More

    ಕೊಹ್ಲಿ-ರೋಹಿತ್ ಈಗ ಆಪ್ತಮಿತ್ರರು! ಬಯೋಬಬಲ್‌ನಲ್ಲಿ ಬಗೆಹರಿದ ಭಿನ್ನಾಭಿಪ್ರಾಯ

    ನವದೆಹಲಿ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮ ನಡುವೆ ಭಿನ್ನಾಭಿಪ್ರಾಯಗಳಿವೆ ಎಂಬ ಮಾತು ಕಳೆದ ಹಲವು ಸಮಯದಿಂದ ಕೇಳಿಬರುತ್ತಲೇ ಇದ್ದವು. ಆದರೆ ಇದೀಗ ಇಂಗ್ಲೆಂಡ್ ವಿರುದ್ಧದ ಸರಣಿಯ ವೇಳೆ ಇಬ್ಬರ ನಡುವಿನ ಭಿನ್ನಾಭಿಪ್ರಾಯಗಳೂ ದೂರವಾಗಿದ್ದು, ಮತ್ತೆ ಆಪ್ತಮಿತ್ರರಾಗಿದ್ದಾರೆ. ಇದಕ್ಕೆ ಕಾರಣವಾಗಿದ್ದು ಬಯೋಬಬಲ್ ವಾತಾವರಣದಲ್ಲಿ ಇಬ್ಬರ ನಡುವೆ ನಡೆದಿರುವ ಮಾತುಕತೆ ಮತ್ತು ಕೋಚ್ ರವಿಶಾಸ್ತ್ರಿ ಅವರ ಮಾರ್ಗದರ್ಶನ.

    ಕೊಹ್ಲಿ ಮತ್ತು ರೋಹಿತ್ ನಡುವೆ ಇತ್ತೀಚೆಗಿನ ದಿನಗಳಲ್ಲಿ ಅತ್ಯುತ್ತಮವಾದ ಆತ್ಮೀಯತೆ ಕಾಣಿಸಿದೆ. ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ವೇಳೆ ಇಬ್ಬರೂ ಹೆಚ್ಚಿನ ಸಮಯ ಜತೆಯಲ್ಲೇ ಇದ್ದುದನ್ನು ಗಮನಿಸಿದರೆ ಇದು ಗೊತ್ತಾಗುತ್ತದೆ. ತಮ್ಮಿಬ್ಬರ ಆಟ, ತಂಡ ಮತ್ತು ಅವರ ಜವಾಬ್ದಾರಿಗಳು ಮತ್ತು ಮುಂದಿನ ಸವಾಲಿನ ಬಗ್ಗೆಯೂ ಅವರಿಬ್ಬರ ನಡುವೆ ಸಾಕಷ್ಟು ಮಾತುಕತೆಗಳು ನಡೆದಿವೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ಈ ಸಲ ಆರ್‌ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿಗೆ ಹೊಸ ಬ್ಯಾಟಿಂಗ್ ಕ್ರಮಾಂಕ!

    ಬಯೋಬಬಲ್‌ನಲ್ಲಿ ಆಟಗಾರರು ಹೊರಗಡೆ ಸುತ್ತಾಡುವಂತಿರಲಿಲ್ಲ. ಈ ನಿರ್ಬಂಧಗಳು ತಂಡದ ಮೇಲೆ ಸಕಾರಾತ್ಮಕ ಪರಿಣಾಮಗಳನ್ನೇ ಬೀರಿವೆ. ಕೊಹ್ಲಿ-ರೋಹಿತ್ ನಡುವೆ ಮತ್ತೆ ಮೂಡಿರುವ ಗೆಳೆತನದಿಂದಾಗಿ ಡ್ರೆಸ್ಸಿಂಗ್ ರೂಂನಲ್ಲೂ ಈಗ ಹಿಂದಿಗಿಂತ ಹೆಚ್ಚು ಹರ್ಷದಾಯಕ ವಾತಾವರಣವಿದೆ ಎಂದು ಹೇಳಲಾಗುತ್ತಿದೆ.

    ಇಂಗ್ಲೆಂಡ್ ವಿರುದ್ಧದ ತವರಿನ ಸರಣಿಯ ಬಯೋಬಬಲ್‌ನಲ್ಲಿ ಕೊಹ್ಲಿ-ರೋಹಿತ್‌ಗೆ ಜತೆಯಾಗಿ ಕುಳಿತು ಪರಸ್ಪರ ಮಾತುಕತೆ ನಡೆಸಲು ಸಾಕಷ್ಟು ಸಮಯಾವಕಾಶವೂ ಲಭಿಸಿತ್ತು. ಇದು ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ತಮ್ಮ ಬಗೆಗಿನ ಎಲ್ಲ ರೀತಿಯ ಗಾಸಿಪ್, ಅನುಮಾನಗಳನ್ನು ಬಗೆಹರಿಸಿಕೊಳ್ಳಲು ನೆರವಾಯಿತು. ಊಹಾಪೋಹಗಳೆಲ್ಲ ಇಬ್ಬರ ನಡುವೆ ಸಾಕಷ್ಟು ಬಿರುಕು ಮೂಡಿಸಿದ್ದವು. ಎಲ್ಲ ವೃತ್ತಿಪರರಂತೆ ಕೊಹ್ಲಿ-ರೋಹಿತ್ ಕೂಡ ಕೆಲ ಅಭಿಪ್ರಾಯಭೇದಗಳನ್ನು ಹೊಂದಿದ್ದರು. ಆದರೆ ತೀರ ಇತ್ತೀಚೆಗಿನವರೆಗೂ ಅವರು ಈ ಬಗ್ಗೆ ಪರಸ್ಪರ ಮಾತನಾಡಿರಲಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

    ಇಬ್ಬರೂ ತಂಡದ ಅತ್ಯಂತ ಪ್ರಮುಖ ಸದಸ್ಯರು ಎಂಬುದನ್ನು ಮನವರಿಕೆ ಮಾಡಿಕೊಂಡಿದ್ದಾರೆ. ಒಂದು ವೇಳೆ ಅಭಿಪ್ರಾಯಭೇದಗಳು ಬಂದರೆ ನಾವೇ ಕುಳಿತು ಪರಸ್ಪರ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳೋಣ. ಹೊರಗಿನವರ ಗಾಸಿಪ್‌ಗಳಿಗೆ ಅವಕಾಶ ನಿಡುವುದು ಬೇಡ ಎಂಬ ನಿಲುವನ್ನೂ ಕೊಹ್ಲಿ-ರೋಹಿತ್ ಕೈಗೊಂಡಿದ್ದಾರೆ ಎನ್ನಲಾಗಿದೆ. ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯ ನಿರ್ಣಾಯಕ 5ನೇ ಪಂದ್ಯದಲ್ಲಿ ಕೊಹ್ಲಿ-ರೋಹಿತ್ ಇಬ್ಬರೂ ಜತೆಯಾಗಿ ಮೊದಲ ಬಾರಿ ಇನಿಂಗ್ಸ್ ಆರಂಭಿಸಿದ್ದರು. 94 ರನ್‌ಗಳ ಈ ಜತೆಯಾಟದ ವೇಳೆ ಇಬ್ಬರ ನಡುವೆ ಉತ್ತಮ ಹೊಂದಾಣಿಕೆಯೂ ಕಂಡುಬಂದಿತ್ತು.

    ಗಾಸಿಪ್‌ಗಳಿಗೆ ಬ್ರೇಕ್
    ಹೊರಗಿನವರ ಗಾಸಿಪ್‌ಗಳು ತಂಡದ ಮೇಲೆ ಪರಿಣಾಮ ಬೀರುವುದನ್ನು ತಡೆಗಟ್ಟುವ ಸಲುವಾಗಿ ಕೊಹ್ಲಿ ಮತ್ತು ರೋಹಿತ್ ಈಗ ಸಾರ್ವಜನಿಕವಾಗಿಯೇ ಪರಸ್ಪರ ಹೆಚ್ಚಿನ ಮಾತುಕತೆ ನಡೆಸುತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ವೇಳೆ ಪಂದ್ಯದ ನಂತರ ಸಮಾರಂಭಗಳಲ್ಲಿ ಇಬ್ಬರೂ ಜತೆಯಾಗಿ ಇರುತ್ತಿದ್ದರು. ಹಿಂದಿಗಿಂತ ಹೆಚ್ಚಿನ ಚಿತ್ರಗಳಲ್ಲಿ ಈಗ ಇಬ್ಬರನ್ನು ಜತೆಯಾಗಿ ನೋಡಬಹುದು. ಪಂದ್ಯದ ವೇಳೆಯೂ ಇಬ್ಬರೂ ಕಾರ್ಯತಂತ್ರಗಳ ಬಗ್ಗೆ ಪರಸ್ಪರ ಚರ್ಚಿಸುತ್ತಿದ್ದುದು ಕಂಡುಬಂದಿತ್ತು. ಇವು ಹಿಂದೆಯೂ ನಡೆಯುತ್ತಿದ್ದವು. ಆದರೆ ಈ ಬಾರಿ ಎಲ್ಲರ ಗಮನಕ್ಕೆ ಬರುವ ರೀತಿಯಲ್ಲೇ ಇಬ್ಬರೂ ಪರಸ್ಪರ ಮಾತನಾಡುತ್ತಿದ್ದರು. ಈ ಮೂಲಕ ಹೊರಗಿನವರ ಗಾಸಿಪ್‌ಗಳಿಗೆ ತೆರೆ ಎಳೆಯುವುದು ಅವರ ಉದ್ದೇಶವಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

    2019ರ ವಿಶ್ವಕಪ್‌ನಿಂದ ಒಡಕು?
    ಕೊಹ್ಲಿ-ರೋಹಿತ್ ನಡುವಿನ ಭಿನ್ನಾಭಿಪ್ರಾಯದ ಬಗ್ಗೆ 2019ರ ಏಕದಿನ ವಿಶ್ವಕಪ್‌ನಿಂದಲೂ ವಿವಿಧ ಊಹಾಪೋಹಗಳು ಹರಡಿದ್ದವು. ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಸೋಲಿನ ಬಳಿಕ ಇದರ ಚರ್ಚೆ ಹೆಚ್ಚಾಗಿತ್ತು. ಈ ನಡುವೆ ಸೀಮಿತ ಓವರ್ ತಂಡದ ನಾಯಕತ್ವವನ್ನು ರೋಹಿತ್ ಶರ್ಮಗೆ ಒಪ್ಪಿಸಬೇಕೆಂಬ ಮಾತುಗಳು ಕೇಳಿಬಂದಿದ್ದು, ಇಬ್ಬರ ನಡುವಿನ ಅಂತರವನ್ನು ಹೆಚ್ಚಿಸಿತ್ತು ಎನ್ನಲಾಗಿದೆ. ಐಪಿಎಲ್‌ನಲ್ಲೂ ರೋಹಿತ್ ಮುಂಬೈ ಇಂಡಿಯನ್ಸ್ ನಾಯಕರಾಗಿ ಯಶಸ್ಸು ಕಾಣುತ್ತಿದ್ದರೆ, ಕೊಹ್ಲಿ ಆರ್‌ಸಿಬಿ ನಾಯಕರಾಗಿ ವೈಫಲ್ಯ ಕಂಡಿದ್ದು ಕೂಡ ಇಬ್ಬರ ಅಭಿಮಾನಿಗಳಲ್ಲೂ ಒಡಕು ಮೂಡಿಸಿತ್ತು. ಕಳೆದ ವರ್ಷ ಐಪಿಎಲ್ ಬಳಿಕ ರೋಹಿತ್ ಗಾಯದಿಂದಾಗಿ ಭಾರತ ತಂಡದ ಜತೆಗೆ ಆಸೀಸ್ ಪ್ರವಾಸಕ್ಕೆ ತೆರಳಿರಲಿಲ್ಲ. ಪ್ರವಾಸದ ಮೊದಲ ಪಂದ್ಯಕ್ಕೆ ಮುನ್ನ ಸುದ್ದಿಗೋಷ್ಠಿಯಲ್ಲಿ ಕೊಹ್ಲಿ, ರೋಹಿತ್ ಗಾಯದ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಮತ್ತಷ್ಟು ಗಾಸಿಪ್‌ಗಳಿಗೆ ಕಾರಣವಾಗಿದ್ದರು.

    ಕ್ರೀಡೆಯಲ್ಲೂ ಮಿಂಚುತ್ತಿದ್ದಾರೆ ಈ ಗ್ಲಾಮರ್ ನಟಿ, ಸರ್ಫಿಂಗ್‌ನಲ್ಲಿ ಚಿನ್ನದ ಪದಕ ಸಾಧನೆ!

    ಬಯೋಬಬಲ್‌ನಲ್ಲಿ ಭಾರತ ಬಲಿಷ್ಠ; ವಿಂಡೀಸ್, ಆಸೀಸ್ ಪ್ರಾಬಲ್ಯ ನೆನಪಿಸಿದ ಕೊಹ್ಲಿ ಪಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts