More

    ಎವರೆಸ್ಟ್ ಆರೋಹಣ, ಶತಮಾನದ ಪಯಣ

    ಜಗತ್ತಿನ ಅತ್ಯಂತ ಎತ್ತರದ ಪರ್ವತ ಮೌಂಟ್ ಎವರೆಸ್ಟ್, ಹಿಮಾಲಯ ಪರ್ವತ ಶ್ರೇಣಿಗಳಲ್ಲಿ ನೇಪಾಳ ಹಾಗೂ ಟಿಬೆಟ್ ನಡುವೆ ಸ್ಥಿತಗೊಂಡಿದೆ. ಈ ಪರ್ವತಾರೋಹಣದ ಯತ್ನಕ್ಕಾಗಿ ಕೈಗೊಂಡ ಪ್ರಥಮ ಯಾತ್ರೆಗೆ ಈಗ ನೂರು ವರ್ಷ ಸಂದಿದೆ. ಈ ಮಹಾಯಾತ್ರೆಯು ಸೋಲಲ್ಲೂ ಗೆಲುವಿನತ್ತ ಹೆಜ್ಜೆ ಹಾಕಿದ ರೋಮಾಂಚನಕಾರಿ ಪಯಣ. ಹಿಮ ಸಮಾಧಿಗಳ ದುರಂತದ ನಡುವೆಯೂ ಸಾಹಸ ಮೆರೆದ ವಿಶಿಷ್ಟ ಕಥನ.

    | ಜೆ.ಬಿ.

    ಗಿರಿ-ಶಿಖರಗಳು ಅನಾದಿ ಕಾಲದಿಂದಲೂ ಮಾನವರನ್ನು ಸೆಳೆಯುತ್ತಲೇ ಇವೆ. ದುರ್ಗಮ ಮಾರ್ಗ ಭೇದಿಸಿ, ಜೀವ ಪಣಕ್ಕಿಟ್ಟು ಇವುಗಳನ್ನು ಏರುವ ಛಲವನ್ನು ಪರ್ವತಾರೋಹಿಗಳು ಮೊದಲಿನಿಂದಲೂ ತೋರುತ್ತಲೇ ಬಂದಿದ್ದಾರೆ. ಬರೋಬ್ಬರಿ ನೂರು ವರ್ಷಗಳ ಹಿಂದೆ, 1922ರ ಮೇ- ಜೂನ್ ತಿಂಗಳಲ್ಲಿ, ಸಮುದ್ರ ಮಟ್ಟದಿಂದ 8848.86 ಮೀಟರ್ (29,031.7 ಅಡಿ) ಎತ್ತರವಿರುವ ಮೌಂಟ್ ಎವರೆಸ್ಟ್ ಏರಲು ಮೊದಲ ಬಾರಿಗೆ ವ್ಯವಸ್ಥಿತ ಯಾತ್ರೆಯೊಂದನ್ನು ಕೈಗೊಳ್ಳಲಾಯಿತು. 1922ರ ಜೂನ್ 7ರಂದು ಬೆಳಗಿನ ಜಾವ ಬ್ರಿಟಿಷ್ ಪರ್ವತಾರೋಹಿ ಜಾರ್ಜ್ ಮಲ್ಲೊರಿ ನೇತೃತ್ವದ ತಂಡವು ಮೌಂಟ್ ಎವರೆಸ್ಟ್​ನ 21,000 ಅಡಿ ಎತ್ತರದಲ್ಲಿರುವ ನಾರ್ತ್ ಕೋಲ್ ಪ್ರದೇಶದಿಂದ ಪ್ರಯಾಣ ಆರಂಭಿಸಿತು. 1922ರಲ್ಲಿ ಬ್ರಿಟಿಷ್ ತಂಡವು ಶಿಖರದ ತುದಿ ತಲುಪಲು ಮಾಡಿದ ಮೂರನೇ ಹಾಗೂ ಅಂತಿಮ ಪ್ರಯತ್ನ ಇದಾಗಿತ್ತು. ಕೆಲವು ದಿನಗಳಿಂದ ಭಾರಿ ಹಿಮಪಾತವಾಗಿದ್ದರಿಂದ ಪರ್ವತಾರೋಹಿಗಳು ಆಗಾಗ್ಗೆ ಸೊಂಟದವರೆಗೆ ಹಿಮದಲ್ಲಿ ಮುಳುಗುತ್ತಿದ್ದರು. ಮಧ್ಯಾಹ್ನ 1.30ಕ್ಕೆ ನಾರ್ತ್ ಕೋಲ್ ಪ್ರದೇಶದಿಂದ 600 ಅಡಿ ಕೆಳಗೆ ಎವರೆಸ್ಟ್​ನಿಂದ ಚಾಂಗ್​ತ್ಸೆಗೆ ಸಂರ್ಪಸುವ ಪರ್ವತ ಶ್ರೇಣಿಯಲ್ಲಿ ಭಾರಿ ಸ್ಪೋಟದ ಶಬ್ದ ಕೇಳಿಬಂತು. ಕ್ಷಣಮಾತ್ರದಲ್ಲಿ ಇಳಿಜಾರು ಕೊಚ್ಚಿಹೋಗಿ ಬೃಹತ್ ಹಿಮಕುಸಿತ ಸಂಭವಿಸಿ, ಏಳು ಶೆರ್ಪಾಗಳನ್ನು ಬಲಿತೆಗೆದುಕೊಂಡಿತು. ಎವರೆಸ್ಟ್ ಶಿಖರಾರೋಹಣದಲ್ಲಿ ಸಂಭವಿಸಿದ ಮೊದಲ ದುರಂತಗಳಲ್ಲಿ ಇದು ಒಂದಾಯಿತು.

    1922ರ ಈ ಯಾತ್ರೆಗೆ ಪೂರ್ವಭಾವಿಯಾಗಿ 1921ರಲ್ಲಿ ಮಾರ್ಗ ಸಮೀಕ್ಷೆ ನಡೆಸಲಾಗಿತ್ತು. ಟಿಬೆಟ್ ಮೂಲಕ ಮಾರ್ಗವನ್ನು ಶೋಧಿಸಿ, ನಾರ್ತ್ ಕೋಲ್ ತಲುಪಲಾಗಿತ್ತು. ಈ ಮೂಲಕ ಪರ್ವತವನ್ನು ಪೂರ್ತಿ ಏರಲು ವೇದಿಕೆ ಸಿದ್ಧಪಡಿಸಲಾಗಿತ್ತು.

    1922ರಲ್ಲಿ ಯಾತ್ರೆ ಕೈಗೊಂಡ ತಂಡದ ನೇತೃತ್ವವನ್ನು 56 ವರ್ಷ ವಯಸ್ಸಿನ ಪರ್ವತಾರೋಹಣ ಅನುಭವಿ ಜನರಲ್ ಚಾರ್ಲ್ಸ್ ಬ್ರೂಸ್ ವಹಿಸಿದ್ದರು. ಮಲ್ಲೊರಿ, ಜಾರ್ಜ್ ಫಿಂಚ್, ಎಡ್ವರ್ಡ್ ಸ್ಟ್ರಟ್, ಎಡ್ವರ್ಡ್ ನೊರ್ಟನ್, ಹೆನ್ರಿ ಮೊರ್ಸ್​ಹೆಡ್ ಮೊದಲಾದ ಪರ್ವತಾರೋಹಿಗಳಿಂದ ಈ ತಂಡ ಕೂಡಿತ್ತು. ಸರಕು ಸಾಗಣೆಗಾಗಿ ಅನೇಕ ಶೆರ್ಪಾಗಳು ತಂಡದಲ್ಲಿದ್ದರು. ಈ ತಂಡವು ಮಾರ್ಚ್ 26 ರಂದು ಡಾರ್ಜಿಲಿಂಗ್​ನಿಂದ ಹೊರಟು ಏಪ್ರಿಲ್ 30ರಂದು ಎವರೆಸ್ಟ್​ನ ಉತ್ತರದಲ್ಲಿರುವ ರೊಂಗ್​ಬುಕ್ ಹಿಮನದಿ ತಲುಪಿತು. ಶಿಖರ ಶ್ರೇಣಿ ತಲುಪುವ ಮೊದಲ ಯತ್ನವನ್ನು ಪೂರಕ ಆಮ್ಲಜನಕ ಬಳಸದೆಯೇ ಕೈಗೊಳ್ಳಲಾಯಿತು. ಮಲ್ಲೊರಿ, ಸೊಮರ್ವೆಲ್, ನಾರ್ಟನ್ ಮತ್ತು ಹೆನ್ರಿ ಮೊರ್ಸ್​ಹೆಡ್ ಅವರಿದ್ದ ತಂಡವು ಉತ್ತರ ಕಾಲ್​ನಿಂದ ಮೇ 20ರಂದು ಯಾನ ಪ್ರಾರಂಭಿಸಿತು. ಮೇಲೇರುತ್ತಿದ್ದಂತೆ, ಚಂಡಮಾರುತದ ಗಾಳಿಯು ತಂಡವನ್ನು ಜಝುರಿತಗೊಳಿಸಿತು. ಮರುದಿನ ಬೆಳಗ್ಗೆ ಪ್ರಯಾಣ ಮುಂದುವರಿಸಿದರೂ ಆಮ್ಲಜನಕದ ಕೊರತೆಯಿಂದಾಗಿ ಕ್ರಮಿಸುವುದು ಕಷ್ಟವಾಯಿತು. ಶಿಖರದ ತುದಿ ತಲುಪಲು ಇನ್ನೂ 2,000 ಅಡಿಗಳಷ್ಟು ಎತ್ತರ ಏರಬೇಕಿದ್ದಾಗ, ಪರಿಸ್ಥಿತಿ ಅಂದುಕೊಂಡಿದ್ದಕ್ಕಿಂತ ಕಷ್ಟವೆಂಬುದು ಆರೋಹಿಗಳ ಅರಿವಿಗೆ ಬಂದಿತು. ಅಂತಿಮವಾಗಿ ಮಧ್ಯಾಹ್ನ 2.30ರ ಸುಮಾರಿಗೆ, 26,985 ಅಡಿ ಎತ್ತರದಿಂದ ಹಿಮ್ಮೆಟ್ಟಲು ತಂಡವು ನಿರ್ಧರಿಸಿತು. ಇದುವರೆಗೂ ಆರೋಹಿಗಳು ತಲುಪಿದ ಅತ್ಯಂತ ಎತ್ತರದ ಸ್ಥಳ ಇದಾಗಿತ್ತು. ಕೆಳಗಿಳಿಯುವಾಗ ಪರ್ವತದ ಮೇಲಿನ ಹಿಮಭರಿತ ಕಡಿದಾದ ಪ್ರದೇಶ ದಾಟುತ್ತಿರುವಾಗ ಮೊರ್ಸ್​ಹೆಡ್ ಜಾರಿಬಿದ್ದರು. ಅಲ್ಲದೆ, ಕಡಿದಾದ ಇಳಿಜಾರಿನಲ್ಲಿ ನಾರ್ಟನ್ ಮತ್ತು ಸೊಮರ್​ವೆಲ್ ಅವರನ್ನೂ ತಮ್ಮೊಂದಿಗೆ ಎಳೆದೊಯ್ದುಬಿಟ್ಟರು. ಅದೃಷ್ಟವಶಾತ್, ಮಲ್ಲೊರಿ ಅವರು ಹಿಮ ಕೊಡಲಿಯನ್ನು ತಕ್ಷಣವೇ ಹಿಮದಲ್ಲಿ ಅಗೆದು ಹಿಡಿದು, ಹಗ್ಗವನ್ನು ಒದಗಿಸಿದ್ದರಿಂದ ಮೂವರೂ ಪರ್ವತಾರೋಹಿಗಳ ಜೀವ ಉಳಿಯಿತು. ದಣಿದ ಈ ತಂಡವು ನಾರ್ತ್ ಕೋಲ್​ಗೆ ತಲುಪಿದಾಗ ರಾತ್ರಿ 11.30 ಆಗಿತ್ತು. ಎರಡು ದಿನಗಳ ನಂತರ, ಫಿಂಚ್, ಜೆಫ್ರಿ ಬ್ರೂಸ್ ಮತ್ತು ಗೂರ್ಖಾ ತೇಜ್ಬೀರ್ ಅವರನ್ನು ಒಳಗೊಂಡ ತಂಡವು ನಾರ್ತ್ ಕೋಲ್​ಗೆ ಹೊರಟಿತು. ನೋಯಲ್ ಕೂಡ ಅವರ ನೆರವಿಗಾಗಿ ಹೊರಟಿದ್ದರು. ಮರುದಿನ ಬೆಳಗ್ಗ್ಗೆ, ನಾರ್ತ್ ಕೋಲ್​ನಿಂದ ಮೂವರೂ ಶಿಖರ ಏರಲು ಆರಂಭಿಸಿ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಟೆಂಟ್ ಹಾಕಿದರು. ಮುಂಜಾನೆ ಹಿಮ ಸುರಿಯುವುದು ನಿಂತಿದ್ದರೂ, ಗಾಳಿ ಬೀಸುವುದು ಮುಂದುವರಿದಿತ್ತು. ಮರುದಿನ ಬೆಳಗ್ಗೆ ಅವರು 6.30ಕ್ಕೆ ಪ್ರಯಾಣ ಆರಂಭಿಸಿದರು. ಆದರೆ, ಶಿಬಿರದಿಂದ ಕೆಲವು ನೂರು ಅಡಿಗಳಷ್ಟು ದೂರ ಹೋಗುವಷ್ಟರಲ್ಲಿ ತೇಜ್ಬಿರ್ ಕುಸಿದು ಹಿಮ್ಮೆಟ್ಟಬೇಕಾಯಿತು. ಫಿಂಚ್ ಮತ್ತು ಜೆಫ್ರಿ ಬೂಸ್ ಅವರು 27,000 ಅಡಿ ಎತ್ತರ ತಲುಪಿದರು. ಆಗ, ಚಂಡಮಾರುತ ಮತ್ತೆ ಬೀಸಲು ಪ್ರಾರಂಭವಾಗಿ, ಅವರನ್ನು ಹಿಂದಕ್ಕೆ ತಳ್ಳಿತು. ಆಗ ಬ್ರೂಸ್ ಅವರ ನನಗೆ ಆಮ್ಲಜನಕ ಉಪಕರಣದ ಟ್ಯೂಬ್ ಬ್ಲಾಕ್ ಆಗಿದ್ದರಿಂದ ಕಾರ್ಯನಿರ್ವಹಣೆ ಅಸಮರ್ಪಕವಾಗಿತ್ತು. ಉಪಕರಣವನ್ನು ದುರಸ್ತಿ ಮಾಡಿದರೂ, ಆರೋಹಣ ಅಂತ್ಯವಾಯಿತೆಂದು ಫಿಂಚ್​ಗೆ ಮನವರಿಕೆಯಾಯಿತು. ಅದು 27,300 ಅಡಿ ಎತ್ತರ. ಇದುವರೆಗೂ ಯಾವುದೇ ವ್ಯಕ್ತಿ ಏರಿದ ಅತ್ಯುನ್ನತ ಸ್ಥಳವದು. ನಂತರ ಮಲ್ಲೊರಿ ಅವರು ಮೂರನೇ ಹಾಗೂ ಅಂತಿಮ ಪ್ರಯತ್ನವನ್ನು ಮುನ್ನಡೆಸಲು ನಿರ್ಧರಿಸಿದರು. ಜೂನ್ 7ರಂದು ಜಾರ್ಜ್ ಮಲ್ಲೊರಿ, ಡಾ. ಹೊವಾರ್ಡ್ ಸೊಮರ್​ವೆಲ್, ಕಾಲಿನ್ ಕ್ರಾಫರ್ಡ್, ಜಾನ್ ನೊಯಲ್ ಅವರು ಶೆರ್ಪಾ ಕೂಲಿಯಾಳುಗಳ ಜತೆಗೂಡಿ ನಾರ್ತ್ ಕಾಲ್ ಮೇಲ್ಭಾಗದ ಹಿಮವುಳ್ಳ ಇಳಿಜಾರನ್ನು ಏರತೊಡಗಿದರು. 17 ಜನರಿದ್ದ ಈ ತಂಡವು 4 ಗುಂಪುಗಳಾಗಿ ವಿಂಗಡಣೆಯಾಗಿತ್ತು. ಪ್ರತಿಯೊಬ್ಬರು ಪರಸ್ಪರ ಹಗ್ಗದಿಂದ ಹೆಣೆದುಕೊಂಡಿದ್ದರು. ಯುರೋಪ್ ಪರ್ವತಾರೋಹಿಗಳು ಮೊದಲ ತಂಡದಲ್ಲಿದ್ದು, ಅವರು ಸಾಗಿದ ಹಾದಿಯಲ್ಲಿ ಹಿಮವು ಸಡಿಲಗೊಂಡಿತ್ತು. ಅರ್ಧ ದಾರಿ ಸಾಗಿದಾಗ ಮಂಜಿನ ತುಂಡೊಂದು ಸಡಿಲವಾಗಿ ಹಿಮಪಾತವಾಯಿತು. ಎರಡು ಗುಂಪುಗಳಲ್ಲಿದ್ದ ಒಂಬತ್ತು ಕೂಲಿಕಾರರು ಹಿಮದಲ್ಲಿ ಹುದುಗಿಹೋದರು. ಹಿಮದಿಂದ ಇಬ್ಬರನ್ನು ಜೀವಂತವಾಗಿ ಹೊರತೆಗೆಯಲಾಯಿತು. ಉಳಿದ 6 ಮಂದಿ ಸಾವನ್ನಪ್ಪಿದ್ದರು. ಒಬ್ಬ ಪತ್ತೆಯಾಗಲಿಲ್ಲ. ಈ ದುರಂತವು ಮೂರನೇ ಪ್ರಯತ್ನಕ್ಕೆ ಕೊನೆ ಹಾಡಿತಲ್ಲದೆ, ಒಟ್ಟಾರೆ ಈ ಯಾತ್ರೆಗೆ ಅಂತ್ಯ ಹೇಳಿತು.

    ನಾಮ ವಿಶೇಷ: ಟಿಬೆಟ್​ನಲ್ಲಿ ಈ ಪರ್ವತದ ಹೆಸರು ಚೊಮೊಲುಂಗ್ಮಾ. ಅಂದರೆ, ಜಗತ್ತಿನ ಮಾತೆ ದೇವತೆ ಎಂದರ್ಥ. ನೇಪಾಳದಲ್ಲಿ ಇದರ ಹೆಸರು ಸಗರಮಾತಾ. ಅಂದರೆ, ಆಕಾಶ ದೇವತೆ ಎಂದು. 1852ರಲ್ಲಿ ಬಂಗಾಳದ ಗಣಿತಜ್ಞ ಹಾಗೂ ಸರ್ವೆಯರ್ ರಾಧಾನಾಥ ಸಿಕ್ದರ್ ಅವರು ಇದು ಜಗತ್ತಿನ ಅತ್ಯಂತ ಎತ್ತರದ ಪರ್ವತ ಎಂಬುದನ್ನು ಗುರುತಿಸಿದರು. ಈ ಶಿಖರಕ್ಕೆ ಭಾರತದ ಮಾಜಿ ಸರ್ವೆಯರ್ ಜನರಲ್ ಜಾರ್ಜ್ ಮೌಂಟ್ ಅವರ ಹೆಸರನ್ನು ಇಡಲಾಯಿತು.

    ಯಾತ್ರೆ ಆಯೋಜನೆ: ಎವರೆಸ್ಟ್ ಪರ್ವತಾರೋಹಣ ಈಗ ವ್ಯಾಪಾರೀಕರಣದ ಆಯಾಮವನ್ನೂ ಪಡೆದುಕೊಂಡಿದೆ. ನೇಪಾಳದ ಆಪರೇಟರ್​ಗಳು ಶಿಖರಾರೋಹಣ ಯಾತ್ರೆಗಳನ್ನು ಆಯೋಜಿಸುತ್ತಾರೆ. ಪ್ರತಿವರ್ಷ ಬೇಸಿಗೆಯಲ್ಲಿ ನೂರಾರು ಜನರನ್ನು ಆರೋಹಣಕ್ಕೆ ಕರೆದುಕೊಂಡುಬರುತ್ತಾರೆ. ಶೆರ್ಪಾಗಳು ಅಳವಡಿಸುವ ಹಗ್ಗದ ಹಾದಿಯಲ್ಲೇ ಪ್ರವಾಸಿಗರು ಶಿಖರವನ್ನೇರುತ್ತಾರೆ. ಹೀಗಾಗಿ, ಈಗ ಅವಘಡಗಳು ಸಂಭವಿಸುವ ಸಾಧ್ಯತೆಗಳು ವಿರಳವಾಗಿವೆ.

    ಐತಿಹಾಸಿಕ ಹೆಜ್ಜೆಗಳು

    • 1953ರ ಮೇ 29ರಂದು ಮೊಟ್ಟಮೊದಲ ಬಾರಿಗೆ ಮೌಂಟ್ ಎವರೆಸ್ಟ್ ತುದಿಯನ್ನು ಮುಟ್ಟಲಾಯಿತು. ತೇನಸಿಂಗ್ ನೊರ್ಗೆ ಹಾಗೂ ನ್ಯೂಜಿಲೆಂಡ್​ನ ಎಡ್ಮಂಡ್ ಹಿಲರಿ ಅವರು ಎವರೆಸ್ಟ್ ಏರಿದ ಪ್ರಥಮ ವ್ಯಕ್ತಿಗಳಾದರು.
    • ಜಪಾನಿನ ಜಂಕೊ ಟಾಬೆ ಅವರು 1975ರ ಮೇ 16ರಂದು ಎವರೆಸ್ಟ್ ತುದಿ ಮುಟ್ಟುವ ಮೂಲಕ ಈ ಸಾಧನೆ ಮೊದಲ ಮಹಿಳೆಯಾಗಿ ಹೊರಹೊಮ್ಮಿದರು.
    • ಲೆಫ್ಟಿನೆಂಟ್ ಕರ್ನಲ್ ಅವತಾರ್ ಸಿಂಗ್ ಚೀಮಾ ಅವರು ಎವರೆಸ್ಟ್ ಏರಿದ ಪ್ರಥಮ ಭಾರತೀಯ. 1965ರ ಮೇ 20ರಂದು ಅವರು ಈ ಸಾಧನೆ ಮಾಡಿದರು. ಬಚೇಂದ್ರಿಪಾಲ್ ಅವರು ಎವರೆಸ್ಟ್ ಏರಿದ ಮೊದಲ ಭಾರತೀಯ ಮಹಿಳೆ. 1984ರಲ್ಲಿ ಅವರು ದಾಖಲೆ ಬರೆದರು.
    • 2013 ರಲ್ಲಿ ಮೌಂಟ್ ಎವರೆಸ್ಟ್ ಏರಿದ ವಿಶ್ವದ ಮೊದಲ ಅಂಗವಿಕಲ ಮಹಿಳೆ ಎಂಬ ಹೆಗ್ಗಳಿಕೆಗೆ ಭಾರತದ ಅರುಣಿಮಾ ಸಿನ್ಹಾ ಪಾತ್ರರಾದರು.
    • ತೇನಸಿಂಗ್ ಅವರ ಯಶಸ್ಸಿನಿಂದ ಪ್ರೇರಣೆಗೊಂಡಿದ್ದ ಬೆಂಗಳೂರಿನ ಬಸವನಗುಡಿಯ ಉಷಾ ರಾಮಯ್ಯ 1964ರಲ್ಲಿ ಹಿಮಾಲಯದ ಮೃಗಥುನಿ ಎಂಬ 22,490 ಅಡಿ ಎತ್ತರದ ಶಿಖರ ಏರಿದ್ದರು. ಭಾರತೀಯ ಭೂಸೇನೆಯಲ್ಲಿ ಮೇಜರ್ ಆಗಿದ್ದ ಬೆಂಗಳೂರಿನ ಸ್ಮಿತಾ ಲಕ್ಷ್ಮಣ ಅವರು ಮೌಂಟ್ ಎವರೆಸ್ಟ್ ತುದಿ ತಲುಪಿದ ಕರ್ನಾಟಕದ ಮೊದಲ ಮಹಿಳೆ. 2012ರಲ್ಲಿ ಭಾರತೀಯ ಭೂಸೇನೆಯ ಮಹಿಳಾ ಯಾತ್ರೆ ಮೂಲಕ ಅವರು ಈ ಸಾಧನೆಗೈದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts