More

    ಸೃಷ್ಟಿಮುಖ ಪರಮಸುಖ, ನೋಡಿದರೆಲ್ಲಿಯು ಚೈತನ್ಯ

    ‘ದೇಶ ಸುತ್ತು ಕೋಶ ಓದು’ ಎಂಬುದು ಪ್ರಖ್ಯಾತವಾದ ನಾಣ್ಣುಡಿ. ನಮ್ಮ ಅನುಭವ ಜಗತ್ತು ಹಾಗೂ ಅಭಿವ್ಯಕ್ತಿ ಶಕ್ತಿ ವಿಸ್ತಾರವಾಗಬೇಕಿದ್ದರೆ ಈ ಗಾದೆಯ ಪಾಲನೆ ಅತ್ಯಗತ್ಯ. ಹೀಗಾಗಿ ಮನುಷ್ಯನ ಆಸಕ್ತಿಗಳಲ್ಲಿ ಪ್ರವಾಸಕ್ಕೂ ಆದ್ಯತೆಯಿದೆ. ಪ್ರವಾಸದಲ್ಲಿ ಪ್ರಧಾನವಾಗಿ ಮೂರು ಬಗೆ: ಐತಿಹಾಸಿಕ ಸ್ಥಳಗಳು, ಧಾರ್ವಿುಕ ಪುಣ್ಯಕ್ಷೇತ್ರಗಳು ಹಾಗೂ ಪ್ರಕೃತಿ ತಾಣಗಳು. ಒಂದು ಕಾಲಕ್ಕೆ ನಮ್ಮಲ್ಲಿ ಪ್ರವಾಸವೆಂದರೆ ಸಾಮಾನ್ಯವಾಗಿ ತೀರ್ಥಯಾತ್ರೆಯೇ! ಆದರೆ ನಮ್ಮ ಧಾರ್ವಿುಕ ಕ್ಷೇತ್ರಗಳೆಲ್ಲ ಪ್ರಕೃತಿ ಮಡಿಲಿನಲ್ಲಿಯೇ ಇರುತ್ತಿದ್ದುದರಿಂದ ಅದೊಂದು ರೀತಿ ಪ್ರಕೃತಿಯ ಸೊಬಗಿನಾಸ್ವಾದವೂ ಆಗುತ್ತಿತ್ತು. ಹಿಂದೆ ನಮ್ಮವರು ದೇವಸ್ಥಾನಗಳನ್ನು ನದಿ ತೀರದಲ್ಲಿ ಅಥವಾ ಬೆಟ್ಟದ ಮೇಲೆ ನಿರ್ವಿುಸುತ್ತಿದ್ದರು. ನೀರಿನ ತಾಣ, ಪರ್ವತಾರಣ್ಯ ಯಾವಾಗಲೂ ಸೊಬಗಿನಾಗರಗಳು. ಜೊತೆಗೆ ಶಿಲ್ಪಕಲಾನೈಪುಣ್ಯವೂ ಸೇರಿ ತೀರ್ಥಯಾತ್ರೆ ಮನಃಶಾಂತಿಯ ಜೊತೆಗೆ ಮನೋಲ್ಲಾಸವನ್ನೂ ಒದಗಿಸುತ್ತಿತ್ತು. ಆದರೆ ಈಗ ನಮ್ಮ ಅನೇಕ ಧಾರ್ವಿುಕ ಕ್ಷೇತ್ರಗಳು ವಾಣಿಜ್ಯಕೇಂದ್ರಗಳಾಗಿ ಬಿಟ್ಟಿವೆಯೆಂಬುದು ದುರಂತ.

    ಸೃಷ್ಟಿಮುಖ ಪರಮಸುಖ, ನೋಡಿದರೆಲ್ಲಿಯು ಚೈತನ್ಯಜಗತ್ತಿನ ಹಲವು ದೇಶಗಳಲ್ಲಿ ಪ್ರವಾಸ ಒಂದು ಪ್ರಮುಖ ಉದ್ಯಮ. ದೇಶದ ಬೊಕ್ಕಸವನ್ನು ತುಂಬಿಸುವ ಸಾಧನ. ಆದರೆ ಭಾರತದಲ್ಲಿ ಪ್ರವಾಸಕ್ಕೆ ಇನ್ನೂ ಆ ಬಗೆಯ ಪ್ರಾಮುಖ್ಯತೆಯಿಲ್ಲ. ನಮ್ಮಲ್ಲಿ ಜಗತ್ಪ್ರಸಿದ್ಧವಾದ ಅನೇಕ ಆಕರ್ಷಕ ತಾಣಗಳಿವೆ. ಆದರೆ ಅವುಗಳನ್ನು ಗುರ್ತಿಸಿ, ಅಭಿವೃದ್ಧಿಪಡಿಸಿ ಜಗತ್ತಿನ ಗಮನವನ್ನು ಅತ್ತ ಸೆಳೆಯುವ ಗಂಭೀರ ಪ್ರಯತ್ನವನ್ನು ಸರ್ಕಾರಗಳು ಮಾಡಿದಂತಿಲ್ಲ. ಕರ್ನಾಟಕದಲ್ಲೂ ಪ್ರವಾಸೋದ್ಯಮ ನಿರ್ಲಕ್ಷ್ಯಕ್ಕೊಳಗಾಗಿರುವ ವಲಯ.

    ದೂದ್​ಸಾಗರವನ್ನು ನೋಡಬೇಕೆಂಬುದು ರಜನಿಯವರ ಬಹುದಿನದ ಅಪೇಕ್ಷೆ. ಕರ್ನಾಟಕದ ಗಡಿಯಂಚಿನಲ್ಲಿ ಗೋವಾ ಪ್ರಾಂತ್ಯಕ್ಕೆ ಸೇರಿರುವ ದೂದ್​ಸಾಗರಕ್ಕೆ ರೈಲಿನಲ್ಲಿಯೇ ಹೋಗಬೇಕು. ನನ್ನ ವಿದ್ಯಾರ್ಥಿ ಮಿತ್ರ ಶ್ರೀನಿವಾಸ್ ತಂದೆ ಪ್ರಸನ್ನ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಾರೆ. ಅವರ ನೆರವು ಪಡೆದು ಇತ್ತೀಚೆಗೆ ಅಲ್ಲಿಗೆ ಪ್ರವಾಸ ಹೋಗಿದ್ದೆವು. ಅದೊಂದು ಸ್ಮರಣೀಯ ಅನುಭವ.

    ಶ್ರೀನಿವಾಸ್​ಗೆ ಪ್ರವಾಸವೆಂದರೆ ಇಷ್ಟ. ಹೀಗಾಗಿ ಅವರಿಗೆ ದೂದ್​ಸಾಗರ್ ಜೊತೆಗೆ ಯಲ್ಲಾಪುರ ಸಮೀಪದ ಸಾತೊಡ್ಡಿ, ಮಾಗೋಡು ಜಲಪಾತಗಳನ್ನೂ ನಮಗೆ ತೋರಿಸುವ ಉತ್ಸಾಹ. ಅವರ ತಂದೆ ತಾಯಿಯೂ ನಮ್ಮ ಜೊತೆಗೂಡಿದರು. ಉಪಾಧ್ಯ ದಂಪತಿ ಬೆಂಗಳೂರಿನಿಂದಲೇ ನಮ್ಮ ಜೊತೆಗಿದ್ದರು. ಹೀಗೆ ನಾವು ಒಂದು ಪುಟ್ಟ ತಂಡವಾಗಿ ಪ್ರವಾಸ ಹೊರಟೆವು.

    ನನಗೆ ಅನೇಕ ಸಲ ಅನ್ನಿಸಿದೆ; ನಾವು ಜಗತ್ತಿನ ಅನೇಕ ದೇಶಗಳನ್ನು ನೋಡುತ್ತೇವೆ, ನೋಡಲು ಹಂಬಲಿಸುತ್ತೇವೆ, ಆದರೆ ಕರ್ನಾಟಕವನ್ನೇ ಸರಿಯಾಗಿ ನೋಡಿಲ್ಲವೆಂದು. ನಮ್ಮ ಕೊಡಗು, ಕರಾವಳಿ, ಮಲೆನಾಡಿನಂತೆಯೇ ಉತ್ತರ ಕನ್ನಡ ಜಿಲ್ಲೆಯೂ ಪ್ರಕೃತಿ ಸೊಬಗಿನ ತಾಣ. ಹಾಗೆ ನೋಡಿದರೆ ಇವೆಲ್ಲಕ್ಕಿಂತ ಒಂದು ಕೈ ಮಿಗಿಲು ಎಂದರೂ ನಡೆದೀತು! ಬಯಲುಸೀಮೆ, ಕರಾವಳಿ, ಮಲೆನಾಡು-ಈ ಎಲ್ಲ ಗುಣಲಕ್ಷಣಗಳನ್ನು ಒಳಗೊಂಡಿರುವ ಕನ್ನಡ ನಾಡಿನ ಏಕೈಕ ಜಿಲ್ಲೆ ಉತ್ತರ ಕನ್ನಡ ಎನ್ನಬಹುದೇನೊ! ಇಲ್ಲಿಯ ಬಹುಮುಖಿ ವೈವಿಧ್ಯ ಬೆರಗು ಮೂಡಿಸುತ್ತದೆ. ಆದರೆ ಆ ಜಿಲ್ಲೆಗೆ ಈ ವಿಚಾರದಲ್ಲಿ ಹೆಚ್ಚು ಪ್ರಚಾರ ಸಿಕ್ಕಿದಂತೆ ಕಾಣದು. ನಮ್ಮ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನ ವಹಿಸಬೇಕು. ಏಕೆಂದರೆ ನಾವು ನೋಡಿದ ಈ ಜಲಪಾತಗಳ ಬಗ್ಗೆ ನಮಗೇ ಹೆಚ್ಚು ತಿಳಿದಿರಲಿಲ್ಲ. ಇದು ನಮ್ಮ ಅಜ್ಞಾನವಲ್ಲ, ನನ್ನಂತಹ ಅನೇಕರ ಅಭಿಮತ. ರಾಜ್ಯ ಸರ್ಕಾರ ಪ್ರವಾಸೋದ್ಯಮ ನೀತಿಯನ್ನು ರೂಪಿಸಲು ಸುಧಾಮೂರ್ತಿ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದ್ದು, ಆ ಸಮಿತಿ ಕಾರ್ಯೋನ್ಮುಖವಾಗಿದೆ ಎಂಬ ಮಾಹಿತಿಯಿದೆ. ರಾಜ್ಯದ ಪ್ರವಾಸಿ ತಾಣಗಳಲ್ಲಿ ಖಾಸಗಿ ಹೂಡಿಕೆ ಮಾಡಿಸಿ, ಅಭಿವೃದ್ಧಿ ಮಾಡುವ ಸಲುವಾಗಿ ಜಾಗತಿಕ ಪ್ರವಾಸೋದ್ಯಮ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸುವ ಚಿಂತನೆಯೂ ಸರ್ಕಾರದ ಮುಂದಿದೆ. ಇದೊಂದು ಉತ್ತಮ ನಡೆ. ಆದರೆ ಇಲ್ಲಿಯೂ ಪರಿಚಿತ ಪ್ರವಾಸಿ ತಾಣಗಳ ಬಗ್ಗೆಯೇ ಯೋಜನೆಗಳು ರೂಪುಗೊಳ್ಳುತ್ತವೆ. ನಮ್ಮ ರಾಜ್ಯದಲ್ಲಿ ಜಾಗತಿಕ ನೆಲೆಯಲ್ಲಿ ಗುರ್ತಿಸಬಹುದಾದಂತಹ, ಹೆಚ್ಚು ಜನಪ್ರಿಯವಾಗದ ಅನೇಕ ಚೆಲುವಿನ ತಾಣಗಳಿವೆ. ಇಂತಹ ಸುಮಾರು ಮೂರುನೂರು ತಾಣಗಳಿವೆ ಎಂಬುದು ಒಂದು ಅಂದಾಜು. ನಲವತ್ತಕ್ಕೂ ಹೆಚ್ಚು ಮನಮೋಹಕ ಸುಂದರ ಜಲಪಾತಗಳಿವೆ. ಇವೆಲ್ಲವುಗಳ ಬಗೆೆೆಗೆ ವಿವರವಿರಲಿ, ಕನಿಷ್ಠ ಮಾಹಿತಿಯೂ ನಮಗೆ ಸಿಗುವುದಿಲ್ಲವೆಂಬುದು ನಮ್ಮ ಪ್ರವಾಸೋದ್ಯಮ ನೀತಿಯ ಬಗೆಗೆ ಹೇಳಬಹುದಾದ ಎಲ್ಲ ಮಾತುಗಳನ್ನೂ ಹೇಳುತ್ತದೆ. ಸರ್ಕಾರ ಮೊದಲು ಇವೆಲ್ಲವುಗಳ ಬಗ್ಗೆ ಕೈಪಿಡಿಯೊಂದನ್ನು ತಯಾರಿಸಿ ಅದು ಎಲ್ಲರಿಗೂ ತಲುಪುವ ವ್ಯವಸ್ಥೆಯಾಗಲಿ. ಆಧುನಿಕ ತಂತ್ರಜ್ಞಾನವನ್ನೂ ಸಮರ್ಥವಾಗಿ ಬಳಸಿಕೊಳ್ಳಬಹುದು. ಸಾರ್ವಜನಿಕರ ಟೀಕೆ ಕೆಲವೊಮ್ಮೆ ಕಟುವೆನ್ನಿಸಿದರೂ ಅದು ಸತ್ಯವೆಂಬುದು ಸಂಬಂಧಪಟ್ಟವರಿಗೂ ಗೊತ್ತು. ಅದನ್ನು ಇತ್ಯಾತ್ಮಕವಾಗಿ ಸ್ವೀಕರಿಸುವ ಮನೋಭಾವವಿರಬೇಕು.

    ‘ಮಿನಿ ನಯಾಗರ’ ಎಂದು ಅಲ್ಲಿಯ ಜನರು ಕರೆಯುವ ಸಾತೊಡ್ಡಿ ಜಲಪಾತ ಅದರ ಪರಿಸರದಿಂದಲೇ ನಮ್ಮನ್ನು ಆಕರ್ಷಿಸುತ್ತದೆ. ಒಂದು ಕಡೆ ಪರ್ವತವೇ ನಿರ್ವಿುಸಿದ ಎತ್ತರದ ಕಡಿದಾದ ಗೋಡೆ; ಮತ್ತೊಂದು ಕಡೆ ಹಸುರು ಹೊದ್ದು ನಿಂತ ದಟ್ಟಾರಣ್ಯ; ಹಿನ್ನೆಲೆಯಲ್ಲಿ ಸಹ್ಯಾದ್ರಿ ಪರ್ವತ ಶ್ರೇಣಿ; ಮೇಲೆ ನೀಲಾಕಾಶದಲ್ಲಿ ಮೋಡಗಳ ಚೆಲ್ಲಾಟ; ಇವುಗಳ ನಡುವೆ ಅರ್ಧ ಚಂದ್ರಾಕಾರದಲ್ಲಿ ಸುಮಾರು ಐವತ್ತು ಅಡಿ ಎತ್ತರದಿಂದ ಧುಮ್ಮಿಕ್ಕುವ ಜಲಪಾತ ಅತ್ಯಂತ ಮನಮೋಹಕ. ನನಗೆ ಸಹಜವಾಗಿಯೇ ಅಮೆರಿಕ ಸಂಯುಕ್ತ ಸಂಸ್ಥಾನದ ಯೋಸೆಮಿಟಿ ನೆನಪಾಯಿತು. ಅದರ ವೈಭವ ಇದಕ್ಕಿಲ್ಲವಾದರೂ ಇದರ ಪರಿಸರದ ಚೆಲುವು ಅದನ್ನು ನೆನಪಿಸುತ್ತದೆ. ಸಾತೊಡ್ಡಿ ಜಲಪಾತ ಕಲ್ಲರಮನೆ ಘಟ್ಟ ಪ್ರದೇಶದ ಅನೇಕ ಕಿರುತೊರೆಗಳು ಕೂಡಿ ರೂಪಿತವಾಗಿದೆ. ನಾವು ಹೋದಾಗ ಜಲಪಾತ ತನ್ನ ರಭಸ ಕಳೆದುಕೊಂಡು ಸೌಮ್ಯವಾಗಿತ್ತು. ಹೀಗಾಗಿ ಜಲಪಾತದಿಂದ ಕೆಳಗೆ ಬಿದ್ದ ನೀರಿನಲ್ಲಿ ಜಲಕ್ರೀಡೆಯಾಡುವುದು ರೋಮಾಂಚಕಾರಿಯಾಗಿತ್ತು. ಹಾಗೆ ಹರಿದ ನೀರು ಮುಂದೆ ಕಾಳಿ ನದಿಗೆ ಕಟ್ಟಿದ ಅಣೆಕಟ್ಟಿನ ಹಿನ್ನೀರಿಗೆ ಸೇರುತ್ತದೆ. ಸಾತೊಡ್ಡಿ ಜಲಪಾತ ಯಲ್ಲಾಪುರದಿಂದ ಸುಮಾರು ಇಪ್ಪತ್ತೈದು ಕಿಲೋಮೀಟರ್ ದೂರದಲ್ಲಿದೆ. ನಿತ್ಯ ಹರಿದ್ವರ್ಣದ ದಟ್ಟ ಕಾಡಿನ ನಡುವೆ ಒಳದಾರಿಯಲ್ಲಿ ಅಷ್ಟೇನು ಉತ್ತಮ ಸ್ಥಿತಿಯಲ್ಲಿಲ್ಲದ ಹಾದಿಯಲ್ಲಿ ಕ್ರಮಿಸಿದರೆ ಮೊದಲು ನಮಗೆ ಕಾಳಿ ನದಿ ಅಣೆಕಟ್ಟಿನ ಹಿನ್ನೀರು ಸಿಗುತ್ತದೆ. ಅಚ್ಛೋದ ಸರೋವರವನ್ನು ನೆನಪಿಸುವ ಆ ಜಲರಾಶಿಯನ್ನು ಕಣ್ತುಂಬಿಕೊಳ್ಳುತ್ತ ಮುಂದೆ ಹೋಗಿ ವಾಹನ ನಿಲ್ಲಿಸಿ, ಸುಮಾರು ಒಂದು ಕಿಲೋಮೀಟರ್ ಕಾಲುಹಾದಿಯಲ್ಲಿ ಹೋಗಬೇಕು. ಇದೊಂದು ಅದ್ಭುತ ಅನುಭವ. ಅನೇಕ ಬಗೆಯ ಚಿಟ್ಟೆಗಳು, ಬಣ್ಣ ಬಣ್ಣದ ಹೂಗಳು, ಪಕ್ಷಿಸ್ವನಗಳ ವೈವಿಧ್ಯ, ಮೈ ಮನಸ್ಸುಗಳಿಗೆ ಹಿತ ನೀಡುವ ತಂಪಾದ ವಾತಾವರಣ ಎಲ್ಲ ಕೂಡಿಕೊಂಡು ಗಂಧರ್ವರ ಸೀಮೆಯಾಗುತ್ತದೆ ಕಾಡಿನ ಆ ನಾಡು. ಹೋಗುವಾಗಲೇ ನಾವು ಅಲ್ಲಿನ ಹಾದಿಬದಿಯ ಮನೆಯಲ್ಲಿ ಹೇಳಿ ಹೋಗಿದ್ದರಿಂದ ಬರುವ ವೇಳೆಗೆ ಸೊಗಸಾದ ಉತ್ತರಕನ್ನಡ ಸೊಗಡಿನ ಊಟ ಸಿದ್ಧವಾಗಿತ್ತು. ವನಭೋಜನ ಮುಗಿಸಿ ಮಾಗೋಡಿನತ್ತ ಹೊರಟೆವು. ಅಲ್ಲಿಯೇ ಸನಿಹದಲ್ಲಿ ನಮ್ಮ ಪ್ರಮುಖ ಕತೆಗಾರ ಶ್ರೀಧರ ಬಳಗಾರರ ಹುಟ್ಟೂರಿನ ಮನೆಯಿದೆ. ಅವರ ಸೃಜನಶೀಲತೆಯ ಹಿಂದೆ ನಿಸ್ಸಂದೇಹವಾಗಿ ಈ ಪರಿಸರದ ಪ್ರಭಾವವಿದೆ.

    ಯಲ್ಲಾಪುರದಿಂದ ಸಾತೊಡ್ಡಿ ಜಲಪಾತಕ್ಕೆ ಹೋಗಬೇಕಾದರೆ ಒಳದಾರಿ ಹಿಡಿಯಬೇಕು; ಆದರೆ ಮಾಗೋಡು ಜಲಪಾತ ಹೆದ್ದಾರಿಯಲ್ಲೇ ಹದಿನೆಂಟು ಕಿಲೋಮೀಟರ್ ದೂರದಲ್ಲಿ ಸಿಗುತ್ತದೆ. ಧಾರವಾಡದ ಬಳಿಯ ಶಾಲ್ಮಲಾ ಮುಂದೆ ಗಂಗಾವಳಿಯಾಗಿ, ನಂತರ ಬೇಡ್ತಿಯೆಂಬ ಅಭಿದಾನ ಪಡೆದು ಅರಬ್ಬೀಸಮುದ್ರವನ್ನು ಸೇರುತ್ತದೆ. ಈ ನದಿ ಮಾಗೋಡಿನ ಬಳಿ ಸುಮಾರು ಆರುನೂರು ಅಡಿ ಆಳದ ಕಣಿವೆಗೆ ಧುಮ್ಮಿಕ್ಕುವ ತಾಣವೇ ಮಾಗೋಡು ಜಲಪಾತ. ಸಾತೊಡ್ಡಿ ಲಲಿತ ಚೆಲುವಿನ ಜಲಪಾತವಾದರೆ ಮಾಗೋಡು ರುದ್ರ ಮನೋಹರವೆನ್ನಿಸುವ ಜಲಪಾತ. ಎರಡು ಹಂತಗಳಲ್ಲಿ ಅವಳಿ, ಜವಳಿ ಹಾಗೂ ಮುಕ್ತವಾಣಿ ಎಂದು ಮೂರು ಕವಲುಗಳಾಗಿ ಭೋರ್ಗರೆಯುತ್ತ ಧುಮ್ಮಿಕ್ಕುವ ದೃಶ್ಯ ಅದ್ಭುತ! ಹಿನ್ನೆಲೆಯಲ್ಲಿ ಪಶ್ಚಿಮ ಘಟ್ಟಗಳ ಸಾಲು, ಪಾತಾಳ ದರ್ಶನ ಮಾಡಿಸುವ ಆಳ ಕಣಿವೆ, ಮೊದಲು ನಿಧಾನ ಧುಮ್ಮಿಕ್ಕುತ್ತ, ನಿಂತು, ನಂತರ ಕವಲಾಗಿ ಒಡೆದು ರಭಸದಿಂದ ನರ್ತಿಸುತ್ತಾಳೆ ಜಲಕನ್ಯೆ ಗಂಗಾವಳಿ! ಇದರ ಹತ್ತಿರದಲ್ಲೇ ಜೇನುಕಲ್ಲು ಗುಡ್ಡವಿದೆ. ಇಲ್ಲಿ ಧುಮ್ಮಿಕ್ಕಿದ ಗಂಗಾವಳಿ ಅಲ್ಲಿ ಆಳ ಕಣಿವೆಯಲ್ಲಿ ಹರಿಯುವುದನ್ನು ನೋಡುತ್ತಾ, ಪಶ್ಚಿಮದಂಚಿನಲ್ಲಿ ಸೂರ್ಯಾಸ್ತ ನೋಡಲು ಇದು ಪ್ರಶಸ್ತ ತಾಣ.

    ದೂದ್​ಸಾಗರ್ ಗೋವಾ-ಕರ್ನಾಟಕದ ಗಡಿ ಭಾಗದಲ್ಲಿದೆ. ಸ್ಥಳೀಯ ಕೊಂಕಣಿ ಭಾಷೆಯಲ್ಲಿ ಇದು ‘ಹಾಲಿನ ಸಮುದ್ರ’. ನಾವು ಅದನ್ನು ‘ಹಾಲ್ತೊರೆ’ ಎನ್ನಬಹುದೇನೋ! ದೂದ್​ಸಾಗರ್ ಭಾರತದಲ್ಲಿಯೇ ಎರಡನೇ ಅತ್ಯಂತ ಎತ್ತರದ ಜಲಪಾತ. ಮಾಂಡೊವಿ ನದಿ-ಇದನ್ನು ಮಹಾದಾಯಿ ಎಂದೂ ಕರೆಯುತ್ತಾರೆ- 1017 ಅಡಿಗಳ ಎತ್ತರದಿಂದ 100 ಅಡಿ ವಿಸ್ತಾರದಲ್ಲಿ, ಐದು ಕವಲುಗಳಾಗಿ ಧುಮ್ಮಿಕ್ಕುತ್ತದೆ. ಬಂಡೆಗಳ ನಡುವೆ ಧುಮ್ಮಿಕ್ಕುವುದರಿಂದ ಅನೇಕ ಜಲಪಾತಗಳ ಗುಚ್ಛದಂತೆ ಅದು ಕಾಣಿಸುತ್ತದೆ. ಮಳೆಗಾಲದಲ್ಲಿಯೂ ನೀರು ಕೆಂಪಾಗದೆ ಸ್ವಚ್ಛ ಅಚ್ಚ ಬಿಳಿಯ ಬಣ್ಣದಲ್ಲಿರುವುದರಿಂದ ಇದು ‘ದೂದ್ ಸಾಗರ್’. ಗೋವಾ ಕಡೆಯಿಂದ ರಸ್ತೆಯ ಮಾರ್ಗದಲ್ಲಿ ಹೋಗಬಹುದು, ಆದರೆ ಕರ್ನಾಟಕದ ಕಡೆಯಿಂದ ರೈಲು ಮೂಲಕ ಮಾತ್ರ ಹೋಗಲು ಸಾಧ್ಯ. ಆ ಹಾದಿಯ ರೈಲು ಪಯಣವೂ ರೋಮಾಂಚಕಾರೀ ಅನುಭವ. ಅನೇಕ ಸುರಂಗಗಳನ್ನು ಹಾದು ಹೋಗುತ್ತ ಕತ್ತಲು ಬೆಳಕಿನಾಟದಲ್ಲಿ ಬೆಟ್ಟಕಣಿವೆಗಳನ್ನು ಸುತ್ತುವರೆದು ದಟ್ಟಾರಣ್ಯದ ನಡುವೆ ಹಾವಿನ ರೀತಿ ಹರಿದು ಹೋಗುವುದೇ ಚಂದ. ಆದರೆ ಜನವಿಹೀನವಾದ ಈ ಪ್ರದೇಶದಲ್ಲಿ ಮುನ್ನೆಚ್ಚರಿಕೆ ಇಲ್ಲದಿದ್ದರೆ ಅಪಾಯವೂ ಉಂಟಾಗಬಹುದು. ಕೆಲ ಪ್ರಯಾಣಿಕರು ಅನುಭವಿಸಿದ ಆತಂಕದ ಕತೆಗಳು ಸಾಕಷ್ಟಿವೆ. ಗೆಳೆಯ ಪ್ರಸನ್ನ ಅವರಿಗೆ ಈ ಪ್ರದೇಶ ಪರಿಚಿತವಾದುದರಿಂದ ನಮ್ಮ ಈ ಪ್ರವಾಸ ಯಾವ ಆತಂಕವೂ ಇಲ್ಲದೆ ಚಂದವಿತ್ತು.

    ದೂದ್​ಸಾಗರ್ ನೆಪದಲ್ಲಿ ನಾವು ನೋಡಿದ್ದು ನಮ್ಮ ಉತ್ತರ ಕನ್ನಡ ಜಿಲ್ಲೆಯ ಇನ್ನೂ ಅಷ್ಟಾಗಿ ಕಲುಷಿತವಾಗದ ಚೆಲುವನ್ನು. ಈ ಚೆಲುವನ್ನು ಒಮ್ಮೆ ಕಳೆದುಕೊಂಡರೆ ಮತ್ತೆಂದೂ ನಾವು ಪಡೆಯಲಾಗುವುದಿಲ್ಲ, ಸೃಷ್ಟಿಸಲಾಗುವುದಿಲ್ಲ. ಅಮೆರಿಕದಲ್ಲಿ ಅಲ್ಲಿನ ಮೂಲನಿವಾಸಿಗಳಾದ ಅಮೆರಿಕನ್ ಇಂಡಿಯನ್ನರನ್ನು ಓಡಿಸಿದ ವಲಸಿಗರು ಅಲ್ಲಿಯ ಸಂಪನ್ಮೂಲವನ್ನು ಕಬಳಿಸುವ ಹುನ್ನಾರ ಮಾಡಿದ್ದರು. ಆದರೆ ಜಾನ್ ಮ್ಯೂರ್​ನಂತಹ ಕೆಲವರು ಅದರ ವಿರುದ್ಧ ಜೀವಮಾನವಿಡೀ ಹೋರಾಡಿ ಪ್ರಕೃತಿಯ ಸಂಪತ್ತನ್ನು ‘ರಾಷ್ಟ್ರೀಯ ಸಂಪತ್ತು’ ಎಂದು ಘೊಷಿಸುವಂತೆ ಸಂಸತ್ತಿನಲ್ಲಿ ಒತ್ತಡ ತಂದರು. ಅಬ್ರಹಾಂ ಲಿಂಕನ್ ಅಧ್ಯಕ್ಷರಾಗಿದ್ದಾಗ ಅದಕ್ಕೆ ಅಂಕಿತ ಬಿತ್ತು. ಪ್ರಕೃತಿಯ ಸಂರಕ್ಷಣೆಗಾಗಿಯೇ ಪ್ರತ್ಯೇಕ ಯೋಜನೆ ರೂಪುಗೊಂಡಿತು. ‘ನ್ಯಾಷನಲ್ ಪಾರ್ಕ್’ ಪರಿಕಲ್ಪನೆ ರೂಪುಗೊಂಡದ್ದು ಹಾಗೆ.

    ನಮ್ಮಲ್ಲಿಯೂ ಪ್ರಾಕೃತಿಕ ಸಂಪತ್ತನ್ನು ರಾಷ್ಟ್ರದ ಸಂಪತ್ತು ಎಂದು ಪರಿಗಣಿಸಿ ಅದನ್ನು ಕಾಪಾಡಲು ಸಂವಿಧಾನಾತ್ಮಕ ರಕ್ಷಣೆ ನೀಡಬೇಕು; ಮಾತ್ರವಲ್ಲ, ಅದನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಬೇಕು. ಮನುಷ್ಯನಿಗೆ ಅತ್ಯಗತ್ಯವಾಗಿ ಬೇಕಾಗಿರುವುದು ಉಸಿರಾಡಲು ಶುದ್ಧ ಗಾಳಿ, ಕುಡಿಯಲು ಶುದ್ಧ ನೀರು. ಇವೆರಡೂ ಪ್ರಕೃತಿಯ ಕೊಡುಗೆ. 1950 ರಲ್ಲಿ ಶೇಕಡ 11ರಷ್ಟಿದ್ದ ವಾಯುಮಾಲಿನ್ಯ ಈಗ ಶೇಕಡಾ 40ರ ಆಸುಪಾಸಿನಲ್ಲಿದೆ. ಜಗತ್ತಿನಲ್ಲಿ ಸುಮಾರು 70 ಕೋಟಿ ಜನರಿಗೆ ಕುಡಿಯಲು ಶುದ್ಧ ನೀರು ಸಿಗುತ್ತಿಲ್ಲ. ಪರಿಸರ ನಾಶ ತಂದೊಡ್ಡಬಹುದಾದ ಅಪಾಯಗಳ ಬಗ್ಗೆ ನಾವು ಗಂಭೀರವಾಗಿ ಚಿಂತಿಸಬೇಕಿದೆ.

    ನಾಗರಿಕ ಜಗತ್ತಿನಲ್ಲಿ ಭಾವಜಗತ್ತು ಕ್ರಮೇಣ ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಂಡು, ವಾಣಿಜ್ಯ ಜಗತ್ತು ಪ್ರಾಶಸ್ತ್ಯ ಪಡೆದುಕೊಳ್ಳುತ್ತಿದೆ. ಇಂತಹ ಹೊತ್ತಿನಲ್ಲಿ, ಪ್ರಸನ್ನ, ಸಂಧ್ಯ ಹಾಗೂ ಶ್ರೀನಿವಾಸ್ ನಮ್ಮನ್ನು ನಿಷ್ಕಲ್ಮಶ ಪ್ರೀತಿಯ ಕಡಲಲ್ಲಿ ಮೀಯಿಸಿದ್ದು ಈ ಪ್ರವಾಸದ ವಿಶೇಷ. ಎಲ್ಲ ಕಡೆ ದ್ವೇಷವೇ ತಾಂಡವವಾಡುತ್ತಿರುವ ಸಂದರ್ಭದಲ್ಲಿ ನಮ್ಮ ಸಮಾಜ ಪ್ರೀತಿಸುವ ಶಕ್ತಿಯನ್ನು ಕಳೆದುಕೊಂಡಿಲ್ಲ ಎಂದು ಈ ಕುಟುಂಬ ತೋರಿಸಿಕೊಟ್ಟದ್ದು ಭರವಸೆಯ ಬೆಳ್ಳಿಗೆರೆ.

    (ಲೇಖಕರು ಖ್ಯಾತ ವಿಮರ್ಶಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts