ನೀತಿಶಿಕ್ಷಣದ ಅಗತ್ಯ

ಮಕ್ಕಳನ್ನು ಲೈಂಗಿಕ ದೌರ್ಜನ್ಯಗಳಿಂದ ಸಂರಕ್ಷಿಸಲೆಂದು ಪೋಕ್ಸೋ ಕಾಯ್ದೆಯನ್ನು ರೂಪಿಸಲಾಗಿದೆ. ಮತ್ತೊಂದೆಡೆ ಮಕ್ಕಳ ಮೇಲಿನ ಲೈಂಗಿಕ ಶೋಷಣೆಯ ನಿದರ್ಶನಗಳು ಇನ್ನೂ ವರದಿಯಾಗುತ್ತಿವೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು, 12 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರ ಮೇಲೆ ಅತ್ಯಾಚಾರ ಎಸಗುವವರಿಗೆ ಮರಣದಂಡನೆ ವಿಧಿಸಲು ನಿರ್ಧರಿಸಿರುವ ಕೇಂದ್ರ ಸರ್ಕಾರ, ಈ ಸಂಬಂಧವಾಗಿ ಪೋಕ್ಸೋ ಕಾಯ್ದೆಯ ತಿದ್ದುಪಡಿ ಪ್ರಕ್ರಿಯೆ ಆರಂಭಿಸಿರುವುದಾಗಿ ಸವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ ಹಾಗೂ ಪ್ರಮಾಣಪತ್ರವನ್ನೂ ಸಲ್ಲಿಸಿದೆ. ಪ್ರಜೆಗಳ, ಅದರಲ್ಲೂ ಮಕ್ಕಳ ಹಿತರಕ್ಷಣೆಯ ಉದ್ದೇಶದ ಇಂಥ ಯಾವುದೇ ಕ್ರಮ ಸ್ವಾಗತಾರ್ಹವೇ. ಆದರೆ, ಈ ಚರ್ಚಾವಿಷಯದ ಮತ್ತೊಂದು ಮಗ್ಗುಲನ್ನೂ ಸೂಕ್ಷ್ಮವಾಗಿ ಅವಲೋಕಿಸಬೇಕಾದ ಅಗತ್ಯವಿದೆ.

ಅರ್ಥವ್ಯವಸ್ಥೆಯ ಒಂದು ಅಂಗಭಾಗವೇ ಆಗಿರುವ ತೆರಿಗೆ ಪದ್ಧತಿ ಕುರಿತು ಒಂದು ಅಭಿಪ್ರಾಯವಿದೆ. ವಿವಿಧ ಬಾಬತ್ತುಗಳ ಮೇಲೆ ವಿಧಿಸಲಾಗುವ ತೆರಿಗೆಯ ಮಟ್ಟದಲ್ಲಿ ಏರಿಕೆಯಾದಷ್ಟೂ ತೆರಿಗೆ ಸಂಗ್ರಹಣೆಯ ಪ್ರಮಾಣದಲ್ಲಿ ಕುಸಿತವಾಗುತ್ತದೆ (ಹಾಗೂ ತೆರಿಗೆಯಿಂದ ತಪ್ಪಿಸಿಕೊಳ್ಳುವುದಕ್ಕೆ ವಾಮಮಾರ್ಗಗಳನ್ನು ಹುಡುಕುವವರ ಸಂಖ್ಯೆ ಹೆಚ್ಚಾಗುತ್ತದೆ) ಎಂಬುದೇ ಆ ಗ್ರಹಿಕೆ. ಇದನ್ನು ಕಾನೂನು-ಕಟ್ಟಳೆಗಳ ವಿಷಯಕ್ಕೂ ಸಮೀಕರಿಸಬಹುದು. ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ರಾಜಕೀಯ ಇವೇ ಮೊದಲಾದ ವ್ಯವಸ್ಥೆಯ ವಿವಿಧ ವಲಯಗಳ ಸ್ವಾಸ್ಥ್ಯವನ್ನು ಕಾಪಾಡಲೆಂದು ನಿರ್ದಿಷ್ಟ ಮಾರ್ಗದರ್ಶಿ ಸೂತ್ರಗಳಿರಬೇಕು, ಕಾನೂನು-ಕಾಯ್ದೆಯ ಅಂಕುಶವಿರಬೇಕು ಎಂಬುದೇನೋ ಒಪ್ಪತಕ್ಕ ವಿಷಯವೇ. ಆದರೆ ಕಾನೂನು ಬಿಗಿಯಾದಷ್ಟೂ ಅದನ್ನು ಧಿಕ್ಕರಿಸುವವರ, ಉಪೇಕ್ಷಿಸುವವರ ಸಂಖ್ಯೆಯೂ ಇದ್ದೇ ಇರುತ್ತದೆ ಎಂಬ ಅಭಿಪ್ರಾಯಕ್ಕೂ ಸಾಕಷ್ಟು ನಿದರ್ಶನಗಳು ಸಿಗುತ್ತವೆ. ಹಾಗಂತ ಕಾನೂನಿನ ಭಯ ಇರಬಾರದು ಅಂತಲ್ಲ; ಎಲ್ಲ ಸಮಸ್ಯೆಗಳನ್ನೂ ಕಾನೂನೊಂದೇ ಪರಿಹರಿಸಲಾಗದು, ಪೂರಕ ಮಾಗೋಪಾಯಗಳೂ ಇಲ್ಲಿ ಪಾತ್ರ ವಹಿಸುತ್ತವೆ ಎಂದರ್ಥ. 2012ರ ಡಿಸೆಂಬರ್​ನಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಪ್ರಕರಣದ ಉಲ್ಲೇಖವಿಲ್ಲಿ ಅಗತ್ಯ. ಈ ಪ್ರಕರಣ ದೇಶಾದ್ಯಂತ ಹುಟ್ಟುಹಾಕಿದ ಸಂಚಲನೆ ಹಾಗೂ ರೂಪುಗೊಂಡ ಗಂಭೀರ ವಾತಾವರಣವನ್ನು ಪರಿಗಣನೆಗೆ ತೆಗೆದುಕೊಂಡು ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯದ ಆರೋಪಿಗಳಿಗೆ ಯಥೋಚಿತ ಕಠಿಣಶಿಕ್ಷೆ ವಿಧಿಸು ವಂತಾಗಲು ಕಾನೂನನ್ನು ಮತ್ತಷ್ಟು ಹರಿತವಾಗಿಸಲಾಯಿತು. ಆದರೆ ಕಾಮಾಂಧ ಕಣ್ಣುಗಳು ಪಾಠವನ್ನೇ ಕಲಿಯಲಿಲ್ಲವಲ್ಲ? ಹೀಗಾಗಿ ಕಾನೂನಿನ ನೆಲೆಗಟ್ಟಿನ ಜತೆಜತೆಗೆ ಸಾಮಾಜಿಕ ವಿಜ್ಞಾನ, ಮನೋವಿಜ್ಞಾನ ಮತ್ತು ನೈತಿಕ ಶಿಕ್ಷಣದ ಆಯಾಮದಲ್ಲೂ ಪರಿಹಾರೋಪಾಯಗಳನ್ನು ಹುಡುಕುವ ಅಗತ್ಯವಿದೆ.

ಉದ್ಯೋಗ ದಕ್ಕಿಸಿಕೊಳ್ಳುವುದಕ್ಕೆ ಅಥವಾ ವ್ಯವಹಾರ ಪ್ರಪಂಚದಲ್ಲಿ ತೊಡಗುವುದಕ್ಕೆ ವಿದ್ಯಾರ್ಥಿಗಳೆಂಬ ಕಚ್ಚಾಸಾಮಗ್ರಿಗಳನ್ನು ಒದಗಿಸುವುದೇ ಮುಖ್ಯ ಚಟುವಟಿಕೆಯಾಗಿಬಿಟ್ಟಿರುವ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ನೈತಿಕತೆಯ ನಿರಂತರ ಪೂರಣಕ್ಕೆ ಇರುವ ಸಮಯ-ಸಂದರ್ಭ ಕಮ್ಮಿ ಎಂದೇ ಹೇಳಬೇಕು. ಪ್ರಾಥಮಿಕ ಶಾಲಾ ಹಂತದಲ್ಲಿ ಎಲ್ಲೋ ಕೆಲವೆಡೆ ನೀತಿಕತೆ ಹೇಳುವುದಕ್ಕೆ ಆಸ್ಪದ ಇರುವುದು ಬಿಟ್ಟರೆ, ಶಿಕ್ಷಣ ವ್ಯವಸ್ಥೆಯ ವಿವಿಧ ಸ್ತರಗಳಲ್ಲಿ ನೀತಿಶಿಕ್ಷಣಕ್ಕೊಂದು ನಿರಂತರತೆ ಇಲ್ಲವೆಂದೇ ಹೇಳಬೇಕು. ಹೀಗಾಗಿ ವಿಜ್ಞಾನಿ, ತಂತ್ರಜ್ಞಾನಿ, ಇಂಜಿನಿಯರು ಹೀಗೆ ಏನೇನೋ ಆಗುತ್ತಿರುವ ಭವ್ಯಭಾರತದ ಪ್ರಜೆಗಳು ನಿಜಾರ್ಥದಲ್ಲಿ ಮನುಷ್ಯರಾಗುವಂತಾಗುವುದಕ್ಕೆ ಪೂರಕ ವಾತಾವರಣವೇ ಇಲ್ಲವಾಗುತ್ತಿದೆ. ‘ಏನಾದರೂ ಆಗು ಮೊದಲು ಮಾನವನಾಗು’ ಎಂಬ ಕವಿವಾಣಿ ಹೊಮ್ಮಿರುವುದು ಇಂಥ ಅನಿವಾರ್ಯತೆಯನ್ನು ಮನಗಂಡೇ. ಆದ್ದರಿಂದ, ಸಮಾಜದ ಸ್ವಾಸ್ಥ್ಯ ಮತ್ತಷ್ಟು ಹಾಳಾಗದಂತಿರಲು ಸರ್ಕಾರ, ಮನಶ್ಶಾಸ್ತ್ರಜ್ಞರು, ಸಮಾಜ ವಿಜ್ಞಾನಿಗಳು, ಶಿಕ್ಷಣತಜ್ಞರು ಈ ನಿಟ್ಟಿನಲ್ಲಿ ಚಿಂತನ-ಮಂಥನ ನಡೆಸಬೇಕಿದೆ.

One Reply to “ನೀತಿಶಿಕ್ಷಣದ ಅಗತ್ಯ”

Leave a Reply

Your email address will not be published. Required fields are marked *