More

    ಅಪ್ರತಿಮ ಸಾಧಕ ಯು.ಬಿ.ಶೆಟ್ಟಿಗೆ ವಿಜಯರತ್ನ ಗರಿ: ಉದ್ಯಮ, ಶೈಕ್ಷಣಿಕ, ಧಾರ್ವಿುಕ ಕ್ಷೇತ್ರದಲ್ಲಿ ಮಹಾನ್ ಸಾಧನೆ

    ಮಂಗಳೂರು: ಉದ್ಯಮ, ಶೈಕ್ಷಣಿಕ, ಧಾರ್ವಿುಕ ಕ್ಷೇತ್ರದ ಅಪ್ರತಿಮ ಸಾಧಕ ಯು.ಬಿ.ಶೆಟ್ಟಿ (ಉಪ್ಪುಂದ ಬಾಲಕೃಷ್ಣ ಶೆಟ್ಟಿ) ಅವರು ವಿಆರ್​ಎಲ್ ಸಮೂಹ ಸಂಸ್ಥೆಯ ‘ವಿಜಯವಾಣಿ’ ಮತ್ತು ‘ದಿಗ್ವಿಜಯ ನ್ಯೂಸ್’ 24*7 ನ್ಯೂಸ್ ಚಾನಲ್ ವತಿಯಿಂದ ನೀಡಲಾದ ಪ್ರತಿಷ್ಠಿತ ‘ವಿಜಯರತ್ನ-2022’ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

    ಕರ್ತವ್ಯ ನಿಷ್ಠೆ, ಪ್ರಾಮಾಣಿಕತೆ, ಬದ್ಧತೆಯ ಜತೆಗೆ ಸಾಧಿಸುವ ಛಲ ಇದ್ದರೆ ಸಾಮಾನ್ಯ ವ್ಯಕ್ತಿಯೂ ಬದುಕಿನಲ್ಲಿ ಯಶಸ್ಸಿನ ಉತ್ತುಂಗಕ್ಕೆ ಏರಬಲ್ಲ ಎನ್ನುವುದಕ್ಕೆ ಜ್ವಲಂತ ಉದಾಹರಣೆ ಯು.ಬಿ.ಶೆಟ್ಟಿ. ಕಠಿಣ ಪರಿಶ್ರಮದ ಮೂಲಕ ಉದ್ಯಮ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿದ್ದು, ಹುಟ್ಟೂರು ಉಪ್ಪುಂದದ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಂತಿರುವ ಕೊಡುಗೈ ದಾನಿ. ಗುಣಮಟ್ಟದ ಕಾಮಗಾರಿ ನಿರ್ವಹಣೆ ಮೂಲಕ ರಾಜ್ಯದ ಗುತ್ತಿಗೆದಾರ ಉದ್ಯಮಿಗಳ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಯು.ಬಿ.ಶೆಟ್ಟಿ ಅವರು ಸಾಗಿ ಬಂದ ಹಾದಿಯನ್ನು ಎಂದೂ ಮರೆತವರಲ್ಲ.

    ಸಾಧನೆಯ ಹಾದಿ: ಹದಿಹರೆಯದಲ್ಲೇ ಉದ್ಯೋಗ ಅರಸಿ ಉತ್ತರ ಕರ್ನಾಟಕಕ್ಕೆ ತೆರಳಿದ ಅವರು ನಿರ್ಮಾಣ ಕ್ಷೇತ್ರದಲ್ಲಿ ಅನುಭವ ಪಡೆದು ತಮ್ಮ 30ನೇ ವಯಸ್ಸಿನಲ್ಲಿ ಯು.ಬಿ.ಶೆಟ್ಟಿ ಇಂಜಿನಿಯರ್ಸ್ ಆ್ಯಂಡ್​ ಕಂಟ್ರಾಕ್ಟರ್ಸ್ ಹೆಸರಿನಲ್ಲಿ ಸ್ವಂತ ಸಂಸ್ಥೆ ಪ್ರಾರಂಭಿಸಿದರು. ಸಾಧನೆಯ ಹಾದಿಯಲ್ಲಿ ದಿಟ್ಟ ಹೆಜ್ಜೆಗಳನ್ನು ಇರಿಸಿದ ಅವರು ಶುಭಶ್ರೀ ಬಿಲ್ಡರ್ಸ್, ಸಿದ್ಧಿ ಕನ್​ಸ್ಟ್ರಕ್ಷನ್ ಕಂಪನಿ, ಮಂಜುನಾಥ ನಾರ್ಥ್ ಸಿಟಿ ಡೆವಲಪರ್ಸ್ ಹೆಸರಿನಲ್ಲಿ ಸಮೂಹ ಸಂಸ್ಥೆಗಳನ್ನು ಪ್ರಾರಂಭಿಸಿ ಕರ್ನಾಟಕ ರಾಜ್ಯದಲ್ಲೇ ಮುಂಚೂಣಿಯ ಗುತ್ತಿಗೆದಾರರಾಗಿ ಗುರುತಿಸಿಕೊಂಡರು.

    ಗುಣಮಟ್ಟದ ಕಾಮಗಾರಿ: ಆರೋಗ್ಯ ಇಲಾಖೆ, ಲೋಕೋಪಯೋಗಿ, ನೀರಾವರಿ ಇಲಾಖೆ ಸಹಿತ ಸರ್ಕಾರದ ವಿವಿಧ ಇಲಾಖೆಗಳ ಪ್ರತಿಷ್ಠಿತ ಕಾಮಗಾರಿಗಳನ್ನು ಅತ್ಯುತ್ತಮ ಗುಣಮಟ್ಟದಲ್ಲಿ ನಿರ್ವಹಿಸಿದ ಯು.ಬಿ.ಶೆಟ್ಟಿ ಸರ್ಕಾರ ಹಾಗೂ ಅಧಿಕಾರಿಗಳ ಮಟ್ಟದಲ್ಲಿ ಉತ್ತಮ ಹೆಸರು ಗಳಿಸಿದ್ದಾರೆ. ಕರ್ನಾಟಕದ ಉದ್ದಗಲಕ್ಕೂ ಕಾಮಗಾರಿ ನಿರ್ವಹಿಸಿದ ಯು.ಬಿ.ಶೆಟ್ಟಿ ಅವರ ಸಂಸ್ಥೆ ಸಾವಿರಾರು ಮಂದಿಗೆ ಉದ್ಯೋಗ ಕಲ್ಪಿಸಿದೆ. ಸ್ವತಃ ಶ್ರಮಜೀವಿಯಾಗಿ ದುಡಿಯುವ ವರ್ಗದ ಜನರ ನೋವುಗಳನ್ನು ಅರಿತಿರುವ ಯು.ಬಿ.ಶೆಟ್ಟಿ ಅವರು ಸಂಸ್ಥೆಯ ಉದ್ಯೋಗಿಗಳನ್ನು ಕುಟುಂಬದ ಸದಸ್ಯರಂತೆ ಸಲಹಿದ್ದಾರೆ.

    ಯು.ಬಿ.ಎಸ್. ಚಾರಿಟೆಬಲ್ ಟ್ರಸ್ಟ್: ಉದ್ಯಮ ಕ್ಷೇತ್ರದ ಯಶಸ್ಸಿನ ಜತೆಗೆ ಸಾರ್ವಜನಿಕ ರಂಗದಲ್ಲಿ ಜನರ ನೋವುಗಳಿಗೆ ಧ್ವನಿಯಾದ ಅವರು ಯು.ಬಿ.ಎಸ್. ಚಾರಿಟೆಬಲ್ ಟ್ರಸ್ಟ್ ಹೆಸರಿನ ಸೇವಾ ಸಂಸ್ಥೆ ಸ್ಥಾಪಿಸಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಯಾವುದೇ ಪ್ರಚಾರ ಇಲ್ಲದೆ ಸೇವೆ ಸಲ್ಲಿಸುತ್ತ ಬಂದಿದ್ದಾರೆ.

    ಧಾರ್ವಿುಕ ಕ್ಷೇತ್ರದಲ್ಲಿ ಸೇವೆ: ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರಿಗೆ ಚಿನ್ನದ ಕಿರೀಟ ಸಮರ್ಪಣೆ ಜತೆಗೆ ಸಭಾಗೃಹ ನಿರ್ವಿುಸಲು ಸಮೀಪದಲ್ಲಿದ್ದ ಖಾಸಗಿ ಜಾಗ ಖರೀದಿಸಿ ದೇವಸ್ಥಾನಕ್ಕೆ ದೇಣಿಗೆಯಾಗಿ ಹಸ್ತಾಂತರಿಸಿದ್ದರು. ಕಳವಾಡಿಯ ಶ್ರೀ ಈಶ್ವರ ಮಾರಿಕಾಂಬಾ ದೇವಸ್ಥಾನ, ನಾವುಂದ ಶ್ರೀ ಹನುಮಾನ್ ದೇವಸ್ಥಾನ, ವತ್ತಿನಕಟ್ಟೆ ಶ್ರೀ ಮಹಾಸತಿ ದೇವಸ್ಥಾನಕ್ಕೆ ತಾಮ್ರದ ಹೊದಿಕೆ, ಮೂರೂರಿನ ಶ್ರೀ ನಂದಿಕೇಶ್ವರ ದೇವರ ಮನೆಯ ಜೀರ್ಣೋದ್ಧಾರ, ಮೂರೂರಿನ ಶ್ರೀ ಮುದ್ದೇಶ್ವರ ದೇವಸ್ಥಾನ ಸಹಿತ ಹಲವು ದೇವಸ್ಥಾನಗಳ ಅಭಿವೃದ್ಧಿಗೆ ಅಪಾರ ದೇಣಿಗೆ ನೀಡಿದ್ದಾರೆ. ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ಯು.ಬಿ.ಶೆಟ್ಟಿ ಅವರು ಸುಂದರ ರಾಜಗೋಪುರ ನಿರ್ವಿುಸಿದ್ದು, 2022ರ ಮೇ 21ರಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ರಾಜಗೋಪುರ ಲೋಕಾರ್ಪಣೆಗೊಳಿಸಿದ್ದರು.

    ಅಪ್ರತಿಮ ಸಾಧಕ ಯು.ಬಿ.ಶೆಟ್ಟಿಗೆ ವಿಜಯರತ್ನ ಗರಿ: ಉದ್ಯಮ, ಶೈಕ್ಷಣಿಕ, ಧಾರ್ವಿುಕ ಕ್ಷೇತ್ರದಲ್ಲಿ ಮಹಾನ್ ಸಾಧನೆ
    ವಿಆರ್​​ಎಲ್​ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ಆನಂದ ಸಂಕೇಶ್ವರ, ನಟಿ ಶರ್ಮಿಳಾ ಮಾಂಡ್ರೆ ಅವರೊಂದಿಗೆ ವಿಜಯರತ್ನ ಪ್ರಶಸ್ತಿ ಪುರಸ್ಕೃತ ಯು.ಬಿ.ಶೆಟ್ಟಿ ಮತ್ತು ಅವರ ಪತ್ನಿ ರಂಜನಾ ಯು.ಬಿ. ಶೆಟ್ಟಿ.

    ಸರ್ಕಾರಿ ಶಾಲೆ ದತ್ತು: ಮುಚ್ಚುವ ಸ್ಥಿತಿಯಲ್ಲಿದ್ದ ಬೈಂದೂರು ತಾಲೂಕಿನ ಬಾಡ ಗ್ರಾಮದ ಸರ್ಕಾರಿ ಶಾಲೆಯನ್ನು ದತ್ತು ಪಡೆದು ಆಧುನಿಕ ಶೌಚಗೃಹ, ಅಂಗನವಾಡಿ ಕಟ್ಟಡ, ಪೀಠೋಪಕರಣ, ಮಕ್ಕಳನ್ನು ಶಾಲೆಗೆ ಕರೆತರಲು ವಾಹನ ವ್ಯವಸ್ಥೆ ಸಹಿತ ಎಲ್ಲ ರೀತಿಯ ಮೂಲಸೌಕರ್ಯಗಳನ್ನು ಒದಗಿಸಿದ್ದಾರೆ. ಶಿಕ್ಷಕರ ಕೊರತೆ ನೀಗಿಸಲು ತಮ್ಮ ಟ್ರಸ್ಟ್ ವತಿಯಿಂದಲೇ ಐವರು ಶಿಕ್ಷಕರನ್ನು ನೇಮಿಸಿದ್ದಾರೆ. ಇಂದು 250ಕ್ಕೂ ಅಧಿಕ ಮಕ್ಕಳು ಈ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಪಡೆಯುತ್ತಿದ್ದಾರೆ. ಕರೊನಾ ಲಾಕ್​ಡೌನ್ ಸಂದರ್ಭ ಐದು ಸಾವಿರಕ್ಕೂ ಅಧಿಕ ಆಹಾರದ ಕಿಟ್​ಗಳನ್ನು ಪೂರೈಸುವ ಮೂಲಕ ಬಡವರಿಗೆ ನೆರವು ನೀಡಿದ್ದರು.

    ಶೈಕ್ಷಣಿಕ ಕ್ಷೇತ್ರದಲ್ಲಿ: ಕೋವಿಡ್ ಲಾಕ್​ಡೌನ್ ಸಂದರ್ಭ ಸಂಕಷ್ಟದಲ್ಲಿದ್ದ ಬೈಂದೂರಿನ ಎಚ್​ಎಂಎಂಎಸ್ ಆಂಗ್ಲಮಾಧ್ಯಮ ಶಾಲೆಯನ್ನು ಯು.ಬಿ.ಶೆಟ್ಟಿ ತಮ್ಮ ಟ್ರಸ್ಟ್ ಸುಪರ್ದಿಗೆ ಪಡೆದು ಯು.ಬಿ.ಶೆಟ್ಟಿ ಆಂಗ್ಲಮಾಧ್ಯಮ ಶಾಲೆ ಎಂದು ಮರು ನಾಮಕರಣ ಮಾಡಿದ್ದಾರೆ. ಬಳಿಕ ಉಪ್ಪುಂದ ಗ್ರಾಮದ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯನ್ನೂ ಯು.ಬಿ.ಎಸ್.ಚಾರಿಟೆಬಲ್ ಟ್ರಸ್ಟ್ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿದರು. ಶಿಕ್ಷಣ ಕ್ಷೇತ್ರದಲ್ಲಿ ದೂರದೃಷ್ಟಿತ್ವ ಹೊಂದಿರುವ ಯು.ಬಿ.ಶೆಟ್ಟಿ ಈ ಎರಡು ಶಿಕ್ಷಣ ಸಂಸ್ಥೆಗಳಿಗೆ ಅಗತ್ಯವಿದ್ದ ಜಿಪಿಎಸ್ ಆಧಾರಿತ ನೂತನ ಸಾರಿಗೆ ವ್ಯವಸ್ಥೆ, ಹೆಚ್ಚುವರಿ ಸುಸಜ್ಜಿತ ಕೊಠಡಿಗಳು, ಉತ್ತಮ ಕ್ರೀಡಾ ಸಲಕರಣೆಗಳು ಮುಂತಾದ ಆಧುನಿಕ ಸೌಲಭ್ಯಗಳನ್ನು ಒದಗಿಸಿ ಕರಾವಳಿ ಭಾಗದಲ್ಲೇ ಮಾದರಿ ಆಂಗ್ಲಮಾಧ್ಯಮ ಶಾಲೆಗಳಾಗಿ ಪರಿವರ್ತಿಸಿದ್ದಾರೆ.

    ಸಂತೃಪ್ತ ಕುಟುಂಬ: ಯು.ಬಿ.ಶೆಟ್ಟಿ ಅವರು ಪತ್ನಿ ರಂಜನಾ ಯು.ಬಿ.ಶೆಟ್ಟಿ, ಪುತ್ರಿಯರಾದ ಶುಭಶ್ರೀ ಶೆಟ್ಟಿ ಮತ್ತು ಯಶಶ್ರೀ ಶೆಟ್ಟಿ ಜತೆ ಸಂತೃಪ್ತ ಜೀವನ ನಡೆಸುತ್ತಿದ್ದಾರೆ. ಪತ್ನಿ ರಂಜನಾ ಯು.ಬಿ.ಶೆಟ್ಟಿ ಪತಿಯ ಸಮಾಜಮುಖಿ ಕಾರ್ಯಗಳಿಗೆ ಸಹಕರಿಸುತ್ತ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಹಿರಿಯ ಪುತ್ರಿ ಶುಭಶ್ರೀ ಶೆಟ್ಟಿ ಫ್ಯಾಶನ್ ಡಿಸೈನಿಂಗ್ ಸ್ನಾತಕೋತ್ತರ ಅಧ್ಯಯನ ನಡೆಸಿದ್ದು, ಬೆಂಗಳೂರಿನ ಸಂಜಯ ಗಾಂಧಿ ಆಸ್ಪತ್ರೆಯ ಆರ್ಥೋ ವಿಭಾಗದ ಡಾ.ಪುನೀತ್ ಶೆಟ್ಟಿ ಅವರನ್ನು ವಿವಾಹವಾಗಿದ್ದಾರೆ. ಕಿರಿಯ ಪುತ್ರಿ ಯಶಶ್ರೀ ಬಿ. ಶೆಟ್ಟಿ ಬೆಂಗಳೂರಿನ ದಯಾನಂದ ಸಾಗರ ಕಾಲೇಜಿನಲ್ಲಿ ಎಂಬಿಎ ಅಧ್ಯಯನ ನಡೆಸುತ್ತಿದ್ದು ಜತೆಗೆ ತಂದೆಯ ಶಿಕ್ಷಣ ಸಂಸ್ಥೆಗಳ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

    ಸಹಕಾರ ಧುರೀಣ ವೆಂಕಟೇಶ್​ಗೆ ವಿಜಯರತ್ನ: ವಿಜಯವಾಣಿ, ದಿಗ್ವಿಜಯ ನ್ಯೂಸ್ ವಾಹಿನಿಯ ಪ್ರತಿಷ್ಠಿತ ಗೌರವ ಪ್ರದಾನ

    ಯುವ ಉದ್ಯಮಿ ಬಸವಪ್ರಸಾದಗೆ ವಿಜಯರತ್ನ ಗರಿ: ವಿಜಯವಾಣಿ, ದಿಗ್ವಿಜಯ ನ್ಯೂಸ್ ವಾಹಿನಿಯ ಪ್ರತಿಷ್ಠಿತ ಗೌರವ ಪ್ರದಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts