More

    ಶುಲ್ಕಕ್ಕಾಗಿ ಒತ್ತಡ ಬೇಡ – ಇದು ವಿಜಯವಾಣಿಯ ಜನಪರ ನಿಲುವು

    ದಿಢೀರ್ ಎಂದು ಬಂದೆರಗಿದ ಕರೊನಾ ಸೋಂಕು ಮತ್ತು ಅದರಿಂದ ಅನಿವಾರ್ಯವಾಗಿ ವಿಧಿಸಲಾಗಿರುವ ದಿಗ್ಬಂಧನದಿಂದ ಎಲ್ಲ ವಲಯಗಳು ಸಂಕಷ್ಟಕ್ಕೆ ಸಿಲುಕಿವೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇರುವುದರಿಂದ ನಿರ್ಬಂಧಗಳನ್ನು ಮತ್ತಷ್ಟು ದಿನ ವಿಸ್ತರಿಸುವ ಸಾಧ್ಯತೆಯನ್ನು ತಳ್ಳಿಹಾಕಲಾಗದು. ಜೂನ್​ನಿಂದ ಶೈಕ್ಷಣಿಕ ವರ್ಷ ಆರಂಭವಾಗಬೇಕಿದ್ದು, ಬೇಸಿಗೆ ಅವಧಿಯಲ್ಲೇ ಪ್ರವೇಶಾತಿಗಳು ಆರಂಭಗೊಳ್ಳುವುದು ವಾಡಿಕೆ. ಈ ಬಾರಿ ಕರೊನಾ ದಿಗ್ಬಂಧನದ ಪರಿಣಾಮ ಈ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ. ಹೊಸ ಶೈಕ್ಷಣಿಕ ವರ್ಷದ ತರಗತಿಗಳಿಗಾಗಿ ಕೆಲ ಶಿಕ್ಷಣ ಸಂಸ್ಥೆಗಳು ಈಗಲೇ ಶುಲ್ಕ ಪಾವತಿಸುವಂತೆ ಹೇಳುತ್ತಿವೆ. ಗಾಯದ ಮೇಲೆ ಬರೆ ಎಂಬಂತೆ ಇದು ಪಾಲಕರ ಕಷ್ಟವನ್ನು ಹೆಚ್ಚಿಸಿದೆ. ದೈನಂದಿನ ಖರ್ಚುಗಳನ್ನು ಹೊಂದಿಸುವುದು, ಇಎಂಐ ಸೇರಿ ಇತರೆ ಬದ್ಧತೆಗಳನ್ನು ನಿರ್ವಹಿಸುವುದೇ ದುಸ್ತರವಾಗಿರುವಾಗ ಶಾಲಾ ಶುಲ್ಕ ಪಾವತಿಯ ಹೊರೆ ನಿರ್ವಹಿಸುವುದು ತುಂಬ ಕಷ್ಟ. ಆಹಾರ, ಬಟ್ಟೆ, ಸೂರು ಹೇಗೆ ಮೂಲಸೌಕರ್ಯವೋ ಶಿಕ್ಷಣ ಕೂಡ ಅಷ್ಟೇ ಮುಖ್ಯ. ಈಗಿನ ದಿನಗಳಲ್ಲಿ ಬಡತನ ರೇಖೆಯ ಪಾಲಕರು ಕೂಡ ಮಕ್ಕಳನ್ನು ಶಿಕ್ಷಣದಿಂದ ವಂಚಿತರಾಗಿಸುವುದಿಲ್ಲ. ಹೇಗೋ ಕಷ್ಟಪಟ್ಟು, ಇತರೆ ಖರ್ಚು ಕಡಿಮೆ ಮಾಡಿಯಾದರೂ ಶುಲ್ಕ ತುಂಬುತ್ತಾರೆ. ಆದರೆ, ಈಗಿನ ಪರಿಸ್ಥಿತಿ ಭಿನ್ನ ಮತ್ತು ಕ್ಲಿಷ್ಟವಾಗಿದೆ.

    ಇಂಥ ಹೊತ್ತಲ್ಲಿ ಡೊನೇಷನ್​ಗೆ ಬೇಡಿಕೆ ಇಡುವುದು, ಶುಲ್ಕವನ್ನು ಕೂಡಲೇ ಪಾವತಿಸುವಂತೆ ಒತ್ತಡ ಹೇರುವುದು ಸಲ್ಲ. ಶೈಕ್ಷಣಿಕ ಸಂಸ್ಥೆಗಳಿಗೂ ಅವುಗಳದ್ದೇ ಆದ ನಿರ್ವಹಣಾ ವೆಚ್ಚಗಳು ಇರುತ್ತವೆ ಎಂಬುದು ನಿಜವಾದರೂ ಈ ಕ್ಲಿಷ್ಟಕರ ಸನ್ನಿವೇಶದಲ್ಲಿ ಮಕ್ಕಳು ಮತ್ತು ಅವರ ಪಾಲಕರ ಹಿತವೇ ಮುಖ್ಯವಾಗಬೇಕಾಗಿರುವುದು ಅಪೇಕ್ಷಣೀಯ. ‘ವಿಜಯವಾಣಿ’ ಮತ್ತು ದಿಗ್ವಿಜಯ ನ್ಯೂಸ್ ಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಿಕ್ಷಣ ಸಚಿವ ಸುರೇಶ್​ಕುಮಾರ್ ಅವರು ಈ ಸಮಸ್ಯೆ ಪರಿಹಾರದ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿರುವುದು ಸಮಾಧಾನದ ಸಂಗತಿ. ಖಾಸಗಿ ಶಾಲೆಗಳಲ್ಲಿ ಡೊನೇಷನ್ ಮತ್ತು ಶುಲ್ಕ ಹಾವಳಿಗೆ ಶೀಘ್ರವೇ ಕಡಿವಾಣ ಹಾಕಲಾಗುವುದು ಎಂಬ ಭರವಸೆ ನೀಡಿದ್ದಾರೆ. ಅಲ್ಲದೆ, ಡೊನೇಷನ್ ಹಾವಳಿ ಕುರಿತು ವ್ಯಾಪಕ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ, ಹೈಕೋರ್ಟ್ ಕೂಡ ಪ್ರಸಕ್ತ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ. ನ್ಯಾಯಾಲಯ ನೀಡಿರುವ ಸೂಚನೆಗಳನ್ನು ಗಮನದಲ್ಲಿ ಇಟ್ಟುಕೊಂಡು ಹೊಸ ನೀತಿ ಅನುಷ್ಠಾನಕ್ಕೆ ತರಲಾಗುವುದು ಎಂದೂ ಸಚಿವರು ಹೇಳಿರುವುದು ಭರವಸೆ ಮೂಡಿಸಿದೆ.

    ಸರ್ಕಾರದ ಎಚ್ಚರಿಕೆ ಮತ್ತು ಶಿಸ್ತು ಕ್ರಮ ಕೈಗೊಳ್ಳುವ ಸೂಚನೆ ಹೊರತಾಗಿಯೂ ಕೆಲ ಸಂಸ್ಥೆಗಳು, ಶಾಲೆಗಳು ಶುಲ್ಕಕ್ಕಾಗಿ ಒತ್ತಡ ಹೇರುತ್ತಿರುವುದು ಕಹಿಸತ್ಯ. ಕೆಲ ಬಿಕ್ಕಟ್ಟಿನ ಸಂದರ್ಭಗಳಲ್ಲಾದರೂ ವಾಣಿಜ್ಯ ಹಿತದೃಷ್ಟಿಯನ್ನು ಬದಿಗಿರಿಸಿ, ಮಾನವೀಯ ನೆಲೆಯಲ್ಲಿ ಗಟ್ಟಿ ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ ಎಂಬುದನ್ನು ಇಂಥವರು ಅರ್ಥ ಮಾಡಿಕೊಳ್ಳಬೇಕು. ಪಾಲಕರಿಗೆ ಮಾನಸಿಕ ಒತ್ತಡವಾಗದಂತೆ ನೋಡಿಕೊಳ್ಳಬೇಕು. ಪರೀಕ್ಷೆಯ ಬಗ್ಗೆಯೂ ಗೊಂದಲಗಳಿದ್ದು, ಈ ಬಗ್ಗೆ ಸರ್ಕಾರ ಆದಷ್ಟು ಬೇಗ ಸ್ಪಷ್ಟ ನಿಲುವು ತಳೆದು, ವಿದ್ಯಾರ್ಥಿಗಳು ಮತ್ತು ಪಾಲಕರ ಗೊಂದಲವನ್ನು ಕೊನೆಗೊಳಿಸಬೇಕು.

    VIDEO| ಜನರ ಜಾಗೃತಿಗಾಗಿ ಬಂತು ಕರೊನಾ ಕಾರು: ಇದರ ವಿಶೇಷತೆ ಕೇಳಿದ್ರೆ ಅಚ್ಚರಿಗೊಳ್ತೀರಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts