More

    ಶತಮಾನದ ಭಾರತಕ್ಕೆ ಅಮೃತವೇ ಅಡಿಪಾಯ; ಸ್ವಾತಂತ್ರ್ಯ-75ರಿಂದಲೇ ಆರಂಭವಾಗಬೇಕು ಚಿಂತನೆ

    ಸಾವಿರಾರು ಭಾಷೆ, ನೂರಾರು ಜಾತಿ, ಹತ್ತಾರು ಬುಡಕಟ್ಟು ಹಾಗೂ ಅರ್ಧ ಡಜನ್ ಪಂಗಡಗಳನ್ನು ಒಳಗೊಂಡ ಭಾರತಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಿರ್ವಹಣೆ ಮಾಡುವ ತಾಕತ್ತಿಲ್ಲ, ಕೆಲವೇ ವರ್ಷದಲ್ಲಿ ಕುಸಿತ ಕಾಣುತ್ತದೆ ಎಂಬ ಟೀಕೆಗಳನ್ನು ಕಳೆದ 75 ವರ್ಷದಲ್ಲಿ ಮೀರಿ ಭಾರತ ಬೆಳೆದಿದೆ. ಆದರೆ ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಅಭಿವೃದ್ಧಿ ಹೊಂದಲು ಹತ್ತಾರು ಕ್ಷೇತ್ರಗಳಲ್ಲಿ ಸುಧಾರಣೆ, ದೂರದೃಷ್ಟಿ ಹೊಂದುವುದರಿಂದ ಮಾತ್ರ ಸ್ವಾತಂತ್ರ್ಯದ ಶತಮಾನೋತ್ಸವ ಅರ್ಥಪೂರ್ಣ. ಇದು ಭಾರತ ಸ್ವಾತಂತ್ರ್ಯ-75 ಸಂದರ್ಭದಲ್ಲಿ ಭವಿಷ್ಯದ ಭಾರತ ನಿರ್ವಣಕ್ಕೆ ನಡೆಸಬೇಕಾದ ಆಲೋಚನೆಗಳ ಕುರಿತು ‘ವಿಜಯವಾಣಿ’ ಆಯೋಜಿಸಿದ್ದ ಸಂವಾದದಲ್ಲಿ ನಾಡಿನ ಗಣ್ಯ, ಚಿಂತಕ ರಾಜಕಾರಣಿಗಳು ಹಾಗೂ ದಕ್ಷ, ಪ್ರಾಮಾಣಿಕ ಅಧಿಕಾರಿ ಸೂಚಿಸಿದ ಮಾರ್ಗಸೂಚಿ. ಶಾಸಕಾಂಗ, ಆಡಳಿತದಲ್ಲಿ 3-4 ದಶಕದ ಅನುಭವ ಇರುವ ಕಾಂಗ್ರೆಸ್ ನಾಯಕ ಬಿ.ಎಲ್. ಶಂಕರ್, ಚಿಂತಕ ರಾಜಕಾರಣಿ ಡಾ. ವಾಮನಾಚಾರ್ಯ, ನಿವೃತ್ತ ಅಧಿಕಾರಿ ತಿಪ್ಪೇಸ್ವಾಮಿ ರಾಜಕೀಯ ಭೇದ ಮೀರಿ ಭಾರತದ ಮುನ್ನಡೆಗೆ ಅಜೆಂಡಾ ಸೂಚಿಸಿದರು. ಶಿಕ್ಷಣ, ಆರೋಗ್ಯ, ಆಡಳಿತ ಸುಧಾರಣೆ, ಚುನಾವಣೆ ವ್ಯವಸ್ಥೆಗಳ ಪ್ರಾಮಾಣಿಕ ಸುಧಾರಣೆಗಳಿಂದ ಭಾರತದ ಬೆಳವಣಿಗೆ ಆಗಲಿದ್ದು, ಆಗ ಮಾತ್ರ ಹೆಮ್ಮೆಯಿಂದ ಶತಮಾನೋತ್ಸವ ಆಚರಿಸಿಕೊಳ್ಳಬಹುದು ಎಂದು ಮೂವರೂ ಅಭಿಪ್ರಾಯಪಟ್ಟರು.

    ಆಡಳಿತ ವೆಚ್ಚ ಹಾಗೂ ಪರಿಸರ

    ಮಿನಿಮಮ್ ಗವರ್ನಮೆಂಟ್, ಮ್ಯಾಕ್ಸಿಮಮ್ ಗವರ್ನೆನ್ಸ್ ಎಂಬ ಪ್ರಧಾನಿಯವರ ಘೋಷಣೆಯನ್ನು ಜಾರಿಗೆ ತರುವುದು ಬಹುಮುಖ್ಯ. ದೇಶದ ಜನರ ತೆರಿಗೆಯಿಂದ ಲಭಿಸಿದ ಶೇ. 60-65 ಹಣ ವ್ಯವಸ್ಥೆಯ ನಿರ್ವಹಣೆ, ಆಡಳಿತಾತ್ಮಕ ವಿಚಾರಕ್ಕೇ ವೆಚ್ಚವಾದರೆ ಅಭಿವೃದ್ಧಿ ಅಸಾಧ್ಯ. ಆಡಳಿತಕ್ಕೆ ಗರಿಷ್ಠ ಶೇ. 25 ವೆಚ್ಚ ಮಾಡಿ ಉಳಿದ ಹಣವನ್ನು ವೃತ್ತಿಪರ ಶಿಕ್ಷಣಕ್ಕೆ ಮೀಸಲಿಡಬೇಕು. ದೇಶದ ಭೂಭಾಗದ ಶೇ. 30-40 ಅರಣ್ಯದಿಂದ ಆವೃತವಾದರೆ ವನ್ಯಜೀವಿಗಳೂ ನೆಲೆ ಕಂಡುಕೊಳ್ಳುತ್ತವೆ. ಆಗ ಮಾತ್ರ ಮಾನವ ಸುಖವಾಗಿರಬಲ್ಲ. ಸ್ಮಾರ್ಟ್​ಸಿಟಿಗಳ ಚಿಂತನೆಯ ನಡುವೆ ಗಾಂಧೀಜಿಯವರ ಗ್ರಾಮಸ್ವರಾಜ್ಯ ಪರಿಕಲ್ಪನೆಯನ್ನು ಸಾಕಾರಗೊಳಿಸಿ, ಗ್ರಾಮಪಂಚಾಯಿತಿ ಆಡಳಿತವನ್ನು ಸದೃಢಗೊಳಿಸಬೇಕು. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಜತೆಗೆ ಮಾಧ್ಯಮವೂ ಇಂದು ಭ್ರಷ್ಟಾಚಾರದಿಂದ ಹೊರತಾಗಿಲ್ಲ. ಚುನಾವಣೆ ನಡೆಸುವ ಸಂಪೂರ್ಣ ವ್ಯವಸ್ಥೆ ಬದಲಾಗಿ, ಉತ್ತರದಾಯಿತ್ವ ನಿಗದಿಯಾಗುವುದಾದರೆ ಸಂವಿಧಾನದ ಎಲ್ಲ ಅಂಗಗಳೂ ಶುದ್ಧವಾಗುತ್ತವೆ. ದೇಶದಲ್ಲಿ ಈ ವಿಚಾರದ ಕುರಿತು ಒಮ್ಮತ ಮೂಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ, ಚುನಾವಣಾ ರಾಜಕೀಯವನ್ನು ಮರೆತು ಹೆಜ್ಜೆಯಿಡಬೇಕು. ಚುನಾವಣೆ ಸುಧಾರಣೆ ನಿಟ್ಟಿನಲ್ಲಿ ಒಂದು ದೇಶ ಒಂದು ಚುನಾವಣೆ ಎನ್ನುವುದು ಉತ್ತಮ ಹೆಜ್ಜೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ.

    | ಡಾ. ಬಿ.ಎಲ್. ಶಂಕರ್

    ಶತಮಾನದ ಭಾರತಕ್ಕೆ ಅಮೃತವೇ ಅಡಿಪಾಯ; ಸ್ವಾತಂತ್ರ್ಯ-75ರಿಂದಲೇ ಆರಂಭವಾಗಬೇಕು ಚಿಂತನೆಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆ ಅಗತ್ಯವಾಗಿ ನಡೆಯಬೇಕು. ಮುಖ್ಯವಾಗಿ ಪಕ್ಷಗಳ ಆಂತರಿಕ ಪ್ರಜಾಪ್ರಭುತ್ವ ಬಲಗೊಳ್ಳಬೇಕು. ಎಲ್ಲಿಯವರೆಗೆ ವಿಪ್ ಹೊರಡಿಸಲಾಗುತ್ತದೆಯೋ ಅಲ್ಲಿಯವರೆಗೆ ಸ್ವತಂತ್ರ ಸದಸ್ಯ ಎಂದು ಹೇಳಲು ಸಾಧ್ಯವಿಲ್ಲ.

    | ಡಾ. ಬಿ.ಎಲ್. ಶಂಕರ್ ಕಾಂಗ್ರೆಸ್ ನಾಯಕ

    ಜಾತಿ ಮತ್ತು ಭ್ರಷ್ಟಾಚಾರ ಮನಸ್ಸಿನ ಸ್ಥಿತಿ

    • ಭ್ರಷ್ಟಾಚಾರ ತಡೆಗಟ್ಟಬೇಕು ಎಂಬುದು ಸರಿಯಾದರೂ, ಭ್ರಷ್ಟಾಚಾರ ನಿಗ್ರಹ ಸಂಸ್ಥೆಗಳು ದುರ್ಬಲವಾಗುತ್ತಿವೆ…

    – ದೇಶಕ್ಕೆ ಇದೀಗ ಎರಡು ಪ್ರಮುಖ ಸವಾಲುಗಳಿವೆ. ಮೊದಲನೆಯದು ಜಾತಿ, ಎರಡನೆಯದು ಭ್ರಷ್ಟಾಚಾರ. ಹಿಂದಿನ ಕಾಲದಲ್ಲಿ ಭ್ರಷ್ಟಾಚಾರ ಇತ್ತಾದರೂ, ಆತ್ಮಸಾಕ್ಷಿಗೆ ಅಂಜಿ ಮಿತಿಯಲ್ಲಿರುತ್ತಿದ್ದರು. ಆದರೆ ಇಂದು ಜನಮಾನಸದಲ್ಲೂ ನಾಯಕತ್ವದ ಪರಿಕಲ್ಪನೆ ಬದಲಾಗಿದೆ. ದೊಡ್ಡ ಕಾರಿನಿಂದ, ದುಬಾರಿ ಬಟ್ಟೆಗಳನ್ನು ತೊಟ್ಟವ ಬಂದರೆ, ದೊಡ್ಡ ಮನೆ ಕಟ್ಟಿಸಿದವನಾದರೆ ಹೆಚ್ಚು ಗೌರವ ನೀಡುತ್ತಾರೆ, ಅವನೇ ಬೆಳವಣಿಗೆಯ ಮಾದರಿ ಎಂದು ಪರಿಗಣಿಸುತ್ತಾರೆ. ಹಾಗಾಗಿ, ಭ್ರಷ್ಟಾಚಾರ ಎಂಬುದು ಸ್ವಾತಂತ್ರ್ಯದ ನಂತರದಲ್ಲಷ್ಟೆ ಆರಂಭವಾಯಿತು ಎನ್ನಲಾಗದು. ಭ್ರಷ್ಟಾಚಾರಿಗಳನ್ನು ದೂರವಿಟ್ಟು ರಾಜನು ಆಡಳಿತವನ್ನು ಹೇಗೆ ನಡೆಸಬೇಕು ಎಂಬ ಕಿವಿಮಾತನ್ನು ಚಾಣಕ್ಯ ತಿಳಿಸಿದ್ದಾನೆ. ಈಗಾಗಲೆ ಅನೇಕ ಕಾನೂನುಗಳಿವೆ. ಮತ್ತಷ್ಟು ಕಾನೂನಿನ ಅಗತ್ಯವಿಲ್ಲ. ಕಾನೂನಿನಿಂದಲೇ ಎಲ್ಲವನ್ನೂ ಪರಿಹರಿಸಲು ಸಾಧ್ಯವಿಲ್ಲ. ಡಾ. ಬಿ.ಆರ್. ಅಂಬೇಡ್ಕರ್ ಅವರೇ ಹೇಳಿದಂತೆ, ಸಂವಿಧಾನ ಎಷ್ಟೇ ಉತ್ತಮವಾಗಿದ್ದರೂ ಅದನ್ನು ಅನುಷ್ಠಾನಗೊಳಿಸುವವರ ನಿಷ್ಠೆಯಲ್ಲಿ ಸಮಸ್ಯೆಯಿದ್ದರೆ ಅದರಿಂದ ಯಾವ ಉತ್ತಮ ಕಾರ್ಯಗಳೂ ಆಗುವುದಿಲ್ಲ. ಕೆಟ್ಟ ಸಂವಿಧಾನವಿದ್ದಾಗ್ಯೂ ಅದನ್ನು ಅನುಷ್ಠಾನಗೊಳಿಸುವವರ ನಿಷ್ಠೆ ಸರಿಯಾಗಿದ್ದರೆ ಅದರಿಂದ ಉತ್ತಮ ಕೆಲಸಗಳೇ ಆಗುತ್ತವೆ. ಜಾತಿ ಹಾಗೂ ಭ್ರಷ್ಟಾಚಾರಗಳು ಮಾನಸಿಕ ಸ್ಥಿತಿಗಳೇ ಹೊರತು ಆರ್ಥಿಕ ಸಮಸ್ಯೆಗಳಲ್ಲ. ಗಾಂಧೀಜಿ, ಜಯಪ್ರಕಾಶ ನಾರಾಯಣ ಮುಂತಾದವರು ಕಾನೂನಿಗೆ ಹೆದರಿ ಪ್ರಾಮಾಣಿಕರಾಗಿರಲಿಲ್ಲ. ಈಗಿನ ಭ್ರಷ್ಟಾಚಾರ ನಡೆಯುತ್ತಿರುವುದೂ ಸಂವಿಧಾನದ ಎಲ್ಲ ಅಂಗಗಳ ಪರಸ್ಪರ ಸಮನ್ವಯದಿಂದಲೇ ಎಂಬುದು ಸತ್ಯ.

    ನ್ಯಾಯಾಧೀಶರಾಗಿ ನಿವೃತ್ತರಾದ ಕೂಡಲೆ ವಿವಿಧ ರಾಜಕೀಯ ಹುದ್ದೆಗಳಿಗೆ ನಾಮಾಂಕಿತರಾಗುತ್ತಾರೆ, ಸೇನಾ ಮುಖ್ಯಸ್ಥರಾಗಿದ್ದವರು ಒಂದು ಪಕ್ಷದ ಪರ ನಿಂತು ಚುನಾವಣೆಯಲ್ಲಿ ಗೆಲ್ಲುತ್ತಾರೆ, ಮಾಧ್ಯಮ ಕ್ಷೇತ್ರದಿಂದಲೂ ರಾಜಕಾರಣಕ್ಕೆ ಆಗಮಿಸುತ್ತಿದ್ದಾರೆ. ಸಂಸದೀಯ ವ್ಯವಸ್ಥೆಯಲ್ಲಿ ಅನೇಕ ದೋಷಗಳು ಮನೆಮಾಡಿದ್ದು, ಜಾತಿಯೂ ಅದರಲ್ಲೊಂದು. ಜಾತಿ ರಾಜಕಾರಣಕ್ಕೆ ವಿರುದ್ಧವಾಗಿ ನಡೆದುಕೊಳ್ಳಬೇಕು ಎಂಬುದು ಸಂಸ್ಕಾರದಿಂದಲೇ ಬರಬೇಕು.

    ಶತಮಾನದ ಭಾರತಕ್ಕೆ ಅಮೃತವೇ ಅಡಿಪಾಯ; ಸ್ವಾತಂತ್ರ್ಯ-75ರಿಂದಲೇ ಆರಂಭವಾಗಬೇಕು ಚಿಂತನೆ
    ಸಂವಾದದ ವೇಳೆ ಉಪಸ್ಥಿತರಿದ್ದ ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಪದ್ಮಶ್ರೀ ಡಾ.ವಿಜಯ ಸಂಕೇಶ್ವರ ಅವರು ಗಣ್ಯ ಅತಿಥಿಗಳಿಗೆ ಪುಸ್ತಕ ಉಡುಗೊರೆ ನೀಡಿದರು.

    ಆದರ್ಶ ಸ್ಥಿತಿ ಸುಲಭ ಮಾರ್ಗವಲ್ಲ: ಆದರ್ಶ ಸಮಾಜದ ಸ್ಥಿತಿಗೆ ತೆರಳುವುದು ಅಷ್ಟು ಸುಲಭದ ವಿಚಾರವಲ್ಲ. ರಾಜಕಾರಣದಲ್ಲಿ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷದ ನಡುವಿನ ಸಂಬಂಧವೂ ಹದಗೆಟ್ಟಿದೆ. ನೆಹರೂ ಕುಟುಂಬವನ್ನು ಸದಾ ಜರೆಯುತ್ತಿದ್ದ ಲೋಹಿಯಾ ಅವರು ಸಂಸತ್ತಿನಲ್ಲಿ ಇಲ್ಲ ಎಂದರೆ ಅದಕ್ಕೆ ಗೌರವವಿಲ್ಲ ಎಂದು ಸ್ವತಃ ನೆಹರೂ ಹೇಳಿದ್ದರು. ಇದೇ ರೀತಿ ಆಚಾರ್ಯ ಕೃಪಲಾನಿ, ಅಟಲ್ ಸೇರಿ ಅನೇಕ ವಿಚಾರಗಳಲ್ಲಿ ರಾಜಕಾರಣ ಮರೆತು ಮುತ್ಸದ್ದಿತನ ತೋರಿದ ಉದಾಹರಣೆಗಳಿವೆ.

    ಅತ್ಯಂತ ಯೋಜಿತ ಸಂವಿಧಾನ: ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಮೆರಿಕ, ಬ್ರಿಟನ್ ಸಂವಿಧಾನಗಳು ಮಾದರಿ ಎನ್ನಲಾಗುತ್ತದೆ. ಆದರೆ, ತೀರಾ ಇತ್ತೀಚಿನವರೆಗೂ ಅಮೆರಿಕದಲ್ಲಿ ಮಹಿಳೆಯರಿಗೆ, ಕಪು್ಪವರ್ಣೀಯರಿಗೆ ಮತದಾನದ ಹಕ್ಕು ನೀಡಿರಲಿಲ್ಲ. ಬ್ರಿಟನ್ನಿನಲ್ಲೂ ಬಿಳಿಯೇತರರಿಗೆ ರಾಜಕೀಯ ಅಧಿಕಾರ ಇರಲಿಲ್ಲ. ಆದರೆ ಭಾರತದಲ್ಲಿ, ರಾಜನಿಂದ ಸಾಮಾನ್ಯನವರೆಗೆ, ಲಿಂಗಭೇದವಿಲ್ಲದೆ ಎಲ್ಲರಿಗೂ ಒಂದೇ ಮತ, ಒಂದೇ ಮೌಲ್ಯ ಎಂಬ ಅಂಶವನ್ನು ಸಂವಿಧಾನದ ಪ್ರಾರಂಭದ ಹಂತದಲ್ಲೆ ರೂಪಿಸಲಾಯಿತು. ಈ ನಿಟ್ಟಿನಲ್ಲಿ ಸಂವಿಧಾನಕರ್ತೃಗಳ ಆಲೋಚನೆಯನ್ನು ಶ್ಲಾಘಿಸಬೇಕು.

    ಅಕ್ಷರ, ಅನ್ನ, ಆರೋಗ್ಯ, ಆಶ್ರಯ: ಈ ನಾಲ್ಕು ಸಂಗತಿಗಳು ನಮ್ಮ ರಾಷ್ಟ್ರೀಯ ನೀತಿಯಾಗಬೇಕು. ಯಾರೇ ಅಧಿಕಾರಕ್ಕೆ ಬಂದರೂ ಈ ಕ್ಷೇತ್ರಗಳಿಗೆ ನಿರ್ದಿಷ್ಟ ಅನುದಾನ ಮೀಸಲು, ಕಾಲಮಿತಿಯೊಳಗೆ ಸದ್ಬಳಕೆ ಕಡ್ಡಾಯವಾಗಬೇಕು ಎಂದು ಬಿ.ಎಲ್. ಶಂಕರ್ ಹೇಳಿದರು. ಮೂಲ ಸವಲತ್ತುಗಳ ಆಮೂಲಾಗ್ರ ಸುಧಾರಣೆ, ಜಾತಿಗೊಂದು ಹಾಸ್ಟೆಲ್ ಕೈಬಿಡುವುದು, ಪ್ರತಿ ಗ್ರಾ.ಪಂ.ಗೊಂದು ಇಂಗ್ಲಿಷ್ ಒಂದು ಭಾಷೆಯಾಗಿ ಕಲಿಸುವ ವಸತಿ ಶಾಲೆ, ಆರೋಗ್ಯ ಕೇಂದ್ರ, ತಾಲೂಕುಮಟ್ಟದ ಆಸ್ಪತ್ರೆಗಳ ಉನ್ನತೀಕರಣ, ಅದೆಲ್ಲಕ್ಕಿಂತ ಮುಖ್ಯವಾಗಿ ಗ್ರಾಮ ಸ್ವರಾಜ್ಯ ವ್ಯವಸ್ಥೆ ಜಾರಿ ಎಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸಲಿದೆ ಎಂಬುದು ಅವರ ಸ್ಪಷ್ಟ ಅಭಿಮತವಾಗಿತ್ತು.

    ಸಾಧನೆಯು ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಆಗಿದ್ದಲ್ಲ

    ಅನುಭವದ ಕೊರತೆ, ಅಸಾಮರ್ಥ್ಯ, ಜಾತಿ-ಮತಗಳಲ್ಲಿ ವಿಭಜನೆ ಎಂಬಿತ್ಯಾದಿ ಕಾರಣಗಳನ್ನು ಮುಂದಿಟ್ಟು ಅಂದಿನ ಬ್ರಿಟನ್ ಪ್ರಧಾನಿ ವಿನ್​ಸ್ಟನ್ ರ್ಚಚಿಲ್, ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ವಿರೋಧಿಸಿದ್ದಷ್ಟೇ ಅಲ್ಲ, ಬಲವಾದ ಅನುಮಾನ ವ್ಯಕ್ತಪಡಿಸಿದ್ದರು. ಅಂತಹ ರ್ಚಚಿಲ್​ಗೆ ಭಾರತ ಕಾರ್ಯತಃ ದಿಟ್ಟ ಉತ್ತರ ನೀಡಿರುವುದು ಸ್ವಾತಂತ್ರ್ಯ ಅಮೃತ ಮಹೋತ್ಸವದ ಹೆಮ್ಮೆ. ಸಾರ್ವತ್ರಿಕ ಚುನಾವಣೆಗಳಲ್ಲಿ ಕಮ್ಯುನಿಸ್ಟರು, ಪ್ರಾದೇಶಿಕ ಪಕ್ಷಗಳು ಗೆಲ್ಲಬಹುದು. ಅದೆಷ್ಟೇ ಜಿದ್ದಾಜಿದ್ದಿಯ ಪೈಪೋಟಿ ನಡೆದರೂ ಅಧಿಕಾರ ಹಸ್ತಾಂತರವಾಗಿ ನಡೆಯುತ್ತದೆ. ಈ ಮಾತಿಗೆ ಅಮೆರಿಕ ಅಧ್ಯಕ್ಷ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಸೋತ ನಂತರದ ವಿದ್ಯಮಾನ, ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಬಳಿಕ ಗೆದ್ದ ಪಕ್ಷ ಅಧಿಕಾರ ಹಿಡಿದ ರೀತಿಯೇ ನಿದರ್ಶನ. ಸಂಸದೀಯ ಅಥವಾ ಅಧ್ಯಕ್ಷೀಯ ಇವೆರಡರಲ್ಲಿ ಯಾವುದು ಭಾರತಕ್ಕೆ ಸೂಕ್ತವೆಂಬ ಚರ್ಚೆಯಾದ ಬಳಿಕವೇ ಸಂಸದೀಯ ವ್ಯವಸ್ಥೆಯನ್ನು ಒಪ್ಪಿದ್ದೇವೆ. 600ಕ್ಕಿಂತಲೂ ಹೆಚ್ಚು ರಾಜ್ಯಗಳು, ಸಂಸ್ಥಾನಗಳಲ್ಲಿ ಹಂಚಿಹೋಗಿದ್ದ ದೇಶವನ್ನು ಭಾಷಾವಾರು ರಾಜ್ಯಗಳ ರಚನೆ ಮೂಲಕ ಒಗ್ಗೂಡಿಸಲಾಯಿತು. ಅನಕ್ಷರತೆ, ಬಡತನ, ಅನಭಿವೃದ್ಧಿ, ಕೈಗಾರಿಕೆಗಳ ಕೊರತೆ ಇತ್ಯಾದಿ ಸವಾಲುಗಳನ್ನು ಮೆಟ್ಟಿನಿಂತ ಭಾರತ ವಿಶ್ವದ ಐದನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಶಿಕ್ಷಣ, ಆರೋಗ್ಯ, ತಂತ್ರಜ್ಞಾನ, ಇತ್ಯಾದಿ ಕ್ಷೇತ್ರಗಳಲ್ಲಾದ ಸಾಧನೆಯು ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಆಗಿದ್ದಲ್ಲ. ಆದರೆ ನಿರೀಕ್ಷಿತ ಫಲ ಸಿಗದೆ ಹೋಗಿದ್ದರ ಕಾರ್ಯ-ಕಾರಣಗಳನ್ನು ಪರಾಮಶಿಸಿ ಮುಂದಡಿ ಇರಿಸಬೇಕಾದ ಅಗತ್ಯವಿದೆ.

    ಆರ್ಥಿಕತೆ ಜತೆಗೆ ಸಮಗ್ರತೆ

    ಅಭಿವೃದ್ಧಿ ಎಂದ ಕೂಡಲೆ ಮೊದಲಿಗೆ ಆರ್ಥಿಕತೆಯೇ ಕಣ್ಮುಂದೆ ಬರುತ್ತದೆ. ಆರ್ಥಿಕತೆಯ ಅಭಿವೃದ್ಧಿ ಎಂದರೆ ಉದ್ಯಮದ ಬೆಳವಣಿಗೆ. ಭಾರತದ 138 ಕೋಟಿ ಜನಸಂಖ್ಯೆಯನ್ನು ಗಮನಿಸಿ, ಹೆಚ್ಚು ಜನರಿಗೆ ಉದ್ಯೋಗ ನೀಡಬಲ್ಲ ಉದ್ಯಮಗಳಿಗೆ ಪ್ರೋತ್ಸಾಹ ನೀಡಬೇಕು. ಚೀನಾ ನಮಗೆ ಮಾದರಿ ಅಲ್ಲದಿದ್ದರೂ ಉದ್ಯೋಗ ಸೃಜನೆ, ಕೈಗಾರಿಕೆ ಬೆಳವಣಿಗೆಯಲ್ಲಿ ಮುಂದಿನ 25 ವರ್ಷದಲ್ಲಿ ಭಾರತವು ಈಗಿನ ಚೀನಾ ಸ್ಥಿತಿಯಲ್ಲಿರಲು ಸಾಧ್ಯವಿದೆ. ಮುಂದಿನ 25 ವರ್ಷದ ಭಾರತದ ಪರಿಸ್ಥಿತಿ, ಜನಸಂಖ್ಯೆಯನ್ನು ಗಣನೆಗೆ ತೆಗೆದುಕೊಂಡರೆ, ಈಗಿನ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಅದಕ್ಕೆ ಪೂರಕವಾಗಿರುತ್ತದೆಯೇ ಎಂಬ ಚರ್ಚೆ ನಡೆಯಬೇಕು. ಜಾತಿಯಿಂದಲೇ ಎಲ್ಲವನ್ನೂ ನಿರ್ಧರಿಸುವ ವಿಚಿತ್ರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವಿದ್ದೇವೆ. ಪ್ರತಿಭೆ, ಸಾಮರ್ಥ್ಯದ ಆಧಾರದಲ್ಲಿ ವ್ಯವಸ್ಥೆ ನಡೆಯುವಂತೆ ಗಂಭೀರ ಚಿಂತನೆ ನಡೆಯಬೇಕಿದೆ. ಮಕ್ಕಳ ಮುಖದಲ್ಲಿ ಮಾಯವಾಗುತ್ತಿರುವ ಮುಗ್ಧತೆಯನ್ನು ಹೇಗೆ ಪುನಃರೂಪಿಸುವುದು ಎಂಬ ಚರ್ಚೆ ಅನೇಕ ದೇಶಗಳಲ್ಲಿ ನಡೆದಿದ್ದು, ತುಸು ಅವಾಸ್ತವಿಕ ಎನ್ನಿಸಿದರೂ ಇಂತಹ ಗುರಿಗಳನ್ನು ಅರಸಿ ಹೊರಟಾಗಲೇ ಆದರ್ಶ ಸ್ಥಿತಿಯತ್ತ ನೆಲೆಗೊಳ್ಳುತ್ತೇವೆ.

    | ಡಾ. ವಾಮನ್ ಆಚಾರ್ಯ

    ಶತಮಾನದ ಭಾರತಕ್ಕೆ ಅಮೃತವೇ ಅಡಿಪಾಯ; ಸ್ವಾತಂತ್ರ್ಯ-75ರಿಂದಲೇ ಆರಂಭವಾಗಬೇಕು ಚಿಂತನೆಜಾತಿ ಇಲ್ಲದ ವ್ಯವಸ್ಥೆ, ಸಮಾಜದ ಕಟ್ಟಕಡೆಯ ವ್ಯಕ್ತಿ ಏಳಿಗೆ ದೃಷ್ಟಿಯಿಂದ ಸಂಸದೀಯ ವ್ಯವಸ್ಥೆ ಪುನರಾವಲೋಕನ ಆಗಬೇಕು. ಹಳೆಯದೆಲ್ಲವು ಒಳಿತೆಂಬ ಮಾನಸಿಕತೆಯಿಂದ ಹೊರ ಬಂದು ಬದಲಾವಣೆಗೆ ತೆರೆದುಕೊಳ್ಳಬೇಕು. ಜನಸಂಖ್ಯಾ ಸ್ಪೋಟವನ್ನು ಗಂಭೀರವಾಗಿ ಪರಿಗಣಿಸಬೇಕು.

    | ಡಾ.ವಾಮನಾಚಾರ್ಯ ಬಿಜೆಪಿ ಧುರೀಣ

    ಜಾತ್ಯತೀತ ತತ್ತ್ವ ವರ್ಕ್​ಔಟ್ ಆಗಿಲ್ಲ

    ದೇಶದ ಸಂಸದೀಯ ವ್ಯವಸ್ಥೆಯಲ್ಲಿ ಜಾತಿಯೇ ಮೇಲುಗೈ ಸಾಧಿಸಿರುವುದು ಸರಿಯಲ್ಲ. ನಾವು ಅನುಸರಿಸಿದ ಜಾತ್ಯತೀತ ತತ್ತ್ವ ವರ್ಕ್​ಔಟ್ ಆಗಿಲ್ಲ, ಸಮಾಜವಾದವನ್ನು ಎಂದೋ ಕೈಬಿಟ್ಟಿದ್ದೇವೆ. ಮತ್ತೆ ಪ್ರಾಮುಖ್ಯತೆ ಪಡೆದುಕೊಂಡಿರುವ ಆಯುರ್ವೆದ ಪದ್ಧತಿ ಬಗ್ಗೆ ಕಳೆದ 500 ವರ್ಷಗಳಿಂದ ಸಂಶೋಧನೆಯೇ ಆಗಿಲ್ಲ. ಹೀಗಾಗಿ ಹಳೆಯದೆಲ್ಲ ಒಳ್ಳೆಯವು ಎಂಬ ಮಾನಸಿಕತೆಯಿಂದ ಹೊರಗೆ ಬರಬೇಕಾಗಿದೆ. ಬುದ್ಧ, ಬಸವ, ಅಂಬೇಡ್ಕರ್ ಹೆಸರಿನಲ್ಲಿ ವಿಭಜಿಸುತ್ತಿರುವ ಈ ಕಾಲಘಟ್ಟದಲ್ಲಿ ಹೊಸತನಕ್ಕೆ ತುಡಿತ ಅಗತ್ಯವಿದೆ. ಸ್ವತಂತ್ರ ಪೂರ್ವದಲ್ಲಿ ಆಡಳಿತದ ಕೆಲವು ಮಾದರಿಗಳಿದ್ದವು. ಸಂಸದೀಯ ವ್ಯವಸ್ಥೆ ಬಗ್ಗೆ ರ್ಚಚಿಸಿ ಒಪ್ಪಿಕೊಳ್ಳುವ ಸಂದರ್ಭದಲ್ಲಿ ಜಾತಿ ವ್ಯವಸ್ಥೆಯ ಪ್ರಬಲ ನಿರ್ವಹಣೆ ಬಗ್ಗೆ ಚಿಂತನೆ ಆಗಿತ್ತೆ ಎಂದು ಕೇಳಿಕೊಳ್ಳಬೇಕಾಗಿದೆ. ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪ್ರಣೀತಸೂತ್ರಗಳು ಫಲ ನೀಡಿವೆ. ಆದರೂ ಕಟ್ಟಕಡೆಯ ವ್ಯಕ್ತಿಯ ಏಳಿಗೆ ಸಾಧಿಸಿಲ್ಲ, ದಲಿತರು ಮತ್ತು ಬುಡಕಟ್ಟು ಸಮುದಾಯಗಳ ಪರಿಸ್ಥಿತಿ ಶೋಚನೀಯ. ಪರಿಸರ, ವನ್ಯಜೀವಿಗಳ ನಾಶ ಸಂಕಷ್ಟದ ಸ್ಥಿತಿ ಸೃಷ್ಟಿಸಿವೆ. ಜಾತಿಯಿಲ್ಲದ ವ್ಯವಸ್ಥೆ, ಸಂವೇದನಾಶೀಲ ಸಮಾಜ, ಪ್ರಾಮಾಣಿಕ ರಾಜಕೀಯ ನಾಯಕರು ಹಾಗೂ ಅಧಿಕಾರಿಗಳ ಅಗತ್ಯವಿದೆ. ವ್ಯಕ್ತಿಗಳು ಹಿನ್ನೆಲೆಗೆ ಸರಿದು, ಅರ್ಹತೆ ಮತ್ತು

    ಸಾಮರ್ಥ್ಯ ಗೌಣವಾಗಿ ಜಾತಿ ಆಧಾರಿತ ಲೆಕ್ಕಾಚಾರಗಳು ಹಿಡಿತ ಸಾಧಿಸಿರುವುದನ್ನು ಮರೆಯುವಂತಿಲ್ಲ. ಜಾತಿಗಳ ಜತೆಗೆ, ಕೈಗಾರಿಕೆಗಳು ಮತ್ತು ಮಾರುಕಟ್ಟೆ ಪ್ರಾಬಲ್ಯ ಕಳವಳಕಾರಿ ಹಂತಕ್ಕೆ ತಲುಪಿದೆ. ಕಾಗದ ಮೇಲಿರುವ ಪ್ರತಿ ಯೋಜನೆ ಕಾಲಮಿತಿಯಲ್ಲಿ ಫಲಾನುಭವಿಗಳಿಗೆ ತಲುಪಬೇಕು. ಭೂಮಿ ಫಲವತ್ತತೆ, ಕಾಡು, ನೀರು, ತಂತ್ರಜ್ಞಾನ, ರಕ್ಷಣೆ, ಶಿಕ್ಷಣ, ಆತ್ಮವುಳ್ಳ ಮನರಂಜನೆ ಒಳಗೊಂಡರೆ ಸುಖಿ ಪ್ರಜೆಗಳು, ಸಮೃದ್ಧ ಭಾರತ ಸಾಕಾರವಾಗಲಿದೆ.

    ಪರ್ಯಾಯ ತರಬೇತಿಯತ್ತ ಗಮನಹರಿಸಬೇಕು: ಹೊಸ ಶಿಕ್ಷಣ ನೀತಿಯಲ್ಲಿ ಉತ್ತಮ ಅಂಶ ಇವೆಯಾದರೂ ಕ್ರಾಂತಿಕಾರಕ ಬದಲಾವಣೆ ಆಗುತ್ತದೆ ಎಂಬ ನಿರೀಕ್ಷೆ ಇಲ್ಲ. ಮುಖ್ಯವಾಗಿ ತಾಂತ್ರಿಕ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಸಹಜ ಕಲಿಕೆಗೆ ಭಾಷೆ ತೊಡಕಾಗಬಾರದು ಎಂಬುದು ಉತ್ತಮ ಅಂಶ. ಇಂಗ್ಲಿಷ್ ಕಲಿತರೆ ಮಾತ್ರವೇ ಜ್ಞಾನಾರ್ಜನೆ ಸಾಧ್ಯ ಎಂಬ ಭಾವನೆ ಹೋಗಬೇಕು. ಕನ್ನಡದಲ್ಲೂ ತಾಂತ್ರಿಕ ಶಿಕ್ಷಣ ಪಡೆಯಬಹುದು ಎಂಬುದು ಒಳ್ಳೆಯದಾದರೂ, ಈ ಅಂಶವನ್ನು ಜನರು ಎಷ್ಟರ ಮಟ್ಟಿಗೆ ಉಪಯೋಗಿಸಿಕೊಳ್ಳುತ್ತಾರೆ ಕಾದುನೋಡಬೇಕು. ಕುಟುಂಬ ಆಧಾರಿತ ವೃತ್ತಿಗಳಲ್ಲಿ ಮುಂದಿನ ಪೀಳಿಗೆ ತೊಡಗಿಸಿಕೊಳ್ಳದಿರುವಾಗ, ಈ ಉದ್ಯೋಗಗಳಿಗೆ ಇತರರನ್ನು ತರಬೇತಿಗೊಳಿಸುವ ಪರ್ಯಾಯ ವ್ಯವಸ್ಥೆಗಳು ಆಗಬೇಕು.

    ವೃತ್ತಿಪರ ನಾಗರಿಕರು ಹೆಚ್ಚಬೇಕು

    ಭವಿಷ್ಯದಲ್ಲಿ ಭಾರತವನ್ನು 5 ಲಕ್ಷ ಕೋಟಿ ಡಾಲರ್ (5 ಟ್ರಿಲಿಯನ್) ಆರ್ಥಿಕತೆಯಾಗಿಸಬೇಕೆಂಬ ಗುರಿಯನ್ನು ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ನೀಡಿದ್ದಾರೆ. ಆರ್ಥಿಕ ಪ್ರಗತಿಯನ್ನು ಸಾಧಿಸಬೇಕಾದುದು ಮುಖ್ಯ. ಈ ನಿಟ್ಟಿನಲ್ಲಿ ಶಿಕ್ಷಣದ ಪಾತ್ರ ಪ್ರಮುಖ. ಶಿಕ್ಷಣ ಕ್ಷೇತ್ರಕ್ಕೆ ಸರ್ಕಾರ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ಅದರಲ್ಲೂ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ವಿದೇಶಗಳಿಗೆ ತೆರಳಿ ಶಿಕ್ಷಣ ಪಡೆಯುವವರ, ಆ ಮೂಲಕ ಆಧುನಿಕ ಜ್ಞಾನವನ್ನು ದೇಶದಲ್ಲಿ ಅನ್ವಯಿಸುವ ಕಾರ್ಯ ಆಗಬೇಕು. ವೃತ್ತಿಪರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಸಲುವಾಗಿ ದೇಶದಲ್ಲಿ ಐಐಟಿ, ಐಐಎಂ, ಇಂಜಿನಿಯರಿಂಗ್ ಕಾಲೇಜುಗಳ ಸಂಖ್ಯೆ ಹೆಚ್ಚಬೇಕು. ನಗರ ಪ್ರದೇಶಗಳಲ್ಲಿರುವ ಮಕ್ಕಳಂತೆಯೇ ಗ್ರಾಮೀಣ ಪ್ರದೇಶದ ಅಂಗನವಾಡಿ, ಬಾಲಕೇಂದ್ರಗಳಲ್ಲಿ ಕಲಿಯುವ ಮಕ್ಕಳೂ ಉನ್ನತ ಶಿಕ್ಷಣದವರೆಗೆ ಎಲ್ಲಿಯೂ ಅಡೆತಡೆಯಿಲ್ಲದಂತೆ ಕಲಿಯುವ ಅವಕಾಶವಾಗಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸ್ಥಾಪನೆಯಾಗಬೇಕು. ಸರ್ಕಾರಗಳ ಪಾತ್ರ ಇದರಲ್ಲಿ ಪ್ರಮುಖವಾಗಿದೆ.

    | ಕೆ.ಎ.ತಿಪ್ಪೇಸ್ವಾಮಿ

    ಶತಮಾನದ ಭಾರತಕ್ಕೆ ಅಮೃತವೇ ಅಡಿಪಾಯ; ಸ್ವಾತಂತ್ರ್ಯ-75ರಿಂದಲೇ ಆರಂಭವಾಗಬೇಕು ಚಿಂತನೆತಾರತಮ್ಯವಿಲ್ಲದ ಶಿಕ್ಷಣ, ಸ್ವಯಂ ಉದ್ಯೋಗ, ಸ್ವಾವಲಂಬನೆಗೆ ಪ್ರಾಶಸ್ಱ. ಯುವಜನತೆಗೆ ಸೂಕ್ತ ಮಾರ್ಗದರ್ಶನ, ರಾಜ್ಯಗಳಿಗೆ ಹೆಚ್ಚಿನ ಹಣಕಾಸಿನ ಅಧಿಕಾರ ನೀಡಬೇಕು. ಕೃಷಿ, ನೀರಾವರಿ, ಉನ್ನತ ಶಿಕ್ಷಣ, ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡುವುದರಿಂದ ಐದು ಟ್ರಿಲಿಯನ್ ಆರ್ಥಿಕತೆ ಸಾಧಿಸಲು ಸಾಧ್ಯ.

    | ಕೆ.ಎ.ತಿಪ್ಪೇಸ್ವಾಮಿ ಮೇಲ್ಮನೆ ಜೆಡಿಎಸ್ ಸದಸ್ಯ

    ಜೀವನಮಟ್ಟ ಸುಧಾರಣೆಯಿಂದ ಭ್ರಷ್ಟಾಚಾರಕ್ಕೆ ಕಡಿವಾಣ

    ಭ್ರಷ್ಟಾಚಾರವೆಂಬ ಪಿಡುಗು ದೇಶದ ಎಲ್ಲ ಕ್ಷೇತ್ರಗಳನ್ನು ಕಾಡುತ್ತಿದೆ. ಶಿಕ್ಷಣ, ಅರಿವಿನ ಬಲವರ್ಧನೆ ಹಾಗೂ ಜನರ ಜೀವನಮಟ್ಟ ಸುಧಾರಣೆಯಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಾಧ್ಯವಿದೆ. ದೇಶದ ಅಭಿವೃದ್ಧಿಯಲ್ಲಿ ಮೊದಲ ಪ್ರಧಾನಿ ಜವಾಹರ ಲಾಲ್ ನೆಹರೂ ಪ್ರಮುಖಪಾತ್ರವಿದೆ. ಪಂಚ ವಾರ್ಷಿಕ ಯೋಜನೆಗಳ ಮೂಲಕ ಬಡತನ ನಿವಾರಣೆ, ನೀರಾವರಿಗೆ ಒತ್ತು ನೀಡಿದರು. ನಂತರದ ಹಸಿರು ಕ್ರಾಂತಿ, ಕ್ಷೀರ ಕ್ರಾಂತಿ, ಬ್ಯಾಂಕ್​ಗಳ ರಾಷ್ಟ್ರೀಕರಣದ ಮೂಲಕ ಹಣಕಾಸು ವ್ಯವಸ್ಥೆಗೆ ಬಲ ನೀಡಿರುವುದು ಮಹತ್ವದ ಹೆಜ್ಜೆಗಳಾಗಿವೆ. ಪಿ.ವಿ.ನರಸಿಂಹರಾವ್ ಆಡಳಿತಾವಧಿಯಲ್ಲಿ ಹಣಕಾಸು ಸಚಿವರಾಗಿ ಮನಮೋಹನ್ ಸಿಂಗ್ ಅನುಷ್ಠಾನಕ್ಕೆ ತಂದ ಜಾಗತೀಕರಣ, ಖಾಸಗೀಕರಣ ಮತ್ತು ಉದಾರೀಕರಣ ನೀತಿಗಳು ಅಭಿವೃದ್ಧಿಗೆ ಹೊಸ ಆಯಾಮ ನೀಡಿದವು. ಡಾ.ಕಸ್ತೂರಿರಂಗನ್ ವರದಿ ಆಧಾರಿತ ನೂತನ ಶಿಕ್ಷಣ ನೀತಿಯು ಒಂದರಿಂದ 12ನೇ ತರಗತಿವರೆಗೆ ಏಕರೂಪ ಶಿಕ್ಷಣ ಅಂಶ ಒಳಗೊಂಡಿದೆ. ಆದರೆ ಈ ವರದಿ ಬಗ್ಗೆ ಇನ್ನಷ್ಟು ವಿಸõತ ಚರ್ಚೆ, ಪರಾಮರ್ಶೆ ಅಗತ್ಯವಿದೆ. ಈಗಿರುವ ಪರಿಸ್ಥಿತಿಯಲ್ಲಿ ನಗರ ಮಕ್ಕಳ ಜತೆಗೆ ಗ್ರಾಮೀಣ ಮಕ್ಕಳು ಪೈಪೋಟಿವೊಡ್ಡಲು ಸಾಧ್ಯವೆ? ಎಂಬುದು ಅವಲೋಕಿಸಬೇಕು. ಗುಣಮಟ್ಟದ ಶಿಕ್ಷಣ ಸಮಾನವಾಗಿರಬೇಕು, ಶಿಕ್ಷಕರಿಗೆ ಸೂಕ್ತ ತರಬೇತಿ, ಸ್ವಾವಲಂಬನೆ, ಸ್ವಯಂ ಉದ್ಯೋಗಕ್ಕೆ ಒತ್ತು ಹಾಗೂ ಯುವಶಕ್ತಿಗೆ ಮಾರ್ಗದರ್ಶನಕ್ಕೆ ಆದ್ಯತೆ ನೀಡಬೇಕಾಗಿದೆ.

    ರಾಜ್ಯಗಳಿಗೆ ಹೆಚ್ಚಿನ ಅಧಿಕಾರ: ಆರ್ಥಿಕ ವಿಚಾರವು ಸೇರಿದಂತೆ ಸಹಕಾರ ಇನ್ನಿತರ ಕ್ಷೇತ್ರಗಳಲ್ಲಿ ರಾಜ್ಯಗಳಿಗೆ ಹೆಚ್ಚಿನ ಅಧಿಕಾರ ನೀಡಬೇಕಾಗಿದೆ. ಅಭಿವೃದ್ಧಿ ಹೊಂದದ ಈಶಾನ್ಯ ರಾಜ್ಯಗಳಿಗೆ ಪ್ರಾಶಸ್ಱ ನೀಡುವುದಕ್ಕೆ ಸಹಮತ ಇದ್ದರೂ ಕರ್ನಾಟಕ, ತಮಿಳುನಾಡು, ಕೇರಳ ಮುಂತಾದ ರಾಜ್ಯಗಳ ಪರಿಸ್ಥಿತಿ ಏನಾಗಲಿದೆ ಎಂಬ ವಿವೇಚನೆಯೂ ಇರಲಿ. ಕರೊನಾ, ಲಾಕ್​ಡೌನ್ ಎಲ್ಲ ರಾಜ್ಯಗಳನ್ನು ಬಾಧಿಸಿದೆ. ವ್ಯಾಟ್ ಸಿಸ್ಟಮ್ ಎಲ್ಲ ಕ್ಷೇತ್ರಗಳನ್ನು ಆವರಿಸಿದ್ದು, ಮತ್ತಷ್ಟು ತೆರಿಗೆ ಸಂಪನ್ಮೂಲ ಕ್ರೋಡೀಕರಣ ಸಾಧ್ಯವಿಲ್ಲದಿದ್ದರೂ ಜಿಎಸ್​ಟಿ ಜಾರಿಗೆ ತರಲಾಗಿದೆ. ಈ ವ್ಯವಸ್ಥೆಯಿಂದ ರಾಜ್ಯಗಳಿಗೆ ನಿರೀಕ್ಷಿತ ನೆರವು ದೊರೆಯುತ್ತಿಲ್ಲ. ಹಣಕಾಸು ಆಯೋಗಗಳಿಂದ ತಾರತಮ್ಯ ತೊಲಗಿಸುವ ಪ್ರಯತ್ನವಾಗಿಲ್ಲ. ರಾಜ್ಯಗಳಿಗೆ ಹೆಚ್ಚಿನ ಆರ್ಥಿಕ ಅಧಿಕಾರ ನೀಡಬೇಕು.

    ಶತಮಾನದ ಭಾರತಕ್ಕೆ ಅಮೃತವೇ ಅಡಿಪಾಯ; ಸ್ವಾತಂತ್ರ್ಯ-75ರಿಂದಲೇ ಆರಂಭವಾಗಬೇಕು ಚಿಂತನೆ

    • ರಾಜಕೀಯ ಅಪರಾಧೀಕರಣ ದೊಡ್ಡ ತಲೆ ನೋವಾಗಿದೆ. ಸುಪ್ರೀಂ ಕೋರ್ಟ್ ಈ ವಿಷಯದಲ್ಲಿ ಕಾಲ ಕಾಲಕ್ಕೆ ಸಲಹೆ-ಸೂಚನೆ, ನಿರ್ದೇಶನಗಳನ್ನು ನೀಡುತ್ತಿದೆ. ಈ ಸಮಸ್ಯೆಗೆ ಪರಿಹಾರವಿಲ್ಲವೆ?

    – ಚುನಾವಣೆ ವ್ಯವಸ್ಥೆಯಲ್ಲಿ ಸುಧಾರಣೆ, ಚುನಾವಣಾ ಆಯೋಗವೇ ಚುನಾವಣೆ ನಡೆಸುವುದು, ಒಂದು ದೇಶ ಒಂದು ಚುನಾವಣೆಯಿಂದ ರಾಜಕೀಯದಲ್ಲಿ ಅಪರಾಧೀಕರಣ ತಡೆಯುವ ಮೊದಲ ಪ್ರಯತ್ನವಾಗಲಿದೆ. ದ್ವೇಷದ ರಾಜಕಾರಣವೂ ಇರುವುದರಿಂದ ಅಪರಾಧ ದಾವೆ, ಎರಡು ವರ್ಷಗಳ ಸಜೆ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಯಿದೆ. ಯಾವುದೋ ಒಬ್ಬ

    ಕಾನ್​ಸ್ಟೇಬಲ್ ದಾಖಲಿಸಿದ ಪ್ರಕರಣ ಗಂಭೀರ ಸ್ವರೂಪ ಪಡೆದು, 2 ವರ್ಷಕ್ಕಿಂತ ಮೇಲ್ಪಟ್ಟು ಶಿಕ್ಷೆಗೆ ಒಳಗಾಗಬಹುದು. ಈ ಹಿನ್ನೆಲೆಯಲ್ಲಿ ಅಪರಾಧ ಪ್ರಕರಣದ ಸ್ವರೂಪ, ಶಿಕ್ಷೆ ಪ್ರಮಾಣ ಕುರಿತು ಪರಿಶೀಲಿಸಿ ಸ್ಪಷ್ಟ ನಿರ್ಧಾರಕ್ಕೆ ಸಮಿತಿ ರಚಿಸುವ ಅಗತ್ಯವಿದೆ. ಆಯಾ ಹಂತದ ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗದ ಪ್ರತಿನಿಧಿಯನ್ನು ಒಳಗೊಂಡ ಸಮಿತಿ ಪ್ರಕರಣದ ಸತ್ಯಾಸತ್ಯತೆ ಪರಾಮಶಿಸಿ ಆರು ತಿಂಗಳೊಳಗೆ ನಿರ್ಧಾರ ಪ್ರಕಟಿಸಬೇಕು. ಹೀಗೆ ಮಾಡುವುದರಿಂದ ಭಯ-ಭೀತಿ ಹುಟ್ಟಿ, ರಾಜಕೀಯದಲ್ಲಿ ಅಪರಾಧೀಕರಣ ಕ್ರಮೇಣ ತಗ್ಗಲಿದೆ.

    • ಪ್ರಜಾಪ್ರಭುತ್ವ ವ್ಯವಸ್ಥೆ ಹೆಚ್ಚು ಸಮಂಜಸವೆಂಬ ಭಾವನೆಯಿದ್ದರೂ ಕೆಲ ಜನಪರ ನಿರ್ಣಯಗಳನ್ನು ಕ್ಷಿಪ್ರವಾಗಿ ತೆಗೆದುಕೊಳ್ಳಲು ಆಗುವುದಿಲ್ಲ. ಯಾವ ನೀತಿ ನಿರ್ಣಯಕ್ಕೂ ನೂರೆಂಟು ಸ್ಟೇಕ್ ಹೋಲ್ಡರ್​ಗಳು, ಇದರಿಂದ ವಿಳಂಬ, ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆ. ಇದನ್ನು ತಪ್ಪಿಸಲು ಸಾಧ್ಯವಿಲ್ಲವೆ?

    – ನಿಜ, ಅಧಿಕಾರಿಗಳ ವ್ಯವಸ್ಥೆಯಲ್ಲಿ ಹಲವು ಹಂತಗಳನ್ನು ಸೃಷ್ಟಿಸಿಕೊಂಡಿದ್ದೇವೆ. ಜಮೀನು ಸರ್ವೆ, ಪೋಡಿ, ಸ್ಕೆಚ್ ಮ್ಯಾಪ್ ಸಣ್ಣಪುಟ್ಟ ಕೆಲಸಗಳು ನಿಧಾನಗತಿಯಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ವಿವಿಧ ಯೋಜನೆಗಳ ಫಲಾನುಭವಿಗಳ ಆಯ್ಕೆಯಲ್ಲಿ ಜಾತಿ ಮತ್ತು ಹಣದ ಪ್ರಭಾವ ಅಡ್ಡಗಾಲು ಹಾಕುತ್ತವೆ. ಹಾಗೆಯೇ ಸಕಾಲಕ್ಕೆ ಯೋಜನೆ/ ಕಾರ್ಯಕ್ರಮಗಳ ಅನುಷ್ಠಾನಕ್ಕೆ ರಾಜ್ಯಗಳಿಗೆ ಸಾಕಷ್ಟು ಸಂಪನ್ಮೂಲ ಅಗತ್ಯವೂ ಇದೆ. ಅಧಿಕಾರಶಾಹಿ ಶ್ರೇಣಿ ಜಾಸ್ತಿಯಾಗಿದ್ದು, ಬಡ್ತಿಗಾಗಿ ಹುದ್ದೆಗಳ ಸೃಜನೆಯಿಂದ ಎಸ್ಟಾಬ್ಲಿಷ್ಮೆಂಟ್ ವೆಚ್ಚವೇ ಒಟ್ಟು ಬಜೆಟ್​ನಲ್ಲಿ ಶೇ.65ರಷ್ಟಾಗಿದೆ. ಅಧಿಕಾರಿಗಳು ಹುಟ್ಟಿಹಾಕಿದ ಈ ಕ್ರಮಕ್ಕೆ ರಾಜಕೀಯ ನಿರ್ಧಾರ ಸ್ಪರ್ಶ ಪಡೆದಿದೆ. ಇಲಾಖೆಗಳ ವಿಲೀನ, ಅಧಿಕಾರಿಗಳ ಹುದ್ದೆಗಳು ಕಡಿತ, ಅನಗತ್ಯ ವೆಚ್ಚಕ್ಕೆ ಕಡಿವಾಣ, ಐಎಎಸ್, ಐಪಿಎಸ್ ಹಾಗೂ ಐಎಫ್​ಎಸ್ ಸಂಖ್ಯೆ ಇಳಿಕೆ ಮುಂತಾದ ಉಪಕ್ರಮಗಳು ಈ ವ್ಯವಸ್ಥೆಯನ್ನು ಸುಧಾರಿಸಿ, ಆರ್ಥಿಕ ಹೊರೆ ಇಳಿಸುತ್ತದೆ.

    ಶತಮಾನದ ಭಾರತಕ್ಕೆ ಅಮೃತವೇ ಅಡಿಪಾಯ; ಸ್ವಾತಂತ್ರ್ಯ-75ರಿಂದಲೇ ಆರಂಭವಾಗಬೇಕು ಚಿಂತನೆ

    ಪ್ಲಾಸ್ಟಿಕ್​ ಕಪ್​, ಪ್ಲೇಟ್​, ಸ್ಟ್ರಾಗಳ ಉತ್ಪಾದನೆಯೇ ಬಂದ್​; ಸರ್ಕಾರದಿಂದ ಘೋಷಣೆ

    ನರ್ಸ್​-ಡ್ರೈವರ್​ ಲವ್​ ಟ್ರ್ಯಾಜೆಡಿ; ಕಾರೊಳಗೇ ಬೆಂಕಿ ಹಚ್ಚಿಕೊಂಡು ಪ್ರೇಮಿಗಳ ಆತ್ಮಹತ್ಯೆ!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts