More

    ಬಲಾಢ್ಯ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಸ್ಥಿತಿ ಉತ್ತಮ: ಆದರೂ ಲಾಕ್​ಡೌನ್​ ಅಗತ್ಯ-ವಿಜಯವಾಣಿ ಸಂಪಾದಕೀಯ

    ಏಪ್ರಿಲ್ 14ಕ್ಕೆ 21 ದಿನಗಳ ದಿಗ್ಬಂಧನ ಕೊನೆಗೊಳ್ಳಲಿತ್ತು. ಆದ್ದರಿಂದ, ಮುಂದೇನು ಎಂಬ ಕುತೂಹಲ ದೇಶದ ಎಲ್ಲರಿಗೂ ಇತ್ತು. ಆದರೆ, ದೇಶದಾದ್ಯಂತ ಹೆಚ್ಚುತ್ತಿರುವ ಕರೊನಾ ಸೋಂಕಿನ ಪ್ರಮಾಣ ಮತ್ತು ಸಾವಿನ ಸಂಖ್ಯೆಯನ್ನು ಗಮನಿಸಿದಾಗ ದಿಗ್ಬಂಧನ ಮತ್ತಷ್ಟು ಅವಧಿಗೆ ಮುಂದುವರಿಯಲಿದೆ ಎಂಬುದು ಶ್ರೀಸಾಮಾನ್ಯರಿಗೂ ಖಾತ್ರಿಯಾಗಿತ್ತು. ಒಡಿಶಾ, ಮಹಾರಾಷ್ಟ್ರ ಸರ್ಕಾರಗಳಂತೂ ಕೇಂದ್ರದ ಘೋಷಣೆಯ ಮುನ್ನವೇ ದಿಗ್ಬಂಧನವನ್ನು ವಿಸ್ತರಿಸಿದ್ದವು. ಮಂಗಳವಾರ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕರೊನಾ ಸೋಂಕು ನಿಯಂತ್ರಣಕ್ಕೆ ತರಲು ಲಾಕ್​ಡೌನ್ ಅವಧಿಯನ್ನು ಮೇ 3ರವರೆಗೂ ವಿಸ್ತರಿಸಿದ್ದಾರೆ ಮತ್ತು ಜನರೆಲ್ಲರೂ ಸಂಪೂರ್ಣ ಸಹಕಾರ ನೀಡಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ನಿವೇದಿಸಿದ್ದಾರೆ. ಏಪ್ರಿಲ್ 20ರ ಹೊತ್ತಿಗೆ ಪರಿಸ್ಥಿತಿ ಪರಾಮಶಿಸಿ ಕೆಲ ವಿನಾಯ್ತಿಗಳನ್ನು ಘೋಷಿಸುವ ಸಾಧ್ಯತೆ ಇದೆ. ಆದರೆ, ಈ ಒಂದು ವಾರ ಲಾಕ್​ಡೌನ್ ಮತ್ತಷ್ಟು ಕಠಿಣವಾಗಿ ಇರಲಿದೆ ಎಂಬ ಸುಳಿವನ್ನು ಪ್ರಧಾನಿಯೇ ನೀಡಿದ್ದಾರೆ.

    ಸಾಮಾಜಿಕ ದಿಗ್ಬಂಧನದಿಂದ ಎಲ್ಲ ವಲಯಗಳೂ ಕಷ್ಟಕ್ಕೆ ಸಿಲುಕಿವೆ. ಉದ್ಯಮ, ಸಣ್ಣಪುಟ್ಟ ವ್ಯಾಪಾರ ಎಲ್ಲವೂ ನಿಂತುಹೋಗಿರುವುದರಿಂದ ಆರ್ಥಿಕ ಚಟುವಟಿಕೆಗಳು ಸ್ತಬ್ಧಗೊಂಡಿವೆ. ಶ್ರೀಸಾಮಾನ್ಯರು ಹಲವು ತೊಂದರೆ ಎದುರಿಸುವಂತಾಗಿದೆ ಎಂಬುದು ನಿಜವೇ. ಆದರೆ, ಸೋಂಕು ವ್ಯಾಪಕವಾಗಿ ಹರಡದಂತೆ ತಡೆಯಲು ದಿಗ್ಬಂಧನದ ಹೊರತು ಅನ್ಯ ಮಾರ್ಗವಿಲ್ಲ. ಅಷ್ಟಕ್ಕೂ, ಭಾರತ ಬೇಗನೆ ಎಚ್ಚೆತ್ತುಕೊಂಡು ಲಾಕ್​ಡೌನ್ ವಿಧಿಸಿದ್ದರಿಂದ ಸೋಂಕು ಹರಡುವ ವೇಗ ಕೊಂಚ ತಗ್ಗಿದೆ. ಅಲ್ಲದೆ, ಜಗತ್ತಿನ ಬಲಾಢ್ಯ ರಾಷ್ಟ್ರಗಳ ಸ್ಥಿತಿಯನ್ನು ನೋಡಿದಾಗ ಭಾರತ ಉತ್ತಮ ಸ್ಥಿತಿಯಲ್ಲಿದೆ. ಬೇರೆ ದೇಶಗಳಲ್ಲಿ ಸೋಂಕು ಪ್ರಮಾಣ 25-30 ಪಟ್ಟು ಅಧಿಕವಾಗಿದೆ. ಹಾಗಂತ, ಭಾರತ ನೆಮ್ಮದಿಯಿಂದ ಇರುವಂತೆಯೂ ಇಲ್ಲ. ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಏರುತ್ತಿದ್ದು, ಈಗಾಗಲೇ 10 ಸಾವಿರದ ಗಡಿ ದಾಟಿದೆ. ಈ ಅವಧಿಯಲ್ಲಿ ಆರ್ಥಿಕ ಹಾನಿಯಂತೂ ನಿಶ್ಚಿತ; ಆದರೆ ಜನರ ಜೀವ ಉಳಿಸಬೇಕು ಎಂಬ ಗಟ್ಟಿ ನಿರ್ಧಾರವನ್ನು ಸರ್ಕಾರ ಮಾಡಿದೆ.

    ಬಲಿಷ್ಠ ರಾಷ್ಟ್ರಗಳು ಎಡವಿದ್ದೇ ಇಲ್ಲಿ. ಆರ್ಥಿಕತೆ ಕಾಪಾಡಿಕೊಳ್ಳುವ ಹುಚ್ಚುಸಾಹಸಕ್ಕೆ ಬಿದ್ದು, ಜನರ ಜೀವವನ್ನೇ ಬಲಿ ಕೊಡುತ್ತಿವೆ. ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ ಐದು ಲಕ್ಷ ದಾಟಿದ್ದರೆ, ಮೃತರ ಸಂಖ್ಯೆ 22 ಸಾವಿರದ ಗಡಿ ದಾಟಿದೆ. ಫ್ರಾನ್ಸ್, ಬ್ರಿಟನ್, ಇಟಲಿ ಸ್ಥಿತಿಯೂ ಭಿನ್ನವೇನಿಲ್ಲ. ತೀರಾ ಸಂಕಷ್ಟದ ಸಂದರ್ಭ ಬಂದಾಗ ಕಠಿಣ ನಿರ್ಧಾರ ತಳೆಯಲೇಬೇಕಾಗುತ್ತದೆ. ಹಾಗಾಗಿ, ಭಾರತ ಜನರ ಜೀವರಕ್ಷಣೆಗೆ ಮೊದಲ ಆದ್ಯತೆ ನೀಡಿರುವುದು ಇಲ್ಲಿಯ ಶ್ರೇಷ್ಠಸಂಸ್ಕೃತಿಯ ಪ್ರತೀಕವೂ ಹೌದು. ಕರೊನಾ ಸೋಂಕು ವಿರುದ್ಧದ ನಿರ್ಣಾಯಕ ಹೋರಾಟದಲ್ಲಿ ಈಗ ಜನರ ಪಾತ್ರ ಬಹುಮುಖ್ಯವಾಗಿದೆ. ಕಳೆದ 21 ದಿನಗಳ ಅವಧಿಯಲ್ಲಿ ಅಲ್ಲಲ್ಲಿ ಲಾಕ್​ಡೌನ್ ಉಲ್ಲಂಘಿಸಿದ್ದರ ಪರಿಣಾಮ ಏನಾಗಿದೆ ಎಂಬುದರ ಚಿತ್ರಣ ದೇಶದ ಮುಂದಿದೆ. ಕೆಲವರ ಇಂಥ ಉಡಾಫೆ, ಬೇಜವಾಬ್ದಾರಿ ವರ್ತನೆಗೆ ಇಡೀ ದೇಶವೇ ಬೆಲೆ ತೆರಬೇಕಾಗುತ್ತದೆ ಎಂಬುದು ನೆನಪಿನಲ್ಲಿ ಇರಲಿ. ಅಗತ್ಯ ವಸ್ತುಗಳ ಸರಬರಾಜು, ಲಭ್ಯತೆಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಆದ್ದರಿಂದ ಜನರು ಸಂಯಮ ಕಾಯ್ದುಕೊಂಡು, ವಿವೇಚನೆಯಿಂದ ವರ್ತಿಸಿದ್ದಲ್ಲಿ ಪ್ರಸಕ್ತ ಸಂಕಷ್ಟದಿಂದ ಬೇಗ ಹೊರಬರಬಹುದು.

    ಪರೀಕ್ಷೆ ಬಗ್ಗೆ ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಅನಗತ್ಯ ಆತಂಕ ಬೇಡ: ಸರ್ಕಾರದ ಅಭಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts