More

    ಅಧ್ಯಕ್ಷ ಟ್ರಂಪ್ ವಿದೇಶನೀತಿಗಳ ಮೂಲಸೆಲೆಗಳು

    ಚೀನಾ ತನ್ನ ಕುಟಿಲ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸುವುದರ ಹಿಂದಿರುವುದು ಅಗಾಧ ಆರ್ಥಿಕ ಸಾಮರ್ಥ್ಯ ಎಂದು ಸರಿಯಾಗಿಯೇ ಗುರುತಿಸಿದ ಟ್ರಂಪ್ ಮತ್ತವರ ಸಲಹೆಗಾರರು ಚೀನಾದ ಆರ್ಥಿಕ ಸಾಮರ್ಥ್ಯವನ್ನೇ ಕುಗ್ಗಿಸಿ ಅದರ ಪರಭಕ್ಷಕ ಸ್ವಭಾವವನ್ನು ತಹಬಂದಿಗೆ ತರುವ ಯೋಜನೆಯನ್ನು ಹಂತಹಂತವಾಗಿ ಜಾರಿಗೆ ತರುತ್ತಿದ್ದಾರೆ. ಪರಿಣಾಮವಾಗಿ ಚೀನಾದ ರಫ್ತು ಕುಸಿದು ಆದಾಯ ಇಳಿಯುತ್ತಿದೆ.

    ನಾವೀಗ 1970ರ ದಶಕಕ್ಕೆ ಹೋಗೋಣ. 1972ರ ಎಸ್​ಎಎಲ್​ಟಿ ಒಪ್ಪಂದಗಳ ಪರಿಣಾಮವಾಗಿ ಅಮೆರಿಕ ಮತ್ತು ಸೋವಿಯೆತ್ ಅಧ್ಯಕ್ಷ ಟ್ರಂಪ್ ವಿದೇಶನೀತಿಗಳ ಮೂಲಸೆಲೆಗಳುಯೂನಿಯನ್ ನಡುವಿನ ಶೀತಲ ಸಮರ ತಹಬಂದಿಗೆ ಬಂದಿದ್ದ ಕಾಲ ಅದು. ಎರಡೂ ದೈತ್ಯಶಕ್ತಿಗಳ ನಡುವೆ ನಂಬಿಕೆ, ಸ್ನೇಹ, ಸಹಕಾರ ನಿಧಾನವಾಗಿ ವೃದ್ಧಿಯಾಗುತ್ತಿತ್ತು. ಜನವರಿ 1973ರ ಪ್ಯಾರಿಸ್ ಶಾಂತಿ ಒಪ್ಪಂದಗಳು ಕಳೆದ ಎಂಟು ವರ್ಷಗಳಿಂದ ನಡೆಯುತ್ತಿದ್ದ ವಿಯೆಟ್ನಾಂ ಯುದ್ಧದ ಕೆಸರಿನಿಂದ ಅಮೆರಿಕಾವನ್ನು ಹೊರತಂದದ್ದಲ್ಲದೇ ವಾಷಿಂಗ್ಟನ್ ಮತ್ತು ಮಾಸ್ಕೋಗಳ ನಡುವಿನ ಅತಿ ದೊಡ್ಡ ವೈಮನಸ್ಯವನ್ನೂ ಕೊನೆಗಾಣಿಸಿದ್ದವು. ಜತೆಗೆ, ಎರಡು ವಿರೋಧಿ ಬಣಗಳಲ್ಲಿ ಹಂಚಿಹೋಗಿದ್ದ ಯೂರೋಪಿನ ದೇಶಗಳು ತಮ್ಮ ನಡುವೆಯೂ ಶಾಂತಿ ಸ್ಥಾಪಿಸಿಕೊಳ್ಳಲು ಉತ್ಸುಕವಾಗಿ 1975ರಲ್ಲಿ ಫಿನ್​ಲೆಂಡ್​ನ ರಾಜಧಾನಿ ಹೆಲ್ಸಿಂಕಿಯಲ್ಲಿ ಐತಿಹಾಸಿಕ ಸಭೆ ಸೇರಿ, ‘ಕಾಮನ್ ಯೂರೋಪಿಯನ್ ಹೋಂ’ ಎಂದೆಲ್ಲಾ ದೊಡ್ಡದಾಗಿ ಮಾತಾಡತೊಡಗಿದ್ದವು. ಒಟ್ಟಿನಲ್ಲಿ ಎಲ್ಲೆಲ್ಲೂ ಶಾಂತಿಯ ಹೊಸ ಗಾಳಿ. ಪರಿಣಾಮವಾಗಿ ಅಮೆರಿಕಾದ ಜಿಮ್ಮಿ ಕಾರ್ಟರ್ ಸರ್ಕಾರಕ್ಕೆ ಹೆಚ್ಚಿನ ಕೆಲಸವೇನೂ ಇಲ್ಲದಿದ್ದ ಕಾರಣ ಸರ್ಕಾರಿ ಪ್ರಮುಖರು ತಮಗೇ ಮುಖ್ಯವೆನಿಸಿದ ಒಂದೊಂದು ವಿಷಯವನ್ನೆತ್ತಿಕೊಂಡು ಅವುಗಳಲ್ಲಿ ವ್ಯಸ್ತರಾಗಿ ಕಾಲಕಳೆಯುತ್ತಿದ್ದರು. ವಿದೇಶಾಂಗ ಕಾರ್ಯದರ್ಶಿ ಸೈರಸ್ ವ್ಯಾನ್ಸ್ ರಶಿಯನ್ನರ ಜತೆ ಎಸ್​ಎಎಲ್​ಟಿ-2 ಒಪ್ಪಂದಗಳ ಕುರಿತಾಗಿ ಚರ್ಚೆಗಳಿದಿದ್ದರೆ ಅಧ್ಯಕ್ಷರ ರಾಷ್ಟ್ರೀಯ ಸುರಕ್ಷಾ ಸಲಹೆಗಾರ ಝ್ಬಿಗ್​ನ್ಯೂ ಬ್ರೆಝೆನ್​ಸ್ಕಿ ಚೀನೀಯರ ಜತೆಗಿನ ಸಂಬಂಧ ವೃದ್ಧಿಗೆ ಮಹತ್ವ ಕೊಟ್ಟು ಪೆಸಿಫಿಕ್ ಸಾಗರದ ಆಚೆಈಚೆ ಓಡಾಡಿಕೊಂಡಿದ್ದರು. ಉಪವಿದೇಶಾಂಗ ಕಾರ್ಯದರ್ಶಿ ರಿಚರ್ಡ್ ಹಾಲ್​ಬ್ರೂಕ್ ಅಂತೂ ನಿನ್ನೆಯವರೆಗೂ ಕೆಟ್ಟ ಹುಡುಗರು ಎನಿಸಿಕೊಂಡಿದ್ದ ವಿಯೆಟ್ನಾಮೀಯರ ಜತೆ ಸಂಬಂಧವೃದ್ಧಿಯೇ ಸರ್ಕಾರದ ಪರಮೋಚ್ಚ ಆದ್ಯತೆಯಾಗಬೇಕು ಎನ್ನುವಂತೆ ಆಡುತ್ತಿದ್ದರು. ಇನ್ನು ಅಧ್ಯಕ್ಷ ಜಿಮ್ಮಿ ಕಾರ್ಟರ್ ಇದಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದೇ ಇಸ್ರೇಲ್ ಮತ್ತು ಈಜಿಪ್ಟ್​ಗಳ ನಡುವೆ ಶಾಂತಿ ಸ್ಥಾಪಿಸುವ ಪುಣ್ಯಕಾರ್ಯದಲ್ಲಿ ಮಗ್ನರಾಗಿಹೋಗಿದ್ದರು.

    ಶೀತಲ ಸಮರ ಅಂತ್ಯಗೊಂಡಿದ್ದ ಕಾರಣ ಅಮೆರಿಕಾಗೆ ಪಾಕಿಸ್ತಾನದ ಅಗತ್ಯವೂ ಇರಲಿಲ್ಲ. ಅಲ್ಲದೇ ಸೇನಾಕ್ರಾಂತಿ ಎಸಗಿ ಪ್ರಜಾಪ್ರಭುತ್ವವನ್ನು ಕೊಂದು ಅಧಿಕಾರ ಲಪಟಾಯಿಸಿದ್ದ ಜಿಯಾ-ಉಲ್-ಹಕ್ ಮೇಲೆ ಕಾರ್ಟರ್ ಸರ್ಕಾರಕ್ಕೆ ತೀವ್ರ ಅಸಹನೆ. ಈ ಎರಡೂ ಕಾರಣಗಳಿಂದಾಗಿ ಅಮೆರಿಕಾ ಭಾರತಕ್ಕೆ ಹತ್ತಿರಾಗತೊಡಗಿತ್ತು. ಅಧ್ಯಕ್ಷ ಕಾರ್ಟರ್ ಭಾರತಕ್ಕೆ ಬಂದೂ ಹೋಗಿದ್ದರು. ಈ ಭೂಮಿ ಇನ್ನೇನು ಸ್ವರ್ಗವಾಗಲಿದೆಯೆಂದೆನಿಸಿದ್ದ ಆ ಆಶಾವಾದದ ದಿನಗಳಲ್ಲಿ ಎಲ್ಲವನ್ನೂ ಏಕಾಏಕಿ ಹಾಳುಮಾಡಿದ್ದು ಸೋವಿಯೆತ್ ರಶಿಯನ್ನರು.

    1979ರ ಡಿಸೆಂಬರ್​ನಲ್ಲಿ ರಶಿಯನ್ನರು ಅಫ್ಘಾನಿಸ್ತಾನಕ್ಕೆ ಸೇನೆ ನುಗ್ಗಿಸಿದ್ದೇ ಎರಡನೆಯ ಶೀತಲ ಸಮರ ಆರಂಭವಾಯಿತು. ಎರಡೂ ಮಹಾಶಕ್ತಿಗಳ ನಡುವೆ ಏಳುವರ್ಷಗಳಿಂದ ಮೂಡಿದ್ದ ನಂಬಿಕೆ ಚೂರುಚೂರಾಗಿ, ಚಿಗುರೊಡೆಯುತ್ತಿದ್ದ ಸ್ನೇಹ-ಸಹಕಾರಗಳು ಥಟಕ್ಕನೆ ನಿಂತುಹೋದವು. ಇತ್ತ ಪಾಕಿಸ್ತಾನದ ಅದೃಷ್ಟವೂ ಖುಲಾಯಿಸಿ, ಅಫ್ಘಾನಿಸ್ತಾನದಿಂದ ಸೋವಿಯೆತ್ ಸೇನೆಯನ್ನು ಹೊರಗಟ್ಟುವ ಸಮರದಲ್ಲಿ ಮುಂಚೂಣಿ ರಾಷ್ಟ್ರ ಎಂಬ ಪಟ್ಟ ಲಭಿಸಿತು. ತಾನೇ ದೂರ ತಳ್ಳಿದ್ದ ಜಿಯಾರನ್ನು ಕಾರ್ಟರ್ ಸರ್ಕಾರ ಅತಿಮುಖ್ಯ ಸಾಮರಿಕ ಸಹಯೋಗಿ ಎಂದು ಬರಸೆಳೆದಪ್ಪಿಕೊಂಡದ್ದಲ್ಲದೇ ಪಾಕಿಸ್ತಾನಕ್ಕೆ 3.2 ಬಿಲಿಯನ್ ಡಾಲರ್​ಗಳ ಸೇನಾ ನೆರವನ್ನೂ ಘೊಷಿಸಿತು. ಭಾರತವನ್ನು ಅಮೆರಿಕಾ ಮತ್ತೆ ಮರೆತುಬಿಟ್ಟಿತು.

    1980ರ ಜನವರಿಯಲ್ಲಿ ರಿಪಬ್ಲಿಕನ್ ಅಭ್ಯರ್ಥಿ ರೊನಾಲ್ಡ್ ರೀಗನ್ ಅಧ್ಯಕ್ಷರಾದದ್ದು ಈ ಸನ್ನಿವೇಶದಲ್ಲಿ. ನಾಲ್ಕು ವರ್ಷಗಳಿಂದ ಅಧಿಕಾರದಿಂದ ದೂರವಿದ್ದ ರಿಪಬ್ಲಿಕನ್ ನಾಯಕರು ಮತ್ತೆ ಶ್ವೇತಭವನ ಪ್ರವೇಶಿಸಿದ್ದೇ ರಶಿಯನ್ನರಿಗೆ ಬಿಸಿ ತಟ್ಟತೊಡಗಿತು. ದಶಕದ ಹಿಂದೆ ಚೀನಾವನ್ನು ತಮ್ಮೆಡೆಗೆ ಸೆಳೆದುಕೊಂಡು ರಶಿಯನ್ನರನ್ನು ಧೃತಿಗೆಡಿಸಿದ್ದ ತಂತ್ರವನ್ನೇ ಮತ್ತೆ ಅನುಸರಿಸಿದ ರಿಪಬ್ಲಿಕನ್ ಮುತ್ಸದ್ದಿಗಳು ಮಾಸ್ಕೋವನ್ನು ಜಾಗತಿಕ ರಂಗದಲ್ಲಿ ಸರಿಸುಮಾರು ಏಕಾಂಗಿಯಾಗಿಸಿಬಿಟ್ಟರು. ಜತೆಗೆ, ಸ್ಟಾರ್​ವಾರ್​ನಂತಹ ನವನವೀನ ಯುದ್ಧತಂತ್ರಗಳನ್ನೂ ಜಾರಿಗೊಳಿಸಿ ನಡುಕ ಮೂಡಿಸಿದರು. ಅಷ್ಟೇನೂ ಸಶಕ್ತವಲ್ಲದ ಸೋವಿಯೆತ್ ಅರ್ಥವ್ಯವಸ್ಥೆ ಅಮೆರಿಕಾದ ಯೋಜನೆಗಳಿಗೆ ಸರಿಸಮನಾದ ಪ್ರತಿಯೋಜನೆ ರೂಪಿಸುವುದಕ್ಕೆ ಅವಕಾಶ ನೀಡುತ್ತಿರಲಿಲ್ಲ. ಇದೆಲ್ಲದರ ಹೊಡೆತ ಮಾಸ್ಕೋ ಮೇಲೆ ಹೇಗಾಯಿತೆಂದರೆ ಯಾಕಾದರೂ ಅಫ್ಘಾನಿಸ್ತಾನಕ್ಕೆ ಕಾಲಿಟ್ಟೆನೋ ಎಂದು ಹಳಹಳಿಸಿಕೊಳ್ಳುವಂತಾಯಿತು. ಹೊಸ ನಾಯಕ ಮಿಖಾಯಿಲ್ ಗೋರ್ಬಚೆವ್ ಅಫ್ಘಾನಿಸ್ತಾನವಷ್ಟೇ ಅಲ್ಲ, ಪೂರ್ವ ಯೂರೋಪ್, ಮಂಗೋಲಿಯಾ, ಕಂಪೂಚಿಯಾಗಳಲ್ಲೆಲ್ಲಾ ರಶಿಯನ್ ಸೇನಾ ಹಾಜರಿಯನ್ನು ಮಿತಿಗೊಳಿಸಿ ಅರ್ಥವ್ಯವಸ್ಥೆಯನ್ನು ಮೇಲೆತ್ತುವುದಕ್ಕೆ ಪ್ರಾಶಸ್ಱ ನೀಡಿದರು. ಆಗಲೇ ಅವರು ‘ಹಿಂದಿನಂತೆ ಸಾರಾಸಗಟಾಗಿ ಭಾರತದ ಪರ ನಿಲ್ಲುವುದಿಲ್ಲ, ನಿಂತು ಚೀನೀಯರ ವಿರೋಧ ಕಟ್ಟಿಕೊಳ್ಳುವುದಿಲ್ಲ’ ಎಂದು ಘೊಷಿಸಿದ್ದು.

    ಇದೆಲ್ಲ ಬೆಳವಣಿಗೆಗಳ ಪರಿಣಾಮವಾಗಿ ಅಫ್ಘನ್ ಯುದ್ಧ ಕೊನೆಗೊಂಡದ್ದಲ್ಲದೇ ಶೀತಲ ಸಮರವೇ ಅಂತ್ಯಗೊಂಡಿತು, ಪೂರ್ವ ಯೂರೋಪಿನ ಕಮ್ಯೂನಿಸಂ ಸತ್ತೆಗಳು ತಟಪಟನೆ ಉರುಳಿದ ಹಿಂದೆಯೇ ಸೋವಿಯೆತ್ ಯೂನಿಯನ್ ಛಿದ್ರವಾಗಿ ಇತಿಹಾಸ ಸೇರಿತು. ಹೀಗೆ ಶೀತಲ ಸಮರದ ಸಮಾಧಿಯ ಮೇಲೆ ನಿರ್ವಣವಾಗತೊಡಗಿದ ಹೊಸ ಜಾಗತಿಕ ವ್ಯವಸ್ಥೆಯಲ್ಲಿ ಪಾಕಿಸ್ತಾನದಂತಹ ಕಾಲಾಳುಗಳ ಅಗತ್ಯ ಅಮೆರಿಕಾಗೆ ಇರಲಿಲ್ಲ. ಹೀಗಾಗಿ ಪಾಕಿಸ್ತಾನಕ್ಕೆ ಸೇನಾ-ರಾಜಕೀಯ ಬೆಂಬಲ ನೀಡುವುದನ್ನು ನಿಲ್ಲಿಸಿ ಅಮೆರಿಕಾ ಭಾರತದತ್ತ ವಾಲಿತು. ಎರಡೂ ದೇಶಗಳ ನಡುವಿನ ಆರ್ಥಿಕ, ಸೇನಾ ಸಂಬಂಧಗಳು ವೃದ್ಧಿಗೊಳ್ಳತೊಡಗಿದವು. ಆದರೆ ಎಲ್ಲ ಸುಂದರ ಕನಸುಗಳೂ ಥಟಕ್ಕನೆ ಅಂತ್ಯವಾಗುವಂತೆ, ದುರದೃಷ್ಟವಶಾತ್ ಹಿರಿಯ ಜಾರ್ಜ್ ಬುಷ್ ಚುನಾವಣೆಯಲ್ಲಿ ಸೋತು, ಡೆಮೋಕ್ರಾಟಿಕ್ ಅಭ್ಯರ್ಥಿ ಬಿಲ್ ಕ್ಲಿಂಟನ್ ಅಧ್ಯಕ್ಷರಾದರು. ಆ ಕ್ಷಣವೇ ಭಾರತ-ಅಮೆರಿಕಾ ಸಂಬಂಧಗಳಿಗೆ ಹೊಡೆತ ಬಿತ್ತು.

    ಕಾಶ್ಮೀರ ಕಳೆದ ಮೂರು ವರ್ಷಗಳಿಂದ ಅಶಾಂತಿಯಲ್ಲಿ ಬೇಯುತ್ತಿದ್ದರೂ ಬುಷ್ ಸರ್ಕಾರ ಭಾರತಕ್ಕೆ ಇರಿಸುಮುರಿಸಾಗುವ ಯಾವ ಮಾತನ್ನೂ ಆಡಿರಲಿಲ್ಲ. ಆದರೆ ಅಧಿಕಾರಕ್ಕೆ ಬಂದ ಎರಡೇ ತಿಂಗಳಲ್ಲಿ ಅಧ್ಯಕ್ಷ ಕ್ಲಿಂಟನ್ ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡುತ್ತಾ ಕಾಶ್ಮೀರವನ್ನು ಪ್ಯಾಲೆಸೆôನ್ ಹಾಗೂ ಚೆಚೆನ್ಯಾಗಳಿಗೆ ಹೋಲಿಸಿ, ಇಸ್ರೇಲ್ ಮತ್ತು ರಶಿಯಾಗಳಂತೆ ಭಾರತವೂ ಮುಸ್ಲಿಮರನ್ನು ದಮನಿಸುತ್ತಿದೆಯೆಂಬ ಚಿತ್ರಣ ನೀಡಿದರು. 1947ರಲ್ಲಿ ಕಾಶ್ಮೀರ ಭಾರತದಲ್ಲಿ ವಿಲೀನವಾದದ್ದನ್ನು ಅಮೆರಿಕಾ ಪುರಸ್ಕರಿಸುವುದಿಲ್ಲ ಎಂದು ಉಪ ವಿದೇಶಾಂಗ ಕಾರ್ಯದರ್ಶಿ ರಾಬಿನ್ ರ್ಯಾಫೆಲ್ ಹೇಳಿಕೆ ಕೊಟ್ಟುಬಿಟ್ಟದ್ದಂತೂ ಭಾರತೀಯರನ್ನು ಕೆರಳಿಸಿಬಿಟ್ಟಿತು. ವೃದ್ಧಿಗೊಳ್ಳುತ್ತಿದ್ದ ಭಾರತ-ಅಮೆರಿಕಾ ಸಂಬಂಧಗಳು ಮತ್ತೆ ಹಿಮ್ಮುಖವಾಗಿ ಚಲಿಸತೊಡಗಿದವು. ಹೀಗೇಕಾಯಿತು? ಉತ್ತರ ಸರಳ.

    ಹನ್ನೆರಡು ವರ್ಷಗಳ ದೀರ್ಘಕಾಲದ ನಂತರ ಡೆಮೋಕ್ರಾಟಿಗರು ಅಧಿಕಾರಕ್ಕೆ ಬಂದಿದ್ದರಷ್ಟೇ. ಆಗ ಮತ್ತೆ ಆಡಳಿತಲ್ಲಿ ಪ್ರಮುಖ ಸ್ಥಾನ ಗಳಿಸಿದವರು ಮತ್ತು ಹೊಸ ಅಧ್ಯಕ್ಷರ ಸಲಹೆಗಾರರಾದವರು 1981ರಲ್ಲಿ ಜಿಮ್ಮಿ ಕಾರ್ಟರ್ ಜತೆ ಅಧಿಕಾರ ಕಳೆದುಕೊಂಡಿದ್ದವರು. ಅಫ್ಘನ್ ಯುದ್ಧದಲ್ಲಿ ಸಹಯೋಗಿಯಾದ ಪಾಕಿಸ್ತಾನಕ್ಕೆ ಸಹಾನುಭೂತಿಯ ಮನೋಭಾವವಿಟ್ಟುಕೊಂಡಿದ್ದ ಇವರಿಗೆ ಮುಂದಿನ ಹನ್ನೆರಡು ವರ್ಷಗಳಲ್ಲಾದ ಬದಲಾವಣೆಗಳ ಸರಿಯಾದ ಅರಿವೇ ಇರಲಿಲ್ಲ. ಮತ್ತೆ, ಈ ರಾಬಿನ್ ರ್ಯಾಫೆಲ್ ಯಾರೆಂದರೆ ಆಗಸ್ಟ್ 1988ರಲ್ಲಿ ಜಿಯಾ-ಉಲ್-ಹಕ್ ಜತೆ ವಿಮಾನ ದುರಂತದಲ್ಲಿ ಮೃತರಾಗಿದ್ದ ರಾಯಭಾರಿ ಅರ್ನಾಲ್ಡ್ ಲೆವಿಸ್ ರ್ಯಾಫೆಲ್​ರ ಮಾಜಿ ಪತ್ನಿ, 1970ರ ದಶಕದಲ್ಲಿ ಇಸ್ಲಾಮಾಬಾದ್​ನಲ್ಲಿನ ಅಮೆರಿಕನ್ ದೂತಾವಾಸದಲ್ಲಿ ಆರ್ಥಿಕ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾಕೆ, ಉರ್ದು ಪ್ರವೀಣೆ, ಪಾಕ್​ಪ್ರಿಯೆ! ಸಾಕೇ?

    ಇನ್ನೂ 1970ರ ದಶಕದ ಮನೋಭಾವದಲ್ಲೇ ಇದ್ದ ಇವರೆಲ್ಲಾ ತಾವೂ ಭಾರತದ ಬಗ್ಗೆ ಕೆಟ್ಟ ಮಾತುಗಳನ್ನಾಡಿದರು, ಕ್ಲಿಂಟನ್ ಬಾಯಿಯಿಂದಲೂ ಹೇಳಿಸಿದರು. ಆದರೆ ಮುಂದಿನ ಎಂಟುವರ್ಷಗಳಲ್ಲಿ ಕ್ಲಿಂಟನ್ ಸರ್ಕಾರ ವಾಸ್ತವವನ್ನು ನಿಧಾನವಾಗಿ ಅರ್ಥಮಾಡಿಕೊಂಡಿತು, ಇಸ್ಲಾಮಿಕ್ ಭಯೋತ್ಪಾದನೆಗೆ ಕುಮ್ಮಕ್ಕು ಕೊಡುತ್ತಿದ್ದ ಪಾಕಿಸ್ತಾನವನ್ನು ದೂರ ಸರಿಸಿ ಭಾರತದತ್ತ ಸರಿಯತೊಡಗಿತು. ಕಾರ್ಗಿಲ್ ಸಮರದ ಸಮಯದಲ್ಲಿ ಭಾರತದ ಮೇಲೆ ಅಣ್ವಸ್ತ್ರ ಪ್ರಯೋಗಿಸುವುದಾಗಿ ಹೇಳಿದ ಪಾಕ್ ಪ್ರಧಾನಿ ನವಾಜ್ ಶರೀಫ್​ರನ್ನು ಅಧ್ಯಕ್ಷ ಕ್ಲಿಂಟನ್ ಅಕ್ಷರಶಃ ಬೈದು ಸುಮ್ಮನಿರಿಸಿದ್ದಲ್ಲದೇ ಮುಂದಿನ ಆರು ತಿಂಗಳಲ್ಲಿ ಭಾರತಕ್ಕೆ ಸದ್ಭಾವನೆಯ ಭೇಟಿ ನೀಡಿದರು. ನವೆಂಬರ್ 2000ರ ಚುನಾವಣೆಯಲ್ಲಿ ಕ್ಲಿಂಟನ್ ಸೋತು ರಿಪಬ್ಲಿಕನ್ ಪಕ್ಷದ ಕಿರಿಯ ಜಾರ್ಜ್ ಬುಷ್ ಜನವರಿ 2001ರಲ್ಲಿ ಅಧ್ಯಕ್ಷರಾಗಿ, ಎಂಟು ವರ್ಷಗಳ ಹಿಂದೆ ಭಾರತದ ಬಗ್ಗೆ ಸದ್ಭಾವನೆ ಹೊಂದಿದ್ದ ರಿಪಬ್ಲಿಕನ್ ಮುತ್ಸದ್ದಿಗಳು ಮತ್ತೆ ಅಧಿಕಾರ ಗಳಿಸಿದರು. ಪರಿಣಾಮವಾಗಿ ಭಾರತ-ಅಮೆರಿಕಾ ಸಂಬಂಧಗಳು ಏರುಹಾದಿಗೇರಿದವು.

    ವರ್ಷಾಂತ್ಯದ ಹೊತ್ತಿಗೆ ಅಲ್-ಖಯೀದಾ ಮತ್ತು ತಾಲಿಬಾನ್​ಗಳನ್ನು ಸದೆಬಡಿಯಲೋಸುಗ ಅಮೆರಿಕಾ ಪಾಕಿಸ್ತಾನವನ್ನು ಮತ್ತೆ ಓಲೈಸತೊಡಗಿದರೂ ಅದು ಭಾರತ-ಅಮೆರಿಕಾ ಸಂಬಂಧಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರದಂತೆ ಬುಷ್ ಸರ್ಕಾರ ನೋಡಿಕೊಂಡಿತು. ನಂತರದ ಎಂಟುವರ್ಷಗಳ ಬರಾಕ್ ಒಬಾಮಾ ಸರ್ಕಾರದ ನೀತಿಗಳು ಯಾವ ವ್ಯಾಖ್ಯಾನಕ್ಕೂ ಸಿಗದಷ್ಟು ತರ್ಕಶೂನ್ಯ. ಈ ಮಾತನ್ನು ಅರ್ಥಮಾಡಿಕೊಳ್ಳಬೇಕಾದರೆ ಒಬಾಮಾರ ನೀತಿಗಳನ್ನು ಡೊನಾಲ್ಡ್ ಟ್ರಂಪ್ ನೀತಿಗಳೊಡನೆ ಹೋಲಿಸಿ ವಿಶ್ಲೇಷಿಸಬೇಕಾಗುತ್ತದೆ. ಅದಕ್ಕೆ ಪೀಠಿಕೆಯಾಗಿ ನವೆಂಬರ್ 2008ರ ಚುನಾವಣೆಯಲ್ಲಿ ರಿಪಬ್ಲಿಕನ್ನರು ಸೋಲುವ ಸಮಯದಲ್ಲಿನ ಪರಿಸ್ಥಿತಿಯನ್ನು ನೀವು ಊಹಿಸಿಕೊಳ್ಳಲಾಗುತ್ತದೆಯೇ? ಆ ಸಮಯದಲ್ಲಿ ಒಸಾಮಾ ಬಿನ್ ಲಾದೆನ್​ಗಾಗಿ ಅಮೆರಿಕಾ ಇಡೀ ಮಧ್ಯ ಏಶಿಯಾವನ್ನು ಜಾಲಾಡುತ್ತಿತ್ತು. ಇಸ್ಲಾಮಿಕ್ ಭಯೋತ್ಪಾದನೆಯ ನಾಶ ತನ್ನ ಗುರಿ ಎಂದು ರಿಪಬ್ಲಿಕನ್ ಆಡಳಿತಗಾರರು ನಂಬಿದ್ದರು. ಅವರ ದುರದೃಷ್ಟ, ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡು ಹಳೆಯ ವೃತ್ತಿಗಳಿಗೆ ಹಿಂತಿರುಗಿದರು. ನಂತರ, ಅಲ್-ಖಯೀದಾ ಕುಸಿಯುತ್ತಾ ಸಾಗಿದ, ಇಸ್ಲಾಮಿಕ್ ಸ್ಟೇಟ್​ನ ಆಟಾಟೋಪ ಏರಿ ಇಳಿಯತೊಡಗಿದ ವರ್ತಮಾನದ ಜತೆಗೂ ನಿಕಟ ಸಂಪರ್ಕ ಕಳೆದುಕೊಂಡರು. ಟ್ರಂಪ್ ರಿಪಬ್ಲಿಕನ್ ಅಭ್ಯರ್ಥಿಯಾಗಿ ಕಣಕ್ಕಿಳಿದಾಗಲೇ ಇವರು ಅವರಿಗೆ ಸಲಹೆಗಾರರಾದರು. ಅವರೆಲ್ಲರ ಅಭಿಪ್ರಾಯದಲ್ಲಿ 9/11 ದಾಳಿಗೆ ಕಾರಣವಾದ ಅಲ್-ಖಯೀದಾ, ಅದಕ್ಕೆ ಸಹಕಾರ ನೀಡಿದ ತಾಲಿಬಾನ್, ಸಹಾನುಭೂತಿ ತೋರಿದ ಇಸ್ಲಾಮಿಕ್ ಜಗತ್ತಿನ ಜನ ಮತ್ತು ನಾಯಕರು ಅಮೆರಿಕಾದ ಬದ್ಧವೈರಿಗಳು; ಅಮೆರಿಕಾಗೆ ಸಂಕಟ ತರುವ ಅವಕಾಶವನ್ನು ಅವರಿಗೆ ಮತ್ತೆಂದೂ ನೀಡಬಾರದು! ಇವರು ಪಿಸುದನಿಯಲ್ಲಿ ಹೇಳಿಕೊಟ್ಟ ಮಾತುಗಳನ್ನು ನಯನಾಜೂಕಿಲ್ಲದ ಟ್ರಂಪ್ ಒರಟೊರಟಾಗಿಯೇ ದೊಡ್ಡದಾಗಿ ಹೇಳುವುದನ್ನು ನಾಲ್ಕು ವರ್ಷಗಳ ಹಿಂದೆಯೇ ಚುನಾವಣಾ ಪ್ರಚಾರದಲ್ಲೇ ನಾವು ನೋಡಿದೆವು, ಅಧ್ಯಕ್ಷರಾದ ಮೇಲೆ ಏಳು ಮುಸ್ಲಿಂ ದೇಶಗಳ ಜನ ಅಮೆರಿಕಾದೊಳಗೆ ಕಾಲಿಡದಂತೆ ಅವರು ಘೊಷಿಸಿದ ಕ್ರಮವನ್ನೂ, ಇರಾನ್ ಬಗ್ಗೆ ತಳೆದ ಕಟುನಿಲುವನ್ನೂ ಈ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳಬೇಕು.

    ಈಗ ಟ್ರಂಪ್​ರ ವ್ಯವಹಾರಚತುರತೆ ಅವರ ನೀತಿಗಳನ್ನು ಪ್ರಭಾವಿಸಿದ ಚಮತ್ಕಾರವನ್ನು ನೋಡೋಣ. ಒಸಾಮಾ ಬಿನ್ ಲಾದೆನ್ ಇಸ್ಲಾಮಾಬಾದ್​ಗೆ ಸನಿಹದ ಅಬ್ಬೊಟಾಬಾದ್​ನಲ್ಲೇ, ಪಾಕ್ ಸೇನೆಯ ರಕ್ಷಣೆಯಲ್ಲೇ ಪತ್ತೆಯಾದರೂ ಒಬಾಮಾ ಸರ್ಕಾರ ಪಾಕಿಸ್ತಾನದ ಬಗ್ಗೆ ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ. ಆದರೆ ಟ್ರಂಪ್ ಹಾಗಲ್ಲ. ಜನವರಿ 1, 2018ರಂದು ಅವರು ಹೇಳಿದ್ದು ಹೀಗೆ: ‘ಕಳೆದ ಹದಿನೈದು ವರ್ಷಗಳಲ್ಲಿ ನಾವು ಪಾಕಿಸ್ತಾನಕ್ಕೆ 33 ಬಿಲಿಯನ್ ಡಾಲರ್​ಗಳನ್ನು ಕೊಟ್ಟಿದ್ದೇವೆ. ಪ್ರತಿಯಾಗಿ ನಮಗೆ ಸಿಕ್ಕಿರುವುದು ಸುಳ್ಳುಗಳು ಮತ್ತು ಮೋಸಗಳು.’ ಈ ನಿಷ್ಠುರ ಮಾತುಗಳೊಂದಿಗೆ ಪಾಕಿಸ್ತಾನಕ್ಕೆ ನೀಡುತ್ತಿದ್ದ ಸೇನಾ-ಆರ್ಥಿಕ ಸಹಾಯಧನದಲ್ಲಿ 85% ಕಡಿತ ಮಾಡಿಬಿಟ್ಟರು. ತಾನು ಹೂಡುವ ಹಣ ತನಗೇ ಮಾರಕವಾಗಬಾರದು ಎಂಬ ವ್ಯವಹಾರಸ್ಥನ ಮನೋಭಾವವನ್ನು ಇಲ್ಲಿ ಕಾಣಬಹುದು.

    ಇನ್ನು ಚೀನಾದ ನವವಸಾಹತುಶಾಹಿ ಕುಟಿಲ ಯೋಜನೆಗಳು ಬಡರಾಷ್ಟ್ರಗಳ ಸ್ವಾತಂತ್ರ್ಯಕ್ಕೆ, ಅಮೆರಿಕಾದ ರಕ್ಷಣಾ ಹಿತಾಸಕ್ತಿಗಳು ಮತ್ತು ಜಾಗತಿಕ ಜವಾಬ್ದಾರಿಗಳಿಗೆ ಒಡ್ಡುತ್ತಿದ್ದ ಘಾತಕ ಸವಾಲುಗಳನ್ನು ನೋಡಿಯೂ ಅಧ್ಯಕ್ಷ ಒಬಾಮ ಯಾವುದೇ ಮಹತ್ವದ ತೀರ್ವನಗಳನ್ನು ಕೈಗೊಳ್ಳಲು ಹಿಂಜರಿದಿದ್ದರು. ಆತ್ಮಹತ್ಯೀಯ ಎನ್ನಬಹುದಾದ ಒಬಾಮಾರ ನೀತಿಗಳು ಚೀನಾದ ಮಹತ್ವಾಕಾಂಕ್ಷಿ ಅಧ್ಯಕ್ಷ ಷಿ ಜಿನ್​ಪಿಂಗ್​ರ ಹುಮ್ಮಸ್ಸನ್ನು ತಾರಾಮಾರು ಏರಿಸಿಬಿಟ್ಟಿದ್ದವು. ಟ್ರಂಪ್ ಇದೆಲ್ಲವನ್ನೂ ಬದಲಾಯಿಸಿಬಿಟ್ಟಿದ್ದಾರೆ. ಚೀನಾ ತನ್ನ ಕುಟಿಲ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸುವುದರ ಹಿಂದಿರುವುದು ಅಗಾಧ ಆರ್ಥಿಕ ಸಾಮರ್ಥ್ಯ ಎಂದು ಸರಿಯಾಗಿಯೇ ಗುರುತಿಸಿದ ಟ್ರಂಪ್ ಮತ್ತವರ ಸಲಹೆಗಾರರು ಚೀನಾದ ಆರ್ಥಿಕ ಸಾಮರ್ಥ್ಯವನ್ನೇ ಕುಗ್ಗಿಸಿ ಅದರ ಪರಭಕ್ಷಕ ಸ್ವಭಾವವನ್ನು ತಹಬಂದಿಗೆ ತರುವ ಯೋಜನೆಯನ್ನು 2017ರ ಮಧ್ಯದಿಂದ ಹಂತಹಂತವಾಗಿ ಜಾರಿಗೆ ತರುತ್ತಿದ್ದಾರೆ. ಪರಿಣಾಮವಾಗಿ ಚೀನಾದ ರಫ್ತುಗಳು ಕುಸಿದು ಆದಾಯ ಇಳಿಯುತ್ತಿದೆ. ಜತೆಗೆ, ಹಲವಾರು ಬಹುರಾಷ್ಟ್ರೀಯ ಕಂಪನಿಗಳು ಚೀನಾವನ್ನು ತೊರೆಯುತ್ತಿರುವುದರಿಂದ ಚೀನೀ ವಾರ್ಷಿಕ ನಿವ್ವಳ ರಾಷ್ಟ್ರೀಯ ಉತ್ಪಾದನೆಯೇ ಕುಸಿಯತೊಡಗಿದೆ. ಇಲ್ಲಿ ನಾವು ಕಾಣುವುದು ತನಗೆ ಘಾತಕವಾಗುವಂತೆ ತನ್ನ ಪ್ರತಿಸ್ಪರ್ಧಿಯನ್ನು ಬೆಳೆಯಗೊಡಬಾರದೆಂಬ ವ್ಯವಹಾರಸ್ಥನ ಲೆಕ್ಕಾಚಾರವನ್ನು. ಟ್ರಂಪ್​ರ ಈ ನೀತಿ ಅಮೆರಿಕಾಗಷ್ಟೇ ಅಲ್ಲ, ಜಾಗತಿಕ ಶಾಂತಿಗೂ ಮಹತ್ವದ ಕಾಣಿಕೆ ನೀಡಿದೆ. ಇದರ ಜತೆಗೆ ಪಶ್ಚಿಮ ಏಶಿಯಾದಲ್ಲಿ ಶಾಂತಿ ಸ್ಥಾಪನೆಗಾಗಿ ಟ್ರಂಪ್ ಸಾಧಿಸಿರುವ ಅಬ್ರಹಾಂ ಒಪ್ಪಂದವನ್ನು ಲೇಖನದ ಮೂರನೆಯ ಹಾಗೂ ಅಂತಿಮ ಭಾಗದಲ್ಲಿ ರ್ಚಚಿಸೋಣ.

    (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts