More

    ಯೋಗಗುರು ಭವರಲಾಲ್ ಆರ್ಯಗೆ ವಿಜಯರತ್ನ ಗರಿ; ವಿಜಯವಾಣಿ- ದಿಗ್ವಿಜಯ ವಾಹಿನಿಯ ಗೌರವ..

    ಬೆಂಗಳೂರು: ಪತಂಜಲಿ ಯೋಗ ಪೀಠದ ಕರ್ನಾಟಕ ರಾಜ್ಯ ಪ್ರಭಾರಿ, ಯೋಗಾಚಾರ್ಯ ಭವರಲಾಲ್ ಆರ್ಯ ಅವರಿಗೆ ಕನ್ನಡದ ನಂ. 1 ದಿನಪತ್ರಿಕೆ ವಿಜಯವಾಣಿ ಮತ್ತು ದಿಗ್ವಿಜಯ ಸುದ್ದಿವಾಹಿನಿಯ ಪ್ರತಿಷ್ಠಿತ ‘ವಿಜಯರತ್ನ- 2022’ ಪ್ರಶಸ್ತಿ ಪ್ರದಾನ ಮಾಡಲಾಯಿತು.

    ಬೆಂಗಳೂರಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಮಾರಂಭದಲ್ಲಿ ನಾಡಿನಾದ್ಯಂತ ಶಿಕ್ಷಣ, ಉದ್ಯಮ, ಆರೋಗ್ಯ, ಪರಿಸರ ಕಾಳಜಿ, ಸಮಾಜಸೇವೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 42 ಸಾಧಕರಿಗೆ ವಿಜಯರತ್ನ- 2022 ಪ್ರಶಸ್ತಿ ಪ್ರದಾನ ಮಾಡಲಾಯಿತು.

    ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ. ಸುಧಾಕರ್, ಚಿತ್ರನಟ ರಮೇಶ ಅರವಿಂದ್, ನಟಿ ಶರ್ವಿುಳಾ ಮಾಂಡ್ರೆ ಅವರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಆನಂದ ಸಂಕೇಶ್ವರ, ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ್ ಮೊದಲಾದವರು ಉಪಸ್ಥಿತರಿದ್ದರು.

    ಯೋಗದ ಮಹತ್ವ ಸಾರಿದ ಯೋಗಾಚಾರ್ಯ: ಕಲಿತದ್ದು 8ನೇ ತರಗತಿಯಾದರೂ ಯೋಗ ಶಿಕ್ಷಣದಲ್ಲಿ ಅದ್ವಿತೀಯ ಸಾಧನೆ ಮಾಡಿದ ಯೋಗಾಚಾರ್ಯ ಭವರಲಾಲ್ ಆರ್ಯ ಅವರು, ಪತಂಜಲಿ ಯೋಗ ಪೀಠದ ಕರ್ನಾಟಕ ರಾಜ್ಯ ಪ್ರಭಾರಿಯಾಗಿ ರಾಷ್ಟ್ರ ಚಿಂತನೆಯಲ್ಲಿ ತೊಡಗಿದ್ದಾರೆ.

    1980ರಲ್ಲಿ 13ನೇ ವಯಸ್ಸಿನಲ್ಲಿ ರಾಯಚೂರು ಜಿಲ್ಲೆಯ ಸಿಂಧನೂರಿನ ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದರು. ಸ್ವದೇಶಿ ಜಾಗರಣ ಮಂಚ್ ಸಂಸ್ಥಾಪಕ ರಾಜೀವ ದೀಕ್ಷಿತ್ ಅವರ ಸಂಪರ್ಕದೊಂದಿಗೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಪ್ರವಾಸ ಮಾಡಿದರು. ಆರ್ಯ ಸಮಾಜದ ಸಂಪರ್ಕವನ್ನೂ ಸಾಧಿಸಿ, ರಾಷ್ಟ್ರ ಚಿಂತನೆಯ ಚಟುವಟಿಕೆಗಳಲ್ಲಿ ತೊಡಗಿದರು. 1989ರಲ್ಲಿ ಜನತಾ ಟೆಕ್ಸ್​ಟೈಲ್ಸ್ ಬಟ್ಟೆ ಅಂಗಡಿ ಆರಂಭಿಸಿದರು. ಗೆಳೆಯರೊಂದಿಗೆ ಸೇರಿ ಸಿಂಧನೂರಿನಲ್ಲಿ ಆನಂದ ಪಬ್ಲಿಕ್ ಸ್ಕೂಲ್ ಆರಂಭಿಸಿ ಸಾವಿರಾರು ಮಕ್ಕಳಿಗೆ ವಿದ್ಯಾದಾನ ಮಾಡುತ್ತಿದ್ದಾರೆ.

    ಯೋಗದತ್ತ ಒಲವು: ಭವರಲಾಲ್ ಆರ್ಯ ಅವರಿಗೆ ಕ್ರೋನಿಕ್ ಅಸ್ತಮಾ ಸಮಸ್ಯೆ ಕಾಡುತ್ತಿತ್ತು. ವೈದ್ಯರ ಬಳಿ ತೋರಿಸಿದಾಗ ಇದು ಕಡಿಮೆ ಆಗುವುದಿಲ್ಲ ಎಂದಿದ್ದರು. ಅಸ್ತಮಾ ಮಧ್ಯೆಯೂ ತಮ್ಮನ್ನು ಇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಆಗ ಪತಂಜಲಿ ಯೋಗ ಪೀಠದಲ್ಲಿ ಶಿಕ್ಷಕರ ಆಗತ್ಯವಿದೆ ಎಂಬ ಮಾಹಿತಿ ತಿಳಿದ ಇವರು, ಯೋಗ ಶಿಕ್ಷಕರಾಗುವ ಉತ್ಸಾಹ ತೋರಿದರು.

    ಜತೆಗೆ ತಮಗಿದ್ದ ಕ್ರೋನಿಕ್ ಅಸ್ತಮಾ ಸಮಸ್ಯೆ ಕಳೆದುಕೊಳ್ಳುವ ಮನಸ್ಸು ಮಾಡಿದರು. ನಿತ್ಯ ಯೋಗಾಭ್ಯಾಸ ಮಾಡುತ್ತಿದ್ದಂತೆ ಅಸ್ತಮಾ ನಿವಾರಣೆ ಆಯಿತು. ಇದರಿಂದ ಪ್ರೇರಿತರಾದ ಇವರು, ಇತರರಿಗೆ ಯೋಗಭ್ಯಾಸ ಹೇಳಿಕೊಡುವ ಕೆಲಸದಲ್ಲಿ ನಿರತರಾದರು. ಪತಂಜಲಿ ಯೋಗ ಪೀಠದ ರಾಯಚೂರು ಜಿಲ್ಲಾ ಪ್ರಭಾರಿಯಾದರು. ಆರು ತಿಂಗಳು ರಾಜ್ಯಾದ್ಯಂತ ಯೋಗ ಜಾಗರಣ ಯಾತ್ರೆ ಮಾಡಿದರು. ಯೋಗಗುರು ಬಾಬಾ ರಾಮದೇವ್ ಅವರ 25 ಬೃಹತ್ ಯೋಗ ಶಿಬಿರಗಳನ್ನು ಆಯೋಜಿಸಿದರು. ಅವರ ಹಿಂದಿಯ ಉಪನ್ಯಾಸಗಳನ್ನು ಕನ್ನಡಕ್ಕೆ ಅನುವಾದಿಸಿದರು. ವಿಜಯನಗರ (ಹೊಸಪೇಟೆ) ಆಕಾಶವಾಣಿ ಕೇಂದ್ರದಲ್ಲಿ ಎರಡು ವರ್ಷಗಳ ‘ಯೋಗಾಮೃತ’ ಕಾರ್ಯಕ್ರಮ ನಡೆಸಿಕೊಟ್ಟು, ಆರೋಗ್ಯದ ಗುಟ್ಟು ಹೇಳಿಕೊಟ್ಟಿದ್ದಾರೆ.

    ಯೋಗಗುರು ಭವರಲಾಲ್ ಆರ್ಯಗೆ ವಿಜಯರತ್ನ ಗರಿ; ವಿಜಯವಾಣಿ- ದಿಗ್ವಿಜಯ ವಾಹಿನಿಯ ಗೌರವ..
    ಯೋಗಗುರು ಭವರಲಾಲ್ ಆರ್ಯ ಅವರಿಗೆ ಸಚಿವ ಡಾ. ಕೆ. ಸುಧಾಕರ್ ಮತ್ತು ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಆನಂದ ಸಂಕೇಶ್ವರ ಅವರು ವಿಜಯರತ್ನ- 2022 ಪ್ರಶಸ್ತಿ ಪ್ರದಾನ ಮಾಡಿದರು.

    ಅಪ್ಪಟ ಕನ್ನಡಾಭಿಮಾನಿ

    ಅಪ್ಪಟ ಕನ್ನಡಾಭಿಮಾನಿ ಭವರಲಾಲ್ ಆರ್ಯ ಅವರು ಜನಿಸಿದ್ದು ರಾಜಸ್ಥಾನದಲ್ಲಿ. ಮಾತೃಭಾಷೆ ರಾಜಸ್ಥಾನಿ. ಆದರೂ ಕನ್ನಡದಲ್ಲಿ ಸ್ಪಷ್ಟವಾಗಿ ಮಾತನಾಡುತ್ತಾರೆ, ಬರೆಯುತ್ತಾರೆ. ಕನ್ನಡ ಸಾಹಿತ್ಯ ಪರಿಷತ್ ಆಜೀವ ಸದಸ್ಯರಾಗಿದ್ದು, ಪ್ರತಿ ವರ್ಷ ಕನ್ನಡ ರಾಜ್ಯೋತ್ಸವದಂದು ಪರಭಾಷಿಕರಿಗೆ ಕನ್ನಡ ಕಲಿಕೆ ಶಿಬಿರಗಳನ್ನು ಆಯೋಜಿಸುತ್ತಿದ್ದಾರೆ. ಹೊರನಾಡಿನಲ್ಲಿರುವ ಕನ್ನಡಿಗರಿಗಾಗಿ ಕಿಂಗ್​ಡಮ್ ಆಫ್ ಬೆಹರೇನ್ ರಾಷ್ಟ್ರದಲ್ಲಿ 2015 ಮತ್ತು 2019ರಲ್ಲಿ ಎರಡು ಬಾರಿ ಕನ್ನಡ ಸಂಘ ಮತ್ತು ಬಸವ ಸಮಿತಿ ಸಹಯೋಗದಲ್ಲಿ ವಿಶೇಷ ಯೋಗ ಶಿಬಿರಗಳನ್ನು ನಡೆಸಿಕೊಟ್ಟಿದ್ದಾರೆ. ನಮ್ಮ ದೇಶದ 25 ರಾಜ್ಯಗಳ ವಿವಿಧ ಭಾಷಿಕರು ಯೋಗ ಶಿಬಿರದಲ್ಲಿ ಭಾಗವಹಿಸಿದ್ದರು. ಆದರೆ, ಭವರಲಾಲ್ ಆರ್ಯ ಅವರು ಶಿಬಿರ ನಡೆಸಿಕೊಟ್ಟಿದ್ದು ಕನ್ನಡದಲ್ಲಿ!

    ಸಾಮಾಜಿಕ ಸೇವೆ

    ಪುತ್ರ ರಾಜಕುಮಾರ ಆರ್ಯ ಹತ್ತು ವರ್ಷದವರಿದ್ದಾಗ ಮಸ್ಕ್ಯೂಲರ್ ಡಿಸ್ಟ್ರೋಫಿ ಕಾಯಿಲೆ ಕಾಣಿಸಿಕೊಂಡಿತ್ತು. ಇದನ್ನು ಬಾಬಾ ರಾಮದೇವ್ ಅವರೂ ಗುರುತಿಸಿದ್ದರು. ಚಿಕಿತ್ಸೆಗಾಗಿ ವೈದ್ಯರ ಬಳಿ ಕರೆದುಕೊಂಡು ಹೋದಾಗ ಹುಡುಗನ ಜೀವಿತಾವಧಿ ಕೇವಲ ಐದು ವರ್ಷ ಎಂದಾಗ ದಂಗುಬಡಿದಿತ್ತು. ಆದರೆ, ನಿರಂತರ ಯೋಗಾಭ್ಯಾಸದಿಂದ ಆತ 15 ವರ್ಷಗಳ ಕಾಲ ಬದುಕಿದ. ಮಗ ತೀರಿಕೊಂಡಾಗ ಬಹಳ ಚಿಂತಿತರಾದರು. ಇದನ್ನು ಗಮನಿಸಿದ ಬಾಬಾ ರಾಮದೇವ್ ಚಿಂತೆ ಬಿಟ್ಟು ಸಾಮಾಜಿಕ ಕಾರ್ಯದಲ್ಲಿ ತೊಡಗಿ ಎಂದು ಸಲಹೆ ಕೊಟ್ಟರು. ಮತ್ತೆ ಯೋಗ ಶಿಬಿರಗಳತ್ತ ಮುಖ ಮಾಡಿದ ಆರ್ಯ ಅವರು, ಮಗನ ಹೆಸರಲ್ಲಿ ರಾಜಕುಮಾರ ಆರ್ಯ ಫೌಂಡೇಷನ್ ಸ್ಥಾಪಿಸಿದರು. ಮಸ್ಕ್ಯೂಲರ್ ಡಿಸ್ಟ್ರೋಫಿ ಕಾಯಿಲೆಯಿಂದ ಬಳಲುವವರಿಗೆ ಹೆಲ್ಪ್​ಲೈನ್ ರೂಪದಲ್ಲಿ ನೂರಾರು ಮಕ್ಕಳಿಗೆ, ಪಾಲಕರಿಗೆ ಮಾರ್ಗದರ್ಶನ, ಔಷಧ, ಉಪಯುಕ್ತ ವಸ್ತುಗಳನ್ನು ವಿತರಿಸುತ್ತಿದ್ದಾರೆ.

    ಕುಟುಂಬದ ಸಹಕಾರ

    ಭವರಲಾಲ್ ಆರ್ಯ ಅವರಿಗೆ ಪತ್ನಿ ಜಮುನಾ ದೇವಿ ಮತ್ತು ಪುತ್ರಿ ಸುಮನ್ ಆರ್ಯ, ಸಹೋದರ-ಸಹೋದರಿಯರು ಪ್ರತಿ ಕಾರ್ಯದಲ್ಲೂ ಸಾಥ್ ನೀಡುತ್ತಿದ್ದಾರೆ. ಯೋಗಗುರು ಬಾಬಾ ರಾಮದೇವ್ ಅವರಿಂದ ಯೋಗಾಚಾರ್ಯ ಬಿರುದು, ಬಾಳೆಹೊನ್ನೂರಿನ ರಂಭಾಪುರಿ ಪೀಠದಿಂದ ರೇಣುಕಾಚಾರ್ಯ ಯೋಗರತ್ನ ಪ್ರಶಸ್ತಿ, ಸಂಗೀತ ಭಾರತಿಯಿಂದ ಸಮಾಜಸೇವಾ ಭಾರ್ಗವ ಮತ್ತು ಸಂಸ್ಕಾರ ಭಾರತಿ ಯೋಗರತ್ನ ಪ್ರಶಸ್ತಿ, ಹುಬ್ಬಳ್ಳಿಯ ಸುಪ್ರಸಿದ್ಧ ಸಿದ್ಧಾರೂಢ ಮಠದಿಂದ ಯೋಗಭಾಸ್ಕರ ಪ್ರಶಸ್ತಿ ಸೇರಿ ಹಲವು ಪುರಸ್ಕಾರಗಳಿಗೆ ಇವರು ಭಾಜನರಾಗಿದ್ದಾರೆ.

    ಜನಸೇವಕ ಚಂದು ಪಾಟೀಲ್‌ಗೆ ವಿಜಯರತ್ನ ಗರಿ; ವಿಜಯವಾಣಿ-ದಿಗ್ವಿಜಯ ವಾಹಿನಿಯ ಪ್ರತಿಷ್ಠಿತ ಗೌರವ

    ಜನಸೇವಕ ಶರಣು ಪಪ್ಪಾಗೆ ವಿಜಯರತ್ನ ಗರಿ; ವಿಜಯವಾಣಿ – ದಿಗ್ವಿಜಯ ಸುದ್ದಿವಾಹಿನಿಯ ಪ್ರತಿಷ್ಠಿತ ಗೌರವ ಪ್ರದಾನ

    ದಾಸೋಹ ಜೀವಿ ಕೊಳ್ಳುರ್‌ಗೆ ವಿಜಯರತ್ನ ಗರಿ; ವಿಜಯವಾಣಿ, ದಿಗ್ವಿಜಯ ವಾಹಿನಿಯ ಪ್ರತಿಷ್ಠಿತ ಗೌರವ ಪ್ರದಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts