More

    ಆರೋಗ್ಯದ ಮೂಲವೇ ಯೋಗ: ವಿನಯ್ ಗುರೂಜಿ

    ಶಿವಮೊಗ್ಗ: ಆರೋಗ್ಯದ ಮೂಲವೇ ಯೋಗ. ಎಲ್ಲ ರೋಗಕ್ಕೂ ಯೋಗವೇ ಮದ್ದು ಎಂದು ಗೌರಿಗದ್ದೆಯ ಅವಧೂತ ಶ್ರೀ ವಿನಯ್ ಗುರೂಜಿ ಹೇಳಿದರು.
    ಕಲ್ಲಹಳ್ಳಿಯ ಶಿವಗಂಗಾ ಯೋಗ ಕೇಂದ್ರದಲ್ಲಿ ಸೋಮವಾರ ವಿಶ್ವ ಯೋಗ ದಿನಾಚರಣೆ ಮತ್ತು ಯೋಗ ಕೇಂದ್ರದ ಕಮಾನು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅವರು, ಜನರಿಗೆ ಒಳ್ಳೆಯದನ್ನು ಬಯಸುವುದು ಕೂಡ ಯೋಗವೇ. ಯೋಗ ದಿನಾಚರಣೆ ಒಂದು ದಿನಕ್ಕೆ ಸಿಮೀತವಾಗದೆ, ಪ್ರತಿನಿತ್ಯ ನಿಮ್ಮ ಜೀವನದ ಒಂದು ಕಾಯಕವಾಗಲಿ ಎಂದು ಹೇಳಿದರು.
    ನಾನು ನನ್ನದೆಂಬ ಅಹಂಕಾರದ ವರ್ತನೆ ಬಿಡುವುದೇ ಯೋಗ. ಯೋಗದಿಂದಲೇ ಭಾರತ ಇಂದು ವಿಶ್ವಗುರುವಾಗಿದೆ. ಸಮಚಿತ್ತದಲ್ಲಿರಲು ಯೋಗ ಬಿಟ್ಟರೆ ಬೇರೆ ಹಾದಿ ಇಲ್ಲ. ಭಜನೆಯಿಂದ ಭಾವಶುದ್ಧಿ ಮತ್ತು ಯೋಗದಿಂದ ದೇಹ ಶುದ್ಧವಾಗುತ್ತದೆ ಎಂದರು.
    ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಬೇಡವಾದ್ದನ್ನು ಬಿಟ್ಟು ಬೇಕಾಗಿರುವುದನ್ನು ಮಾತ್ರ ಸ್ವೀಕರಿಸಿ. ಪಂಚೇಂದ್ರಿಯಗಳು ಉಪಕಾರದ ಜತೆಗೆ ಅಪಕಾರ ಮಾಡುತ್ತದೆ. ಅದನ್ನು ಹಿಡಿತದಲ್ಲಿಟ್ಟುಕೊಂಡು ಮನಸ್ಸನ್ನು ಯೋಗದೆಡೆಗೆ ಕೇಂದ್ರೀಕರಿಸಿದಾಗ ಸಾಧನೆ ಮಾಡಬಹುದು. ಒಂದು ಸಣ್ಣ ವೈರಾಣು ಇಡೀ ಜಗತ್ತನ್ನೇ ಹೆದರಿಸಿದೆ. ಯೋಗ, ಧ್ಯಾನ, ಪ್ರಾಣಾಯಾಮ ಮತ್ತು ಭಜನೆ ಮಾಡುವುದರಿಂದ, ನಾನು, ನನ್ನದು ಎಂಬ ಭಾವನೆ ಬಿಡುವುದರಿಂದ ಯಾವುದೇ ಶಕ್ತಿಯನ್ನು ಕೂಡ ಗೆಲ್ಲಬಹುದು ಎಂದರು.
    ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಎಂಎಲ್‌ಸಿ ಎಸ್.ರುದ್ರೇಗೌಡ, ಅಖಿಲ ಭಾರತ ವೀರಶೈವ ಮಹಾಸಭಾದ ಮಹಿಳಾ ಘಟಕದ ಅಧ್ಯಕ್ಷೆ ಬಿ.ಎಸ್.ಅರುಣಾದೇವಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ, ಸೂಡಾ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ಶಿವಗಂಗಾ ಯೋಗಕೇಂದ್ರದ ಯೋಗಾಚಾರ್ಯ ಸಿ.ವಿ.ರುದ್ರಾರಾಧ್ಯ, ಪಾಲಿಕೆ ಸದಸ್ಯೆ ಅನಿತಾ ರವಿಶಂಕರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts