More

    ಅಶಕ್ತ ಕುಟುಂಬಕ್ಕೆ ನೆರವು ಮಾದರಿ

    ವಿಜಯವಾಣಿ ಸುದ್ದಿಜಾಲ ಬೈಂದೂರು

    ಕಲಾವಿದರನ್ನು ಸನ್ಮಾನಿಸಿ, ಅಶಕ್ತ ಕುಟುಂಬಕ್ಕೆ ನೆರವು ನೀಡುವುದು ಮಾದರಿ ಕಾರ್ಯ. ಇಂತಹ ಕಾರ್ಯಕ್ರಮಗಳು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಬೇಕು ಎಂದು ರಾಘವೇಂದ್ರ ಮೆಂಡನ್ ಕೋಣ್ಕಿ ಹೇಳಿದರು.

    ತಾಲೂಕಿನ ನಾಡ ಗ್ರಾಪಂ ವ್ಯಾಪ್ತಿಯ ಕೋಣ್ಕಿ ಕೂಡ್ಲಿಹಿತ್ಲುವಿನಲ್ಲಿ ಯಕ್ಷಪ್ರೇಮಿ ರಶ್ಮಿತಾ ಸಂಜಯ್ ಮೊವಾಡಿ ಪ್ರಾಯೋಜಕತ್ವದಲ್ಲಿ ಕೂಡ್ಗಿಹಿತ್ಲು ಯಕ್ಷೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಕೂಡ್ಗಿಹಿತ್ಲು ಯಕ್ಷೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಆಯೋಜನೆ ಮಾಡಲಾಗಿದ್ದು, ಊರಿನಲ್ಲಿ ಒಂದು ರೀತಿಯ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಇದು ಮಾದರಿ ಯಕ್ಷಗಾನ ಕಾರ್ಯಕ್ರಮ ಎಂದರು.

    ಮತದಾನ ಜಾಗೃತಿ ಕುರಿತು ವಿಶೇಷ ನಾಟ್ಯ ಪ್ರದರ್ಶನಕ್ಕೆ ಮತದಾನ ಜಾಗೃತಿ ಅಭಿಯಾನದ ಹಾಡನ್ನು ಹೇಳಿ ಪ್ರಜಾಪ್ರಭುತ್ವದ ಮಹತ್ವ ತಿಳಿಸಿದರು.
    ಇತ್ತೀಚೆಗೆ ನಿಧನರಾದ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಅವರಿಗೆ ನುಡಿನಮನ ಸಲ್ಲಿಸಲಾಯಿತು. ಕಾರ್ಯಕ್ರಮದ ಆಯೋಜಕಿ ರಶ್ಮಿತಾ ಸಂಜಯ್ ಮೊವಾಡಿ ಮಾತನಾಡಿ, ಕೂಡ್ಗಿಹಿತ್ಲು ಯಕ್ಷೋತ್ಸವ ಕಾರ್ಯಕ್ರಮ ಎನ್ನುವುದು ಬಹಳ ದಿನಗಳ ಕನಸಾಗಿದೆ. ಯುವ ಪೀಳಿಗೆಗೆ ಉತ್ತಮವಾದ ಸಂದೇಶ ನೀಡಬೇಕು ಎನ್ನುವ ದೃಷ್ಟಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

    ಉದಯಕುಮಾರ್ ಹಟ್ಟಿಯಂಗಡಿ, ಪ್ರವೀಣ ಕುಮಾರ್ ಶೆಟ್ಟಿ ಕಡಿಕೆ, ರಾಘವೇಂದ್ರ ಮೆಂಡನ್, ಭಾಸ್ಕರ ಸಿ.ಕುಂದರ್, ನಾಗರಾಜ, ಸಂದೀಪ್ ಬಸ್ರೂರು, ವಿಜಯ ಜಿ.ಮೆಂಡನ್ ಇದ್ದರು. ಆರ್.ಜೆ.ಇಂದ್ರ ಸ್ವಾಗತಿಸಿ, ವಂದಿಸಿದರು. ಸಿಗಂದೂರು ಮೇಳದವರಿಂದ ‘ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ಜರುಗಿತು.

    ಸನ್ಮಾನ, ಸಹಾಯಧನ ವಿತರಣೆ

    ಕಲಾವಿದರಾದ ಶಶಿಕಾಂತ್ ಶೆಟ್ಟಿ ಕಾರ್ಕಳ, ನಂದೀಶ್ ಮೊಗವೀರ ಜನ್ನಾಡಿ, ಭಾಗವತ ಗಜೇಂದ್ರ ಆಜ್ರಿ, ಆನಂದ ಅಂಕೋಲಾ, ನರಸಿಂಹ ಚಿಟ್ಟಾಣಿ, ಮೇಳದ ಸಿಬ್ಬಂದಿ ಗಜಾನನ ಮರಾಠಿ ಹಾಗೂ ಬೆಂಗಳೂರು ಉದ್ಯಮಿ ವರುಣ್ ಅವರನ್ನು ಸನ್ಮಾನಿಸಲಾಯಿತು. ರಶ್ಮಿತಾ ಸಂಜಯ್ ಮೊವಾಡಿ ದಂಪತಿಯನ್ನು ಸಿಗಂದೂರು ಮೇಳದ ವತಿಯಿಂದ ಗೌರವಿಸಲಾಯಿತು. ವಿಶೇಷ ಚೇತನ ಶ್ರೀರಕ್ಷಾ ಅವರಿಗೆ ಧನಸಹಾಯವನ್ನು ವಿತರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts