More

    ವಾಣಿಜ್ಯೋದ್ಯಮಿ, ಪರೋಪಕಾರಿ ಜಿತೇಂದ್ರ ಮಜೇಥಿಯಾಗೆ ‘ವಿಜಯರತ್ನ’ ಗರಿ

    ಬೆಂಗಳೂರು: ವಾಣಿಜ್ಯೋದ್ಯಮದ ಜತೆಗೆ ಪರೋಪಕಾರ ಗುಣಗಳನ್ನು ಮೈಗೂಡಿಸಿಕೊಂಡು ದಶಕಗಳಿಂದ ನಿರಂತರವಾಗಿ ಸಮಾಜಸೇವೆಯಲ್ಲಿ ತೊಡಗಿರುವ ಜಿತೇಂದ್ರ ಮಜೇಥಿಯಾ ಅವರಿಗೆ ಕನ್ನಡದ ನಂ. 1 ದಿನಪತ್ರಿಕೆ ವಿಜಯವಾಣಿ ಮತ್ತು ದಿಗ್ವಿಜಯ ಸುದ್ದಿ ವಾಹಿನಿಯ ಪ್ರತಿಷ್ಠಿತ ‘ವಿಜಯರತ್ನ- 2022’ ಪ್ರಶಸ್ತಿ ಪ್ರದಾನ ಮಾಡಲಾಯಿತು.

    ಬೆಂಗಳೂರಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಮಾರಂಭದಲ್ಲಿ ನಾಡಿನಾದ್ಯಂತ ಶಿಕ್ಷಣ, ಉದ್ಯಮ, ಆರೋಗ್ಯ, ಪರಿಸರ ಕಾಳಜಿ, ಸಮಾಜಸೇವೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 42 ಸಾಧಕರಿಗೆ ವಿಜಯರತ್ನ- 2022 ಪ್ರಶಸ್ತಿ ಪ್ರದಾನ ಮಾಡಲಾಯಿತು.

    ಚಿತ್ರನಟ ರಮೇಶ ಅರವಿಂದ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ. ಸುಧಾಕರ್, ನಟಿ ಶರ್ಮಿಳಾ ಮಾಂಡ್ರೆ ಅವರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ವಿಆರ್‌ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಆನಂದ ಸಂಕೇಶ್ವರ, ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ್ ಮೊದಲಾದವರು ಉಪಸ್ಥಿತರಿದ್ದರು.

    ಕರ್ಮಭೂಮಿಯಲ್ಲಿ ಸಮಾಜಸೇವೆ: ಮುಂಬೈನಲ್ಲಿ ಹುಟ್ಟಿ ಬೆಳೆದ ಜಿತೇಂದ್ರ ಮಜೇಥಿಯಾ ಅವರಿಗೆ ಏನಾದರೂ ಸಾಧನೆ ಮಾಡಬೇಕೆಂಬ ತುಡಿತ. ಅವರ ಈ ಆಕಾಂಕ್ಷೆಗಳಿಗೆ ವೇದಿಕೆಯಾಗಿದ್ದು ಛೋಟಾ ಮುಂಬೈ ಖ್ಯಾತಿಯ ಹುಬ್ಬಳ್ಳಿ. ವಾಣಿಜ್ಯನಗರಿ ಹುಬ್ಬಳ್ಳಿಯನ್ನು ಕರ್ಮಭೂಮಿಯಾಗಿಸಿಕೊಂಡ ಇವರು, ವಿಶೇಷವಾಗಿ ಯಾರೂ ಗಮನ ಹರಿಸದ ವೈದ್ಯಕೀಯ, ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರವನ್ನು ಆಯ್ದುಕೊಂಡು ಸಮಾಜ ಸೇವೆಗೆ ನಿಜವಾದ ಅರ್ಥ ಕಲ್ಪಿಸಿಕೊಟ್ಟರು. ನಾನು ಕನ್ನಡಿಗ ಎಂದು ಹೆಮ್ಮೆಯಿಂದ ಹೇಳುವ ಇವರನ್ನು ಆಪ್ತ ವಲಯದಲ್ಲಿ ಜಿತೇಂದ್ರ ಭಾಯಿ ಎಂದು ಕರೆಯುತ್ತಾರೆ.

    ಜೀವನ ಪಯಣ: ಜಿತೇಂದ್ರ ಮಜೇಥಿಯಾ ಅವರು ದಯಾಳಜಿ ಹಾಗೂ ಜಶೋಧಾಬೆನ್ ಅವರ ಪುತ್ರರಾಗಿ 1949ರಲ್ಲಿ ಮುಂಬೈನಲ್ಲಿ ಜನಿಸಿದರು. ಪಾರ್ಟ್ ಟೈಂ ಕೆಲಸ ಮಾಡುತ್ತಲೇ ಬಿಕಾಂ ಪದವಿ ಪೂರ್ಣಗೊಳಿಸಿದರು. ಮುಂದೆ ಸಿಎ ಓದುತ್ತ ಚಿಕ್ಕದಾಗಿ ವ್ಯಾಪಾರ ಉದ್ಯಮ, ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಿಕೊಂಡರು. ಸಂಬಂಧಿಕರ ಕರೆಯ ಮೇರೆಗೆ ಹುಬ್ಬಳ್ಳಿಗೆ ಬಂದ ಇವರು ಉದ್ಯಮ ವಿಸ್ತರಿಸುತ್ತ ಪರೋಪಕಾರದ ಕೆಲಸಗಳಲ್ಲಿಯೇ ಹೆಸರು ಮಾಡಿದರು.

    ಮೇ ಐ ಹೆಲ್ಪ್ ಯೂ: ಉತ್ತರ ಕರ್ನಾಟಕದ ಸಂಜೀವಿನಿ ಎಂದೇ ಕರೆಯಲ್ಪಡುವ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ನಿತ್ಯ ಸಾವಿರಾರು ರೋಗಿಗಳು ಬರುತ್ತಾರೆ. ಅನೇಕರು ಸರಿಯಾದ ಮಾರ್ಗದರ್ಶನ ಸಿಗದೆ ಪರದಾಡುತ್ತಾರೆ. ಅವರ ನೆರವಿಗಾಗಿ ಮಜೇಥಿಯಾ ೌಂಡೇಷನ್ ಮೇ ಐ ಹೆಲ್ಪ್ ಯೂ ಡೆಸ್ಕ್ ಸ್ಥಾಪಿಸಿದೆ.

    ಹುಬ್ಬಳ್ಳಿಯ ನವನಗರ ಕ್ಯಾನ್ಸರ್ ಆಸ್ಪತ್ರೆ ಆವರಣದಲ್ಲಿ ಹಾಸ್ಪೈಸ್- ರಮಿಲಾ ಪ್ರಶಾಂತಿ ಮಂದಿರ ಆರಂಭಿಸಲಾಗಿದೆ. ಕ್ಯಾನ್ಸರ್ ರೋಗದಿಂದ ಬಳಲಿ ಅಂತಿಮಘಟ್ಟದಲ್ಲಿ ಇರುವ ರೋಗಿಗಳಿಗೆ ಇಲ್ಲಿ ಉಚಿತ ಆರೈಕೆ ಮಾಡಲಾಗುತ್ತದೆ. ಇದು ಉತ್ತರ ಕರ್ನಾಟಕದಲ್ಲಿ ಸ್ಥಾಪನೆಯಾದ ಮೊದಲ ಹಾಸ್ಪೈಸ್. ಕರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ಈ ಕಟ್ಟಡ ಕೋವಿಡ್ ಸೆಂಟರ್ ಆಗಿ ಕೆಲಸ ನಿರ್ವಹಿಸಿದೆ.

    ‘ನೆಮ್ಮದಿ ಕೇಂದ್ರ’ ಸ್ಥಾಪಿಸಿ ನೂರಾರು ಜನರ ಮಾನಸಿಕ ತೊಳಲಾಟ ದೂರ ಮಾಡಿದ್ದಾರೆ. ಹೋಮ್ ಮೆಡಿಕಲ್ ಇಕ್ವಿಪ್‌ಮೆಂಟ್ ಸೆಂಟರ್ ಸ್ಥಾಪಿಸಿ ಕೃತಕ ಕೈ-ಕಾಲು ಜೋಡಣೆಯ ಶಿಬಿರಗಳ ಮೂಲಕ ನೂರಾರು ಜನರಿಗೆ ನೆರವಾಗಿದ್ದಾರೆ. ಅಂಗವಿಕಲರಿಗೆ ವ್ಹೀಲ್‌ಚೇರ್ ನೀಡಿದ್ದಾರೆ.

    ವಿದ್ಯಾರ್ಥಿವೇತನ: ಬಡ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿ ಶೈಕ್ಷಣಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಉಚಿತ ಶ್ರವಣ ಸಾಧನ ಅಳವಡಿಕೆ, ಹಳ್ಳಿಯ ಮಹಿಳೆಯರಿಗೆ ಉಚಿತ ಚಲಿಸುವ ಚಕ್ರದ ನೀರಿನ ಟ್ಯಾಂಕ್ ವಿತರಣೆ, ವಿದ್ಯಾರ್ಥಿಗಳಿಗೆ ಕಂಪ್ಯೂಟರ್, ಪ್ರಿಂಟರ್ ಹಾಗೂ ಟ್ಯಾಬ್ ವಿತರಣೆ, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವವರಿಗಾಗಿ ಗ್ರಂಥಾಲಯ ಸ್ಥಾಪಿಸಿ ಪುಸ್ತಕಗಳ ಸಂಗ್ರಹ ಮಾಡಿಕೊಟ್ಟಿದ್ದಾರೆ.

    ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣೆ, ಶಾಲೆ, ಕಾಲೇಜು, ಕೆಲಸದ ಸ್ಥಳದಲ್ಲಿ ಸ್ಯಾನಿಟರಿ ವೆಂಡಿಂಗ್ ಯಂತ್ರಗಳ ಅಳವಡಿಕೆ, ಮಕ್ಕಳಿಗೆ ಪ್ರಥಮ ಚಿಕಿತ್ಸೆ ಬಗ್ಗೆ ತರಬೇತಿ ನೀಡುವ ಜತೆಗೆ ಕಿಟ್ ವಿತರಣೆ, ಖಾಸಗಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೂ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಅದಮ್ಯ ಚೇತನದೊಂದಿಗೆ ಸೇರಿ ಜಾರಿಗೆ ತಂದಿರುವುದು ಇವೆಲ್ಲ ಫೌಂಡೇಷನ್‌ನ ಸಾಮಾಜಿಕ ಸೇವಾ ಕಾರ್ಯಕ್ಕೆ ಹಿಡಿದ ಕನ್ನಡಿಯಾಗಿವೆ. ಅಂಚಟಗೇರಿ ಬಳಿ ಗೋಶಾಲೆ ಆರಂಭಿಸಿ ಗೋಸೇವೆಗೂ ಬದ್ಧ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

    ಗೌರವ ಪ್ರಶಸ್ತಿಗಳು: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ನೀಡುವ ವಾಣಿಜ್ಯ ರತ್ನ ಪ್ರಶಸ್ತಿ, ಹೊಸರಿತ್ತಿಯ ಗುದ್ಲೆಪ್ಪ ಹಳ್ಳಿಕೇರಿ ಸೇವಾ ಗೌರವ ಪ್ರಶಸ್ತಿ, ಹುಬ್ಬಳ್ಳಿಯ ಕೈಜನ್ ಎಜ್ಯುಪ್ಲಸ್ ಸೊಸೈಟಿಯ ಲೈಫ್ ಟೈಮ್ ಅಚಿವ್‌ಮೆಂಟ್ ಅವಾರ್ಡ್‌ಗಳು ಇವರನ್ನು ಅರಸಿ ಬಂದಿವೆ. ಆಶಾ ಹಾರ್ಟ್, ಡಯಾಬಿಟಿಕ್ ಫೌಂಡೇಷನ್ ಟ್ರಸ್ಟಿ, ಕರ್ನಾಟಕ ಗುಜರಾತ್ ಸೇವಾ ಸಮಾಜ ಟ್ರಸ್ಟಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

    ಆಡಳಿತ ಮಂಡಳಿ: ಮಜೇಥಿಯಾ ಆಡಳಿತ ಮಂಡಳಿಯಲ್ಲಿ ನಂದಿನಿ ಕಶ್ಯಪ್ ಮಜೇಥಿಯಾ ಅಧ್ಯಕ್ಷರು, ಡಾ. ಕೆ. ರಮೇಶಬಾಬು, ಡಾ. ವಿ.ಬಿ. ನಿಟಾಲಿ ಹಾಗೂ ಎಚ್.ಆರ್. ಪ್ರಹ್ಲಾದರಾವ್ ಟ್ರಸ್ಟಿಗಳಾಗಿ, ಅಮರೇಶ ಹಿಪ್ಪರಗಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

    ಜನೋಪಯೋಗಿ ಕಾರ್ಯಗಳು
    ಆರಂಭದಲ್ಲಿ ಆರೋಗ್ಯ ಶಿಬಿರ, ಮಧುಮೇಹಿಗಳ ತಪಾಸಣೆಯಂತಹ ಸೇವಾ ಕಾರ್ಯಗಳನ್ನು ವಿವಿಧ ಸಂಘಟನೆಗಳೊಂದಿಗೆ ಸೇರಿ ನಡೆಸಿದರು. 2008ರಲ್ಲಿ ತಾವೇ ಸ್ವತಃ ಮಜೇಥಿಯಾ ಫೌಂಡೇಷನ್ ಸ್ಥಾಪಿಸುವ ಮೂಲಕ ಸೇವಾ ಚಟುವಟಿಕೆಗಳಿಗೆ ಮತ್ತಷ್ಟು ಇಂಬು ನೀಡಿದರು. ಸಮಾಜ ಸೇವೆಯಲ್ಲಿ ಇಡೀ ಕುಟುಂಬವನ್ನೇ ತೊಡಗಿಸಿಕೊಂಡಿದ್ದಾರೆ. ಸಮಾನ ಮನಸ್ಕರು ಸಹ ಇವರ ಜತೆಗೂಡಿದ್ದಾರೆ.


    ಸಹೋದರಿ ನಿರ್ಮಲಾ ಠಕ್ಕರ್ ಹಾಗೂ ಅವರ ಕುಟುಂಬದವರ ಕರೆಯ ಮೇರೆಗೆ ಹುಬ್ಬಳ್ಳಿಗೆ ಬಂದ ನಾನು ಕಠಿಣ ಪರಿಶ್ರಮದಿಂದ ವಾಣಿಜ್ಯೋದ್ಯಮದಲ್ಲಿ ಬೆಳೆದು ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡೆ. ಇದೀಗ ವಿಜಯರತ್ನ ಪ್ರಶಸ್ತಿ ಬಂದಿರುವುದಕ್ಕೆ ಸಂತೋಷವಾಗಿದೆ.

    – ಜಿತೇಂದ್ರ ಮಜೇಥಿಯಾ, ಮಜೇಥಿಯಾ ಫೌಂಡೇಷನ್ ಸಂಸ್ಥಾಪಕರು

    ಶಿಕ್ಷಣ ತಜ್ಞ ಅನಿಲಕುಮಾರಗೆ ವಿಜಯರತ್ನ ಗರಿ; ಸಮಾಜಮುಖಿ ಸಾಧಕರಿಗೆ ವಿಜಯವಾಣಿ- ದಿಗ್ವಿಜಯ ವಾಹಿನಿ ಪ್ರತಿಷ್ಠಿತ ಗೌರವ ಪ್ರದಾನ

    ಶಿಕ್ಷಣ ಪ್ರೇಮಿ ಲಿಂಗಾರೆಡ್ಡಿಗೆ ವಿಜಯರತ್ನ ಗರಿ: ಸಮಾಜಮುಖಿ ಸಾಧಕರಿಗೆ ವಿಜಯವಾಣಿ- ದಿಗ್ವಿಜಯ ವಾಹಿನಿಯ ಪ್ರತಿಷ್ಠಿತ ಗೌರವ ಪ್ರದಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts