More

    ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿ

    ವಿಜಯಪುರ: ನಮ್ಮ ಪೂರ್ವಜರ ಕಾಲದಿಂದಲೂ ಸಂಗೀತ, ಸಾಹಿತ್ಯ ಮತ್ತು ಜನಪದ ಕಲೆ ಬದುಕಿನ ಭಾಗವಾಗಿ ನಿತ್ಯ ಜೀವನದಲ್ಲಿ ಹಾಸು ಹೊಕ್ಕಾಗಿದೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.

    ಶಿವಯೋಗಿ ಪುಟ್ಟರಾಜ ಗಾನಬನದ ಮಠದಲ್ಲಿ ಶ್ರೀಗುರು ಕುಮಾರೇಶ್ವರ ಮತ್ತು ಗಾನಯೋಗಿ ಪಂಚಾಕ್ಷರ ಪ್ರತಿಷ್ಠಾನದ ಸಹಯೋಗದಲ್ಲಿ ಗುರುವಾರ ರಾತ್ರಿ ಜರುಗಿದ 62ನೇ ಮಾಸಿಕ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಭವ್ಯ ಸಂಸ್ಕೃತಿ, ಸಂಗೀತ ಕಲೆಗಳನ್ನು ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಜತೆಗೆ ಪಠ್ಯೇತರ ಚಟುವಟಿಕೆಯಾಗಿ ಅಳವಡಿಸಿಕೊಳ್ಳಬೇಕಾಗಿದೆ. ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣಕ್ಕೆ ಈ ನಾಡಿನ ಸಂಸ್ಕೃತಿ ಪರಂಪರೆ, ಜನಪದ ಕಲೆ, ಸಾಹಿತ್ಯ, ಸಂಗೀತ ಅತ್ಯಂತ ಸಹಕಾರಿಯಾಗಿದೆ. ಪಾಶ್ಚಾತ್ಯ ಸಂಸ್ಕೃತಿಯ ಭರಾಟೆಯಲ್ಲಿ ನಮ್ಮ ಯುವ ಜನಾಂಗ ಕರಗಿಹೋಗುತ್ತಿದೆ. ಭಾರತೀಯ ಕಲಾ ಪರಂಪರೆ ವಿಶ್ವಕ್ಕೆ ಮಾದರಿಯಾಗಿದ್ದು, ಅದನ್ನು ಅಳವಡಿಸಿಕೊಳ್ಳುವ ಮೂಲಕ ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ಉಳಿಸಿ, ಬೆಳೆಸುವ ಅಗತ್ಯವಿದೆ ಎಂದರು.

    ಎಸ್.ಎಸ್. ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಅಮರೇಶ ಸಾಲಕ್ಕಿ ಮಾತನಾಡಿ, ಪಂಡಿತ ಡಾ. ಪುಟ್ಟರಾಜ ಗವಾಯಿಗಳು ಕನ್ನಡ ನಾಡಿನ ಸಾಂಸ್ಕೃತಿಕ ಕ್ಷೇತ್ರಕ್ಕೆ ಬಹುರೂಪವಾಗಿ ಅಪಾರ ಸೇವೆ ಸಲ್ಲಿಸಿದ ಧೀಮಂತ ವ್ಯಕ್ತಿ ಹಾಗೂ ಶಕ್ತಿಯಾಗಿದ್ದರು. ಆಧ್ಯಾತ್ಮಿಕ ಸಾಧನೆ ಅಲ್ಲದೆ ಸಂಗೀತ, ಸಾಹಿತ್ಯ, ಶಿಕ್ಷಣ ಕ್ಷೇತ್ರದಲ್ಲೂ ಅಪಾರ ಸಾಧನೆ ಮಾಡಿದ್ದಾರೆ ಎಂದು ಸ್ಮರಿಸಿದರು.

    ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕ ಪಡೆದ ವಿಜಯಪುರದ ಮೇಘನಾ ಪೂಜಾರಿ, ಅಶ್ವಿನಿ ಬಿರಾದಾರ ಅವರನ್ನು ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಯಿತು. ಸಿವಿಲ್ ಇಂಜಿನಿಯರ್ ಭೀಮಸೇನ ಕೋಕರೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗಾನಬನದ ಸಂಸ್ಥಾಪಕ ತೋಂಟದಾರ್ಯ ಶಿರೋಳಮಠ, ರಾಜ್ಯ ಕೊಳಗೇರಿ ಅಭಿವೃದ್ಧಿ ಮಂಡಳಿ ನಿರ್ದೇಶಕ ನಾಗರಾಜ ಬಿರಾದಾರ, ಮಲ್ಲಿಕಾರ್ಜುನ ಹಿರೇಮಠ, ಪರುತಯ್ಯ ಅರಕೇರಿಮಠ, ಪಂಚಾಕ್ಷರಿ ಶಾಸ್ತ್ರಿ ಇನ್ನಿತರರು ಉಪಸ್ಥಿತರಿದ್ದರು.

    ಚಿತ್ರ: ಎಚ್‌ಎನ್ 3-3 ವಿಜಯಪುರದ ಶಿವಯೋಗಿ ಪುಟ್ಟರಾಜ ಗಾನಬನದ ಮಠದಲ್ಲಿ ಗುರುವಾರ ರಾತ್ರಿ ಜರುಗಿದ 62ನೇ ಮಾಸಿಕ ಸಂಗೀತ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದ ವಿದ್ಯಾರ್ಥಿನಿಯರಾದ ಮೇಘನಾ ಪೂಜಾರಿ ಹಾಗೂ ಅಶ್ವಿನಿ ಬಿರಾದಾರ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕ ಸಂತೋಷ ಬಂಡೆ, ಉಪನ್ಯಾಸಕ ಅಮರೇಶ ಸಾಲಕ್ಕಿ, ತೋಂಟದಾರ್ಯ ಶಿರೋಳಮಠ, ನಾಗರಾಜ ಬಿರಾದಾರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts