More

    ವಿನಯ್​ ಗುರೂಜಿ ಬ್ಲಾಕ್​ಮೇಲ್​ ಕೇಸ್​: ತಾವು ತೋಡಿದ ಹಳ್ಳಕ್ಕೆ ತಾವೇ ಬಿದ್ದ ಬ್ಲಾಕ್​ಮೇಲರ್ಸ್!

    ಚಿಕ್ಕಮಗಳೂರು: ಹಣಕ್ಕಾಗಿ ಅವಧೂತ ವಿನಯ್​ ಗುರೂಜಿ ಅವರಿಗೆ ಬ್ಲಾಕ್​ಮೇಲ್​ ಮಾಡಿದ ಆರೋಪದಲ್ಲಿ ಸಿಸಿಬಿ ಪೊಲೀಸರಿಂದ ಬಂಧನವಾಗಿರುವ ಐವರು ಆರೋಪಿಗಳು ಸಿನಿಮೀಯ ರೀತಿಯಲ್ಲಿ ಭಾರಿ ಸಂಚು ರೂಪಿಸಿದ್ದರು ಎಂಬ ಸ್ಫೋಟಕ ಮಾಹಿತಿ ತನಿಖೆಯ ವೇಳೆ ಬಯಲಾಗಿದೆ.

    ರವಿಕುಮಾರ್, ಮುನಿರಾಜು ಅಲಿಯಾಸ್ ಟೋಕನ್ ಮುನಿರಾಜು, ಮನೋಜ್, ಮುರಳಿ ಹಾಗೂ ಮಂಜು ಬಂಧಿತ ಆರೋಪಿಗಳು. ದಲಿತ ಮಹಾಸಭಾ ಎಂಬ ಸಂಘಟನೆ ಕಟ್ಟಿಕೊಂಡಿದ್ದ ಮು‌ನಿರಾಜು, ಸಂಘಟನೆ ಹಾಗೂ ಯೂಟ್ಯೂಬ್​ ಚಾನೆಲ್​ ಹೆಸರಿನಲ್ಲಿ ಪ್ರಭಾವಿ ವ್ಯಕ್ತಿಗಳ ತೇಜೋವಧೆ ಮಾಡುವ ಮೂಲಕ ಬೆದರಿಸಿ ಹಣ ವಸೂಲಿ ದಂಧೆಗೆ ಇಳಿದಿದ್ದ.

    ವಿನಯ್​ ಗುರೂಜಿಗೂ ಬೆದರಿಕೆ ಹಾಕಿದ್ದ ಮುನಿರಾಜು ಗ್ಯಾಂಗ್​, ಗುರೂಜಿ ಭಕ್ತ ಹಾಗೂ ಉದ್ಯಮಿ ಪ್ರಶಾಂತ್​ಗೆ ಹಣದ ಬೇಡಿಕೆ ಇಟ್ಟಿತ್ತು. ಫೆಬ್ರವರಿ 18ರಿಂದಲೇ ಹಣಕ್ಕೆ ಡಿಮ್ಯಾಂಡ್ ಮಾಡಲಾಗಿತ್ತು. ಆದರೆ, ಹಣ ಕೊಡಲು ನಿರಾಕರಿಸಿದಾಗ ವಿನಯ್ ಗುರೂಜಿಯ ಬಗ್ಗೆ ಮುನಿರಾಜ್​ ಗ್ಯಾಂಗ್​ ಅಪಪ್ರಚಾರದ ವಿಡಿಯೋ ಹಾಕುತ್ತಿತ್ತು. ಹಣ ತಲುಪಿಸಿಬಿಟ್ಟರೆ, ಯಾವುದೇ ವಿಡಿಯೋ ಹಾಕುವುದಿಲ್ಲ ಎಂದಿತ್ತು.

    ಬಳಿಕ ದುಡ್ಡು ಕೊಡಲು ಒಪ್ಪಿದಾಗ ನಾಗರಬಾವಿಯ ಹಳ್ಳಿ ತಿಂಡಿ ಹೋಟೆಲ್ ಬಳಿ ಹಣ ಕೀಳಲು ಗ್ಯಾಂಗ್​ ಸಂಚು ರೂಪಿಸುತ್ತಿತ್ತು. ಕಾರುಗಳಲ್ಲೇ ಕೂತು ಆರೋಪಿಗಳಾದ ರವಿಕುಮಾರ್ ಮತ್ತು ಮುನಿರಾಜು ವ್ಯವಹಾರ ನಡೆಸುತ್ತಿದ್ದರು. ನಾಗರಬಾವಿ ಬಳಿ ಹಠಾತ್ತನೆ ಪೊಲೀಸ್ ಜೀಪ್​ ಬಂದಿದ್ದರಿಂದ ವ್ಯವಹಾರ ಮುಂದೂಡಲಾಗಿತ್ತು. ಬಳಿಕ ನಾಯಂಡಹಳ್ಳಿಯ ಬ್ರಿಡ್ಜ್ ಬಳಿ ಹಣ ತರಲು ಮುನಿರಾಜು ಹೇಳಿದ್ದ. ಅಲ್ಲಿಯೂ ಜನಸಂದಣಿ ಹೆಚ್ಚಾಗಿದ್ದರಿಂದ ಹಣದ ವ್ಯವಹಾರ ಅಲ್ಲಿಂದ ಮಾರನೇ ದಿನಕ್ಕೆ ಶಿಫ್ಟ್ ಆಗಿತ್ತು.

    ನಾಯಂಡಹಳ್ಳಿಯ ಬಳಿಕ, ಕೊನೆಯದಾಗಿ ಜೆಪಿ ನಗರಕ್ಕೆ ಶಿಫ್ಟ್​ ಆಗಿತ್ತು. ಯೋಜನೆ ಪ್ರಕಾರ ಎಲ್ಲವೂ ನಡೆಯುತ್ತಿದೆ ಎನ್ನುವುದನ್ನು ಗ್ಯಾಂಗ್​ ಖಚಿತಪಡಿಸಿಕೊಂಡು ಮತ್ತೆ ನಾಗರಬಾವಿಗೆ ಹಣ ಪಡೆಯುವ ಸ್ಥಳವನ್ನು ಸ್ಥಳಾಂತರಿಸಿತ್ತು. ಹಣ ಪಡೆಯಲು ಶುಕ್ರವಾರ ಮಧ್ಯಾಹ್ನ ಟೈಮ್ ನಿಗದಿಪಡಿಸಿದ್ದ ಗ್ಯಾಂಗ್​, ನಾಗರಬಾವಿಯ ಖಾಲಿ ಪ್ರದೇಶಕ್ಕೆ ಹಣ ತನ್ನಿ ಎಂದು ಆದೇಶ ಕೊಟ್ಟಿತ್ತು. ಹಣ ಹೀಗೆ ತರಬೇಕು ಎಂದು ಪದೇ ಪದೇ ನಿರ್ದೇಶನ ನೀಡುತ್ತಿತ್ತು.

    ಮುನಿರಾಜು ಗ್ಯಾಂಗ್​ಗೆ ಶಾಕ್​ ಕೊಟ್ಟ ಸಿಸಿಬಿ
    ಮುನಿರಾಜು ಗ್ಯಾಂಗ್​ ಬ್ಲಾಕ್​ಮೇಲ್​ ಬಗ್ಗೆ ಮೊದಲೇ ಪ್ರಶಾಂತ್​ ಸಿಸಿಬಿಗೆ ದೂರು ನೀಡಿದ್ದರು. ಆದರೆ ಈ ಬಗ್ಗೆ ಅರಿವಿರದ ಮುನಿರಾಜ್​ ಗ್ಯಾಂಗ್​ ಎಲ್ಲವೋ ಅಂದುಕೊಂಡಂತೆ ನಡೆಯುತ್ತಿದೆ ಎಂದು ಭಾವಿಸಿದ್ದರು. ಪ್ರಶಾಂತ್​ ಹಾಗೂ ಅವರ ಕಡೆಯವರೇ ಹಣ ತೆಗೆದುಕೊಂಡು ಬರುತ್ತಿದ್ದಾರೆ ಎಂದು ನಂಬಿದ್ದರು. ಆದರೆ, ಮಫ್ತಿಯಲ್ಲಿದ್ದ ಸಿಸಿಬಿ ನಿನ್ನೆ ಮಧ್ಯಾಹ್ನ ನಾಗರಬಾವಿಗೆ ಹಣ ನೀಡಲು ಹೋಗಿತ್ತು. ಈ ವೇಳೆ ಆರೋಪಿಗಳಾದ ಮುರಳಿ ಮತ್ತು ಮಂಜು ಗ್ಯಾಂಗ್​ ಪರವಾಗಿ ಹಣ ಪಡೆಯಲು ಬಂದಿದ್ದರು. ಬೈಕ್​ನಲ್ಲಿ ಬಂದಿದ್ದ ಮುರಳಿ ಹಣವಿದ್ದ ಬ್ಯಾಗ್ ಪಡೆಯುವಾಗ ಸಿಸಿಬಿ ಬಲೆಗೆ ಬಿದ್ದಿದ್ದಾನೆ. ಇದಾದ ಬಳಿಕ ಮಂಜು ಎಂಬಾತನನ್ನು ಸಿಸಿಬಿ ಬಂಧಿಸಿದೆ.

    ನಂತರ ಮುರಳಿ ಮತ್ತು ಮಂಜು ಮೂಲಕ ಮುನಿರಾಜುವನ್ನು ಸಿಸಿಬಿ ತಂಡ ಭೇಟಿ ಮಾಡಿದೆ. ಬಂಧನ ವಿಚಾರವನ್ನು ಗುಪ್ತವಾಗಿರಿಸಿ ಮುರಳಿ ಮತ್ತು ಮಂಜುನನ್ನು ಮುಂದೆ ಬಿಟ್ಟು ಡೀಲ್ ಹಣ ನೀಡುವಂತೆ ನಟಿಸಿ ಮುನಿರಾಜುವನ್ನು ಸಿಸಿಬಿ ಬಂಧಿಸಿತು. ಬಳಿಕ ರವಿಕುಮಾರ್ ಎಂಬಾತನನ್ನು ಬಂಧಿಸಲಾಯಿತು. ಮತ್ತೊಂದು ವಿಚಾರವೆಂದರೆ 30 ಲಕ್ಷ ರೂ. ವ್ಯವಹಾರದಲ್ಲಿ ಆರೋಪಿಗಳಲ್ಲಿಯೇ ಭಿನ್ನಾಬಿಪ್ರಾಯ ಮೂಡಿತ್ತು ಎಂದು ತಿಳಿದುಬಂದಿದೆ. ಯಾರಿಗೆ ಎಷ್ಟು ದುಡ್ಡು ಹಂಚಬೇಕೆಂಬುದನ್ನು ಮುನಿರಾಜು ಮತ್ತು ರವಿಕುಮಾರ್ ನಿರ್ಧಾರ ತೆಗೆದುಕೊಳ್ಳುತ್ತಿದ್ದುದರಿಂದ ಅವರಲ್ಲಿಯೇ ಒಡಕು ಮೂಡಿತ್ತು ಎನ್ನಲಾಗಿದೆ.

    ಸದ್ಯ ಐವರು ಬಂಧಿತ ಆರೋಪಿಗಳನ್ನು ಸಿಸಿಬಿ ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ಆರೋಪಿಗಳಿಗೆ ಮಾರ್ಚ್ 30ರವರೆಗೂ ಕೋರ್ಟ್​ ನ್ಯಾಯಾಂಗ ಬಂಧನ ವಿಧಿಸಿದ್ದು, ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಿಸಲಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts