More

    ಹಳ್ಳಿ ಅಖಾಡಕ್ಕೆ ‘ರಾಷ್ಟ್ರೀಯ’ ಸ್ಪರ್ಶ

    ಬೆಳಗಾವಿ: ಕೋವಿಡ್-19 ಸೋಂಕಿನ ಭೀತಿ ನಡುವೆಯೂ ಘೋಷಣೆಯಾಗಿರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪರೋಕ್ಷವಾಗಿ ರಾಷ್ಟ್ರೀಯ ಪಕ್ಷಗಳೂ ಪ್ರವೇಶಿಸಿದ್ದು ಹಳ್ಳಿಗಳಲ್ಲಿನ ‘ಹೊಂದಾಣಿಕೆ ರಾಜಕೀಯ’ದ ದಿಕ್ಕನ್ನೇ ಬದಲಿಸಿದೆ. ಅಲ್ಲದೆ, ವಾರ್ಡ್ ಮಟ್ಟದಲ್ಲಿ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿ ಅಭ್ಯರ್ಥಿಗಳ ಪಟ್ಟಿ ದುಪ್ಪಟ್ಟಾಗುತ್ತಿದೆ.

    ಪ್ರತಿ 5 ವರ್ಷಕ್ಕೊಮ್ಮೆ ಗ್ರಾಪಂಗಳಿಗೆ ನಡೆಯುವ ಚುನಾವಣೆಯಲ್ಲಿ ವಾರ್ಡ್ ಮಟ್ಟದಲ್ಲಿ ಹೊಂದಾಣಿಕೆ ಇನ್ನಿತರ ಕಾರಣಗಳಿಂದ ಅವಿರೋಧವಾಗಿ ಗ್ರಾಪಂ ಸದಸ್ಯರು ಆಯ್ಕೆಯಾಗುತ್ತಿದ್ದರು. ಅಲ್ಲದೆ, ‘ಹೊಂದಾಣಿಕೆ ರಾಜಕೀಯ’ದ ಮೂಲಕ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುತ್ತಿದ್ದರು. ಆದರೆ, ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರು, ಹಾಲಿ ಮತ್ತು ಮಾಜಿ ಶಾಸಕರು ನೇರವಾಗಿ ಅಖಾಡಕ್ಕಿಳಿದು, ತಮ್ಮ ಹುರಿಯಾಳುಗಳ ಬೆನ್ನು ತಟ್ಟತೊಡಗಿದ್ದಾರೆ. ಹೀಗಾಗಿ ಸ್ಪರ್ಧೆ ತೀವ್ರರೂಪ ಪಡೆದುಕೊಳ್ಳಲಿದ್ದು, ಚುನಾವಣೆಯಿಂದ ದೂರ ಸರಿಯುತ್ತಿದ್ದ ಗ್ರಾಮಸ್ಥರು ಸಹ ಮುಖ್ಯ ವೇದಿಕೆಯಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ.

    ಗೆಲುವಿಗಾಗಿ ಸಭೆ: ಈಗಾಗಲೇ ಬಿಜೆಪಿಯ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ನಾಯಕರು ‘ಗ್ರಾಮ ಸ್ವರಾಜ್’ ಸಮಾವೇಶ ನಡೆಸಿದೆ. ಇತ್ತ ಕಾಂಗ್ರೆಸ್ ನಾಯಕರು ಆಯಾ ವಿಧಾನಸಭಾ ಕ್ಷೇತ್ರದಲ್ಲಿ ಸಭೆ ನಡೆಸಸುತ್ತಿವೆ. ಇದರಿಂದಾಗಿ ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿ ಸುವ ಪಕ್ಷ ಬೆಂಬಲಿತ ಅಭ್ಯರ್ಥಿ ಗಳನ್ನು ಗೆಲ್ಲಿಸಲು ಆಯಾ ಸ್ಥಳೀಯ ಶಾಸಕರಿಗೆ, ಜಿಪಂ, ತಾಪಂ ಸದಸ್ಯರಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದೆ. ಅಲ್ಲದೆ, ಕೆಲವು ಕಡೆ ಅಭ್ಯರ್ಥಿ ಗಳಿಗೆ ಆರ್ಥಿಕ ನೆರವು ನೀಡಲು ಸ್ಥಳೀಯ ಮುಖಂಡರು ಮುಂದಾಗಿದ್ದು, ಆಕಾಂಕ್ಷಿಗಳ ಸಂಖ್ಯೆ ಹೆಚ್ಚಲೂ ಪ್ರಮುಖ ಕಾರಣ ಎನ್ನಲಾಗಿದೆ.

    ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳಲ್ಲಿ 90 ಜಿಪಂ ಕ್ಷೇತ್ರಗಳ ವ್ಯಾಪ್ತಿಯ 477 ಗ್ರಾಪಂಗಳ ಚುನಾವಣೆ ಉಸ್ತುವಾರಿ ನೋಡಿಕೊಳ್ಳಲು ರಾಷ್ಟ್ರೀಯ ಪಕ್ಷಗಳು ವಿಶೇಷ ವಕ್ತಾರರನ್ನು ನೇಮಿಸಿಕೊಂಡಿದೆ. ಅಲ್ಲದೆ, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಚುನಾವಣೆ ಉಸ್ತುವಾರಿಗಳನ್ನೂ ನೇಮಕ ಮಾಡಿಕೊಂಡು, ಗೆಲುವಿನ ತಂತ್ರ ರೂಪಿಸುತ್ತಿವೆ.

    50 ಸಾವಿರ ದಾಟಿದ ಆಕಾಂಕ್ಷಿತರ ಪಟ್ಟಿ: ರಾಜ್ಯದಲ್ಲಿ ಅತಿ ಹೆಚ್ಚು ಗ್ರಾಪಂ ಸದಸ್ಯ ಸ್ಥಾನ ಹೊಂದಿರುವ ಬೆಳಗಾವಿ ಜಿಲ್ಲೆಯ 477 ಗ್ರಾಪಂಗಳ 8,195 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಆಕಾಂಕ್ಷಿತರ ಸಂಖ್ಯೆ 50 ಸಾವಿರ ಗಡಿ ಸಮೀಪಿಸುತ್ತಿದೆ. ಈಗಾಗಲೇ ಬಿಜೆಪಿ ಮತ್ತು ಕಾಂಗ್ರೆಸ್ ಬೆಂಬಲಿತ ಆಕಾಂಕ್ಷಿತರು ಆಯಾ ವಾರ್ಡ್‌ಗಳಲ್ಲಿ ಮೀಸಲಾತಿ ಆಧಾರದ ಮೇಲೆ ಜಾತಿವಾರು ಮತದಾರರ ಪಟ್ಟಿ ಹಿಡಿದುಕೊಂಡು ಹಾಲಿ ಮತ್ತು ಮಾಜಿ ಶಾಸಕರ ಕಚೇರಿಗಳಲ್ಲಿ ಠಿಕಾಣಿ ಹೂಡಿದ್ದಾರೆ.

    ಮಹಿಳೆಯರಿಗೆ ಮೊದಲ ಪ್ರಾಶಸ್ತ್ಯ ನೀಡಲು ಯೋಜನೆ

    ರಾಜ್ಯದ ಗ್ರಾಪಂ ಚುನಾವಣೆಯಲ್ಲಿ 5,762 ಗ್ರಾಪಂಗಳಲ್ಲಿ ಶೇ. 75ರಷ್ಟು ಮಹಿಳಾ ಅಭ್ಯರ್ಥಿಗಳನ್ನು ಗೆಲ್ಲಿಸಲು ಬಿಜೆಪಿ ಯೋಜನೆ ರೂಪಿಸಿದೆ. ಅದಕ್ಕೆ ಪೂರಕವೆಂಬಂತೆ ಪಕ್ಷದ ಬೂತ್ ಮಟ್ಟದಿಂದ ವಾರ್ಡ್‌ವಾರು ಮಾಹಿತಿ ಪಡೆದುಕೊಂಡಿದೆ. ಹಾಗಾಗಿ ಬೆಂಬಲಿತ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಮಹಿಳೆಯರಿಗೆ ಮೊದಲ ಆದ್ಯತೆ ನೀಡಬೇಕು. ಈಗಾಗಲೇ ಸದಸ್ಯರಾಗಿರುವವರಿಗೆ ಎರಡನೇ ಬಾರಿಗೆ ಅವರನ್ನು ಬೆಂಬಲಿಸಬಾರದು. ಅವಕಾಶ ಸಿಕ್ಕರೆ ಅವಿರೋಧ ಆಯ್ಕೆಗೆ ಪ್ರಯತ್ನಿಸಬೇಕು ಎಂದು ಪಕ್ಷ ಸೂಚಿಸಿದೆ ಎಂದು ಪಕ್ಷದ ಕಾರ್ಯಕರ್ತರಾದ ಮಾರುತಿ ಮಾದರ, ಎಂ.ಎಸ್. ಪಾಟೀಲ ಮಾಹಿತಿ ನೀಡಿದ್ದಾರೆ.

    ಗ್ರಾಪಂ ಚುನಾವಣೆಯು ಪಕ್ಷದ ನೆಲೆ ಗಟ್ಟಿಗೊಳಿಸಲು ವೇದಿಕೆಯಾಗಲಿದೆ. ಹಾಗಾಗಿ ಪಕ್ಷ ಸಂಘಟನೆ ದೃಷ್ಟಿಯಿಂದ ಗ್ರಾಪಂ ಚುನಾವಣೆಯನ್ನು ಕಾಂಗ್ರೆಸ್ ಸಹ ಗಂಭೀರವಾಗಿ ಪರಿಗಣಿಸಿದೆ.
    | ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕಿ

    ಹೃದರಾಬಾದ್ ಮಾದರಿಯಲ್ಲಿ ಸ್ಥಳೀಯ ಮಟ್ಟದಲ್ಲಿ ಪಕ್ಷ ಸಂಘಟಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಪಂ ಚುನಾವಣೆಯನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ. ಈ ಬಾರಿ ಪಂಚಾಯತ್‌ಗಳಲ್ಲಿ ಶೇ. 100ಕ್ಕೆ 100 ಸ್ಥಾನಗಳು ನಮ್ಮದಾಗಲಿದೆ. ಆ ನಿಟ್ಟಿನಲ್ಲಿ ಪಕ್ಷ ಈಗಾಗಲೇ ಸಿದ್ಧತೆ ಮಾಡಿಕೊಂಡಿದೆ.
    | ಸಿ.ಟಿ. ರವಿ ಬಿಜೆಪಿ ರಾಷ್ಟೀಯ ಪ್ರಧಾನ ಕಾರ್ಯದರ್ಶಿ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts