More

    ಹುರಿಯಾಳು ಹುಡುಕಾಟಕ್ಕೆ ಸಮೀಕ್ಷೆ ಮೊರೆ !

    ಪರಶುರಾಮ ಭಾಸಗಿ
    ವಿಜಯಪುರ:
    ಸಿಂದಗಿ ವಿಧಾನಸಭೆ ಉಪ ಚುನಾವಣೆಗೆ ಮುನ್ನವೇ ಅಭ್ಯರ್ಥಿ ಘೋಷಣೆ ಮಾಡಿರುವ ಕಾಂಗ್ರೆಸ್‌ಗೆ ಬಂಡಾಯದ ಬಿಸಿ ತಟ್ಟುತ್ತಿದ್ದಂತೆ ಸಮೀಕ್ಷೆ ಮೊರೆ ಹೋಗಿದೆ !

    ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದ ಅಶೋಕ ಮನಗೂಳಿಯನ್ನು ಅಧಿಕೃತ ಅಭ್ಯರ್ಥಿಯಾಗಿ ಘೋಷಿಸಿದ್ದ ಕಾಂಗ್ರೆಸ್‌ಗೆ ಬಂಡಾಯದ ಬಿಸಿ ತಟ್ಟಿದೆ. ಮೂಲ ಕಾರ್ಯಕರ್ತರು ಹಾಗೂ ಹಿಂದುಳಿದ ವರ್ಗದ ಕಾಂಗ್ರೆಸ್ ನಾಯಕರು ಹೈಕಮಾಂಡ್ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದರು. ಅಲ್ಲದೆ, ಕೂಡಲೇ ನಿರ್ಧಾರ ಬದಲಿಸುವಂತೆ ಒತ್ತಡ ಹೇರಿದ್ದರು.

    ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸಭೆ
    ಅಶೋಕ ಮನಗೂಳಿಗೆ ಟಿಕೆಟ್ ನೀಡದಂತೆ ಹಾಗೂ ಮೂಲ ಕಾರ್ಯಕರ್ತರಿಗೆ ಟಿಕೆಟ್ ನೀಡಲು ಆಗ್ರಹಿಸಿ ವಿವಿಧ ಸಮುದಾಯದ ಮುಖಂಡರು ಸೋಮವಾರ ಬೆಂಗಳೂರಿಗೆ ದೌಡಾಯಿಸಿದ್ದರು. ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಿಂದಗಿ ಕಾರ್ಯಕರ್ತರ ಸಭೆಯಲ್ಲಿ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಮುಖಂಡರು ಸೇರಿದಂತೆ ಸಣ್ಣ ಸಮುದಾಯಗಳ ನಾಯಕರು, ಗ್ರಾಪಂ, ತಾಪಂ ಸದಸ್ಯರು ಹಾಗೂ ಜಿಪಂ ಮಾಜಿ ಸದಸ್ಯರು ಸೇರಿದಂತೆ 200ಕ್ಕೂ ಅಧಿಕ ಜನ ಭಾಗವಹಿಸಿದ್ದರು.

    ಅಭ್ಯರ್ಥಿ ಬದಲಾವಣೆಗೆ ಒತ್ತಾಯ
    40 ವರ್ಷಗಳಿಂದ ಕಾಂಗ್ರೆಸ್ ವಿರೋಧಿಸಿಕೊಂಡೇ ಬಂದ ಅಶೋಕ ಮನಗೂಳಿ ಈಚೆಗೆ ಟಿಕೆಟ್‌ಗಾಗಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಇದರಿಂದ ಪಕ್ಷ ಕಟ್ಟಿ ಬೆಳೆಸಿದ ಕಾರ್ಯಕರ್ತರಿಗೆ ನೋವಾಗಿದೆಯಲ್ಲದೆ, ತೀವ್ರ ಮುಜುಗರ ಉಂಟಾಗಿದೆ. ಮಾತ್ರವಲ್ಲ, ಹಿಂದುಳಿದ ವರ್ಗಕ್ಕೆ ಟಿಕೆಟ್ ಕೈ ತಪ್ಪುತ್ತಿರುವುದು ಆ ವರ್ಗದ ಜನರಲ್ಲಿ ಕಾಂಗ್ರೆಸ್ ಬಗ್ಗೆ ಅಸಮಾಧಾನ ಹೆಚ್ಚುವಂತೆ ಮಾಡಿದೆ. ಮುಂಬರುವ ದಿನಗಳಲ್ಲಿ ಆ ಸಮುದಾಯಗಳು ಕಾಂಗ್ರೆಸ್‌ನಿಂದ ವಿಮುಖವಾಗುವ ಸಾಧ್ಯತೆ ಇದೆ. ಕೂಡಲೇ ಅಭ್ಯರ್ಥಿ ಘೋಷಣೆ ಪಟ್ಟಿ ಹಿಂಪಡೆಯಲು ಮುಖಂಡರು ಒತ್ತಾಯಿಸಿದ್ದಾರೆ.

    ಸಮೀಕ್ಷೆಗೆ ತೀರ್ಮಾನ
    ಅಭ್ಯರ್ಥಿ ಘೋಷಣೆ ತರಾತುರಿಯಲ್ಲಾಗಿದೆ ಎಂಬುದನ್ನು ವರಿಷ್ಠರು ಒಪ್ಪಿಕೊಂಡಿದ್ದು, ಈ ಬಗ್ಗೆ ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರಲ್ಲದೆ ಸಮೀಕ್ಷೆ ನಡೆಸಿ ಅಭ್ಯರ್ಥಿ ಅಂತಿಮಗೊಳಿಸುವುದಾಗಿ ತಿಳಿಸಿದ್ದಾರೆಂದು ಸಭೆಯಲ್ಲಿದ್ದ ಮುಖಂಡರೊಬ್ಬರು ತಿಳಿಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಮರು ಪರಿಶೀಲನೆ ನಡೆಸುವುದರ ಜತೆಗೆ ಗೆಲ್ಲುವ ಅಭ್ಯರ್ಥಿ ಬಗ್ಗೆ ಸಮೀಕ್ಷೆ ನಡೆಸಲು ಖಾಸಗಿ ಏಜೆನ್ಸಿ ನೇಮಿಸುವುದಾಗಿ ತಿಳಿಸಿದ್ದಾರೆಂದು ಮುಖಂಡರೊಬ್ಬರು ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಕಾರ್ಯಕರ್ತರು ಹಾಗೂ ಮುಖಂಡರು ನಮ್ಮ ಅಭಿಪ್ರಾಯ ತಿಳಿಸಿದ್ದೇವೆ. ಅದಕ್ಕೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ‘ಇನ್ನೂ ಯಾರಿಗೂ ಬಿ ಫಾರ್ಮ್ ಸಿಕ್ಕಿಲ್ಲವಲ್ಲ, ಆತಂಕ ಬೇಡ. ಅಭ್ಯರ್ಥಿ ಘೋಷಣೆಯಲ್ಲಿ ತರಾತುರಿಯಾಗಿದೆ. ಈ ಬಗ್ಗೆ ಮರು ಪರಿಶೀಲನೆ ನಡೆಸಲಾಗುವುದು. ಕ್ಷೇತ್ರದಲ್ಲಿ ಸಮೀಕ್ಷೆ ನಡೆಸಿ ಯೋಗ್ಯ ನಿರ್ಧಾರ ಕೈಗೊಳ್ಳುವುದಾಗಿ’ ತಿಳಿಸಿದ್ದಾರೆ.
    ಶರಣಪ್ಪ ವಾರದ, ಕಾಂಗ್ರೆಸ್ ಮುಖಂಡ ಸಿಂದಗಿ

    ಆರಂಭದಲ್ಲಿ ಐದು ಜನ ಟಿಕೆಟ್ ಕೇಳಿದ್ದೆವು. ಆ ಪೈಕಿ ವರಿಷ್ಠರು ಒಮ್ಮತದಿಂದ ನನ್ನ ಹೆಸರು ಆಯ್ಕೆ ಮಾಡಿದ್ದಾರೆ. ಕೆಲವರಿಗೆ ಅಸಮಾಧಾನ ಆಗಿರಬಹುದು. ಎಲ್ಲರ ಮನೆಗೆ ಹೋಗಿ ಮನವೊಲಿಸುವ ಪ್ರಯತ್ನ ಮಾಡಿದ್ದೇನೆ. ಅಸಮಾಧಾನ ಏನಿಲ್ಲ. ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ.
    ಅಶೋಕ ಮನಗೂಳಿ, ಘೋಷಿತ ಅಭ್ಯರ್ಥಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts