More

    ಸಂಪಾದಕೀಯ: ಆತ್ಮಸ್ಥೈಯವೇ ಪರಿಹಾರ: ಆತ್ಮಹತ್ಯೆಯ ದಾರಿ ತುಳಿಯುವುದು ಬೇಡ

    ಕರೊನಾ ದೊಡ್ಡ ಮಾನವೀಯ ಸಂಕಟವಾಗಿ ಕಾಡಿದೆ. ಈ ಮಹಾಮಾರಿಯನ್ನು ನಿಯಂತ್ರಿಸಲು ಅನಿವಾರ್ಯವಾಗಿ ಲಾಕ್​ಡೌನ್ ವಿಧಿಸಲಾಯಿತಾದರೂ, ಅದು ಅಸಂಖ್ಯ ಜನರ ದುಡಿಮೆಯ ಮಾರ್ಗವನ್ನು, ಆದಾಯವನ್ನು ಕಿತ್ತುಕೊಂಡಿತು. ಅದರಲ್ಲೂ, ದಿನಗೂಲಿಗಳು ಮತ್ತು ಇತರ ಕಾರ್ವಿುಕರು ಪಟ್ಟ ಪಾಡು ಅಷ್ಟಿಷ್ಟಲ್ಲ.

    ಮತ್ತೊಂದೆಡೆ, ಕರೊನಾದಿಂದ ಸಂಭವಿಸಿದ ಜೀವಹಾನಿಯೂ ಜನರನ್ನು ಧೃತಿಗೆಡಿಸಿದೆ. ಕುಟುಂಬಕ್ಕೆ ಆಧಾರವಾಗಿ ಇದ್ದವರು ಅಥವಾ ಇತರ ಸದಸ್ಯರನ್ನು ಕಳೆದುಕೊಂಡಾಗ ಸೃಷ್ಟಿಯಾದ ಶೂನ್ಯತೆಯು ಹಲವರಲ್ಲಿ ಅಧಿಕ ಚಿಂತೆ, ಖಿನ್ನತೆಗೆ ಕಾರಣವಾಗಿದೆ. ಇನ್ನು, ಅದೆಷ್ಟೋ ಕರೊನಾ ಸೋಂಕಿತರು ಕಾಯಿಲೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ನಿದರ್ಶನಗಳಿಗೆ ಕೊರತೆಯಿಲ್ಲ. ಬೆಂಗಳೂರಿನಲ್ಲಿಯೂ ಇಂಥ ಪ್ರಕರಣಗಳು ವರದಿಯಾಗಿದ್ದವು.

    ಒಟ್ಟಾರೆ ಕರೊನಾ ಉಪಟಳದಿಂದ 2020ರಲ್ಲಿ ದೇಶದಲ್ಲಿ ಆತ್ಮಹತ್ಯೆ ಪ್ರಮಾಣ ಶೇಕಡ 10ರಷ್ಟು ಹೆಚ್ಚಾಗಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ (ಎನ್​ಸಿಆರ್​ಬಿ) ವರದಿ ಬಹಿರಂಗ ಪಡಿಸಿದೆ. 2020ರ ಜನವರಿ-ಡಿಸೆಂಬರ್ ಅವಧಿಯಲ್ಲಿ ದೇಶದಾದ್ಯಂತ ಆತ್ಮಹತ್ಯೆಗಳಿಂದ 1,53,052 ಜನರು ಮೃತಪಟ್ಟಿದ್ದಾರೆ (2019ರಲ್ಲಿ 1.39 ಲಕ್ಷ). ಪ್ರಾಣ ಕಳೆದುಕೊಂಡವರಲ್ಲಿ ವಿದ್ಯಾರ್ಥಿಗಳು ಮತ್ತು ಸಣ್ಣಪುಟ್ಟ ವ್ಯಾಪಾರಸ್ಥರು, ಉದ್ಯಮಿಗಳ ಸಂಖ್ಯೆಯೇ ಅಧಿಕ ಎಂಬುದು ಸಮಸ್ಯೆಯ ತೀವ್ರತೆಗೆ ಸಾಕ್ಷಿ.

    ದೊಡ್ಡ ಸಂಕಟಗಳು, ಅದರಲ್ಲೂ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ದಿಢೀರಾಗಿ ಎದುರಾದಾಗ ಆತಂಕವಾಗುವುದು ಸಹಜ. ಬಡ ಮತ್ತು ಮಧ್ಯಮ ವರ್ಗದವರು ಚಿಕಿತ್ಸೆಯ ವೆಚ್ಚದ ಭಯದಿಂದಲೇ ಬೆಚ್ಚಿಬೀಳುತ್ತಾರೆ. ಕರೊನಾ ವಿಚಿತ್ರ ತಳಮಳ, ಹೊಸಬಗೆಯ ಸವಾಲನ್ನು ಹುಟ್ಟಿಸಿತು ಮತ್ತು ಸಮಾಜದ ಹಲವು ರಂಗಗಳ ಚಲನೆಗೆ ತಡೆಯೊಡ್ಡಿತು ಎಂಬುದು ನಿಜವೇ. ಆದರೆ, ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಾಗಲಾರದು ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು. ಆತ್ಮಹತ್ಯೆಯಿಂದ ಕುಟುಂಬದ ಇತರ ಸದಸ್ಯರ ಬದುಕನ್ನು ಅಭದ್ರತೆಗೆ ದೂಡಿದಂತಾಗುತ್ತದೆ. ಅಷ್ಟಕ್ಕೂ, ಯಾವುದೇ ಸಮಸ್ಯೆಗಳು ಶಾಶ್ವತವಾಗಿ ಇರುವುದಿಲ್ಲ.

    ಭಾರಿ ತಲ್ಲಣ ಮೂಡಿಸಿದ್ದ ಕರೊನಾದ ಎರಡನೇ ಅಲೆ ಈಗ ನಿಯಂತ್ರಣಕ್ಕೆ ಬಂದಿದ್ದು, ಎಲ್ಲ ಚಟುವಟಿಕೆಗಳು ಮೊದಲಿನಂತೆ ಸಾಮಾನ್ಯ ಸ್ಥಿತಿಗೆ ಮರಳುತ್ತಿವೆ. ಯಾವುದೇ ಸಮಸ್ಯೆಯಾದರೂ ಅಷ್ಟೇ. ದೀರ್ಘಾವಧಿ ಇರುವುದಿಲ್ಲ. ಹಾಗಾಗಿ, ಅಂಥ ಹೊತ್ತಲ್ಲಿ ಧೃತಿಗೆಟ್ಟು ದುಡುಕಿನ ನಿರ್ಧಾರಗಳಿಗೆ ಮುಂದಾಗಬಾರದು. ಆ ಕ್ಷಣದ ದುಃಖವನ್ನು, ನೋವನ್ನು ಎದುರಿಸಿ, ಅದನ್ನು ಮೀರಿನಿಂತರೆ ಮತ್ತೆ ಬದುಕು ಕಟ್ಟಿಕೊಳ್ಳುವ ಅವಕಾಶಗಳು ಸಿಕ್ಕೇ ಸಿಗುತ್ತವೆ. ಆತ್ಮಸ್ಥೈರ್ಯದಿಂದ ಸವಾಲುಗಳ ವಿರುದ್ಧ ಹೋರಾಡುವ ಸಂಕಲ್ಪ ನಮ್ಮದಾಗಲಿ. ಮಾನಸಿಕ ಆರೋಗ್ಯದ ರಕ್ಷಣೆಯೂ ಪ್ರಧಾನ ಆದ್ಯತೆಯಾಗಲಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts