಜನರು ಕರೊನಾದಿಂದಾಗಿ ಸಂಕಷ್ಟದಲ್ಲಿರುವ ನಡುವೆ, ಅಸ್ಸಾಂ ಮತ್ತು ಬಿಹಾರದ ಜನರು ಪ್ರವಾಹದಿಂದಾಗಿ ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದಾರೆ. ಹಲವಾರು ಜನರ ಜೀವ, ಜೀವನಕ್ಕೆ ಪ್ರವಾಹ ತೊಂದರೆ ನೀಡಿದೆ. ಅಸ್ಸಾಂ ಮತ್ತು ಬಿಹಾರ ಜನರಿಗಾಗಿ ಪ್ರಾರ್ಥನೆಗಳನ್ನು ಮುಂದುವರಿಸುವ ನಡುವೆ ನಾನು ಮತ್ತು ಅನುಷ್ಕಾ, ಜನರಿಗೆ ಎಲ್ಲ ರೀತಿಯ ಅಗತ್ಯ ನೆರವು ಒದಗಿಸುವ ಸಂಕಲ್ಪ ಮಾಡುತ್ತಿದ್ದೇವೆ. ಪ್ರವಾಹ ಸಂತ್ರಸ್ತರಿಗೆ ಉತ್ತಮ ರೀತಿಯಲ್ಲಿ ನೆರವಾಗುತ್ತಿರುವ 3 ಸಂಘಟನೆಗಳಿಗೆ ನಾವು ಸಹಾಯಹಸ್ತ ನೀಡಿದ್ದು, ಅದರ ಎಲ್ಲ ಕೆಲಸಗಳಿಗೆ ನೆರವು ಒದಗಿಸಲಿದ್ದೇವೆ’ ಎಂದು ವಿರಾಟ್​ ಕೊಹ್ಲಿ ಟ್ವೀಟಿಸಿದ್ದಾರೆ.

    ಇದನ್ನೂ ಓದಿ: ರಫೇಲ್​ ಆಗಮನಕ್ಕೆ ಕ್ರೀಡಾತಾರೆಯರಿಂದ ಸ್ವಾಗತ, ಸಂಭ್ರಮ

    ಈ ಮುನ್ನ ಇಂಗ್ಲೆಂಡ್​ ಮಾಜಿ ಬ್ಯಾಟ್ಸ್​ಮನ್​ ಕೆವಿನ್​ ಪೀಟರ್ಸೆನ್​ ಕೂಡ ಅಸ್ಸಾಂ ಮತ್ತು ಬಿಹಾರ ಜನರ ಬಗ್ಗೆ ಅನುಕಂಪ ವ್ಯಕ್ತಪಡಿಸಿದ್ದರು. ಕಳೆದ ಮಾರ್ಚ್​ನಲ್ಲಿ ಅಸ್ಸಾಂ ಪ್ರವಾಸದ ವೇಳೆ ನಾನು ಅಲ್ಲಿ ಸುಂದರ ಜನರನ್ನು ಭೇಟಿಯಾಗಿದ್ದೆ. ಆದರೆ ಈಗ ಅಲ್ಲಿ ಪ್ರವಾಹದಿಂದಾಗಿ ಜನರು ಸಂಕಷ್ಟದಲ್ಲಿರುವುದನ್ನು ಕೇಳಿ ಬೇಸರವಾಗುತ್ತಿದೆ. ದಯವಿಟ್ಟು ಸುರಕ್ಷಿತವಾಗಿರಿ ಎಂದು ಪೀಟರ್ಸೆನ್​ ಟ್ವೀಟಿಸಿದ್ದಾರೆ. ಭಾರತ ಫುಟ್​ಬಾಲ್​ ತಂಡದ ನಾಯಕ ಸುನೀಲ್​ ಛೇಟ್ರಿ ಕೂಡ ಪ್ರವಾಹದಿಂದ ಸಂಕಷ್ಟದಲ್ಲಿರುವ ಈಶಾನ್ಯ ರಾಜ್ಯದ ಕಷ್ಟಕ್ಕೆ ಸ್ಪಂದಿಸುವಂತೆ ಮನವಿ ಮಾಡಿಕೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts