More

  ವಿಜಯವಾಣಿ ಸಂಪಾದಕೀಯ | ಸಹಜತೆಗೆ ಮರಳಲಿ ಕಾಶ್ಮೀರ

  ಸಂವಿಧಾನದ 370ನೇ ವಿಧಿ ಅನುಸಾರ ನೀಡಿದ್ದ ವಿಶೇಷ ಸ್ಥಾನಮಾನ ರದ್ದತಿಯ ಬಳಿಕ ಜಮ್ಮು-ಕಾಶ್ಮೀರ ಅಕ್ಟೋಬರ್ 31ರಿಂದಲೇ ಕೇಂದ್ರಾಡಳಿತ ಪ್ರದೇಶವಾಗಿ ಅಸ್ತಿತ್ವಕ್ಕೆ ಬಂದಿದೆ. ಆದರೆ, ವದಂತಿಗಳು, ಸಾಮಾಜಿಕ ಮಾಧ್ಯಮಗಳ ದುರ್ಬಳಕೆ, ಪ್ರತ್ಯೇಕತಾವಾದಿಗಳ ಉಪಟಳ ತಡೆಯಲು ಕಳೆದ ಆಗಸ್ಟ್​ನಿಂದ ಇಂಟರ್​ನೆಟ್ ಸೇವೆ ಸ್ಥಗಿತಗೊಳಿಸಲಾಗಿತ್ತು. ಇತ್ತೀಚೆಗೆ ಈ ವಿಷಯ ಸುಪ್ರೀಂ ಕೋರ್ಟ್​ಗೂ ತಲುಪಿ ನ್ಯಾಯಾಲಯ-‘ಇಂಟರ್​ನೆಟ್ ಸೇವೆಗಳನ್ನು ಒಂದು ವಾರದಲ್ಲಿ ಆರಂಭಿಸಲು ಸಾಧ್ಯವಾಗುವಂತೆ ಕ್ರಮ ಕೈಗೊಳ್ಳಿ’ ಎಂದು ಕೇಂದ್ರ ಸರ್ಕಾರವನ್ನು ಸೂಚಿಸಿತ್ತು. ಅದರಂತೆ, ಪ್ರೀಪೇಯ್್ಡ ಮೊಬೈಲ್

  ಎಸ್​ಎಂಎಸ್ ಮತ್ತು ದೂರವಾಣಿ ಕರೆ ಸೇವೆಯನ್ನು ಪುನಃ ಸ್ಥಾಪಿಸಲಾಗಿದೆ. ಅಲ್ಲದೆ, 10 ಜಿಲ್ಲೆಗಳಲ್ಲಿ ಪೋಸ್ಟ್​ಪೇಡ್ 2ಜಿ ಇಂಟರ್​ನೆಟ್ ಸೇವೆಗೆ ಮರುಚಾಲನೆ ಸಿಕ್ಕಿದೆ. ಹಾಗಾಗಿ, ಜನಸಾಮಾನ್ಯರು ನಿರಾಳರಾಗಿದ್ದು, ದಿನನಿತ್ಯದ ಸಂವಹನ, ಚಟುವಟಿಕೆಗಳು ಸುಗಮವಾಗಲಿವೆ.

  ಈ ಮಧ್ಯೆ ಕೆಲವರು ವದಂತಿಗಳ ಮೂಲಕ ಜನರಲ್ಲಿ ಭೀತಿ ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ಹಾಗಾಗಿ, ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಿ, ವಾಸ್ತವವನ್ನು ಮನದಟ್ಟು ಮಾಡಿಕೊಡುವುದೇ ಪರಿಹಾರ ಎಂಬ ನಿರ್ಧಾರಕ್ಕೆ ಬಂದಿರುವ ಕೇಂದ್ರ ಸರ್ಕಾರ ಸಚಿವರ ಮೂಲಕ ಅಭಿಯಾನವನ್ನೇ ನಡೆಸುತ್ತಿದೆ. ಭಾನುವಾರದಿಂದಲೇ ಈ ಅಭಿಯಾನ ಆರಂಭವಾಗಿದ್ದು, 36 ಸಚಿವರು ಒಂದು ವಾರದ ಕಾಲ ಕಾಶ್ಮೀರದ ಜನರನ್ನು ಭೇಟಿ ಮಾಡಿ, ಮಾತುಕತೆ ನಡೆಸಲಿದ್ದಾರೆ. ಈಗ, ಕೇಂದ್ರದ ಯೋಜನೆಗಳು ಕಾಶ್ಮೀರಕ್ಕೆ ತಲುಪಲಿರುವುದರಿಂದ ಅವುಗಳ ಬಗ್ಗೆ ಮಾಹಿತಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಸಂಪುಟ ಸದಸ್ಯರಿಗೆ ಸೂಚಿಸಿದ್ದಾರೆ. ಮುಖ್ಯವಾಗಿ, ಅಲ್ಲಿನ ಗ್ರಾಮೀಣ ಭಾಗದ ಅಭಿವೃದ್ಧಿಗೆ ಆದ್ಯತೆ ನೀಡಲು, ಉದ್ಯೋಗಸೃಷ್ಟಿಗೆ ಕ್ರಮ ಕೈಗೊಳ್ಳಲು ಕೇಂದ್ರ ಮುಂದಾಗಿದೆ. ಇತ್ತೀಚಿನ ಪಂಚಾಯತ್ ಚುನಾವಣೆಯಲ್ಲಿ ಸ್ಥಳೀಯರು ಉತ್ಸಾಹದಿಂದ ಭಾಗವಹಿಸಿದ್ದು, ಅಭಿವೃದ್ಧಿಯೆಡೆಗಿನ ಅವರ ಆಶಯಕ್ಕೆ ಸಾಕ್ಷಿಯಾಗಿದೆ ಎನ್ನಬಹುದು.

  ಕಳೆದ ಏಳು ದಶಕಗಳಿಂದ ಜಮ್ಮು-ಕಾಶ್ಮೀರ ಅಭಿವೃದ್ಧಿಯಲ್ಲಿ ಹಿಂದುಳಿದಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಪ್ರಸಕ್ತ ಪರಿಸ್ಥಿತಿ ಬದಲಾಗುತ್ತಿದೆ. ಪ್ರವಾಸೋದ್ಯಮ, ಸೇಬುಕೃಷಿ, ಔಷಧ ತಯಾರಿಕೆ ಸೇರಿ ಹಲವು ಅದ್ಭುತ ಅವಕಾಶಗಳನ್ನು ಹೊಂದಿರುವ ಈ ಪ್ರದೇಶಕ್ಕೆ ಈಗ ಬೇಕಾಗಿರುವುದು ಅಭಿವೃದ್ಧಿಯ ಬೆಳಕು. ಪ್ರತ್ಯೇಕತಾವಾದಿಗಳ ಸಂಚು, ಷಡ್ಯಂತ್ರ ಅಲ್ಲಿನ ಜನರ ಅರಿವಿಗೆ ಬಂದಿದೆ. ಹೀಗಿರುವಾಗ, ಇನ್ನಾದರೂ ರಾಜಕೀಯ ಕಾರಣಗಳಿಂದ ವಿವಾದವನ್ನು ಸೃಷ್ಟಿಸುವ ಯತ್ನಗಳು ನಿಲ್ಲಬೇಕು. 370ನೇ ವಿಧಿ ರದ್ದತಿಯಿಂದ ಜನರಿಗೆ ಒಳಿತೇ ಆಗಲಿದೆ. ಈ ಬಗ್ಗೆ ಪ್ರತಿಪಕ್ಷಗಳು ಕೂಡ ಯಾವುದೇ ವದಂತಿಗಳನ್ನು ಸೃಷ್ಟಿಸುವ ಪ್ರಯತ್ನ ಮಾಡಬಾರದು. ದೀರ್ಘ ಅಂಧಕಾರದಿಂದ ಈಗಷ್ಟೇ ಹೊರಬರುತ್ತಿರುವ ಜಮ್ಮು-ಕಾಶ್ಮೀರಕ್ಕೆ ಭರವಸೆ, ಹೊಸ ಚೈತನ್ಯ ಬೇಕಿದೆ. ಎಲ್ಲರ ಸಾಮೂಹಿಕ ಇಚ್ಛಾಶಕ್ತಿ ಮೂಲಕ ಅಭಿವೃದ್ಧಿಯ ಮುನ್ನೆಲೆಗೆ ತಂದು ನಿಲ್ಲಿಸಬೇಕಿದೆ. ಕೇಂದ್ರ ಸಚಿವರುಗಳು ಕೂಡ ಅಭಿಯಾನದ ಹೊತ್ತಲ್ಲಿ ರಾಜಕೀಯ ಮಾತನಾಡದೆ ಅಲ್ಲಿನ ಜನರ ಭಾವನೆಗಳಿಗೆ, ಕಷ್ಟಗಳಿಗೆ ಸ್ಪಂದಿಸಲಿ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts