ಪ್ರಾಣಬಿಟ್ಟ ದೇಹ ಹೋಗುವುದು ಎಲ್ಲಿಗೆ?

ಮರಣಾನಂತರ ವಿವೇಚನೆ ಸಂಪೂರ್ಣ ಕಳೆದುಹೋಗುತ್ತದೆ. ಹೀಗಿದ್ದಾಗ, ನೀವು ಮನಸ್ಸಿನಲ್ಲಿ ಯಾವ ಗುಣವನ್ನು ಹಾಕುತ್ತೀರೋ ಅದು ಲಕ್ಷಪಟ್ಟು ಹೆಚ್ಚಾಗುತ್ತದೆ. ಇದನ್ನೇ ಸ್ವರ್ಗ ಮತ್ತು ನರಕವೆಂದು ಹೇಳಲಾಗುವುದು. ನೀವೊಂದು ಉಲ್ಲಾಸಭರಿತ ಸ್ಥಿತಿಗೆ ತಲುಪಿದರೆ, ಅದನ್ನು ಸ್ವರ್ಗ ಎನ್ನಲಾಗುತ್ತದೆ, ಅಹಿತಕರ ಸ್ಥಿತಿಗೆ ತಲುಪಿದರೆ, ಅದನ್ನು ನರಕ ಎನ್ನಲಾಗುತ್ತದೆ.

ಪ್ರಶ್ನೆ: ಸದ್ಗುರು, ವ್ಯಕ್ತಿಗಳು ಮರಣ ಹೊಂದಿದಾಗ ನೆರವೇರಿಸಲಾಗುವ ಶ್ರಾದ್ಧವಿಧಿಯ ಮಹತ್ವದ ಬಗ್ಗೆ ವಿವರಿಸುವಿರಾ?

ನಮಗೆ ಹತ್ತಿರವಾದವರು ಸಾವನ್ನಪ್ಪಿದಾಗ, ಅವರ ದೇಹದ ಬಳಿ ಕುಳಿತು ನೋಡಿಕೊಳ್ಳುತ್ತಿರಬೇಕಿತ್ತು- ಯಾರೂ ಶವವನ್ನು ಒಂಟಿಯಾಗಿ ಬಿಟ್ಟುಹೋಗುತ್ತಿರಲಿಲ್ಲ. ಶವವನ್ನು 2-3 ದಿನಗಳವರೆಗೆ ಹಾಗೆಯೇ ಇಟ್ಟರೆ, ಕೂದಲು ಬೆಳೆಯುತ್ತದೆ. ಗಂಡಸರ ಶವವಾಗಿದ್ದು, ಅವರು ನಿಯತವಾಗಿ ಕ್ಷೌರ ಮಾಡಿಕೊಳ್ಳುತ್ತಿದ್ದಿದ್ದರೆ, ಅವರ ಮುಖದ ಮೇಲೆ ಕೂದಲು ಬೆಳೆಯುವುದನ್ನು ಗಮನಿಸುವ ಮೂಲಕ ನೀವಿದನ್ನು ಪರೀಕ್ಷಿಸಬಹುದು. ಉಗುರು ಕೂಡ ಬೆಳೆಯುತ್ತದೆ. ಆದ್ದರಿಂದ, ಶವವನ್ನು ಬಹಳ ಕಾಲದವರೆಗೆ ಸಂರಕ್ಷಿಸುವ ದೇಶಗಳಲ್ಲಿ, ಆ ಶವವನ್ನು ನೋಡಿಕೊಳ್ಳುವವರು ಅದರ ಉಗುರನ್ನು ಕತ್ತರಿಸಿ, ಗಡ್ಡವನ್ನು ಕ್ಷೌರ ಮಾಡುತ್ತಾರೆ. ಮಾನವದೇಹದಲ್ಲಿ ಜೀವವು ಅಭಿವ್ಯಕ್ತವಾಗುವ ರೀತಿಯಿಂದಾಗಿ ಹೀಗಾಗುತ್ತದೆ. ಇದನ್ನು ಅರ್ಥ ಮಾಡಿಕೊಳ್ಳುವ ಸಲುವಾಗಿ ಈ ರೀತಿಯಲ್ಲಿ ನೋಡೋಣ- ಮೂಲಭೂತ ಜೀವವೊಂದಿದೆ ಮತ್ತು ಭೌತಿಕ ಜೀವವೆನ್ನುವುದೊಂದಿದೆ. ನಾವು ಪ್ರಾಣ ಎಂದು ಕರೆಯುವ ಭೌತಿಕ ಪ್ರಾಣಶಕ್ತಿ, ಐದು ಮೂಲಭೂತ ಅಭಿವ್ಯಕ್ತಿಗಳನ್ನು ಹೊಂದಿದೆ. ಇವುಗಳನ್ನು ‘ಸಮಾನ’, ‘ಪ್ರಾಣ’, ‘ಉದಾನ’, ‘ಅಪಾನ’ ಮತ್ತು ‘ವ್ಯಾನ’ ಎಂದು ಕರೆಯಲಾಗುತ್ತದೆ.

ಮರಣದ ಹಂತಗಳು: ಒಬ್ಬ ವ್ಯಕ್ತಿಯ ಮರಣವನ್ನು ವೈದ್ಯರು ಘೊಷಿಸಿದ ಕ್ಷಣದಿಂದ 21ರಿಂದ 24 ನಿಮಿಷಗಳಲ್ಲಿ ‘ಸಮಾನ’ ನಿರ್ಗಮಿಸಲು ಪ್ರಾರಂಭಿಸುತ್ತದೆ. ‘ಸಮಾನ’ವು ದೇಹದಲ್ಲಿನ ತಾಪಮಾನವನ್ನು ಕಾಪಾಡುವ ಕಾರ್ಯವನ್ನು ನಿರ್ವಹಿಸುತ್ತದೆ. ಸಾವಿನ ಬಳಿಕ ನಡೆಯುವ ಮೊದಲ ವಿಷಯವೆಂದರೆ, ಶರೀರವು ತಣ್ಣಗಾಗಲು ಶುರುವಾಗುವುದು. ಯಾರಾದರೂ ಬದುಕಿದ್ದಾರೆಯೆ ಅಥವಾ ಸತ್ತಿದ್ದಾರೆಯೆ ಎಂದು ಪರೀಕ್ಷಿಸುವ ಸಾಂಪ್ರದಾಯಿಕ ಮಾರ್ಗವೆಂದರೆ ಮೂಗನ್ನು ಪರೀಕ್ಷಿಸುವುದು. ಕಣ್ಣಿನ ಗುಡ್ಡೆಯನ್ನೋ ಅಥವಾ ಮತ್ತಿನ್ನೇನನ್ನೋ ಯಾರೂ ಪರೀಕ್ಷಿಸುತ್ತಿರಲಿಲ್ಲ; ಮೂಗು ತಣ್ಣಗಾಗಿದ್ದರೆ, ವ್ಯಕ್ತಿ ಸತ್ತಿದ್ದಾನೆಂದು ತೀರ್ವನಿಸುತ್ತಿದ್ದರು.

ಸತ್ತ ನಂತರದ 48ರಿಂದ 64 ನಿಮಿಷಗಳ ಮಧ್ಯದಲ್ಲಿ, ‘ಪ್ರಾಣ’ ನಿರ್ಗಮಿಸುತ್ತದೆ. 6ರಿಂದ 12 ಗಂಟೆಗಳ ಮಧ್ಯದಲ್ಲಿ ‘ಉದಾನ’ ಹೊರಹೋಗುತ್ತದೆ. ‘ಉದಾನ’ ಹೊರಹೋಗುವುದಕ್ಕೆ ಮುನ್ನ ಶರೀರವನ್ನು ಪುನಶ್ಚೇತನಗೊಳಿಸಬಹುದಾದ ತಾಂತ್ರಿಕ ಪ್ರಕ್ರಿಯೆಗಳಿವೆ. ಒಮ್ಮೆ ‘ಉದಾನ’ ಹೊರಹೋಯಿತೆಂದರೆ, ಶರೀರವನ್ನು ಪುನಶ್ಚೇತನಗೊಳಿಸುವುದು ಅಸಾಧ್ಯ. ನಂತರ, 8ರಿಂದ 18 ಗಂಟೆಗಳ ನಡುವೆ, ‘ಅಪಾನ’ ನಿರ್ಗಮಿಸುತ್ತದೆ. ತರುವಾಯ, ಪ್ರಾಣದ ಸಂರಕ್ಷಕ ಸ್ವರೂಪವಾದ ‘ವ್ಯಾನ’ ಹೊರಹೋಗಲು ಆರಂಭಿಸುತ್ತದೆ. ಮರಣವು ಸಹಜವಾಗಿ ಸಂಭವಿಸಿದ್ದರೆ, 11ರಿಂದ 14 ದಿನಗಳವರೆಗೂ ಇದು ಮುಂದುವರಿಯಬಹುದು- ಮುದಿತನದಿಂದಾಗಿ ಒಬ್ಬ ವ್ಯಕ್ತಿ ಸತ್ತಿದ್ದರೆ ಹೀಗಾಗುತ್ತದೆ, ಏಕೆಂದರೆ, ಅಂತಹವರ ಜೀವ ದುರ್ಬಲವಾಗಿರುತ್ತದೆ. ಹಾಗಾಗಿ 11ರಿಂದ 14 ದಿನಗಳವರೆಗೆ, ಕೆಲವು ಪ್ರಕ್ರಿಯೆಗಳು ದೇಹದಲ್ಲಿ ಮುಂದುವರಿಯುತ್ತವೆ; ಜೀವದ ಕೆಲ ಅಂಶ ಇನ್ನೂ ಉಳಿದಿರುತ್ತದೆ. ಆದರೆ ಜೀವ ಇನ್ನೂ ಹುರುಪಿನಿಂದ ಮಿಡಿಯುತ್ತಿರುವಾಗಲೇ ಯಾರಾದರೂ ಅಪಘಾತದಿಂದ ಸತ್ತರೆ, ಅವರ ಶರೀರವು ಸಂಪೂರ್ಣವಾಗಿ ನಾಶವಾಗದ ಹೊರತು, ಅವರು ಸತ್ತ 48ರಿಂದ 90 ದಿನಗಳವರೆಗೂ ಆ ಜೀವದ ಕಂಪನಗಳು ಮುಂದುವರಿಯುತ್ತಿರುತ್ತವೆ.

ಆ ಸಮಯದಲ್ಲಿ, ಆ ಜೀವಕ್ಕಾಗಿ ಮಾಡಬಹುದಾದ ಕೆಲ ವಿಷಯಗಳಿವೆ. ನಮ್ಮ ಅನುಭವದಲ್ಲಿ ಸಾವು ಎಂದರೆ ಯಾರೋ ಹೊರಟುಹೋದರು ಎನ್ನುವುದಾಗಿದೆ. ಆದರೆ ಹೋದ ಆ ಜೀವದ ಅನುಭವದ ಪ್ರಕಾರ ಸಾವು ಎನ್ನುವುದು ತಾನು ಶರೀರದಿಂದ ಹೊರಹೋಗಿರುವುದಷ್ಟೇ ಆಗಿರುತ್ತದೆ. ಅವರು ತಮ್ಮ ಶರೀರದಿಂದ ನಿರ್ಗಮಿಸಿದ ಮೇಲೆ, ನಿಮಗೆ ಅವರೊಂದಿಗೆ ಯಾವ ವ್ಯವಹಾರವೂ ಉಳಿದಿರುವುದಿಲ್ಲ. ಅವರನ್ನು ಗುರುತಿಸುವುದಕ್ಕೂ ಸಾಧ್ಯವಾಗುವುದಿಲ್ಲ, ಮತ್ತು ಅವರೇನಾದರೂ ಮರಳಿ ಬಂದರೆ, ಭಯಭೀತರಾಗುತ್ತೀರಿ. ಪ್ರೀತಿಪಾತ್ರರು ಸತ್ತ ನಂತರ ಬದುಕಿಬಂದರೆ ಅಲ್ಲಿ ಪ್ರೀತಿ ಇರುವುದಿಲ್ಲ, ಭಯವಿರುತ್ತದೆ. ಏಕೆಂದರೆ ನಮ್ಮ ಸಂಬಂಧವು ಅವರ ಶರೀರದೊಂದಿಗಿರುತ್ತದೆ ಅಥವಾ ಅವರ ಜಾಗೃತ ಮನಸ್ಸು ಮತ್ತು ಭಾವನೆಯೊಂದಿಗಿರುತ್ತದೆ. ಒಮ್ಮೆ ಯಾರಾದರೂ ಸತ್ತರೆಂದರೆ, ಅವರು ಈ ಎರಡೂ ಅಂಶಗಳನ್ನು ಕಳೆದುಕೊಳ್ಳುತ್ತಾರೆ.

ಮನಸ್ಸು ಎನ್ನುವುದು ಸ್ವಾಭಾವಿಕ ಪ್ರವೃತ್ತಿಗಳನ್ನು ಹೊಂದಿರುವ ಒಂದು ಮಾಹಿತಿಯ ರಾಶಿ. ಇದು ನಿರ್ದಿಷ್ಟ ರೀತಿಯಲ್ಲಿ ಅಭಿವ್ಯಕ್ತಿ ಕಂಡುಕೊಳ್ಳುತ್ತದೆ. ಯಾರಾದರೂ ಸತ್ತರೆ, ಅವರು ವಿವೇಚನಾಶಕ್ತಿ ಹಾಗೂ ಬುದ್ಧಿಶಕ್ತಿಯನ್ನು ಕಳೆದುಕೊಳ್ಳುತ್ತಾರೆ. ನೀವು ಅವರ ಮನಸ್ಸಿನಲ್ಲಿ ಒಂದು ಹನಿಯಷ್ಟು ಉಲ್ಲಾಸವನ್ನು ಹಾಕಿದರೆ, ಆ ಉಲ್ಲಾಸ ಲಕ್ಷಪಟ್ಟು ಹೆಚ್ಚಾಗುತ್ತದೆ. ಒಂದು ಹನಿಯಷ್ಟು ಅಹಿತವನ್ನು ಹಾಕಿದರೆ, ಆ ಅಹಿತವು ಲಕ್ಷಪಟ್ಟು ಹೆಚ್ಚಾಗುತ್ತದೆ. ಇದು ಸ್ವಲ್ಪ, ಮಕ್ಕಳೊಂದಿಗೆ ಹೇಗಿರುತ್ತದೆಯೋ ಹಾಗೆ- ಮಕ್ಕಳು ಅತಿಯಾಗಿ ಆಯಾಸವಾಗುವವರೆಗೂ ಆಟವಾಡುತ್ತಾರೆ, ಏಕೆಂದರೆ ಆಟವನ್ನು ಯಾವಾಗ ನಿಲ್ಲಿಸಬೇಕು ಎನ್ನುವ ಅಗತ್ಯವಾದ ವಿವೇಚನೆ ಅವರಿಗಿರುವುದಿಲ್ಲ.

ಮರಣಾನಂತರ ವಿವೇಚನೆ ಸಂಪೂರ್ಣವಾಗಿ ಕಳೆದುಹೋಗುತ್ತದೆ. ಹೀಗಿದ್ದಾಗ, ಮನಸ್ಸಿನಲ್ಲಿ ಯಾವ ಗುಣವನ್ನು ಹಾಕುತ್ತೀರೋ ಅದು ಲಕ್ಷಪಟ್ಟು ಹೆಚ್ಚಾಗುತ್ತದೆ. ಇದನ್ನೇ ಸ್ವರ್ಗ ಮತ್ತು ನರಕವೆಂದು ಹೇಳಲಾಗುವುದು. ನೀವೊಂದು ಉಲ್ಲಾಸಭರಿತ ಸ್ಥಿತಿಗೆ ತಲುಪಿದರೆ, ಅದನ್ನು ಸ್ವರ್ಗ ಎನ್ನಲಾಗುತ್ತದೆ. ಅಹಿತಕರವಾದ ಸ್ಥಿತಿಗೆ ತಲುಪಿದರೆ, ಅದನ್ನು ನರಕ ಎನ್ನಲಾಗುತ್ತದೆ. ಇವುಗಳು ಭೌಗೋಳಿಕವಾದ ಸ್ಥಳಗಳಲ್ಲ- ದೇಹವನ್ನು ಕಳೆದುಕೊಂಡವರು ಅನುಭವಿಸುತ್ತಿರುವ ನಿಜಸ್ಥಿತಿಗಳು.

ಶ್ರಾದ್ಧದ ವಿಧಿಗಳು: ಇದನ್ನು ಇಂದು ಎಷ್ಟು ಸರಿಯಾಗಿ ಅಥವಾ ಎಷ್ಟು ಹಾಸ್ಯಾಸ್ಪದವಾಗಿ ಮಾಡಲಾಗುತ್ತಿದೆ ಎನ್ನುವುದು ಬೇರೆಯೇ ವಿಷಯ; ಆದರೆ ವಿವಿಧ ಹಂತಗಳಲ್ಲಿ ಏನೇನು ಮಾಡಬೇಕೆಂಬುದರ ಬಗ್ಗೆ ಒಂದಿಡೀ ವಿಜ್ಞಾನವೇ ಇದೆ. ಯಾರಾದರೂ ಸಾವನ್ನಪ್ಪಿದಾಗ, ಸಾಂಪ್ರದಾಯಿಕವಾಗಿ ಜನರು ಮಾಡುವ ಮೊದಲ ವಿಷಯವೆಂದರೆ ಸತ್ತ ಶರೀರದ ದೊಡ್ಡ ಕಾಲ್ಬೆರಳುಗಳನ್ನು ಒಟ್ಟಿಗೆ ಕಟ್ಟುವುದು. ಇದು ಬಹಳ ಮುಖ್ಯ- ಈ ರೀತಿ ಮಾಡುವುದು ಮೂಲಾಧಾರವನ್ನು ಬಿಗಿಯಾಗಿಸಿ ಆ ಜೀವವು ಮತ್ತೊಮ್ಮೆ ಶರೀರದೊಳಗೆ ಪ್ರವೇಶಿಸದಂತೆ ತಡೆಯುತ್ತದೆ. ‘ನಾನು ಈ ಶರೀರವಲ್ಲ’ ಎಂಬ ಅರಿವಿಲ್ಲದೆಯೇ ಜೀವಿಸಿದಂತಹ ಜೀವವು ದೇಹದ ಯಾವುದಾದರೊಂದು ದ್ವಾರದ ಮೂಲಕ ಒಳನುಸುಳಲು ಪ್ರಯತ್ನಿಸುತ್ತಿರುತ್ತದೆ, ವಿಶೇಷವಾಗಿ ಮೂಲಾಧಾರದ ಮೂಲಕ. ಜೀವ ಹುಟ್ಟುವುದು ಮೂಲಾಧಾರದಿಂದ, ಮತ್ತು ಶರೀರವು ತಣ್ಣಗಾಗುತ್ತಿರುವಾಗ ಕೊನೆಯದಾಗಿ ತಣ್ಣಗಾಗುವ ಭಾಗವು ಸಹ ಮೂಲಾಧಾರವೇ ಆಗಿದೆ.

ಯಾರಾದರೂ ಸತ್ತಾಗ, ಸಾಂಪ್ರದಾಯಿಕವಾಗಿ ಶರೀರವನ್ನು ಒಂದೂವರೆಯಿಂದ ಗರಿಷ್ಠ ನಾಲ್ಕು ಗಂಟೆಗಳೊಳಗಾಗಿ ಸುಡಬೇಕೆಂದು ಏಕೆ ಹೇಳುತ್ತಿದ್ದರೆಂದರೆ, ಆ ಸಮಯದಲ್ಲಿ ಜೀವವು ಮರಳಿ ಶರೀರದೊಳಗೆ ಪ್ರವೇಶಿಸಲು ಪ್ರಯತ್ನಿಸುತ್ತಿರುತ್ತದೆ. ದೇಹವನ್ನು ಆದಷ್ಟು ಬೇಗ ಸುಡುವುದು ಅವರ ಪ್ರೀತಿಪಾತ್ರರ ಹಿತದೃಷ್ಟಿಯಿಂದಲೂ ಮುಖ್ಯವಾಗುತ್ತದೆ. ಹತ್ತಿರದವರು ಸತ್ತಾಗ, ನಿಮ್ಮ ಮನಸ್ಸು ಇಲ್ಲಸಲ್ಲದ ಕಲ್ಪನೆಗಳನ್ನು ಮಾಡಿಕೊಳ್ಳಲು ಆರಂಭಿಸಬಹುದು- ಒಂದು ಪವಾಡವಾಗಬಹುದೇನೋ, ದೇವರು ಬಂದು ಸತ್ತವರನ್ನು ಬದುಕಿಸಬಹುದೇನೋ ಎಂದೆಲ್ಲ ಅದು ಯೋಚಿಸುತ್ತಿರುತ್ತದೆ. ಆ ರೀತಿಯಾದ ಪವಾಡಗಳು ಯಾರಿಗೂ ಆಗಿಲ್ಲ, ಆದರೂ ಆ ಸತ್ತ ವ್ಯಕ್ತಿಗಾಗಿ ನಿಮ್ಮಲ್ಲಿರುವ ಭಾವನೆಗಳ ಕಾರಣದಿಂದಾಗಿ ಮನಸ್ಸು ಹೇಗೇಗೋ ಆಡುತ್ತದೆ. ಅಂತೆಯೇ, ಶರೀರದಿಂದ ಹೊರಹೋಗಿರುವ ಜೀವವೂ ತಾನಿನ್ನೂ ಶರೀರದೊಳಗೆ ಬರಬಹುದೆಂದು ನಂಬಿಕೊಂಡಿರುತ್ತದೆ.

ಹಾಗಾಗಿ, ನೀವಿಂತಹ ನಾಟಕವನ್ನು ನಿಲ್ಲಿಸಬೇಕೆಂದರೆ, ವ್ಯಕ್ತಿ ಸತ್ತ ಒಂದು ಒಂದೂವರೆ ಗಂಟೆಯೊಳಗೆ ಶರೀರಕ್ಕೆ ಅಗ್ನಿಸ್ಪರ್ಶ ಮಾಡಬೇಕು. ಆ ವ್ಯಕ್ತಿ ನಿಜವಾಗಿಯೂ ಸತ್ತಿದ್ದಾನೆಂದು ಖಚಿತಪಡಿಸಿಕೊಳ್ಳಲು ಈ ಸಮಯವನ್ನು ನಾಲ್ಕು ಗಂಟೆಗಳವರೆಗೆ ವಿಸ್ತರಿಸಿದ್ದಾರೆ. ಆದರೆ ಸಾಧ್ಯವಾದಷ್ಟು ಬೇಗ ಶರೀರವನ್ನು ತೆಗೆದುಕೊಂಡು ಹೋಗಬೇಕು. ಕೃಷಿ ಸಮುದಾಯಗಳಲ್ಲಿ ಸತ್ತ ದೇಹವನ್ನು ಹೂಳಲಾಗುತ್ತಿತ್ತು. ಮಣ್ಣಿನ ಒಂದು ತುಣುಕಾದ ಶರೀರವು, ಅವರನ್ನು ಪಾಲಿಸಿ ಪೋಷಿಸಿದ ಮಣ್ಣಿಗೇ ಮರಳಿ ಹೋಗಬೇಕೆಂಬ ಕಾರಣದಿಂದಾಗಿ ಅವರು ದೇಹಗಳನ್ನು ನೆಲದಲ್ಲಿ ಹೂಳುತ್ತಿದ್ದರು. ಇಂದು ಆಹಾರವನ್ನು ಅಂಗಡಿಗಳಿಂದ ಖರೀದಿಸುತ್ತೀರಿ, ಮತ್ತು ಅದು ಎಲ್ಲಿಂದ ಬಂದಿದೆಯೆಂದು ನಮಗೆ ತಿಳಿದಿರುವುದಿಲ್ಲ. ಹಾಗಾಗಿ, ಹೂಳುವುದು ಈಗ ಸೂಕ್ತವಾಗಿ ಉಳಿದಿಲ್ಲ. ಹಿಂದಿನ ಕಾಲದಲ್ಲಿ, ತಮ್ಮದೇ ಭೂಮಿಯಲ್ಲಿ ಶವವನ್ನು ಹೂಳುವಾಗ, ಉಪ್ಪು ಮತ್ತು ಅರಿಶಿನವನ್ನು ಅದರ ಮೇಲೆ ಹಾಕುತ್ತಿದ್ದರು. ಇವು ಶರೀರವನ್ನು ಬೇಗ ಕರಗಿಸುವಲ್ಲಿ ನೆರವಾಗುತ್ತಿದ್ದವು. ಶವವನ್ನು ಸುಡುವುದು ಹೆಚ್ಚು ಉತ್ತಮವಾಗಿದೆ, ಏಕೆಂದರೆ ಅದು ಕತೆಯನ್ನು ಒಂದೇ ಬಾರಿಗೆ ಮುಗಿಸುತ್ತದೆ. ಕುಟುಂಬದಲ್ಲಿ ಸಾವಾದಾಗ, ಜನರು ಅಳುವುದು, ಗೋಳಾಡುವುದನ್ನು ನೀವು ನೋಡಿರಬಹುದು. ಆದರೆ ಶವದಹನವಾದ ಕೂಡಲೆ ಅವರು ಶಾಂತವಾಗುತ್ತಾರೆ. ಏಕೆಂದರೆ ಸತ್ತವರು ಇನ್ನಿಲ್ಲವೆಂಬ ಸತ್ಯ ಅವರ ಅರಿವಿಗೆ ಬರುತ್ತದೆ. ಇದು ಕೇವಲ ಬದುಕಿರುವವರ ಅರಿವಿಗಷ್ಟೇ ಅಲ್ಲ, ಶರೀರವನ್ನು ಕಳೆದುಕೊಂಡವರ ಅರಿವಿಗೂ ಬರುತ್ತದೆ. ಶರೀರವು ಇರುವವರೆಗೆ, ತಾವು ಪುನಃ ಆ ಶರೀರದೊಳಗೆ ಹೋಗಬಹುದೆಂಬ ಭ್ರಮೆಯಲ್ಲಿ ಅವರಿರುತ್ತಾರೆ.

ಹೇಗಾದರೂ ಮಾಡಿ ಒಂದು ಸಣ್ಣ ಮಾಧುರ್ಯದ ಹನಿಯನ್ನು ಇಂತಹ ವಿವೇಚನಾರಹಿತ ಮನಸ್ಸಿನಲ್ಲಿ ಹಾಕಿ, ಆ ಮಾಧುರ್ಯವು ಹಲವು ಪಟ್ಟು ಹೆಚ್ಚಾಗಿ, ಸತ್ತವರು ತಮ್ಮ ಸ್ವಯಂಪ್ರೇರಿತ ಸ್ವರ್ಗದಲ್ಲಿ ಆರಾಮವಾಗಿರಲಿ ಎನ್ನುವುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಅನೇಕ ವಿಧಿವಿಧಾನಗಳಿವೆ. ಮೇಲೆ ಹೇಳಿರುವ ವಿಧಿಗಳೇ ಇದರ ಉದ್ದೇಶ- ಅವುಗಳನ್ನು ಸರಿಯಾದ ರೀತಿಯಲ್ಲಿ ಮಾಡಿದಲ್ಲಿ..!

(ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ. www.isha.sadhguru.org) (ಸದ್ಗುರುಗಳ ಇತರ ಪುಸ್ತಕ/ವಿವರಗಳಿಗೆ ಸಂಪರ್ಕಿಸಿ [email protected])

One Reply to “ಪ್ರಾಣಬಿಟ್ಟ ದೇಹ ಹೋಗುವುದು ಎಲ್ಲಿಗೆ?”

  1. … ಸತ್ಯವರ ಮನಸ್ಸಿನಲ್ಲಿ ಮಾಧುರ್ಯದ ಹನಿಯನ್ನು ಹೇಗೆ ಹಾಕಲು ಸಾಧ್ಯ.? ತಿಳಿಸುವಿರಾ..

Comments are closed.