More

    ಎಚ್ಚರಿಕೆಯ ಪಾಠ

    ಕೇರಳದ ಕೊಚ್ಚಿಮರಡ್ ನಗರಸಭೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಿರ್ವಿುಸಲಾದ ನಾಲ್ಕು ಬಹುಮಹಡಿ ಕಟ್ಟಡಗಳನ್ನು ಸುಪ್ರೀಂ ಕೋರ್ಟ್ ಆದೇಶದ ಅನುಸಾರ ಶನಿವಾರ ಸ್ಪೋಟಕ ಬಳಸಿ ನೆಲಸಮಗೊಳಿಸಲಾಗಿದೆ. ಕರಾವಳಿ ನಿಯಂತ್ರಣ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಹದಿನಾರು ಮಹಡಿಯ ಈ ಕಟ್ಟಡಗಳನ್ನು ನೆಲಸಮಗೊಳಿಸಲಾಗಿದೆ. ಕಟ್ಟಡ ತ್ಯಾಜ್ಯ ಎರಡೂವರೆ ತಿಂಗಳ ಒಳಗೆ ತೆರವುಗೊಳಿಸಲಾಗುತ್ತದೆ. ಮನೆ ಕಳೆದುಕೊಂಡವರಿಗೆ 25 ಲಕ್ಷ ರೂ. ಪರಿಹಾರ ವಿತರಿಸುವಂತೆ ನ್ಯಾಯಾಲಯ ಸೂಚಿಸಿದೆ. ಈ ಮನೆಗಳನ್ನು ಒಂದರಿಂದ ಒಂದೂವರೆ ಕೋಟಿ ರೂಪಾಯಿಗೆ ಖರೀದಿಸಿದ್ದ ಜನರು ಮಾನಸಿಕ ಆಘಾತ ಅನುಭವಿಸಿದ್ದಾರೆ. ಬೇರೆ ಕಡೆಗೆ ಸ್ವಂತ ಮನೆ ಹೊಂದುವುದು ಸದ್ಯಕ್ಕಂತೂ ಸಾಧ್ಯವಿಲ್ಲದ ಮಾತಾಗಿದ್ದು, ಬಾಡಿಗೆ ಮನೆಗಳನ್ನು ಆಶ್ರಯಿಸಬೇಕಿದೆ. ಇಲ್ಲಿ ಮಾನವೀಯ ಸಂಕಟದ ತೀವ್ರತೆ ಇದೆಯಾದರೂ, ನಿರ್ವಣವೇ ಅಕ್ರಮವಾಗಿದ್ದರಿಂದ ಅನುಕಂಪ ತೋರುವಂತಿಲ್ಲ.

    ಮನೆ ಖರೀದಿ ಮಾಡುವಾಗ ಕಾಗದ ಪತ್ರಗಳನ್ನು, ಆ ಜಮೀನಿನ ಹಿನ್ನೆಲೆ, ಕಾನೂನಾತ್ಮಕ ಮಾನ್ಯತೆ ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಬೇಕೆಂಬ ಎಚ್ಚರಿಕೆಯ ಮಾತನ್ನು ಜನ ಅದೆಷ್ಟೋ ಬಾರಿ ಮರೆತೇ ಬಿಡುತ್ತಾರೆ. ಇಲ್ಲಿ ಇನ್ನೊಂದು ಆಯಾಮವೂ ಇದೆ. ಕಟ್ಟಡ ನಿರ್ಮಾಣ ಸಂಸ್ಥೆಗಳು ಅಧಿಕಾರಿಗಳಿಗೆ ಲಂಚ ನೀಡಿ ಜಮೀನಿಗೆ ಸಂಬಂಧಿಸಿದ ಕಡತಗಳೆಲ್ಲವೂ ‘ಸರಿಯಾಗಿವೆ’ ಎಂಬಂತೆ ಮಾಡಿಬಿಡುತ್ತಾರೆ. ಇದು ಜನಸಾಮಾನ್ಯರ ಅರಿವಿಗೆ ಬರುವುದಿಲ್ಲ. ಮತ್ತೊಂದು ಕಷ್ಟ ಎಂದರೆ, ಜಮೀನಿಗೆ, ಮನೆಖರೀದಿಗೆ ಸಂಬಂಧಿಸಿದ ಒಂದೊಂದು ದಾಖಲಾತಿ ಸಂಗ್ರಹಿಸಬೇಕಾದರೆ ಶ್ರೀಸಾಮಾನ್ಯರು ಹಲವು ಬಾರಿ ಕಚೇರಿಗಳಿಗೆ ಎಡತಾಕಬೇಕಾಗುತ್ತದೆ. ಉದ್ಯೋಗದಲ್ಲಿನ ಒತ್ತಡ, ಮನೆಯ ಜವಾಬ್ದಾರಿಗಳ ನಡುವೆ ಓಡಾಡಲು ಸಾಧ್ಯವಿಲ್ಲದ ಜನ ದುಡ್ಡು ಕೊಟ್ಟಾದರೂ ಸರಿ, ಕಾಗದಪತ್ರ ಮಾಡಿಸಿಕೊಂಡರಾಯಿತು ಎಂಬ ನಿರ್ಣಯಕ್ಕೆ ಬರುತ್ತಾರೆ. ಆದರೆ, ಮುಂದೆ ಇಂಥ ಸಂಕಷ್ಟಗಳು ಬಂದೋದಗಿದರೆ ಪರಿಹಾರ ಸುಲಭಸಾಧ್ಯವೇನಲ್ಲ.

    ಇದು ಬರೀ ಕೇರಳದ ಕಥೆಯಲ್ಲ. ದೇಶದ ಯಾವುದೇ ಮಹಾನಗರಗಳ ಸ್ಥಿತಿ ಇದಕ್ಕಿಂತ ಭಿನ್ನವೇನಿಲ್ಲ. ಅಕ್ರಮ ಕಟ್ಟಡಗಳು ಅಧಿಕಾರಿಗಳ ಮೂಗಿನಡಿಯಲ್ಲೇ ನಿರ್ವಣವಾಗುತ್ತಿದ್ದರೂ, ಕ್ರಮ ಕೈಗೊಳ್ಳುತ್ತಿಲ್ಲ. ಕೇರಳದ ಕ್ರಮದ ನಂತರ ಬೆಂಗಳೂರಿನಲ್ಲೂ ಆತಂಕ ಆರಂಭವಾಗಿದೆ. ಬಿಬಿಎಂಪಿಯೇ ಗುರುತಿಸಿರುವಂತೆ ಬೆಂಗಳೂರಿನಲ್ಲಿ 1.20 ಲಕ್ಷ ಅಕ್ರಮ ಕಟ್ಟಡಗಳಿವೆಯಂತೆ! ಕೆರೆಯನ್ನು, ರಾಜಕಾಲುವೆಯನ್ನು ಆಕ್ರಮಿಸಿ ಮಾಡಿದ ನಿರ್ವಣಗಳಿಗೆ ಲೆಕ್ಕವೇ ಇಲ್ಲ. ಅನುಮತಿಗೆ ವ್ಯತಿರಿಕ್ತವಾಗಿ ನಿರ್ವಿುಸಲಾದ ಕಟ್ಟಡಗಳಂತೂ ವ್ಯಾಪಕ ಪ್ರಮಾಣದಲ್ಲಿವೆಯಂತೆ. ಹಾಗೊಂದು ವೇಳೆ ಕ್ರಮಕ್ಕೆ ಮುಂದಾದರೆ ಎಷ್ಟೊಂದು ಕಟ್ಟಡಗಳು ಧರೆಗುರುಳಲಿವೆ ಎಂಬುದು ನಿಖರವಾಗಿ ಹೇಳುವುದು ಕಷ್ಟ. ಕೇರಳದ ಪ್ರಕರಣ ಎಲ್ಲರಿಗೂ ಪಾಠ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ನಿರ್ಮಾಣ ಕಂಪನಿಗಳು ಗೃಹ ಸಮುಚ್ಚಯಗಳನ್ನು ಕಟ್ಟುವ ಮುಂಚೆ, ಆ ಜಮೀನಿನ ಬಗ್ಗೆ ಸ್ಪಷ್ಟ, ನಿಖರ ದಾಖಲಾತಿಗಳನ್ನು ಹೊಂದಬೇಕು. ಯಾವುದೇ ಕಾರಣಕ್ಕೂ ಜನಸಾಮಾನ್ಯರಿಗೆ ಮೋಸ ಆಗುವಂಥ ಕೃತ್ಯಗಳು ಮರುಕಳಿಸಬಾರದು. ಜನರೂ ಅಷ್ಟೇ. ಮನೆಖರೀದಿ ಹುಡುಗಾಟಿಕೆಯ ವಿಷಯವಲ್ಲ. ಹಾಗಾಗಿ, ಸಾಕಷ್ಟು ಜಾಗ್ರತೆ ವಹಿಸಿ, ಪರಾಮರ್ಶೆ ನಡೆಸಿ, ವಿಷಯತಜ್ಞರ ಸಲಹೆ, ಸೂಚನೆ ಪಡೆದು ಮುಂದೆ ಸಾಗಬೇಕು. ಏಕೆಂದರೆ, ಮನೆ ಕಳೆದುಕೊಂಡ ಮೇಲೆ ಮಾಡುವ ರೋದನಕ್ಕೆ ಪರಿಹಾರವೇ ಇಲ್ಲ. ಮೊದಲೇ ಎಚ್ಚೆತ್ತುಕೊಂಡು, ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು ಮುಖ್ಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts