More

    ವಿಜಯವಾಣಿ 10ನೇ ವರ್ಷಕ್ಕೆ ಪಾದಾರ್ಪಣೆ: ಹತ್ತರ ಹೊಸ್ತಿಲಲ್ಲಿ ಹೃದಯದ ಮಾತು…

    ಲೇಖನ

    • ಡಾ.ವಿಜಯ್ ಸಂಕೇಶ್ವರ್ (ಚೇರ್ಮನ್, ವಿಆರ್​ಎಲ್ ಸಮೂಹ ಸಂಸ್ಥೆಗಳು) ಹಾಗೂ ಆನಂದ ಸಂಕೇಶ್ವರ್ (ವ್ಯವಸ್ಥಾಪಕ ನಿರ್ದೇಶಕರು, ವಿಆರ್​ಎಲ್ ಸಮೂಹ ಸಂಸ್ಥೆಗಳು)

    ಶ್ರೀರಾಮನವಮಿಯ ಪರ್ವಕಾಲವಾದ 2012ರ ಏಪ್ರಿಲ್ 1ರಂದು ವಿಜಯವಾಣಿ ತನ್ನ ವಿಜಯಯಾತ್ರೆಯನ್ನು ಆರಂಭಿಸಿತು. ಪತ್ರಿಕೆ ಈಗ ಒಂಬತ್ತು ವರ್ಷಗಳನ್ನು ಪೂರೈಸಿ ಹತ್ತನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದೆ. ಈ ಸಂಭ್ರಮದ ಸಮಯದಲ್ಲಿ ನಿಮ್ಮೊಂದಿಗೆ ಮನದ ಭಾವನೆಗಳನ್ನು ಹಂಚಿಕೊಳ್ಳುವುದು ಸಮಯೋಚಿತ ಎಂದು ಭಾವಿಸಿದ್ದೇವೆ.

    ಪತ್ರಿಕೆ ಎಂಬುದು ಸಾಮಾಜಿಕ ಕಾರ್ಯದ ನಿಟ್ಟಿನಲ್ಲಿ ಪ್ರಬಲ ಮತ್ತು ಪರಿಣಾಮಕಾರಿ ಸಾಧನ ಎಂಬುದು ನಮ್ಮ ದೃಢವಾದ ನಂಬಿಕೆ. ಪತ್ರಿಕೋದ್ಯಮವನ್ನು ಕೇವಲ ಲಾಭ-ನಷ್ಟದ ದೃಷ್ಟಿಕೋನದಿಂದ ನೋಡದೆ ಸಾಮಾಜಿಕ ಸೇವೆಯ ಸಂಕಲ್ಪ ಮತ್ತು ಬದ್ಧತೆಯ ಹಾದಿಯಲ್ಲಿಯೇ ಹೆಜ್ಜೆ ಹಾಕುತ್ತಿದ್ದೇವೆ. ನಮ್ಮ ಈ ಉದ್ದೇಶವನ್ನು ನಾಡಿನ ಜನರು ಗುರುತಿಸಿ ಪತ್ರಿಕೆಯನ್ನು ಇಷ್ಟು ಅಗಾಧವಾಗಿ ಬೆಳೆಸಿದ್ದಾರೆ ಎಂದು ಹೇಳಲು ಅತೀವ ಹೆಮ್ಮೆಯಾಗುತ್ತದೆ. ವಿಜಯವಾಣಿ ಆರಂಭವಾದ ಕೇವಲ 27 ತಿಂಗಳಲ್ಲಿ ರಾಜ್ಯದ ನಂಬರ್ ಒನ್ ಪತ್ರಿಕೆಯಾಗಿ ಹೊರ ಹೊಮ್ಮಿದ್ದು ದೇಶದ ಪತ್ರಿಕೋದ್ಯಮ ಇತಿಹಾಸದಲ್ಲಿ ಒಂದು ವಿಶಿಷ್ಟ ಮತ್ತು ಉಜ್ವಲ ಅಧ್ಯಾಯ. 3 ಆವೃತ್ತಿಗಳೊಂದಿಗೆ ಪ್ರಕಟಣೆ ಶುರು

    ಮಾಡಿದ ವಿಜಯವಾಣಿ ಮುಂದಿನ ಕೇವಲ ಒಂಬತ್ತು ತಿಂಗಳಲ್ಲಿ ಇನ್ನೂ ಆರು ಆವೃತ್ತಿಗಳನ್ನು ಆರಂಭಿಸಿದ್ದು ಮತ್ತೊಂದು ಹೆಗ್ಗಳಿಕೆ. ಅದಾಗಿ ಮುಂದಿನ ಒಂದು ವರ್ಷದೊಳಗೆ ಇನ್ನೊಂದು ಆವೃತ್ತಿ ಸೇರಿಕೊಂಡು ಹತ್ತು ಆವೃತ್ತಿಗಳ ಬಲ ಬಂತು. ಪ್ರಾದೇಶಿಕ ಪತ್ರಿಕೆಯೊಂದು ಈ ಪರಿ ವೇಗವಾಗಿ ಬೆಳೆದಿದ್ದು ಅಭೂತಪೂರ್ವ ದಾಖಲೆಯೇ ಸರಿ.

    ಸರ್ಕಾರ ಮತ್ತು ಜನರ ನಡುವೆ ಸೇತುವೆಯಾಗಿ ಕಾರ್ಯ ನಿರ್ವಹಿಸಬೇಕು; ಆ ಮೂಲಕ ಸಾರ್ವಜನಿಕ ಜೀವನದಲ್ಲಿ ಒಂದಷ್ಟು ಗುಣಾತ್ಮಕ ಬದಲಾವಣೆ ತರಬೇಕು ಎಂಬ ಹಿನ್ನೆಲೆಯಲ್ಲಿ ವಿಜಯವಾಣಿ ನಿರಂತರವಾಗಿ ವರದಿ, ಲೇಖನಗಳನ್ನು ಪ್ರಕಟಿಸುತ್ತ ಬಂದಿದೆ. ಡಿವಿಜಿಯಂತಹ ಮಹಾನ್ ಪತ್ರಕರ್ತರು ಪತ್ರಿಕೆಗಳ ಸಾಮಾಜಿಕ ಕಾರ್ಯ ಮತ್ತು ಹೊಣೆಗಾರಿಕೆ ಬಗ್ಗೆ ಒತ್ತಿ ಹೇಳಿದ್ದಾರೆ. ‘ಪತ್ರಿಕೆಗಳಿಲ್ಲದ ಸರ್ಕಾರದ ವ್ಯವಸ್ಥೆ ಮತ್ತು ಸರ್ಕಾರ ಇಲ್ಲದ, ಪತ್ರಿಕೆಗಳು ಇರುವ ವ್ಯವಸ್ಥೆ- ಈ ಎರಡರಲ್ಲಿ ಆಯ್ಕೆ ಪ್ರಶ್ನೆ ಬಂದಾಗ, ನಿಸ್ಸಂಶಯವಾಗಿ ಎರಡನೆಯದು ನನ್ನ ಆಯ್ಕೆಯಾಗಿರುತ್ತದೆ’ ಎಂಬ ಅಮೆರಿಕದ ಮಾಜಿ ಅಧ್ಯಕ್ಷ ಥಾಮಸ್ ಜೆಫರ್ಸನ್ ಮಾತು ಕೂಡ ಇದನ್ನೇ ಧ್ವನಿಸುತ್ತದೆ. ವಿಜಯವಾಣಿ ವತಿಯಿಂದ ಅನೇಕ ಕಾರ್ಯಕ್ರಮ, ಅಭಿಯಾನಗಳನ್ನು ಹಮ್ಮಿಕೊಂಡಿದ್ದು, ಅವೆಲ್ಲವುಗಳ ಮೂಲೋದ್ದೇಶ ಸಾಮಾಜಿಕ ಕಾರ್ಯವೇ. ಬೆಂಗಳೂರಿನಲ್ಲಿ ಕಸದ ಸಮಸ್ಯೆ ತೀವ್ರವಾಗಿದ್ದಾಗ ಹಮ್ಮಿಕೊಂಡ ‘ಸ್ವಚ್ಛ ಬೆಂಗಳೂರು’ ಅಭಿಯಾನ; ಮಂತ್ರಿಗಳು ಮತ್ತು ಉನ್ನತ ಅಧಿಕಾರಿಗಳೊಂದಿಗೆ ಜನರು ನೇರವಾಗಿ ಮಾತನಾಡಿ ಸಮಸ್ಯೆ ಹೇಳಿಕೊಂಡು ಪರಿಹಾರ ಪಡೆಯಬಹುದಾದ ‘ಫೋನ್-ಇನ್’; ಜನಪ್ರತಿನಿಧಿಗಳು-ಅಧಿಕಾರಿಗಳು-ಜನರು ಒಂದೇ ವೇದಿಕೆಯಲ್ಲಿ ಸಂವಾದಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾದ ಜನತಾ

    ದರ್ಶನ-ಇವೆಲ್ಲ ನಮ್ಮ ಜನಮುಖಿ ನಿಲುವಿಗೆ ಕೆಲ ನಿದರ್ಶನಗಳಷ್ಟೆ. ಹಾಗೇ, ಓದುಗರ ಪತ್ರ ಆಧರಿಸಿ ಗಹನ ಸಮಸ್ಯೆಗಳ ಬಗ್ಗೆ ವರದಿ ಮಾಡಿ ಸರ್ಕಾರದ ಗಮನ ಸೆಳೆಯುವುದು; ಓದುಗರು ಫೋನಿನಲ್ಲಿ ನೀಡುವ ಮಾಹಿತಿ ಆಧರಿಸಿ ವರದಿ ಮಾಡುವುದು- ಇಂಥವು ಸಹ ‘ಓದುಗರಿಗೆ ಮೊದಲ ಮಣೆ’ ಎಂಬ ನಮ್ಮ ಬದ್ಧತೆಗೆ ಸಾಕ್ಷಿ. ಎಲ್ಲ ವರ್ಗ, ವಯೋಮಾನದ ಜನರಿಗೂ ಆಪ್ತವಾಗುವಂತೆ ಪತ್ರಿಕೆಯನ್ನು ರೂಪಿಸಿದ್ದು ಮತ್ತೊಂದು ಹೆಗ್ಗಳಿಕೆ.

    ನಮ್ಮ ಸಂಸ್ಕೃತಿ, ಪರಂಪರೆಯ ಉತ್ತಮಾಂಶಗಳ ಬಗ್ಗೆ ಯುವಜನರಿಗೆ ಅರಿವು ಮೂಡಿಸುವ ಜತೆಗೆ ಇವನ್ನು ಮುಂದಿನ ಪೀಳಿಗೆಗೆ ದಾಟಿಸುವ ಬಗ್ಗೆಯೂ ವಿಜಯವಾಣಿ ಕಳಕಳಿ ಹೊಂದಿದ್ದು, ಈ ನಿಟ್ಟಿನಲ್ಲಿ ವೈವಿಧ್ಯಮಯ ಬರಹ, ಅಂಕಣ ಗಳನ್ನು ಸಹ ಪ್ರಕಟಿಸುತ್ತಿದೆ. ಧಾರ್ವಿುಕ, ಆಧ್ಯಾತ್ಮಿಕ ಕ್ಷೇತ್ರದ ಪ್ರಮುಖರ ಬರಹಗಳನ್ನು ನಿಯಮಿತವಾಗಿ ಪ್ರಕಟಿಸಲಾಗುತ್ತಿದೆ. ಹಾಗೇ, ದೇಶದ ಹಿತಾಸಕ್ತಿ ಪ್ರಶ್ನೆ ಬಂದಾಗ, ಅದರಲ್ಲಿ ರಾಜಿ ಅಥವಾ ಹೊಂದಾಣಿಕೆ ಸಲ್ಲದು ಎಂಬುದು ನಮ್ಮ ದೃಢ ನಿಲುವು. ಒಟ್ಟಾರೆ ಬಲಿಷ್ಠ ಭಾರತ ನಿರ್ಮಾಣ ನಮ್ಮ ಗುರಿ. ಈ ಆಧಾರಸ್ತಂಭಗಳ ಮೇಲೆ ವಿಜಯವಾಣಿ ಸದೃಢವಾಗಿ ಬೆಳೆದಿದ್ದು, ಮುಂದಿನ ದಿನಗಳಲ್ಲಿಯೂ ಈ ಕಾರ್ಯ ಮುಂದು ವರಿಯುತ್ತದೆ ಎಂದು ಸ್ಪಷ್ಟವಾಗಿ ಹೇಳಬಯಸುತ್ತೇವೆ. ನಮ್ಮ ಮಾಧ್ಯಮ ಪಯಣದ ಮತ್ತೊಂದು ಹೆಜ್ಜೆಯಾದ ದಿಗ್ವಿಜಯ ಟಿವಿ ವಾಹಿನಿ ಕೂಡ ಅಲ್ಪಾವಧಿಯಲ್ಲೇ ಕನ್ನಡಿಗರ ಮನಗೆದ್ದಿದೆ. ವಿಜಯವಾಣಿ-ದಿಗ್ವಿಜಯವನ್ನು ವಿಜಯಪಥದಲ್ಲಿ ಮುನ್ನಡೆಸಿದ ಓದುಗರು-ವೀಕ್ಷಕರು ಮುಂದೆಯೂ ನಮ್ಮ ಪಯಣದಲ್ಲಿ ಜತೆಯಾಗಿರುತ್ತಾರೆ ಎಂಬ ಅದಮ್ಯ ವಿಶ್ವಾಸ ನಮ್ಮದು.

    ಎಲ್ಲರಿಗೂ ಧನ್ಯವಾದಗಳು……….

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts