More

    ಸುರಕ್ಷಿತ ಸ್ಥಳದಲ್ಲೇ ಸ್ತ್ರೀಯರ ಮೇಲೆ ದೌರ್ಜನ್ಯ: ಜಡ್ಜ್ ಆತಂಕ

    ಶಿವಮೊಗ್ಗ: ಅತ್ಯಂತ ಸುರಕ್ಷಿತವಾಗಿರಬೇಕಾದ ಸ್ಥಳದಲ್ಲೇ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿರುವುದು ಕಳವಳಕಾರಿ ಸಂಗತಿ. ಇಂತಹ ಪ್ರಕರಣಗಳನ್ನು ಸೂಕ್ಷ್ಮವಾಗಿ ನಿರ್ವಹಿಸಿ ನ್ಯಾಯ ಒದಗಿಸಬೇಕಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಚಂದನ್ ಅಭಿಪ್ರಾಯಪಟ್ಟರು.

    ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ದಿ ಶಿವಮೊಗ್ಗ ಮಲ್ಟಿಪರ್ಪಸ್ ಸೋಷಿಯಲ್ ಸೊಸೈಟಿ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ -2005 ಕುರಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
    ಎಲ್ಲರನ್ನೂ ನಾವು ಸಮಾನವಾಗಿ ಕಾಣಬೇಕು. ಆದರೆ ಅನಾದಿ ಕಾಲದಿಂದ ಹೆಣ್ಣಿನ ಮೇಲೆ ದೌರ್ಜನ್ಯ ನಡೆಯುತ್ತಿದೆ. ಸಂವಿಧಾನದಲ್ಲಿ ಸಮಾನತೆಯಿದ್ದರೂ ಸಮಾಜದಲ್ಲಿ ತಾರತಮ್ಯವಿದೆ. ಕುಟುಂಬದ ಮರ್ಯಾದೆ ಕಾರಣಕ್ಕಾಗಿ ಅನೇಕ ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಿಲ್ಲ. ಸಹಿಸಲು ಸಾಧ್ಯವೇ ಇಲ್ಲ ಎಂಬ ಸಂದರ್ಭದಲ್ಲಿ ಮಾತ್ರ ಮಹಿಳೆಯರು ದೂರು ನೀಡಲು ಮುಂದಾಗುತ್ತಿದ್ದಾರೆ ಎಂದರು.
    ಯಾವುದೇ ಪ್ರಕರಣವಿದ್ದಾಗ ಅದನ್ನು ಸಮಾಧಾನದಿಂದ ಪರಿಶೀಲಿಸಿ ಪುನಶ್ಚೇತನ ಸಾಧ್ಯವಿದ್ದರೆ ಅದಕ್ಕೆ ಒತ್ತು ನೀಡಬೇಕು. ಸಮಸ್ಯೆ ಮೂಲ ಅರಿಯುವುದು ತುಂಬಾ ಮುಖ್ಯ. ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಸಾಮಾನ್ಯವಾಗಿ ಸಂತ್ರಸ್ತೆ ಹೆಂಡತಿಯೇ ಆಗಿರುತ್ತಾಳೆ. ಆದರೆ ಈ ಕಾಯ್ದೆಯ ವ್ಯಾಪ್ತಿ ತುಂಬಾ ವಿಶಾಲವಾಗಿದೆ. ಅದರಲ್ಲಿ ರಕ್ತ ಸಂಬಂಧಿಗಳು, ಲಿವಿಂಗ್ ಟುಗೆದರ್ ರೀತಿಯ ಸಂಬಂಧಗಳನ್ನೂ ಒಳಗೊಳ್ಳುತ್ತದೆ ಎಂದು ತಿಳಿಸಿದರು.
    ಎಎಸ್ಪಿ ಅನಿಲ್‌ಕುಮಾರ್ ಭೂಮರಡ್ಡಿ ಮಾತನಾಡಿ, ನಮ್ಮದು ಪುರುಷ ಪ್ರಧಾನ ಸಮಾಜ. ಭ್ರೂಣಾವಸ್ಥೆಯಿಂದಲೇ ತಾರತಮ್ಯ ಧೋರಣೆಯಿದೆ. ನಮ್ಮದು ಮುಂದುವರೆದ ಸಮಾಜವೆಂದು ಹೇಳಲು ಕೆಲವೊಮ್ಮೆ ಹಿಂಜರಿಕೆ ಆಗುತ್ತದೆ. ಮಹಿಳೆಯರು ಮತ್ತು ಮಕ್ಕಳ ಸಂರಕ್ಷಣೆ ಕುರಿತು ಕಾಯ್ದೆ ಬೇಕೆಂದು 193 ದೇಶಗಳು ಸಹಿ ಮಾಡಿವೆ. 2005ರಲ್ಲಿ ಕೌಟುಂಬಿಕ ಹಿಂಸೆಯಿಂದ ರಕ್ಷಣೆ ಸಿಗಬೇಕೆಂದು ಕಾಯ್ದೆ ಜಾರಿಯಾಗಿದ್ದರೂ ಇದರ ಬಗ್ಗೆ ಜನರಿಗೆ ತಿಳುವಳಿಕೆ ಕಡಿಮೆಯಿದೆ ಎಂದು ಬೇಸರ ವ್ಯಕ್ತಪಡಿಸಿದರು.
    ಮಹಿಳೆಯರ ತೇಜೋವಧೆ ಆಗುವಂತಹ ಸೈಬರ್ ಅಪರಾಧ ಸೇರಿದಂತೆ ಅನೇಕ ರೀತಿಯ ಅಪರಾಧಗಳು ಜರುಗುತ್ತಿರುತ್ತವೆ. ದೌರ್ಜನ್ಯಕ್ಕೀಡಾದವರು ಮಹಿಳಾ ಪೊಲೀಸ್ ಠಾಣೆ, ಇತರೆ ಠಾಣೆಗಳು ಹಾಗೂ 112ಕ್ಕೆ ಕರೆ ಮಾಡಿ ತಿಳಿಸಬಹುದು. ಆನ್‌ಲೈನ್‌ನಲ್ಲೂ ದೂರು ನಿಡಬಹುದು ಎಂದರು.
    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಬಿ.ಎಚ್.ಕೃಷ್ಣಪ್ಪ, ಎಸ್‌ಎಂಎಸ್‌ಎಸ್ ನಿರ್ದೇಶಕ ಫಾದರ್ ಕ್ಲಿಫರ್ಡ್ ರೋಶನ್ ಪಿಂಟೋ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಡಾ. ಸಂತೋಷ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಎನ್.ಚಂದ್ರಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts