More

    ಅನ್ನದಾಸೋಹ ಸೇವೆಗೆ ವಿಜಯವಾಣಿ- ದಿಗ್ವಿಜಯ ವಾಹಿನಿಯ ಪ್ರತಿಷ್ಠಿತ ಗೌರವ ಪ್ರದಾನ: ಸಮಾಜಸೇವಕಿ ಡಾ.ಸುನೀತಾಗೆ ‘ವಿಜಯರತ್ನ’ ಗರಿ

    ಬೆಂಗಳೂರು: ಸಮಾಜಕ್ಕಾಗಿ ಏನಾದರೂ ಮಾಡಬೇಕು ಎಂಬ ತುಡಿತದಿಂದ ಲಾಭದಾಯಕ ಹುದ್ದೆ ತೊರೆದು ಹಲವು ಸಮಾಜ ಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಸುಮನಾ ಫೌಂಡೇಷನ್​ ಸಂಸ್ಥಾಪಕ ಅಧ್ಯಕ್ಷೆ ಡಾ.ಸುನೀತಾ ಮಂಜುನಾಥ್​ ಅವರಿಗೆ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್​ ವಾಹಿನಿಯ ಪ್ರತಿಷ್ಠಿತ “ವಿಜಯರತ್ನ-2022′ ಪ್ರಶಸ್ತಿ ಪ್ರದಾನ ಮಾಡಲಾಯಿತು.

    ಇಂಜಿನಿಯರಿಂಗ್​ ಓದಿದ ಸುನೀತಾ ಅವರಿಗೆ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಕೆಲಸವು ದೊರಕಿತ್ತು. ಕೈತುಂಬ ಸಂಬಳವೂ ಬರುತ್ತಿತ್ತು. ಆದರೆ ಇವರು ಕೆಲಸ ತೊರೆದು, ಸಾಮಾಜಿಕ ಕಳಕಳಿಯಿಂದ ಸುಮನಾ ಫೌಂಡೇಷನ್​ ಸ್ಥಾಪಿಸಿ ಹಸಿದವರಿಗೆ ಅನ್ನ ನೀಡುವ ಅನ್ನ ದಾಸೋಹ ಕುಟೀರ ಸೇರಿ ಹಲವು ಸಮಾಜ ಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಸಮಾಜಮುಖಿ ಕೆಲಸಗಳನ್ನು ಗುರುತಿಸಿ ಅಮೆರಿಕ ಹಾಗೂ ಜರ್ಮನಿಯ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್​ ನೀಡಿ ಗೌರವಿಸಿವೆ.

    ಸುಮನಾ ಫೌಂಡೇಷನ್​ ಮೂಲಕ ಸಮಾಜ ಸೇವೆ: “ಸುಂದರ ಮನಸ್ಸಿನ ನಾಗರಿಕರು’ ಎಂಬ ಸಂಕ್ಷಿಪ್ತ ರೂಪವೇ “ಸುಮನಾ’ ಫೌಂಡೇಷನ್​. ಸಮಾನ ಮನಸ್ಕ ಸ್ನೇಹಿತರ ಜತೆಗೂಡಿ ನೊಂದವರಿಗೆ, ಅಸಹಾಯಕರಿಗೆ ನೆರವಾಗುವ ಸದುದ್ದೇಶದಿಂದ ಸುಮನಾ ಫೌಂಡೇಷನ್​ ಸ್ಥಾಪಿಸಿದರು. ಈ ಫೌಂಡೇಷನ್​ನಲ್ಲಿ ಪ್ರಸ್ತುತ 3 ಸಾವಿರಕ್ಕೂ ಹೆಚ್ಚು ಸದಸ್ಯರಿದ್ದಾರೆ. ನಾಗಶೆಟ್ಟಿಹಳ್ಳಿಯಲ್ಲಿ ಕಚೇರಿಯನ್ನು ಹೊಂದಿರುವ ಈ ಸಂಸ್ಥೆಯಲ್ಲಿ ವೈದ್ಯರು, ಇಂಜಿನಿಯರ್ಸ್​, ಪೊಲೀಸ್​, ಶಿಕ್ಷಣ ಕ್ಷೇತ್ರದವರು ಸೇರಿ ಪ್ರಮುಖರು ಕೈಜೋಡಿಸಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹಸಿದವರಿಗೆ ಅನ್ನ, ಪರಿಸರ ಸಂರಕ್ಷಣೆ, ಸ್ವಚ್ಛ ಭಾರತ ಅಭಿಯಾನ, ಸಂಸತಿ ರಕ್ಷಣೆ, ಮಹಿಳಾ ಸಬಲೀಕರಣ ಹೀಗೆ ಹಲವು ಸಮಾಜ ಮುಖಿ ಕಾರ್ಯ ಮಾಡಿಕೊಂಡು ಬರುತ್ತಿದ್ದಾರೆ.

    ಅನ್ನ ದಾಸೋಹ ಕುಟೀರ: ಸಂಜಯ್​ನಗರದಲ್ಲಿರುವ ಸುಮನಾ ಫೌಂಡೇಷನ್​ ಕಚೇರಿಯ ಕೆಳ ಭಾಗದಲ್ಲಿ ಅನ್ನದಾಸೋಹ ಕುಟೀರ ತೆರೆದು ವಾರದ 6 ದಿನ, ಪ್ರತಿಮಧ್ಯಾಹ್ನ 400 ರಿಂದ 500 ಜನರಿಗೆ ಉಚಿತವಾಗಿ ಊಟ ವಿತರಿಸುತ್ತಿದ್ದಾರೆ. ಕರೊನಾ ಸಂದರ್ಭದಲ್ಲಿ  ಸಾವಿರಕ್ಕೂ ಅಧಿಕ ಜನರಿಗೆ ಇಲ್ಲಿ ಪ್ರತಿ ನಿತ್ಯ ಊಟ ವಿತರಣೆ ಮಾಡಲಾಗಿದೆ.

    ಸರ್ಕಾರಿ ಶಾಲೆಗಳನ್ನು ಉಳಿಸಿ ಅಭಿಯಾನ: ಸರ್ಕಾರಿ ಶಾಲೆಗಳನ್ನು ಉಳಿಸಿ ಅಭಿಯಾನವನ್ನು ಕೈಗೊಂಡು ಗ್ರಾಮಾಂತರ ಪ್ರದೇಶದ ಕುಗ್ರಾಮಗಳಿಗೆ ತೆರಳಿ ಅಲ್ಲಿರುವ ಶಾಲೆಗಳನ್ನು ಸ್ವಚ್ಛಗೊಳಿಸಿ, ಅದಕ್ಕೆ ಬಣ್ಣ ಹಚ್ಚಿ, ಶಾಲೆಯ ಗೋಡೆಗಳ ಮೇಲೆ ಆಕರ್ಷಕ ಬಣ್ಣ ಬಣ್ಣದ ಚಿತ್ತಾರಗಳನ್ನು ಮೂಡಿಸುವುದು. ಶಾಲೆಗಳಿಗೆ ಬೇಕಾದ ಪೀಠೋಪಕರಣಗಳನ್ನು ಕೊಡಿಸುವುದು. ಮಡಿಕೇರಿ, ಮೈಸೂರು, ಮಂಡ್ಯ, ಗೌರಿಬಿದನೂರು, ಚಿಕ್ಕಬಳ್ಳಾಪುರ ಸೇರಿ ರಾಜ್ಯದ 30 ಕಡೆ ಸರ್ಕಾರಿ ಶಾಲೆಗಳ ನವೀಕರಣ ಕಾಮಗಾರಿ ಮಾಡಿದ್ದಾರೆ. ಜತೆಗೆ ಎರಡು ಕನ್ನಡ ಶಾಲೆಗಳನ್ನು ಆರಂಭಿಸಿ ಅಲ್ಲಿ ಕೆಲ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡುತ್ತಿದ್ದಾರೆ.

    ವಾಲ್​ ಆ​ಫ್​ ಹ್ಯುಮಾನಿಟಿ: ಮಾನವೀಯತೆಯ ಗೋಡೆಯನ್ನು (ವಾಲ್​ ಆಫ್​​ ಹ್ಯುಮಾನಿಟಿ) ಸಂಜಯನಗರ ಹಾಗೂ ಬೆಂಗಳೂರಿನ ಇತರೆಡೆ ಸ್ಥಾಪಿಸಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ಕೊಡಗು ಜಿಲ್ಲೆಯಲ್ಲಿ ಉಂಟಾಗಿದ್ದ ಜಲಪ್ರಳಯ ಸಂದರ್ಭದಲ್ಲಿ ಸುಮನಾ ಫೌಂಡೇಷನ್​ ತಂಡ ಸುಮಾರು 10 ಲಕ್ಷ ರೂಪಾಯಿಗಳಷ್ಟು ದಿನಸಿ ಪದಾರ್ಥಗಳನ್ನು ಹಾಗೂ ಗೃಹೋಪಯೋಗಿ ವಸ್ತುಗಳನ್ನು ನೆರೆ ಸಂತ್ರಸ್ತರಿಗೆ ತಲುಪಿಸಿತ್ತು.

    ಪ್ರತಿವರ್ಷ ದೀಪಾವಳಿ ಸಂದರ್ಭದಲ್ಲಿ 25 ಸಾವಿರ ಮಣ್ಣಿನ ದೀಪ ಹಂಚುವ ಜತೆಗೆ ಪಟಾಕಿ ಹೊಡೆಯದಂತೆ ಜಾಗೃತಿ ಮೂಡಿಸುತ್ತಿದ್ದಾರೆ. ಪ್ರತಿವರ್ಷ ಸುಮಾರು 5 ಸಾವಿರ ಮಣ್ಣಿನ ಗಣಪತಿ ಮೂರ್ತಿಗಳನ್ನು ವಿತರಣೆ ಮಾಡುತ್ತಿದ್ದಾರೆ. 500 ಬೀದಿ ವ್ಯಾಪಾರಿಗಳಿಗೆ ಮಳೆಯಿಂದ ರಕ್ಷಣೆ ನೀಡುವ ದೊಡ್ಡ ಛತ್ರಿಗಳನ್ನು ವಿತರಣೆ ಮಾಡಿದ್ದಾರೆ. ಸತತ 7 ವರ್ಷಗಳಿಂದ ನಿರಂತರವಾಗಿ ಬೆಂಗಳೂರು ನಗರದ ಹಲವು ಕಡೆ ಗೋಡೆ ಬರಹಗಳನ್ನು ಬರೆಯುವ ಮೂಲಕ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ರಸ್ತೆ ಬದಿಯ ಗೋಡೆಗಳ ಮೇಲೆ ಬಗೆ ಬಗೆಯ ಚಿತ್ತಾರ, ಕನ್ನಡ ಅಭಿಯಾನ, ಸಲಹೆ, ಸೂಚನೆ, ಇತ್ಯಾದಿಗಳನ್ನು ಬರೆಯುವುದರೊಂದಿಗೆ ಆ ಪ್ರದೇಶಗಳಲ್ಲಿ ಯಾರು ಗಲೀಜು ಮಾಡದ ಹಾಗೆ ನಗರವನ್ನು ಸುಂದರವಾಗಿ ಕಂಗೊಳಿಸುವಂತೆ ಮಾಡಿದ್ದಾರೆ.

    ಪ್ರತಿ ನಿತ್ಯ ಅನ್ನದಾಸೋಹ, ಸರ್ಕಾರಿ ಶಾಲೆಗಳನ್ನು ಸುಂದರಗೊಳಿಸುವ ಪ್ರಕ್ರಿಯೆ, ಬಸ್​ನಿಲ್ದಾಣಗಳನ್ನು ನವೀಕರಿಸುವ ಪ್ರಯತ್ನ.. ಎಲ್ಲದರಲ್ಲೂ ಸುನೀತಾ ಮುಂದು. ಹೆಣ್ಣುಮಕ್ಕಳದ್ದೇ ಒಂದು ತಂಡ ಕಟ್ಟಿಕೊಂಡು ಅವರು ಮುನ್ನಡೆ ಯುತ್ತಿರುವ ರೀತಿ ಪ್ರತಿಯೊಬ್ಬರಿಗೂ ಮಾದರಿ.
    | ಚಕ್ರವರ್ತಿ ಸೂಲಿಬೆಲೆ
    ವಾಗ್ಮಿ ಮತ್ತು ಅಂಕಣಕಾರ

    ಡಾ. ಸುನಿತಾ ಮಂಜುನಾಥ್​ ಅವರ ಸಮಾಜಸೇವೆ ಬಗ್ಗೆ ಎಲ್ಲರೂ ಪ್ರಶಂಸೆ ವ್ಯಕ್ತಪಡಿಸುತ್ತಾರೆ. ಅವರ ಸೇವೆಗೆ ಮತ್ತಷ್ಟು ಬಲ ಬರಲು ಇಂಥವರು ರಾಜಕೀಯಕ್ಕೆ ಬರಬೇಕು. ಇವರ ಭವಿಷ್ಯ ಉಜ್ವಲವಾಗಲಿ ಎಂದು ಮನಸಾರೆ ಹಾರೈಸುತ್ತೇನೆ.
    | ಡಾ.ವೈ.ಎ.ನಾರಾಯಣಸ್ವಾಮಿ
    ವಿಧಾನ ಪರಿಷತ್​ ಮುಖ್ಯಸಚೇತಕ

    ಪ್ರತಿಷ್ಠಿತ ವಿಜಯರತ್ನ ಪ್ರಶಸ್ತಿಗೆ ನನ್ನನ್ನು ಗುರುತಿಸಿರುವುದಕ್ಕೆ ಬಹಳ ಖುಷಿಯಾಗಿದೆ. ಇಂತಹ ಪ್ರಶಸ್ತಿಗಳು ಸಮಾಜಮುಖಿ ಕೆಲಸ ಮಾಡುವವರಿಗೆ ಬೆನ್ನು ತಟ್ಟಿದಂತೆ. ಇನ್ನು ಹೆಚ್ಚಿನ ಕೆಲಸ ಮಾಡುವುದಕ್ಕೆ ಈ ಪ್ರಶಸ್ತಿ ಸ್ಫೂರ್ತಿ ನೀಡಲಿದೆ.
    |ಡಾ. ಸುನೀತಾ ಮಂಜುನಾಥ್​
    ಸುಮನಾ ಫೌಂಡೇಷನ್​ ಸಂಸ್ಥಾಪಕ ಅಧ್ಯಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts