More

    ಜನಪ್ರತಿನಿಧಿಗಳ ಮನೆಗೆ ಮುತ್ತಿಗೆ

    ವಿಜಯಪುರ : ತಳವಾರ- ಪರಿವಾರ ಜನಾಂಗಕ್ಕೆ ಪರಿಶಿಷ್ಟ ಪಂಗಡದ (ಎಸ್ಟಿ) ಜಾತಿ ಪ್ರಮಾಣ ಪತ್ರ ಕೊಡಲು ಸರ್ಕಾರದ ಮೇಲೆ ಒತ್ತಡ ಹೇರುವಂತೆ ಒತ್ತಾಯಿಸಿ ಜನಪ್ರತಿನಿಧಿಗಳ ಮನೆ ಮುಂದೆ ಭಾನುವಾರ ಧರಣಿ ಮಾಡಿ ಮನವಿ ಸಲ್ಲಿಸಲಾಯಿತು.

    ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಧರಣಿ ನಡೆಸಿದ ಜಿಲ್ಲೆಯ ತಳವಾರ ಮತ್ತು ಪರಿವಾರ ಸಮಾಜದ ಮುಖಂಡರು, ನಂತರ ಜಿಲ್ಲೆಯ ಎಲ್ಲ ಶಾಸಕರ ಮತ್ತು ಸಂಸದರ ನಿವಾಸಕ್ಕೆ ತೆರಳಿ ಧರಣಿ ನಡೆಸಿ, ಮನವಿ ಸಲ್ಲಿಸಿದರು.

    ಶಾಸಕರಾದ ಶಿವಾನಂದ ಪಾಟೀಲ, ದೇವಾನಂದ ಚವಾಣ್, ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಮನವಿ ಸ್ವೀಕರಿಸಿ ಸದನದಲ್ಲಿ ಜಾತಿ ಪ್ರಮಾಣ ಪತ್ರಕ್ಕಾಗಿ ಪ್ರಶ್ನೆಗಳನ್ನು ಎತ್ತಿ ನ್ಯಾಯಗಳನ್ನು ಒದಗಿಸಿಕೊಡುತ್ತೇವೆ ಎಂದು ಭರವಸೆ ನೀಡಿದರು. ಅದೇ ರೀತಿ ಸಿಂದಗಿ ಶಾಸಕ ಎಂ.ಸಿ.ಮನಗೂಳಿ, ಮುದ್ದೇಬಿಹಾಳ ಶಾಸಕ ಎ.ಎಸ್.ಪಾಟೀಲ, ಇಂಡಿ ಶಾಸಕ ಯಶವಂತರಾಯಗೌಡ ಪಾಟಿಲ ಅವರ ಮನೆಗೆ ಮುತ್ತಿಗೆ ಹಾಕಿ ಮನವಿ ಸಲ್ಲಿಸಲಾಯಿತು.

    ತಳವಾರ ಮತ್ತು ಪರಿವಾರ ಸಮಾಜದವರಿಗೆ ಎಸ್‌ಟಿ ಮೀಸಲು ಪ್ರಮಾಣ ಪತ್ರ ನೀಡುವಂತೆ ಒತ್ತಾಯಿಸಿ ಹಮ್ಮಿಕೊಂಡಿರುವ ಹೋರಾಟಕ್ಕೆ ಜನಪ್ರತಿನಿಧಿಗಳು ಬೆಂಬಲಿಸಬೇಕು. ಅಲ್ಲದೆ, ಸದನದ ಶೂನ್ಯ ವೇಳೆಯಲ್ಲಿ ಚರ್ಚೆಗೆ ಹಾಕಿ ತಳವಾರ ಮತ್ತು ಪರಿವಾರ ಸಮುದಾಯಕ್ಕೆ ಎಸ್‌ಟಿ ಪ್ರಮಾಣ ಪತ್ರ ನೀಡುವಂತೆ ಧ್ವನಿ ಎತ್ತಬೇಕು ಎಂದು ಒತ್ತಾಯಿಸಿದರು. ಎಸ್‌ಟಿ ಪ್ರಮಾಣ ಪತ್ರ ನೀಡದೆ ಹೋದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

    ಸಮಾಜದ ಮುಖಂಡರಾದ ಶರಣಪ್ಪ ಸುಣಗಾರ, ಶರಣಪ್ಪ ಕಣಮೇಶ್ವರ, ಸುರೇಶಗೌಡ ಪಾಟೀಲ, ಪ್ರಕಾಶ ಸೊನ್ನದ, ಸಾಹೇಬಗೌಡ ಬಿರಾದಾರ, ಅಂಬಣ್ಣ ನಾಟೀಕಾರ, ಶ್ರೀಮಂತ ತಳವಾರ, ಸಂತೋಷ ತಟಗಾರ, ರಾಜು ಮೆಟಗಾರ, ವಿರುಪಾಕ್ಷ ಕೋಲಕಾರ, ಅಮೋ ವಾಲೀಕಾರ, ಚಂದ್ರಶೇಖರ ತೊರವಿ, ಸದಾಶಿವ ಕೋಲಕಾರ, ನಾಗಪ್ಪ ಹಳೆಪ್ಪಗೋಳ, ಎಸ್.ಎಸ್.ದೇಗಿನಾಳ, ಮಲ್ಲಿಕಾರ್ಜುನ ತಳವಾರ, ಭರತ ಕೋಳಿ, ಅಂಬರೀಶ ಕಾಮನಕೇರಿ, ರಮೇಶ ದಳವಾಯಿ, ಪರಮಾನಂದ ತಳವಾರ, ಪರಮಾನಂದ ಕೋಳಿ ಇತರರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts